ಅಂಶುಮಾಲಿ…

“ಅಂಶೂsss ….. ಅಂಶೂsss… ”

ಆಗಿಂದ ಒಂದೇ ಸಮನೇ ರಾಣಿ ಕುಸುಮಪ್ರಭೆಯು ಕರೆಯುತ್ತಿದ್ದರೂ ಅಂಶುಮಾಲಿಯ ಪತ್ತೆಯೇ ಇಲ್ಲ. ಕೆಲವು ತಿಂಗಳ ಹಿಂದೆ ಸಿಕ್ಕ ಹೊಸ ಸಖಿ ಅರು ಮತ್ತು ಇವಳ ನಡುವೆ ಅದೆಷ್ಟು ಗಾಢ ಸ್ನೇಹ ಬೆಳೆದಿತ್ತೆಂದರೆ ಈಗೀಗ ಇಬ್ಬರೂ ಸೇರಿ ತಿರುಗಲು ಹೊರಟರೆ ಅವರನ್ನು ಕಾಯಲಿಕ್ಕೇ ಇಬ್ಬರು ಸೇವಕರು ಬೇಕು ಎನ್ನುವಂತಿತ್ತು. ಊಟ, ಪೂಜೆ ಯಾವುದಕ್ಕೂ ಸಮಯಕ್ಕೆ ಬರುವ ಪದ್ಧತಿ ತಪ್ಪಿಹೋಗಿತ್ತು. ಅಂಶು ಇಷ್ಟು ಸ್ವತಂತ್ರ ಹುಡುಗಿ ಆಗಬಹುದೆಂದು ಕುಸುಮಪ್ರಭೆ ಎಂದೂ ಯೋಚಿಸಿರಲಿಲ್ಲ. ಕೂಗಿ ಕೂಗಿ ಕರೆದು ಸುಸ್ತಾಗಿ ಈ ಹುಡುಗಿಯರಿಗೆ ಕಡಿವಾಣ ಹಾಕುವುದು ಹೇಗೆಂದು ಚಿಂತಿಸತೊಡಗಿದಳು.

ಅಂಶುಮಾಲಿ ಹೊರಗೆ ಹೋಗುತ್ತಾಳೆ ಎನ್ನುವುದು ಕುಸುಮಪ್ರಭೆಯ ಚಿಂತೆಗೆ ನಿಜವಾದ ಕಾರಣವಾಗಿರಲಿಲ್ಲ. ಅವಳನ್ನು ಕಾಡುತ್ತಿದ್ದುದು ಅರು ಎಂಬ ಈ ಸಖಿ ಜೊತೆ ಸೇರಿ ಬಿಸಿಲು ಬಯಲು ಹಳ್ಳ ಕೊಳ್ಳ ಬೀದಿ ಕೊಳಕು ಏನೂ ನೋಡದೆ ಇವಳು ತಿರುಗಿ ತಿರುಗಿ ಇವಳ ಸೌಂದರ್ಯ ಹಾಳಾದರೆ ಎಂಬ ಚಿಂತೆ! ನಿಜಕ್ಕೂ ಅಂಶುಮಾಲಿ ಅಂಥ ಸುಂದರಿ. ಅಮೃತಶಿಲೆಯನ್ನು ಸಕ್ಕರೆಹೃದಯದ ಶಿಲ್ಪಿಯೊಬ್ಬ ಅಕ್ಕರೆಯಿಂದ ಕಡೆದು ಮಾಡಿದ ವಿಗ್ರಹದಂತೆ. ಮೊನ್ನೆ ಮೊನ್ನೆಯಷ್ಟೇ ಷೋಡಶ ವರ್ಷದ ಜನ್ಮದಿನ ಕಳೆದ ಅವಳ ದೇಹಸಿರಿ ಅವಳುಡುವ ಅಚ್ಚಬಣ್ಣದ ಸೀರೆಗಳಪ್ಪುಗೆಯಲ್ಲಿ ಮೆರೆಯುತ್ತಿದ್ದರೆ, ಆ ಸೌಂದರ್ಯಕ್ಕೆ ಎಂಥವರೂ ಬೆರಗಾಗುತ್ತಾರೆ. ಯಾರ ಬಳಿಗೂ ಬಾರದ ಅರಮನೆ ತುದಿಯ ಮಾಡಿನಲ್ಲಿ ಕೂರುವ ಬಿಳಿ ಪಾರಿವಾಳಗಳು ಅವಳ ಬಳಿ ತಾಯಿಯ ಬಳಿ ಓಡುವ ಮಕ್ಕಳಂತೆ ಹಾರಿ ಬರುತ್ತವೆ. ಅಂಶುವಿಗೆ ತನ್ನ ಸೌಂದರ್ಯದ ಬಗ್ಗೆ ಏನನ್ನಿಸುವುದೋ ಗೊತ್ತಿಲ್ಲ, ಆದರೆ ಅವಳಿಗಿಂತ ಹೆಚ್ಚು ಹೆಮ್ಮೆ ಇದ್ದದ್ದು ಮಾತ್ರ ಅವಳ ತಾಯಿಗೆ!

ನೀಲಿ, ಹಳದಿ, ಕೇಸರಿ ಮುಂತಾದ ಯಾವುದೇ ದಟ್ಟಬಣ್ಣದ ಅಗಲ ಅಂಚಿನ ಸೀರೆ ಉಡುವ ಅವಳು ಒಪ್ಪವಾಗಿ ಜಡೆ ಹೆಣೆದು ಮಿತವಾಗಿ, ಆದರೆ ರಾಜಯೋಗ್ಯತೆಗೆ ಕುಂದು ಬಾರದಂತೆ ಆಭರಣ ಧರಿಸಿ, ಪುರಕ್ಕೆ ಹೋದರೆ ಜನರು ಸಾಕ್ಷಾತ್ ಮಹಾಲಕ್ಷ್ಮಿಯೇ ನಡೆದು ಬಂದಂತೆ ಭಾವಿಸುತ್ತಾರೆ. ಚೂರು ವಯಸ್ಸಾದ ಮುದುಕಿಯರು ಅವಳ ದರ್ಶನ ಸಿಕ್ಕಿದ್ದೇ ಭಾಗ್ಯ ಎಂಬಂತೆ ಕಾಲಿಗೆ ಬಿದ್ದು ಮನೆಗೆ ಕರೆದೊಯ್ದು ತಮ್ಮ ಬಡಮನೆಯ ಸಿಹಿ ಕೊಡುತ್ತಾರೆ. ಅವಳಿಗೆ ಎಚ್ಚರಿಸಿದ್ದೇನೆ- ಅರಮನೆಯ ಹೊರಗಡೆ ಏನೂ ತಿನ್ನಕೂಡದು ಎಂದು. ಆದರೆ ತನಗೆ ತಿಳಿಯದೆ ತಿನ್ನುತ್ತಾಳೋ ಏನೋ! ಇವೆಲ್ಲ ಚಿಂತೆ ಕುಸುಮಪ್ರಭೆಯನ್ನು ಕಾಡಿ ಅವಳು ಮಗಳ ಮೋಜಿಗೆ ಕಡಿವಾಣ ಹಾಕುವಂತೆ ಯೋಚಿಸಲು ಪ್ರೇರೇಪಿಸಿತ್ತು.

ಸಂಜೆ ಸೂರ್ಯ ಮುಳುಗಿದ ಮೇಲೆ ಒಂದು ಘಳಿಗೆ ಕಳೆದು ಇಬ್ಬರೂ ಬಂದರು. ದೂರದಿಂದ ಇಬ್ಬರೂ ಸಲಿಗೆಯಿಂದ ನಗುತ್ತಾ ಮಾತನಾಡುತ್ತಾ ವಯೋಸಹಜ ವೇಗದಿಂದ ಬಂದವರು ಮಹಾರಾಣಿಯನ್ನು ಕಂಡು ತಕ್ಷಣ ತಮ್ಮ ನಡತೆ ಬದಲಿಸಿ ಮುಖದಲ್ಲಿ ಚೂರು ಗಾಂಭೀರ್ಯ ತಂದುಕೊಂಡರು. ಸಖಿ ಅರು ಅರಮನೆಯ ಹೊರಗೆ ತನ್ನ ಕೋಣೆಗೆ ಹೋಗುವ ದಾರಿಯಲ್ಲಿ ನಡೆದರೆ ಅಂಶುಮಾಲಿ ತನ್ನ ಕೋಣೆ ಹೊಕ್ಕಳು. ಅವಳ ಊಟವನ್ನು ಕೋಣೆಗೇ ಕೊಂಡೊಯ್ಯಲು ಸೇವಕಿಯರಿಗೆ ಅಪ್ಪಣೆಯಾಯಿತು.

ಅಂಶುಮಾಲಿ ಊಟ ಮುಗಿಸಿ ಸೇವಕರು ತಟ್ಟೆ ಒಯ್ಯುವ ಹೊತ್ತಿಗೆ ಅಲ್ಲಿವರೆಗೆ ಕಾದಿದ್ದ ಕುಸುಮಪ್ರಭೆ ತಾನು ಇಷ್ಟೊತ್ತು ಕಾದದ್ದು ಸುಳ್ಳು ಎಂಬಂತೆ ಮುಖದ ಭಾವ ಮರೆಸಿ ಸಹಜವೆಂಬಂತೆ ಅಂಶುಮಾಲಿಯ ಕೋಣೆ ಹೊಕ್ಕಳು. ಆಟದ ದಣಿವಿನಿಂದ ಮತ್ತು ಹೊಟ್ಟೆ ತುಂಬಿದ ಊಟದಿಂದಾಗಿ ಆಯಾಸ ಮತ್ತು ದೇಹಾಲಸ್ಯ ತುಂಬಿಕೊಂಡಿದ್ದ ಅಂಶುಮಾಲಿ ಕೂದಲು ಹರವಿಕೊಂಡು ಮಂಚದ ಮೇಲೆ ಕುಳಿತ ತಾಯಿಯ ಬಿಡಿಸಿದ ಕಾಲಿನ ಮೇಲೆ ತಲೆಯಿಟ್ಟು ಮಲಗಿದಳು. ಮಗಳ ಮೇಲಿನ ಕಕ್ಕುಲಾತಿಯಿಂದ ಅವಳ ತಲೆ ನೇವರಿಸುತ್ತಾ ಯೋಚನಾಮಗ್ನಳಾಗಿ ಕುಳಿತಳು ಕುಸುಮಪ್ರಭೆ. ಅನತಿ ದೂರದಲ್ಲಿ ಹಚ್ಚಿದ್ದ ದೀಪದ ಸೊಡರು ಸಣ್ಣದಾಗುತ್ತಾ ಬಂದು ಇನ್ನೇನು ನಂದಿ ಹೋಗುವ ಸ್ಥಿತಿಯಲ್ಲಿತ್ತು. ಆ ಮಂದ ಬೆಳಕಿನಲ್ಲಿ ಸಾಕ್ಷಾತ್ ಗಂಧರ್ವಕನ್ಯೆಯ ರೀತಿ ಅಂಶುಮಾಲಿಯ ಮುಗ್ಧ ದಣಿದ ದುಂಡುಮುಖ ಕಾಂತಿ ಬೀರುತ್ತಿತ್ತು. ಅವಳ ಜೇನುಬಣ್ಣದ ಕೂದಲುಗಳಿಗೆ ಅಲ್ಲಲ್ಲಿ ಕಾಡುಮಲ್ಲಿಗೆಯ ಬಾಡಿದ ಹೂವುಗಳು ಸಿಕ್ಕಿಕೊಂಡಿದ್ದವು.

ನಿಧಾನಕ್ಕೆ ಕವಿಯುತ್ತಿದ್ದ ನಿದ್ದೆಗೆ ಕಣ್ಣ ರೆಪ್ಪೆಗಳು ಮುಚ್ಚಿಬರುತ್ತಿದ್ದರೆ, ಅವಳನ್ನು ನೋಡಿ ಕುಸುಮಪ್ರಭೆ ಮಗಳಿಗೆ ಈಗಲೇ ಹೇಳಬೇಕು ಅಂತ ನಿರ್ಧರಿಸಿ ಒಮ್ಮೆ ನಿಧಾನಕ್ಕೆ ಕೆಮ್ಮಿ ಮಾತು ಶುರುಮಾಡಿದಳು.

“ಅಂಶೂ, ನೀನು ರಾಜಕುವರಿ ಅಲ್ವಾ, ನಾಳೆಯಿಂದ ಹೊರಗೆ ತಿರುಗಲು ಹೋಗಬೇಡ. ಇಲ್ಲೇ ಇರು. ನಿನಗೆ ಏನಾದರೂ ಬೇಕಾದರೆ ಸೇವಕರಿಗೆ ಹೇಳು. ತಂದುಕೊಡುತ್ತಾರೆ. ಆರೋಗ್ಯದಾಳನ್ನು ಇಲ್ಲೇ ಕರೆಸಿಕೋ. ತಿಳಿಯಿತಾ?”

“ಯಾಕಮ್ಮಾ? ಈ ಅರಮನೆಯಲ್ಲಿ ಎಷ್ಟೊತ್ತೂ ಬಂಧಿ ಆಗಿರೋದು ನನಗಂತೂ ಸಾಧ್ಯ ಇಲ್ಲ. ಆ ಪಾರಿವಾಳಗಳ ಥರಾ.. ಸ್ವತಂತ್ರವಾಗಿ ಇದ್ದರೆ ಏನಾಗುತ್ತೆ ಅಮ್ಮಾ?”

“ನಿನಗೆ ಗೊತ್ತಾಗಲ್ಲ ಬಿಡು. ನೀನು ರಾಜಕುವರಿ. ನಿನಗೂ ಪುರದ ಇತರೆ ಸಾಮಾನ್ಯ ಹೆಣ್ಣುಮಕ್ಕಳಿಗೂ ತುಂಬಾ ವ್ಯತ್ಯಾಸ ಇದೆ. ಇನ್ನೊಂದು ಗಹನ ವಿಚಾರ ಹೇಳ್ತೀನಿ ಕೇಳು. ಚಂದ್ರಪ್ಪನಾಯಕನ ರಾಜ್ಯದಲ್ಲಿರೋ ನಮ್ಮವರು ಸುದ್ದಿ ಕಳಿಸಿದ್ದಾರೆ. ಆತ ನಮ್ಮ ರಾಜ್ಯದ ಮೇಲೆ ತುಂಬಾ ಕಾಲದಿಂದ ಕಣ್ಣಿಟ್ಟಿದ್ದಾನೆ. ನೇರ ಯುದ್ಧದಲ್ಲಿ ಗೆಲ್ಲೋಕೆ ಸಾಧ್ಯವಿಲ್ಲ ಅಂತ ಇಲ್ಲಸಲ್ಲದ ಕುತಂತ್ರ ಮಾಡ್ತಾನೆ. ಅವನು ರಾಜಮನೆತನದ ಜನರನ್ನ ಕೊಲ್ಲೋಕೆ ಷಡ್ಯಂತ್ರ ಮಾಡಿದ್ದಾನೆ. ರಾಜ ಕುಲದವರು ಪ್ರತಿ ಕ್ಷಣ ಹುಷಾರಾಗಿರ್ಬೇಕು ಕಣೇ. ಸಾವು ಎಲ್ಲಿಂದ ಬರುತ್ತೆ ಹೇಳೋಕಾಗಲ್ಲ. ಅದಕ್ಕೆ ಹೇಳಿದ್ದು ನಿನಗೆ”

ಚಂದ್ರಪ್ಪನಾಯಕನ ಕುತಂತ್ರಗಳ ವಿಷಯ, ತಮಗಿರುವ ಅಪಾಯ, ಇದನ್ನೆಲ್ಲ ಕೇಳುತ್ತಿದ್ದಂತೆ ಅಂಶುಮಾಲಿಯ ಮುಖ ಚಹರೆ ಬದಲಾಗಿ ಅಲ್ಲಿ ಚಿಂತೆ, ಬೇಸರ ಕಪ್ಪಿಟ್ಟಿತು. ಸ್ಫಟಿಕದಂಥ ಶುಭ್ರಗಣ್ಣಲ್ಲಿ ‘ಮುಂದೇನು?!’ ಎಂಬ ಭಾವ ತುಂಬಿ ತಾಯಿಯೆಡೆಗೆ ನೋಡಿದ ಅವಳನ್ನು ಕುಸುಮಪ್ರಭೆ ಹತ್ತಿರ ಸರಿದು ಸೆಳೆದುಕೊಂಡು ತಬ್ಬಿ ನೆತ್ತಿಗೆ ಮುತ್ತಿಟ್ಟಿದ್ದೇ ಸಮಾಧಾನದ ಮಾತಾಯಿತು.

ಅಂಶುಮಾಲಿಯ ಹೊಸ ಸಖಿ ಆರೋಗ್ಯದಾ ಕೂಡ ಅಪ್ಪಟ ಕ್ಷತ್ರಿಯ ಕುಲದವಳು. ಆದರೆ ಅವಳ ಅಪ್ಪ ಅಮ್ಮ ಅಣ್ಣ ಎಲ್ಲಾ ಶತ್ರುಗಳ ಕುತಂತ್ರಕ್ಕೆ ಪ್ರಾಣ ತೆತ್ತು ಕುಸುಮಪ್ರಭೆಯ ಕರುಣೆಯಿಂದಾಗಿ ಇವಳೊಬ್ಬಳು ಬಚಾವಾಗಿ ಇಲ್ಲಿ ಬಂದು ಸೇರಿಕೊಂಡಿದ್ದಳು. ಅವಳು ಅಂಶುವಿಗೆ ಜೊತೆಗಾರ್ತಿಯಾಗಿ ಇರುವುದು ಬಿಟ್ಟರೆ ಯಾರೂ ಅವಳಿಗೆ ಕೆಲಸ ಹೇಳುತ್ತಿರಲಿಲ್ಲ. ಒಂದು ರೀತಿ ಹಿತವಾದ ಕಪ್ಪುಮೈಬಣ್ಣ ಹೊಂದಿದ್ದ ಆಕೆಯ ಕಪ್ಪು ಮುಖದಲ್ಲೂ ಲಕ್ಷಣವಿತ್ತು. ಕಣ್ಣಲ್ಲಿ ಚುರುಕಿತ್ತು. ಜೊತೆಗೆ ಅವಳ ನಡೆಯಲ್ಲೇ ಅವಳಲ್ಲಿನ ಪ್ರಾಮಾಣಿಕತೆ ಕಾಣುತ್ತಿತ್ತು. ಅಷ್ಟಿಲ್ಲದಿದ್ದರೆ ಅವಳಿಗೆ ಅಂಶುಮಾಲಿಯ ಗೆಳೆತನವಿರಲಿ, ಬಳಿ ಹೋಗುವ ಅವಕಾಶವೂ ಸಿಗುತ್ತಿರಲಿಲ್ಲ.

ತಾಯಿ ಬುದ್ಧಿ ಹೇಳಿದ ಮರುದಿನದಿಂದಲೇ ಅಂಶುಮಾಲಿ ಅರಮನೆಯಲ್ಲೇ ಉಳಿಯತೊಡಗಿದಳು. ಆರೋಗ್ಯದಾಳಿಗೆ ಕೂಡ ಅಂಶುವನ್ನು ಬಿಟ್ಟರೆ ಬೇರೆ ಜಗತ್ತಿಲ್ಲ ಎನ್ನುವಂತಾಗಿತ್ತು. ಅದಕ್ಕೇ ಅವಳೂ ಅರಮನೆಯಲ್ಲೇ ಅಂಶುಮಾಲಿಯೊಡನೆ ಇರತೊಡಗಿದಳು.

__________________________________________

ಅವತ್ತುಬೆಳಿಗ್ಗೆ ಎದ್ದು ಮಂಚದಿಂದಿಳಿದ ಅಂಶುಮಾಲಿಗೆ  ಬಾಗಿಲ ಕೆಳಗಿಂದ ಒಳಗೆ ಹರಿದು ಬಂದಿದ್ದ ನೆತ್ತರ ಮಡು ನೋಡಿ ಗಾಬರಿಗೆ ಹೃದಯ ಕೈಗೆ ಬಂದಂತಾಗಿತ್ತು. ಎರಡು ನಿಮಿಷ ಸುಧಾರಿಸಿಕೊಂಡು ನಂತರ ಬಾಗಿಲು ತೆಗೆಯುವುದು ಸರಿಯಲ್ಲ ಅಂತ ನಿರ್ಧರಿಸಿ ಇನ್ನೊಂದು ಗುಪ್ತಬಾಗಿಲಿಂದ ಹೊರಬಂದು ಸುತ್ತು ಬಳಸಿ ಬಾಗಿಲ ಬಳಿ ಬಂದು ನೋಡಿದವಳಿಗೆ ಆಘಾತ- ತನ್ನ ಸಖಿ ಆರೋಗ್ಯದಾ ಅಲ್ಲಿ ನಡೆದು ಹೋದ ಹೋರಾಟವೊಂದರ ಕುರುಹಾಗಿ ಸತ್ತು ಬಿದ್ದಿದ್ದಾಳೆ! ಅವಳ ಹೊಟ್ಟೆ ಇರಿದ ಸೈನಿಕನ ಕತ್ತನ್ನು ಸೀಳಿದ ಅವಳ ಕತ್ತಿ ಇನ್ನೂ ಕೈಯಲ್ಲೇ ಇದೆ! ತಲೆ ಜೋತುಬಿದ್ದ ಸೈನಿಕನ ಕಣ್ಣು ಭೀಭತ್ಸ ದೃಶ್ಯವೊಂದನ್ನು ಕಂಡಂತೆ ಬೆದರಿದ್ದವು. ಅವನ ಮೈಮೇಲೆ ಚಂದ್ರಪ್ಪನಾಯಕನ ಸೇನೆಯ ಗುರುತು ಇತ್ತು. ತಾನು ನಂಬಿದ ರಾಜಕುಮಾರಿಗಾಗಿ ಪ್ರಾಣ ಕೊಟ್ಟ ಬಡ ಹುಡುಗಿಯ ನೆತ್ತರು ಅರಮನೆ ನೆಲದ ಮೇಲೆ ತಣ್ಣಗೆ ಹರಿದು ಹೆಪ್ಪುಗಟ್ಟಿತ್ತು.

ಅವಳ ಸುಟ್ಟ ಜಾಗಕ್ಕಿಷ್ಟು ಬೆಲ್ಲ ಹಾಲು ಸುರಿದು ಬಂದಳು ಅಂಶುಮಾಲಿ. ತಮ್ಮದೆನ್ನುವ ಒಂದು ರಾಜಮನೆತನ ಇಂದು ಬದುಕುಳಿಯಲು ಇಂತಹ ಅದೆಷ್ಟು ಮುಗ್ಧರು ಪ್ರಾಣ ಕೊಟ್ಟಿದ್ದಾರೋ!! ಅವರ ನಿಯತ್ತಿಗೆ ಪ್ರತಿ ಉಡುಗೊರೆ ಕೊಡುವ ಶಕ್ತಿ ಈ ದೊರೆಸಾನಿಗೂ ಇಲ್ಲ…

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಕವನ ರಸಾಯನ ಪಾನ

ಎನಿತೊ ನೆಪದಲಿ ಇನಿತು ಗೀಚಲು
ಕವನಕುಸುಮದ ವಿರಚನೆ
ಬರೆದ ಸಾಲಲಿ ತಳೆದ ಮನದುಲಿ
ಕಹಿಯ ನೆನಪ ವಿಮೋಚನೆ

ಖುಷಿಗೆ ದುಃಖಕೆ ಕನಸು ಮುನಿಸಿಗೆ
ಹೂಹುಡುಗಿ ಸವಿ ನೆನಪಿಗೆ
ಬದುಕಲೆಲ್ಲಕು ಜೊತೆಯು ಅಕ್ಷರ
ಅದುವೆ ಇರದಿರೆ ನಶ್ವರ

ಕವನ ಕನಕವ ತುಂಬಿಕೊಳ್ಳಲು
ತುಂಬಿತೆದೆಯಾ ಜೋಳಿಗೆ
ಹೃದಯಮಧ್ಯದಿ ಪದ್ಯವಿದ್ದಿರೆ
ಖುಷಿಯೆ ಕಾದಿದೆ ನಾಳೆಗೆ

ಕವನತನಯ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ವೈಶಾಖ ವೃಕ್ಷ

May flower ಮೇ ಫ್ಲವರ್

ವೈಶಾಖೇ ರಕ್ತವಸ್ತ್ರಂಚ ಆಷಾಢೇ ಹರಿದಂಬರಂ|
ಯೋ ಧಾರಯತಿ ಸಾ ವೃಕ್ಷಃ ಸುಂದರೋ ಅತಿಸುಂದರಃ||
ಈ ಪೋಸ್ಟ್ ಅನ್ನು ಶೇರ್ ಮಾಡಲು:

ದುಗುಡವೇಕೆ

ಅತ್ತ ಇತ್ತ ಹೊರಳಿಸುತಿ ಯಾಕ ನೀ
ಮುನಿಸಿನಾಗ ಕಣ್ಣ?
ಮುತ್ತಿನಂತ ಕಣ್ಣಿತ್ತ ಸರಿಸಿ
ನೋಡೊಮ್ಮೆ ಎದೆಯ ಹುಣ್ಣ

ನಕ್ಕು, ತಿರುಗಿ ನಾ ಕಾಣದಂತೆ
ಒರೆಸುತ್ತಿ ಕಣ್ಣಿನಂಚ
ನಿನ್ನ ಸೆರಗ ತುದಿ ಒದ್ದೆಯಾಗೆ
ಮುಳುಗುತ್ತೆ ನನ ಪ್ರಪಂಚ

ಯಾವ ದುಗುಡ ಮನದಾಗ ಮಡಗಿ
ತೋರಿಸುತಿ ಇಷ್ಟು ಮೌನ?
ಕಣ್ಣು ಬಾಡಿ ಮುಖವೆಲ್ಲ ಸೊರಗಿ
ಬಾಡಿಹುದು, ಕೇಳು ಚಿನ್ನ

ನೀ ನಗದೆ, ಮುಗುದೆ ನನಗೀಗ ಹಗಲು
ಇರುಳೆಲ್ಲ ಬರಿಯ ನರಕ
ನಕ್ಕೊಮ್ಮೆ ನುಡಿದು ಸನಿಹಕ್ಕೆ ಬಾರೆ
ಈ ದುಃಖ ನಮಗೆ ಬೇಕ?

ಯಾಕ ಮುನಿಸು

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಕೆಂಡಸಂಪಿಗೆ

ಶಾಲ್ಮಲೆಯ ತಟದಲ್ಲಿ ಶ್ಯಾಮಲೆಯ ಸೀಮೆಯಲಿ
ಕೋಮಲತೆ ಮೈವೆತ್ತು ಹುಟ್ಟಿದವಳು
ನಿರ್ಮಲತೆ ನೋಟದಲಿ, ಸುಮಲತೆಯು ನಗುವಲ್ಲಿ
ಈ ಮಲೆಯ ನಾಡಿನಲಿ ರಾಣಿಯಿವಳು

ಸೌರಭದ ತಂಗಾಳಿ ಸಂಭ್ರಮದಿ ಬೀಸುವುದು
ನನ್ನವಳು ನಡೆವ ಕಿರುಹಾದಿಯಲ್ಲಿ
ಸೌಂದರ್ಯಸಿರಿಭರಿತ ಸಂಪಿಗೆಯೆ ಆವರಿತ
ಸೊಂಪಾದ ಮಲೆನಾಡ ಊರಿನಲ್ಲಿ

ಅಪ್ಸರೆಯು ಇಳಿಬಂದು ಈಪ್ಸಿತವು ದೊರೆತಂತೆ
ಸಂಪಿಗೆಯ ಹುಡುಗಿ ನನ್ನೆದುರು ಬರಲು
ಅವಳಂತ ಹೂ ಹುಡುಗಿ ಮತ್ತಿಲ್ಲ ಇನ್ನೆಲ್ಲು
ಬೇರಾರು ಅರಿತಿಲ್ಲ ಖುಷಿಯ ತರಲು

ಕೆಂಡಸಂಪಿಗೆ
ಕೆಂಡಸಂಪಿಗೆ

ಕವನತನಯ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಕೆಂಡಸಂಪಿಗೆ

#ಕೆಂಡಸಂಪಿಗೆ

ಮಾಂಡೋವಿಯ ಮಡಿಲಲ್ಲೂ ಶಾಲ್ಮಲೆಯದೆ ಕನವರಿಕೆ
ಮಲೆನಾಡಿನ ಕಡುಸಂಪಿಗೆ ನನ್ನದೆಂಬ ಮನವರಿಕೆ

ಸಂಪಿಗೆಯಂಥಾ ಹುಡುಗಿಯ ಒಲವಿನ ಹುಚ್ಚೆನಗೆ
ಅವಳ ಬಿಟ್ಟು ಜಗದ ಎಲ್ಲ ಸಿರಿಸುಖ ಹೆಚ್ಚೆನಗೆ
ಮೃದುಲೆ ಬಿಟ್ಟು ಹೋದ ಬೆಳಕೆ ಬದುಕಿಗೆ ರಹದಾರಿ
ಸಾಂಗತ್ಯದ ರುಚಿಯ ತೋರಿ ಹೋದಳು ಈ ಕುವರಿ

ಈ ಮೋಹದ ಹೂವು ಅರಳಿ ಎದೆಶಾಲ್ಮಲೆ ತೀರದಿ
ತಿಳಿಮನದಲಿ ತಂಗಾಳಿಗೆ ಕಂಪು ಬೆರೆಸಿ ಬೆರಗಾಗಿಸಿ
ಅಂತರಂಗವೆಲ್ಲ ಕೆಂಡಸಂಪಿಗೆಯೊಲು ಕೆಂಪೇರುತ
ಸಂಭ್ರಮವಿದೆ ಮನದತುಂಬ ಭ್ರಮರ ಮೆರೆವ ಪರಿಯಲಿ..

ಅವಳು ಕೂಡ ಸಂಪಿಗೆಸುಮದಂಥ ಗುಣದ ಹುಡುಗಿ
ಒಮ್ಮೆ ಕಂಡ ಅವಳ ಕಂಪು ಬದುಕೆಲ್ಲಾ ಹರಡಿ
ದಾರಿ ತುಂಬ ಅಮಲು, ಘಮಲು, ನಾನೇ ಸರದಾರ
ಜೊತೆನೀಡಲು ಬರುವಳೇನು, ತರುತ ನಗೆಯ ಹಾರ?!

ಕವನತನಯ

ಕೆಂಡಸಂಪಿಗೆ
ಕೆಂಡಸಂಪಿಗೆ
ಈ ಪೋಸ್ಟ್ ಅನ್ನು ಶೇರ್ ಮಾಡಲು:

ಯುಗಾದಿ

#ಕೆಂಡಸಂಪಿಗೆ
ತಗಾದೆ ತೆಗೆಯದಿರು ನೀ, ಯುಗಾದಿ ಬಂತೆಂದು
ಹೊಸ ಸೀರೆ ಬೇಕೆಂದು, ನನ್ನ ಚಿನ್ನ!
ಬೇಗುದಿಯು ಇದ್ದದ್ದೆ, ಒಗೆದ ಅಂಗಿಯ ಕಿಸೆಯು
ಬರಿದಾಗಿ ನಗುತಿಹುದು, ನನ್ನ ರನ್ನ!
.
ನನ್ನ ತೋಳಿನ ಉಡುಗೆ, ಬಳಸುಕೈಗಳ ತೊಡುಗೆ
ಚೆಲುವೆ ಅದುವೇ ನನ್ನ ಒಲವ ಕೊಡುಗೆ!
ಮಾಡಿಬಿಡು ಸಿಹಿ ಅಡುಗೆ, ಹೋಗೋಣ ನಡೆ ಗುಡಿಗೆ
ಸೀರೆ ಬೇಕೆನ್ನದಿರು ಮತ್ತೆ ಕಡೆಗೆ!
_____________________________________
೧೯೫೦ರಲ್ಲಿ ಬದುಕಿದ್ದರೆ ಹೀಗೆ ಬರೆಯಬಹುದಿತ್ತೇನೋ ಅಂತ 😉

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಕೆಂಡಸಂಪಿಗೆ

#ಕೆಂಡಸಂಪಿಗೆ

ಪೀತಪುತ್ಥಳಿಯಂಥವಳ ಬಳಿ
ಪ್ರೀತಿ ಪರಿಮಳಪುಷ್ಪವರಳಿ
ಛಾತಿ ಮೆರೆದಿದೆ ಮೋಹದಾ ಸುಳಿ,
ಗೆಳತಿ ಮುತ್ತಿನ ಬಳುವಳಿ

ಕೆಂಡಸಂಪಿಗೆ ನೆನಪು ಬರುತಿದೆ
ಕಂಡು ಅವಳಾ ಮೊಗವನು
ಭಂಡ ಮನಸೇ, ತಡವು ಏತಕೆ
ಹಿಂಡು ಕೆನ್ನೆಯ ತುಂಡನು

ಬಂಧಿಸುತ ತುಟಿ ಬಾಹುಭುಜಗಳ
ಸಂಧಿಸುತ ಸಿರಿದೇಹವ
ಗಂಧವಿಲ್ಲದೆ ಕಂಪು, ಕಂಪನ
ಸಿಂಧು ಪ್ರೇಮದ ಇಂಪನ

ತೀರ ಸನಿಹದಿ ನನ್ನ ಸಂಪಿಗೆ
ಬರಲು ಮೊಗ್ಗಿನ ಭಾವದಿ
ಚೂರು ಚೂರೇ ಅರಳಿ ನಕ್ಕಳು
ಇರಲು ಎನ್ನಯ ಮಡಿಲಲಿ..

. . . . . . ಕವನತನಯ (ಕಾಲ್ಪನಿಕವಷ್ಟೇ)

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಭಾರತಿ

ಬಹುವಿಶಾಲಳೀ ಭಾರತಿ
‘ಸರ್ವದಾ’ತೆ ಸುಸ್ಮಿತೆ
ಧರ್ಮ ಧೈರ್ಯ ಸಿರಿಸಂಸ್ಕೃತಿ
ಈ ಮಾತೆಯ ಅಸ್ಮಿತೆ! ।।

ಹರಿವ ಸುರಿವ ಹನಿನೀರೂ
ಸಿಹಿನೀರಿನ ಗಂಗೆ
ಮಣ್ಣಮಡಿಲಲೊರಗುವವಗೆ
ತಂಪನೀವ ಹೊಂಗೆ
ರಾಮ ಬುದ್ಧ ಯುವವಿವೇಕ
-ರುಸಿರಿದೆ ಕಣಕಣದಿ
ಒಮ್ಮೆ ನೆನೆದು ಧನ್ಯನೆನ್ನು
ಭಕ್ತಿದುಂಬಿ ಮನದಿ

ಇಲ್ಲದಿರುವುದನ್ನು ನೆನೆದು
ಮರುಗಬೇಡ ನೀ ವೃಥಾ
ಇರುವ ಸಿರಿಯ ಕಂಡು ಸುಖಿಸು
ನುಡಿವೆಯೇಕೆ ಅನೃತ
ಭಾರತೀಯನೆಂಬ ಪದವಿ
-ಗಿಂತ ಸಿರಿಯು ಬೇಕೇ?
ಒಮ್ಮೆ ಅರಿತು ಹೆಮ್ಮೆ ಪಡಲು
ಬೇರೆ ಸುಖವು ಬೇಕೇ?!

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಕೆಂಡಸಂಪಿಗೆ

ಮಿನುಗುತಾರೆಯ ರಾತ್ರಿ, ಜಿನುಗುತಿರೆ ಪ್ರೇಮಮಧು
ಗುನುಗುತಿಹೆ ಜೇನ್ದುಟಿಯ ಹುಡುಗಿ ಹೆಸರ
ಹೂನಗೆಯ ಬೀರುವಳು, ಮನಗಿರಿಯ ನವಿಲವಳು
ರಮಿಸಿ ಸಿಹಿಮುತ್ತಿಡಲು ನನಗವಸರ

ಮುತ್ತಿಟ್ಟ ಘಳಿಗೆಯಲಿ ಹಚ್ಚಿಟ್ಟ ಕಿರುದೀಪ
ಮಿಸುಕಾಡಿ ನಾಚಿಕೆಗೆ ಆರಿಹೋಯ್ತು
ಮೃದುಗೈಯ ಬಳಸುತಿರೆ ತಂಗಾಳಿ ಸುಳಿದಾಡಿ
ಅರೆತೆರೆದ ಕಿಟಕಿಯೂ ಮುಚ್ಚಿಹೋಯ್ತು

ಕತ್ತಲಲಿ, ಮತ್ತಲ್ಲಿ, ಅವಳ ಕಣ್ಣಲಿ ಕಾಂತಿ
ಅದರ ತುಂಬಾ ನನ್ನ ಕುರಿತು ಪ್ರೀತಿ
ಕೆಂಡಸಂಪಿಗೆಯಂಥ ಅವಳ ಮೊಗದಾ ತುಂಬ
ಮುತ್ತಿಡುವೆ ಮೊದಲ ಮಳೆ ಸುರಿವ ರೀತಿ

ನನ್ನ ಗೋಕುಲದಲ್ಲಿ ಅವಳೇನೆ ರಾಧಿಕೆಯು
ಅವಳ ರಾಗದಿ ಕರೆವ ಶ್ಯಾಮ ನಾನು
ಅವಳು ನನ್ನನು, ನಾನು ಅವಳನ್ನು ಧೇನಿಸಲು
ನಡುವೆ ಹರಿವಳು ಪ್ರೀತಿ ಯಮುನೆ ತಾನು!

‘ನನ್ನ ನಲ್ಲನೆ!’ ಎಂದು ಮುತ್ತಿಡಲು ನನ್ನಾಕೆ
ಸುತ್ತೆಲ್ಲ ಯಾಕೇನೊ ಮಸುಕು ಮಸುಕು
ಬಿದ್ದ ಕನಸದು ಹರಿದು ಎಚ್ಚರವು ನನಗಾಗೆ
ಬಹುನಿರಾಸೆಯ ಸಮಯವದುವೆ ನಸುಕು
ಕನಸುಗಳ ಕಾಣುತಿರೆ ಚಂದ ಬದುಕು…

– ಕವನತನಯ

ಈ ಪೋಸ್ಟ್ ಅನ್ನು ಶೇರ್ ಮಾಡಲು: