ಹಂಸಯಾನ : ಕಾದಂಬರಿಯೊಡನೆ ನನ್ನ ಯಾನ…

ಕಾದಂಬರಿಯ ವಸ್ತುವಿನ ಬಗ್ಗೆ ಹೇಳುವುದಕ್ಕೆ ಮೊದಲು ನಾನು ಪುಸ್ತಕವನ್ನ ಕೊಂಡದ್ದರ ಬಗ್ಗೆ ಹೇಳಲೇಬೇಕು.. ಈ ಸಲದ ಬೇಂದ್ರೆ ಪ್ರಶಸ್ತಿಗೆ ಆಯ್ಕೆಯಾದ ತೇಜಸ್ವಿನಿ ಹೆಗಡೆ ಅವರ ‘ಹಂಸಯಾನ’ದ ಬಗ್ಗೆ facebookನಲ್ಲಿ ನೋಡಿ ನಂತರ ಅದನ್ನು ಕನ್ನಡಲೋಕದ ಮೂಲಕ ಆರ್ಡರ್ ಮಾಡಿದೆ. ಅದು ನನಗೆ ಸಮೀಪದ ಕೊರಿಯರ್ ಆಫೀಸ್ ಗೆ ಬಂದರೂ ಏಜೆಂಟ್ ಅದನ್ನು ಡೆಲಿವರ್ ಮಾಡಲೇ ಇಲ್ಲ. ನನಗೆ ಕಾಲ್ ಮಾಡಿ ಅಡ್ರೆಸ್ ವಿಚಾರಿಸಿದ್ದ ಪುಣ್ಯಾತ್ಮ ಮೂರ್ನಾಲ್ಕು ದಿನ ಕಳೆದರೂ ಬರಲೇ ಇಲ್ಲ. ಕೇಳಿದರೆ ಬ್ಯುಸಿ ಇದೀನಿ, ಕೆಲಸ ಇದೆ ಅದು ಇದು ಕಾರಣ ಬೇರೆ! ಕನ್ನಡಲೋಕ ವೆಬ್ ಸೈಟ್ ಗೆ ಲಾಗಿನ್ ಆಗಿ ಟ್ರಾಕಿಂಗ್ ಐಡಿ ನೋಡೋಣ ಅಂದರೆ ಪಾಸ್ ವರ್ಡ್ ಮರ್ತೋಗಿದೆ! ಆಮೇಲೆ ಕನ್ನಡಲೋಕ ದ ಅಡ್ಮಿನ್ ಅವರಿಗೆ ಕಾಲ್ ಮಾಡಿದೆ. ತಕ್ಷಣ ರಿಪ್ಲೈ ಮಾಡಿದ ಅವರು ನನಗಾಗಿ ಪಾಸ್ ವರ್ಡ್ ರಿಸೆಟ್ ಮಾಡಿ ಕೊಟ್ಟದ್ದಲ್ಲದೇ ಟ್ರಾಕಿಂಗ್ ಮಾಹಿತಿ ಕೂಡಾ ಕೊಟ್ಟರು. ಆಮೇಲೆ ಪುಸ್ತಕ ಕೈಗೆ ಸಿಗುವವರೆಗೂ ಖುದ್ದಾಗಿ ವಿಚಾರಿಸಿದರು. ನನಗಂತೂ ಬಹಳ ಖುಷಿಯಾಯಿತು. ಈ ರೀತಿಯಲ್ಲಿ ಕಾಳಜಿಯಿಂದ ಸೇವೆ ಒದಗಿಸುವವರು ತೀರಾ ವಿರಳ…

 

ಕಾದಂಬರಿ ಶುರುವಿನಲ್ಲೇ ಕುತೂಹಲ ಹುಟ್ಟಿಸುತ್ತೆ. ನಾನು ಅದರ ಕಥೆ ಹೇಳಿ ಖಂಡಿತಾ ನಿಮ್ಮ ಓದಿನ ಅನುಭವ ಹಾಳು ಮಾಡಲ್ಲ. ಆದರೆ ಉತ್ಕೃಷ್ಟ ಓದಿನ ಸವಿಯನ್ನು ಅದು ಕೊಡುತ್ತದೆ ಅಂತ ಹೇಳಬಲ್ಲೆ. ಕಥಾನಾಯಕಿಯ ವ್ಯಕ್ತಿತ್ವ ತೀರಾ ಆಪ್ತ, ಸ್ವಂತವೆನಿಸುತ್ತೆ. ಆಕೆ ತೀರಾ ಸಾಂಪ್ರದಾಯಿಕ ಮನೋಭಾವದವಳು ಅಲ್ಲದಿದ್ದರೂ ಅಧ್ಯಾತ್ಮವೇ ಅವಳ ಬಲ ಅಂತ ಅನಿಸೋದಿದೆ.  ಸಸ್ಪೆನ್ಸ್, ಪ್ರೀತಿ, ಸಾಹಸ ಅಧ್ಯಾತ್ಮ ಎಲ್ಲಾ ಸರಿಯಾಗಿ ಮಿಳಿತಗೊಂಡಿರೋ ಇದರಲ್ಲಿ ಯಾವುದೂ ಅತಿಯಾಯಿತು ಎನಿಸೋಲ್ಲ.

ಕಥಾನಾಯಕಿ ಮಹತಿ ಎಷ್ಟು ಭಾವುಕಳೋ ಅಷ್ಟೇ ಗಟ್ಟಿ ಮನಸ್ಸಿನ ಹುಡುಗಿ. ಬಾಲ್ಯದ ಜೀವನ ಘಟನೆಗಳು ವ್ಯಕ್ತಿಯನ್ನ ಹೇಗೆ ಬದಲಿಸುತ್ತೇ ಅನ್ನೋದು ಅವಳ ಪಾತ್ರ ನೋಡಿದರೆ ತಿಳಿಯುತ್ತೆ. ಒಮ್ಮೆ ಆಕೆ ಸ್ವಲ್ಪ ಅತಿಮಾನುಷ ಅನ್ನಿಸುವಂಥ ವಿಶೇಷ ವ್ಯಕ್ತಿಯೊಬ್ಬರನ್ನ ಭೇಟಿ ಆಗುವ ಸನ್ನಿವೇಶ ಬರುತ್ತೆ. ಆ ಸನ್ನಿವೇಶ ಎಷ್ಟು ಸರಳ, ನೈಜತೆಗೆ ಹತ್ತಿರವಾಗಿದೆ ಎಂದರೆ ನನಗೆ ಥಟ್ಟನೆ ನೆನಪಾಗಿದ್ದು ‘ಮಲೆಗಳಲ್ಲಿ ಮದುಮಗಳು’ದಲ್ಲಿ ಮುಕುಂದ ಗಡ್ಡದಯ್ಯನನ್ನ ಭೇಟಿ ಆದ ದೃಶ್ಯ! ಎರಡೂ ಕೂಡ ಸಮವಾಗಿ ವಿಶೇಷವಾದ ಘಟನೆಯೊಂದನ್ನ ಆಕ್ಷೇಪಣೆಗೆ ಅವಕಾಶವಿಲ್ಲದಂತೆ ಬೆಸೆಯುತ್ತವೆ. ಇಂತಹ ಕೌಶಲ್ಯ ಕಾದಂಬರಿಯುದ್ದಕ್ಕೂ ಕಾಣುತ್ತದೆ…

ಕಥೆಯಲ್ಲಿ ಓಡಾಡುತ್ತಾ ಸಾಗುವ ಘಟನಾ ಸರಪಳಿ ನಮ್ಮನ್ನೂ ಓಡಿ(ದಿ)ಸಿಕೊಂಡೇ ಕರೆದೊಯ್ಯುತ್ತದೆ. ಕೊನೆಯಲ್ಲಿ ಕ್ಲೈಮ್ಯಾಕ್ಸ್ ಮುಗಿವ ವೇಳೆಗೆ ನಾಯಕಿಯ ಜೊತೆಗೆ ನಮ್ಮ ಮನಸ್ಸೂ ನಿರಾಳ….

ಖಂಡಿತಾ ಕೊಂಡು ಒಡಬೇಕಾದ ಪುಸ್ತಕ. ಕೊಳ್ಳಲು ಕನ್ನಡಲೋಕ.ಇನ್ ಗೆ ಲಾಗ್ ಆನ್ ಆಗಿ ..

ಕೆಂಡಸಂಪಿಗೆ

ಎನಿತು ಸುಖವೆ! ಬಿದ್ದ ಮೇಲೆ
ನಿನ್ನ ತೋಳ ತೆಕ್ಕೆಗೆ!
ಎಂತು ಸಖಿಯೆ, ತಂದೆ ಬಲವ
ನನ್ನ ಬಾಳ ರೆಕ್ಕೆಗೆ!

ತುಡಿವ ತುಟಿಯ ತವಕ ತಡೆವೆ
ಸಿಹಿಯ ಮುತ್ತು ತಿನ್ನಿಸಿ
ಮಿಡಿವ ಮನದ ಮೋಹ ಮೆರೆವೆ
ರಮಿಸು, ತಪ್ಪು ಮನ್ನಿಸಿ

ಬರಿಯ ಕಾಮವಲ್ಲ ಕೇಳು,
ಪ್ರೀತಿ ಬಾಳ ತತ್ತ್ವ
ನನ್ನ ನಿನ್ನ ಸಾಂಗತ್ಯದೆ
ಇರುವುದೆಲ್ಲ ಸತ್ವ….

ಕವನತನಯ

ಕೆಂಡಸಂಪಿಗೆ

ಮೀನಲೋಚನೆ!, ಕುಸುಮಕಕಂಗಳ
ಮಿಟುಕಿ ಕಾಡಲುಬೇಡವೇ
ಕೆಂಪುಗೆನ್ನೆಯ ಮುದ್ದುಗಲ್ಲವ
ತೋರಿ ಕೆರಳಿಸಬೇಡವೇ…

ತುಟಿಯನರಳಿಸಿ ದಂತಪಂಕ್ತಿಯ
ಚಂದ ತೋರಲುಬೇಡವೇ
ಕಿವಿಯ ಕೆಳಗಿನ ನವಿರುಗೂದಲ
ಸರಿಸಿ ಸೆಳೆಯಲುಬೇಡವೇ…

ಮೃದುಲ ಪಾದದ ಮುದ್ದು ನಾದವ
ನನಗೆ ಕೇಳಿಸಬೇಡವೇ
ಬಳೆಯ ಝಣಝಣ ನಾದದೌತಣ
ಉಣಿಸಿ ತಣಿಸಲುಬೇಡವೇ

ಕೈಗೆ ಸಿಗುತಲಿ ನುಣುಚಿ ಓಡುತ
ಆಟವಾಡಲುಬೇಡವೇ
ಪ್ರೀತಿಪುಷ್ಪದ ಘಮವ ತೋರಿಸಿ
ಹೂವನಡಗಿಸಬೇಡವೇ…

ಕವನತನಯ

ಕೆಂಡಸಂಪಿಗೆ

ಚಂದ್ರದರ್ಶನವಾದ ಕ್ಷಣದಲಿ
ನಿನ್ನ ನೆನಪಿನ ಸುರಿಮಳೆ  ;
ನಿನ್ನ ಕಂಗಳ ತಿಂಗಳಲಿ ತಂ-
ಪಾಯಿತೆನ್ನೆದೆ, ಕೋಮಲೆ   !

ಬೆಸೆದ ಕಂಗಳ ಭದ್ರ ಸೇತುವೆ
ಮೇಲೆ ಪ್ರಿಯಸಂವಾದವು  |
ಪ್ರೇಮವೆಂಬೀ ವಿಶ್ವಭಾಷೆಗೆ
ಯಾಕೆ ಬೇಕನುವಾದವು    ?!

ಜಾರುತಿದೆ ಹದಿಹರೆಯದೀ ಎದೆ
ಮುಗುದೆ, ನಿನ್ನನೆ ನೆನೆದಿದೆ  |
ಹೃದಯ ಕಂಪಿಸಿ ಬಯಕೆಯುದಿಸಿದೆ
ಸಂ(ಅಂ)ಗ ಸುಖವನು ಬಯಸಿದೆ    ||

ಮದುವೆಯದು ‘ಬಂಧ’ವಲ್ಲ   ಸ್ವಚ್ಛಂದ|| – ಅಮೂಲ್ಯ ಭಾರದ್ವಾಜ್

ಇದು ಲೇಖಕಿ ಅಮೂಲ್ಯ ಭಾರದ್ವಾಜ್ ಅವರ ಅಂಕಣ…

ಪ್ರೀತಿ ಕುರುಡು ಅಂತಾರೆ, ಆದರೆ ಆ ಮುಚ್ಚಿರುವ ಕಣ್ತೆರೆಸಲು ಸೃಷ್ಟಿಯಾಗಿರುವ ಔಷಧಿಯೇ ಮದುವೆ ಎಂಬುದು ತಿಳಿದವರ ನಾಣ್ನುಡಿ. ಮದುವೆಯ ಕುರಿತು ಅನೇಕರು ತಮ್ಮ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಸಾರ್ವತ್ರಿಕ ಅಭಿಮತವಾಗಿ, ಅಷ್ಟೆ ಏಕೆ ಒಂದೊಂದು ಥಿಯರಿಯನ್ನಾಗಿಯೇ ನೀಡಿಬಿಟ್ಟಿದ್ದಾರೆ. ಆದರೆ ಮದುವೆಯ ಅನುಭವವಂತೂ ವ್ಯಕ್ತಿ ನಿರ್ಮಿತ ಅಂತೆಯೆ ವ್ಯಕ್ತಿ ಕಲ್ಪಿತ. ಕೆಲವೊಮ್ಮೆ ಸಾವಿರ ವ್ಯತ್ಯಯಗಳ ನಡುವೆ ‘ಸಾರಿ ಸಾರಿ’ ಹೇಳಿಕೊಂಡು, ಮತ್ತೆ ಕೆಲವೊಮ್ಮೆ ‘ಮೆರ್ರಿ ಗೊ’ ಹಾಡಿಕೊಂಡು ಇನ್ನೊಮ್ಮೆ ಮೈ ಪರಚಿಕೊಂಡು ಮಗದೊಮ್ಮೆ ಮೌನಿಯಾಗಿ, ಹೀಗೆ ಮದುವೆಯೆಂಬ ಈ ಮೂರಕ್ಷರದ ಪದ ಒಬ್ಬ ವ್ಯಕ್ತಿಯ ಅಂತರಾಳವನ್ನು ಪೂರ್ಣವಾಗಿ ಬೆತ್ತಲು ಮಾಡುತ್ತಾ ಮುಂಬಿಡುತ್ತದೆ. ಈ ಪರಿ ಸಾಗುವ ಜೀವನದಲ್ಲಿ ಯಾರೂ ಯಾವ ಭಾವನೆಯಿಂದಲೂ ವಂಚಿತವಾಗದಂತೆ ಕಟ್ಟುನಿಟ್ಟಾಗಿಯೂ ನೋಡಿಕೊಳ್ಳುತ್ತದೆ, ಪರಂತು ವ್ಯಕ್ತಿಯ ಭಾವ-ಭಕುತಿಗಳಿಗೆ ಅನುಗುಣವಾಗಿ.

ಹೀಗೆ ಸಾವಿರ ಸವಾಲುಗಳನ್ನು ಒಡ್ಡುವ ಮದುವೆಯನ್ನು ನೆನೆದರೆ, ಒಮ್ಮೊಮ್ಮೆ ಹೀಗೂ ಅನ್ನಿಸಿ ಬಿಡುತ್ತದೆ. “ನಮ್ಮ ದೇಶದ ಸಂಪ್ರದಾಯದಲ್ಲಿ ಈ ಮೂರಕ್ಷರಕ್ಕೆ ಅದೆಷ್ಟು ಬೆಲೆ? ಅದ್ಯಾಕಪ್ಪ!” ಎಂದು.

ಅದೊಂದು ಜೀವನದ ಪಾಠ ಕಲಿಸುವ ಅತ್ಯೆತ್ತರ ಘಟ್ಟ.

ಹಾಗಾದರೆ ಪರಿಚಯವೆ ಇಲ್ಲದ ಒಬ್ಬ      ವ್ಯಕ್ತಿಯೊಂದಿಗೆ ಹೇಗೆ ನಂಟು ಬೆಳೆದೇ ಸಾಗುತ್ತದೆ?

ಅದೇ ಮದುವೆಯ ಮಾಂತ್ರಿಕತೆ.

ಬೇಸರವೇ ಬಾರದೆ?  ಅದು ಹೇಗೆ? ಏಕೆ?

ಏಕೆ ಎಂಬುದಕ್ಕೆ ಬಲು ಸುಲಭದ ಉತ್ತರವೇ- ಮರೆವು. ಅದು ನಮ್ಮ ನಾಡಿಗೆ ದೈವದತ್ತವಾಗಿ ಒದಗಿರುವ ವರವೆಂದರೆ ತಪ್ಪಾಗದು. ಹೇಳಲು ಸುಲಭವಾದರೂ ಮರೆಯಲು ಬಲು ಕಷ್ಟ. ಆದರೂ, ಒಮ್ಮೆ ನಮ್ಮ ನೆಲದಲ್ಲಿ ಹುಟ್ಟಿ ಗಂಡನಿಂದ ಶೋಷಿತ ಹೆಣ್ಣುಮಗುವನ್ನು ಕೇಳಿ! “ಅಯ್ಯೋ ಹೋಗಲಿ ಬಿಡಿ. ನಮ್ಮ ಯಜಮಾನರು ಹಂಗೆನೆ” ಎನ್ನುವುದು ನಮ್ಮಗಳ ಕಿವಿಗೆ ಬೀಳುವ ಕಟ್ಟಿಟ್ಟ ಉತ್ತರ. ಬರಿಯ ಹೆಣ್ಣೊಬ್ಬಳೆ ಅಲ್ಲ. ಗಂಡನೂ ಅಷ್ಟೆ. ಅದೇನೆ ಇದ್ದರು “ನನ್ನವಳು” ಎಂಬ ಭಾವವನ್ನು ಅವನ ಮನದಿಂದ ಕಿತ್ತೊಗೆಯಲಾರ. ಅಷ್ಟಿಲ್ಲದೆ ಹೇಳುವರೆ? ಗಂಡಹೆಂಡಿರ ಜಗಳ ಉಂಡು ಮಲಗುವ ತನಕವೆಂದು.

ಅದು ಹೌದು. ಇಷ್ಟೆಲ್ಲಾ ಹೇಳಿದ ಮೇಲೆ ಮದುವೆ ಒಂದು ಸುಂದರ ಬಾಂಧವ್ಯವೆಂದಾಯಿತು. ಮತ್ತೆ ಸಮಸ್ಯೆ ಏನು? ಈ ಚರ್ಚೆ ಈಗೇಕೆ? ಹೀಗೆ ಕೇಳಲೇಬೇಕು. ಉತ್ತರವಂತೂ ಅತಿಸೂಕ್ಷ್ಮ.

ಈಗ ಹೆಚ್ಚುತ್ತಿರುವ ಸಂಬಂಧಗಳ ನಡುವಿನ ಬಿರುಕುಗಳು!

ಮದುವೆಯೆಂಬ ಬಾಂಧವ್ಯವನ್ನು ನುಂಗಲಾರದ ತುತ್ತಾಗಿ ಮಾಡಿ ತ್ರಿಶಂಕು ಸ್ಥಿತಿ ತಲುಪುತ್ತಿರುವ ನಮ್ಮಗಳ ಪರಿ. ಹೀಗೇಕೆ ಆಗುತ್ತಿದೆ ಎಂಬುದನ್ನು ನಾವು ಕೂಲಂಕುಷವಾಗಿ ಯೋಚಿಸದ ಹೊರತು ಸುಖವಿಲ್ಲ ಎಂಬುದು ಇಂದಿಗೆ ಜಗತ್ಜಾಹಿರ.    ಹಾಗಾದರೆ ಮದುವೆಯ ಗಂಟುಗಳು ಈಗ ಕಗ್ಗಂಟಾಗಿ ಕಾಣಿಸತೊಡಗುತ್ತಿರುವುದಾದರೂ ಏಕೆ?

ಹೇಳಲು ಸಾಧ್ಯವಿಲ್ಲ. ಏಕೆಂದರೆ ಇಂದಿಗೆ ಮದುವೆ ವ್ಯಕ್ತಿಗತ. ಆದರೂ ಕಾರಣಗಳನ್ನು ಹುಡುಕುತ್ತಾ ಹೋದರೆ, ಮೊದಲು ಎಲ್ಲರೂ ಬೊಟ್ಟು ಮಾಡುವುದು ಯಾರಿಗೂ ಅರಿಯದ ‘ವೆಸ್ಟರ್ನ್ ಕಲ್ಚರ್’ ಎಂದು. ಅದೆಷ್ಟರ ಮಟ್ಟಿಗೆ ದಿಟವೊ. ಇಂಗ್ಲೀಷ್ ಭಾಷೆಯನ್ನು ಅರಿದು ಕುಡಿದರೂ ನೋವಾದರೆ ಮಾತೃಭಾಷೆಯೇ ತೊದಲುವುದು ಎಂದು ನಂಬಿರುವ ಅಮಾಯಕರು ನಾವು.

ಮತ್ತೂ ಮುಂದುವರೆದರೆ ನಮಗೆ ಕಾಣುವುದು, ಹೆಣ್ಣಿನ ಸ್ಥಾನಪಲ್ಲಟ. ಭೇದಿಸಿ ನೋಡಿದವರ ಸಹಜ ಅಭಿಪ್ರಾಯ-  ಹೆಣ್ಣು ಆಗಿನ ಕಾಲದಲ್ಲಿ ಗಂಡ, ಅತ್ತೆ-ಮಾವಂದಿರ ಮಾತು ಕೇಳುತ್ತಿದ್ದಳು ಆದರೆ ಈಗ ಅವಳದೆ ಅವಳಿಗೆ, ಆಗ ಮನೆಯಲ್ಲಿಯೇ ಇರುತ್ತಿದ್ದಳು ಈಗ ಅವಳ ಸಂಪಾದನೆಯೂ ನಡೆಯುತ್ತಿದೆ, ಆಗಿನವರು ಎಲ್ಲವನ್ನು ಸಹಿಸುತ್ತಿದ್ದರು ಈಗಿನವರಿಗೆ ಎಲ್ಲಿಯ ಸಹನೆ?

ಹೀಗೆ ಅವಳ ಮೇಲಿನ ಮಾತಿನ ದಾಳಿ ಮುಂದುವರೆಯುತ್ತಲೆ, ಸ್ತ್ರೀವಾದ, ಸ್ತ್ರೀ ಸ್ವಾತಂತ್ರದ ಮಾತುಗಳಿಗೆ ಬುನಾದಿಯಾಗುತ್ತಿದೆ ಈ ವಿಷಯ. ಇದು ಇಂದಿಗೆ ಗಂಭೀರವಾದ ವಿಷಯವೂ ಹೌದು. ಹಾಗಾದರೆ ಹೆಣ್ಣು ಸಹಿಸಿ ಸುಮ್ಮನಿದ್ದು ಬಿಡುವುದು ಪರಿಹಾರವೆ? ಮತ್ಯಾವ ಇತರೆ ಕಾರಣಗಳಿವೆ?

ಯೋಚಿಸಿ.

ಕಾರಣವಾದರೊ, “……….”. ಅದೆ ಮುಖ್ಯ ಕಾರಣ.

ಹೌದು. ಮದುವೆಯ ಬಂಧ ಮುರಿಯಲು ಯಾರ ತಪ್ಪು-ಒಪ್ಪು ಎನ್ನುವ ಮೊದಲು ನನಗೆ ಜೀವನ ಹೇಗೆ ಬೇಕು ಎಂಬುದರ ಮೇಲೆ ನಿಂತಿರುತ್ತದೆ. ಗಂಡಾಗಲಿ ಹೆಣ್ಣಾಗಲಿ. ಇಬ್ಬರಿಗೂ ಖುಷಿಯಾಗಿರುವುದೆ ಮುಖ್ಯವೆಂದಾದರೆ ಅದಷ್ಟೆ ಮುಖ್ಯವಾಗುತ್ತದೆ. ಬೇರೆಲ್ಲ ಭಾವನೆಗಳು ಅದರಡಿ ತೂರಿಬಿಡುತ್ತದೆ. ಇಬ್ಬರಲ್ಲಿ ಯಾರೊಬ್ಬರ ಮನಸು ವೃಥಾ ಯೋಚಿಸಿದರೆ? ಅಲ್ಲಿಗೆ ಮುಗಿಯಿತು. ಹಾಗಾದರೆ ಕೋಪ ಬಂದರೂ, ಬೇಸರವಾದರೂ ಎಲ್ಲವನ್ನೂ ಸಹಿಸಿ ಸುಮ್ಮನಿರುವುದೆ?

ಖಂಡಿತ ಅಲ್ಲ. ಕೋಪ ಬಂದಾಗ ಸಿಡುಕುವುದು, ಪ್ರೀತಿ ಬಂದಾಗ ಮುದ್ದುಗರೆಯುವುದು, ಎಲ್ಲ ಭಾವನೆಗಳೂ ಮುಖ್ಯವೆ. ಆದರೆ ಇಲ್ಲಿ ನನ್ನ ಮಾತಿನ ಅರ್ಥ – ಆ ಎಲ್ಲ ಭಾವನೆಗಳನ್ನು ಸಹಿಸುವುದೆಂದಲ್ಲ. ಬದಲಾಗಿ ಎಲ್ಲಾ ಭಾವನೆಗಳ ಆಶಯ ಖುಷಿಯಾಗಿರಬೇಕು ಎಂಬುದಾಗಿರಬೇಕು. ಜಗಳದ ಆಶಯ ಜಗಳವಾಡುವುದೆ ಆಗಿಬಿಟ್ಟರೆ, ಆ ಮದುವೆ ಜಗಳದಲ್ಲಿಯೇ ಮುಗಿದುಬಿಡುತ್ತದೆ. ಕೆಲವೊಮ್ಮೆ ಹೀಗೂ ಆಗುವುದುಂಟು. ಒಂದೇ ಭಾವನೆಯ ಅಭ್ಯಾಸ. ಜಗಳವಾಡಿ ಆಡಿ, ಗಂಡ ಅಥವಾ ಹೆಂಡತಿ ಏನೇ ಮಾಡಿದರು ಅದರಲ್ಲಿ ಒಂದು ಕೊಂಕಾಡಿಬಿಡುವ ಅಭ್ಯಾಸ. ಮತ್ತೊಬ್ಬರ ಆಸೆಯ ಅರಿಯದೆ ತಮ್ಮದನ್ನು ಸಾಧಿಸಿಕೊಳ್ಳುವ ನಿರೀಕ್ಷೆಗಳು. ಇಂದು ಪತಿ ಅಥವಾ ಪತ್ನಿಯಿಂದ ನಿರೀಕ್ಷಿಸುವುದು ನಾಳೆ ಮಕ್ಕಳು-ಮೊಮ್ಮಕ್ಕಳಿಂದ. ನಿರೀಕ್ಷೆಗಳು ಹುಸಿಯಾದಂತೆಲ್ಲ ದುಃಖ ಖಚಿತ.  ಹೀಗೆ ಒಂದೇ ಭಾವನೆಯ ಅಭ್ಯಾಸವೂ ಸಲ್ಲದು.

ಹಾಗಾದರೆ ಮತ್ತೇನು ಸಲ್ಲುವುದು?

ಇಲ್ಲಿ ನಮ್ಮ ಹಳೆಯ ಮಾತೊಂದು ಹೇಳಬೇಕು. ಕಲ್ಲನ್ನು ಕೆತ್ತಿದರೆ ಮಾತ್ರ ಶಿಲೆಯಾಗುವುದು. ಈ ಮಾತು ಅಕ್ಷರಶಃ ಸತ್ಯ. Life is a journey towards inner mind. ಕಾಲಕಳೆದಂತೆ, ಮದುವೆಯ ಜೀವನ ನೀಡುವ ಈ ಪರಿ ಭಾವನೆಗಳೆಂಬ ಮಹಾಸಾಗರದ ಅಲೆಗಳನ್ನು ಈಜಿ ಅಂತರಂಗದ ಕಡೆಗೆ ನಡೆಯುವ ದಾರಿಯಲ್ಲಿ ಗಂಡ-ಹೆಂಡಿರು ಜೊತೆಯಾಗಿ ನಿಲ್ಲಬೇಕೆ ವಿನಃ ಭಾವನೆಗಳನ್ನು ಉದ್ವೇಗಿಸುವ ಸಾರಥಿಯಂತಲ್ಲ. ಬಹಿರಂಗದ ಚೆಲುವು ಎಷ್ಟಿದ್ದರೂ ಬದುಕಲು ಅಂತರಂಗವೆ ಮುಖ್ಯವೆಂಬುದು ತಿಳಿದೂ ತಿಳಿಯದಂತಿರುವ ಪ್ರಸ್ತುತ ನುಡಿ. ಅದನ್ನು ಒಪ್ಪುವ ಮನಸ್ಸಿರಬೇಕಷ್ಟೆ.

ಮುಪ್ಪಿಗೆ ಮೌನಕ್ಕಿಂತ ಒಳಿತಿನ ಸಂಗಾತಿ ಮತ್ತೊಂದಿಲ್ಲ ಎಂಬುದು ಬಲ್ಲವರ ಮಾತು. ಆದ್ದರಿಂದ ಮದುವೆ ಒಂದು ಆಧ್ಯಾತ್ಮಿಕ ಪಯಣವೇ ವಿನಃ ಮತ್ತೇನು ಅಲ್ಲ ಎಂಬುದು ಇಂದಿನ ನಾವು ಮನಗಂಡುಬಿಟ್ಟರೆ, ಅದಾವುದೇ ಮಹಾನ್ ಕಾರಣವಿರಲಿ, ಈ ಸಂತೋಷದ ಮುಂದೆ ಕಕ್ಕಾಬಿಕ್ಕಿಯಾಗಿ ನಿಲ್ಲುವುದು.

ಯೌವನಾವಸ್ಥೆಯಲ್ಲಿಯೇ ಈ ಸತ್ಯವನ್ನು ಅರಿತುಕೊಂಡು ಬಿಟ್ಟರೆ, ಪ್ರೌಡಾವಸ್ಥೆಯಲ್ಲಿ ಪ್ರೌಢಿಮೆ ಎದ್ದು ಕಾಣುವುದು. ಮನಃಶಾಂತಿ ತಾನಾಗಿಯೇ ಒಲಿಯುವುದು. ಇಲ್ಲವಾದರೆ ಮದುವೆಯೆಂಬುದು ಮನಸ್ಸಿನ ಸ್ವಾಸ್ಥ್ಯವನ್ನು ಕಸಿದುಬಿಡುತ್ತದೆ.

– ಅಮೂಲ್ಯ ಭಾರದ್ವಾಜ್

ಕಾಂತೆ…!

ಕಾಂತೆ! ಹೃದಯಾಕ್ರಾಂತೆ! ಶಾಂತೆಯೆ
ದಂತಕಾಂತಿಯ ರೂಪಸಿ!
ನಿಂತೆ ನನ್ನೆದೆ ಪ್ರಾಂತದಲಿ ಸಂ-
ತಸದ ಕ್ರಾಂತಿಯ ರೂಪಿಸಿ!

ಅಂತರಂಗವ ರಂಗುಗೊಳಿಸಿದ
ತಪ್ಪು ನಿನಗಾರೋಪಿಸಿ
ಸ್ವರ್ಗಸುಂದರ ಸಂಗ ಶಿಕ್ಷೆಯ
ನಿಂಗೆ ಕೊಡುವೆ ನಿರೂಪಿಸಿ

ಧನ್ಯತೀವ್ರತೆಯೊರತೆ ನಮ್ಮೀ
ನೇಹ ಸಾಹಸಚರಿತೆಯು!
ಕಾಲದೇಶಗಳಳತೆಯಾಚೆಗು
ಮೀರಿ ಹರಿಯುವ ಸರಿತೆಯು!

ಕವನತನಯ

ನಮನ..

ಜನುಮ ಜನುಮದ ಸ್ಮೃತಿವಿಲಾಸದ
ರಾಗ ನಿನ್ನಡಿಗರ್ಪಣೆ…
ಜನನಿ! ತನುಮನ ಭವದಿ ಭವಿಸುವ
ಭಾವ ಕುಸುಮದೊಳರ್ಚನೆ

ಕರುಣೆಯೆನ್ನುವ ಅರುಣಕಿರಣಕೆ
ಕಾದಿರುವ ಮನಚಂದಿರ
ಮಮತೆಯಿಂದಲಿ ಮತಿಯ ನೀಡಲು
ಜನುಮಜನುಮವು ಸುಂದರ!

ನಿನ್ನ ಮಹಿಮೆಯ ಲಹರಿ ಹರಿದಿದೆ
ಬುವಿಯ ಕಣಕಣದಲ್ಲಿಯೂ
ನಿನ್ನ ಕಾಣುವ ಯೋಗವೊದಗಲಿ
ಬೆಳಕು ಕತ್ತಲಿನಲ್ಲಿಯೂ..
???

ಕವನತನಯ

ಕೆಂಡಸಂಪಿಗೆ

#ಕೆಂಡಸಂಪಿಗೆ

ನನ್ನೆಡೆಗೆ ನೋಡಿ ಮುಂಗುರುಳ ತೀಡಿ
ನೀ ಕಣ್ಣು ಹೊಡೆಯಬೇಡ
ಆ ಹಾಲಗೆನ್ನೆ ಬಿರಿವಂತೆ ನನ್ನೆ
ನೋಡಿ ನಗೆಯಾಡಬೇಡ

ತಂಗಾಳಿಗೊಂದು ಮುತ್ತಿಟ್ಟು ನನ್ನ
ಹೆಸರುಸುರಿ ಕಳಿಸಬೇಡ
ಮುಖದೊಡವೆ ಮೊಡವೆ ಬೆರಳಲ್ಲಿ ಕಿವುಚಿ
ನನ್ನನ್ನು ನೆನೆಯಬೇಡ

ಅರೆಚಣದಿ ಪ್ರೇಮವೆರಚುತ್ತ ತೋಳ-
ನಪ್ಪುವಾ ಲಲ್ಲೆ ಬೇಡಾ
ಈ ಪ್ರೇಮಶರಧಿಗೆನ್ನೆದೆಯ ಪಾತ್ರೆ
ಕಿರಿದಾಯ್ತು ನಲ್ಲೆ, ನೋಡಾ

ನನ್ನನ್ನು ವರಿಸಿ, ಪ್ರೇಮಾಗ್ನಿಯುರಿಸಿ
ನನ್ನೊಲವ ಸವಿಯುತಿರುವೆ!
ನೀ ಕಾಡಿ ಪಡೆದ ಈ ಪ್ರೀತಿಯಿಂದ
ನನ್ನನ್ನು ಮೀಸುತಿರುವೆ!

ಮುಖಮದಿರೆಯೆದುರೆ ಇರುವಾಗ ನಿದಿರೆ
ಬರಬೇಕು ಹೇಗೆ ತಾನೇ?!
ಸುರತ ಬೀದಿಯಲಿ ನಿರತ ಪ್ರೀತಿರಥ
ಅಲ್ಲಿರುವ ಮೂರ್ತಿ ನೀನೇ!

ಕವನತನಯ

ಶರದಪ್ರೇಮ

ಮಂದಹಾಸವದಂದ! ಭ್ರೂವಿಲಾಸದ ಚಂದ!
ಚೆಲುವೆ ಚುಂಬನಕೊಲಿಯೆ, ಮಾತು ಮಂದ |
ಅಂದಗಾತಿಯು ತಂದ ನಲ್ಮೆಶಶಿಬೆಳಕಿಂದ
ಸುಂದರಾಹ್ಲಾದ, ಎದೆಗೊಲವ ಬಂಧ! ||

ಹಸಿರಿನಲಿ ತುಸುನಾಚಿ ನಿಂತವಳ ಮೈಕಾಂತಿ
ಕಂಡು ನಾಚಿದೆ ಸಾಲು ಸಾಲು ನೀಪ |
ಉಸಿರೆಲ್ಲ ಘಮ್ಮೆಂತು ಹೃದಯದಲಿ ಅವಳಿರಲು
ಮನವ ಬೆಳಗಿತು ಅವಳ ಹೆಸರ ದೀಪ ||

ತಪ್ತಕಾಂಚನಕಾಂತಿ ಕನಕಾಂಗಿ ಬಳಿಬರಲು
ಸುಪ್ತ ಕನಸಿನ ದೀಪ್ತಿಗುರಿವ ನೇಮ |
ಒಲಿಸಿ ಸೆಳೆಯುತ ರಮಿಸಿ ರಂಜಿಸುತ ಭುಂಜಿಸುತ
ಸಾಗುತಿರಲತಿಚಂದ ಶರದಪ್ರೇಮ ||

ಕವನತನಯ

ಕ್ವಿಕ್ ಕ್ಲಿಕ್… ಮಲೆನಾಡ ಮಾಧುರ್ಯ ಮೊಬೈಲ್ ಕಣ್ಣಲ್ಲಿ…

ಪ್ರಕೃತಿಯ ಅಸಂಖ್ಯವರ್ಣವೇಷದಲ್ಲಿ ಕಣ್ಣಿಗೆ ಕಾಣುವ ಬಣ್ಣಗಳು ಹಲವು, ಕ್ಯಾಮರಾ ಕಣ್ಣಿಗೆ ಕಾಣುವ ಬಣ್ಣಗಳು ಬೇರೆಯವು. ಕೆಲವೊಮ್ಮೆ ಕಣ್ಣಿಗಿಂತ ಚೆನ್ನಾಗಿ ಕ್ಯಾಮರಾ ನೋಡಬಲ್ಲದು, ರಸಿಕತೆಯ ಪರೀಕ್ಷೆಯಲ್ಲಿ ತಾನೇ ಗೆಲ್ಲುತ್ತ…. ಮೊಬೈಲ್ ಕ್ಯಾಮೆರಾ ಕೂಡ ಹಿಂದೆ ಬಿದ್ದಿಲ್ಲ ಈಗ.. ಇವು ಮಲೆನಾಡಿನಲ್ಲಿ ಅಲ್ಲಲ್ಲಿ ಕ್ಲಿಕ್ಕಿಸಿಅ ಕೆಲವು ಫೋಟೊಗಳು. ನನ್ನ Coolpad Note 3 Lite ಬಳಸಿ ತೆಗೆದಿದ್ದೇನೆ.