ಜೋಯಿಸರ ಮನೆಯಲ್ಲಿ ನಿಶ್ಶಬ್ಧ ಕೋಣೆಯಲಿ
ಯಾವುದೋ ಗುಂಗಿನಲಿ ಕುಳಿತಳಾಕೆ
ಬಂದಾಗ ತುಂಬಿದ್ದ ಉತ್ಸಾಹ ಈಗಿಲ್ಲ
ಕಾಲ ಸರಿಯುತ್ತಿಲ್ಲ ಹೀಗೆ ಯಾಕೆ?
ಎಷ್ಟು ತಪಿಸುತ್ತಿಹನೊ ನನ್ನ ನಲ್ಲನು ಅಲ್ಲಿ
ಎಂಬ ಚಿಂತೆಯಲವಳು ಬೆಂದು ಬೆಂದು
ಇಷ್ಟು ವಿರಹದ ನೋವ ನಾನು ನೀಡೆನು ಅವಗೆ
ಇಷ್ಟು ದಿನ ಬಿಟ್ಟಿರೆನು, ತಾಳೆನೆಂದೂ
ಅಡುಗೆ ಮಾಡುತಲಿರಲು ಬಂದು ತಬ್ಬುವರಿಲ್ಲ
ಮುದ್ದಾಗಿ ಮುತ್ತನಿಡೊ ಚೆಲುವನಿಲ್ಲ
ನೆಪವಿರದೆ ಬಳಸುತಲಿ ಕಿವಿಯಲುಸುರುವರಿಲ್ಲ
ನನ್ನ ತುಟಿ ಅರಳಿಸುವ ನಲ್ಲನಿಲ್ಲ.
ಏನಡುಗೆ ಮಾಡಿದನೊ ನಸುಕಲೇನ್ ತಿಂದನೋ
ಬಾಡಿಹೋದಾನು ನನ್ನ ನೆನೆದು ಕೊರಗಿ
ಶ್ರಾವಣವು ಬಂದೊಡನೆ ಮೊದಲು ತೆರಳುವೆನಲ್ಲಿ
ಉಳಿದುದನು ಚಿಂತಿಸುವೆ ಎದೆಗೆ ಒರಗಿ!