ಕೃಷ್ಣ

ಗೋವಿರದ ಮನೆಯಲ್ಲಿ ಬೆಣ್ಣೆ ದೂರದ ಮಾತು
ಚೊಂಬು ಹಾಲಿಗೆ ಅಷ್ಟು ನೀರು ಬೆರೆತು
ನೀರುಮಜ್ಜಿಗೆಯಲ್ಲೂ ಚೂರು ಬೆಣ್ಣೆಯು ಕಾಣ-
ಲದನು ತಿನ್ನುವ ನಾನು ಶ್ಯಾಮನಂತೆ! – ಕೃಷ್ಣ !
ತಾಯಿ ಪ್ರೀತಿಗೆ ಬೇರೆ ಎಲ್ಲೆಯುಂಟೆ?!

ನಿನ್ನ ಪರಿಯಲಿ ನಾನು ಬೆಣ್ಣೆಯನು ತಿಂದಿಲ್ಲ
ಆ ಯಶೋದೆಯೊಲಿದ್ದ ನನ್ನ ತಾಯಿ
ಬೆಣ್ಣೆಯಿರದಿರಬಹುದು ಹಣ್ಣು ಇರದಿರಬಹುದು
ಕೃಷ್ಣನಂತಿರುವೆಂದಳೆನ್ನ ತಾಯಿ – ಕೃಷ್ಣ !
ತಾಯಿಯೆಂಬುವಳೆಷ್ಟು ಮಾತೃಹೃದಯಿ!

ಕದಿಯಬಾರದು ಎಂದು ಕಿವಿಹಿಂಡಿ ಹೇಳಿದಳು
ತಿನ್ನಿಸುತ ತಾ ದುಡಿದ ತುತ್ತು ಅನ್ನ
ಸಂಜೆಯೇರಿದ ಮೇಲೆ ಬೆಳಕಿಲ್ಲ ಮನೆಯಲ್ಲಿ
ಕತ್ತಲಲಿ ನಾನೀಗ ಅವಳ ‘ಶ್ಯಾಮ’! -ಕೃಷ್ಣ!
ನಮಗಾಗಿ ಬೆಳಕ ಬೀರಿದನು ಸೋಮ!

ನಿನ್ನ ತಾಯಿಯ ಬಿಟ್ಟು ದೂರ ಸಾಗಿದೆ ನೀನು
ಅವಳು ಹೋದಳು ಇಲ್ಲಿ ನನ್ನ ಬಿಟ್ಟು
ದುಃಖವೇನೂ ಇಲ್ಲ ಆಶ್ರಿತರು ಎಲ್ಲರಿಗೂ
ಅನ್ನ ನೀಡುತ ಪೊರೆವ ತಾಯಿ ನೀನು! – ಕೃಷ್ಣ!
ನನ್ನ ಕಾಯುತಲಿರುವ ತಂದೆ ನೀನು!

ಹಣವೇನು ಮಾಡೀತು ಮನೆಯೇನು ಮಾಡೀತು
ನೂರುಶಶಿಮುಖಿಸುಖವು ಏನು ಕೊಟ್ಟೀತು?
ಕೃಷ್ಣ ಕೃಷ್ಣಾ! ಎಂದು ನಿನ್ನ ನೆನೆಯುವ ಬುದ್ಧಿ
ಬರದಿರಲು ಜೀವನವೆ ಕೈಯ ಕೊಟ್ಟೀತು! – ಕೃಷ್ಣ!
ನಿನ್ನ ಉಪದೇಶವದು ಬದುಕ ಕಟ್ಟೀತು!

ಏನಿಲ್ಲವೆಂದಿಲ್ಲ ನನಗೇನೂ ಬರವಿಲ್ಲ
ಒಮ್ಮೆ ನಿನ್ನಯ ಕಂಡು ನಮಿಸುವಾಸೆ
ಕಾಳಸರ್ಪನ ತುಳಿದ ನಿನ್ನ ಮೃದುಪಾದಗಳ
ಒಮ್ಮೆ ನನ್ನೆದೆ ಮೇಲೆ ಇಡಿಸುವಾಸೆ! -ಕೃಷ್ಣ!
ವಿಷ್ಣುಪದವಾಸ್ತವ್ಯ ಮಾಡುವಾಸೆ!

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಕೃಷ್ಣಂ ವಂದೇ ಜಗದ್ಗುರುಂ

ಜಗವೆನ್ನ ಒಳಗಿರಲು ಭಗವಂತ ನಗುತಿರಲು
ನನ್ನೊಳಗೆ ನೂರಾರು ರುದ್ರಲೀಲೆ
ಗಿರಿಧರನೆ ನೀ ನಿಜದಿ ಕಂಡ ಲೀಲೆಗಳೆಲ್ಲ
ಎನ್ನೊಳಗೆ ಸಂಭವಿಸಿ ನಗೆಯ ಮಾಲೆ…

ನೀನೆನಗೆ ಶ್ರೀಕೃಷ್ಣ ನಾ ನಿನಗೆ ಶ್ರೀಕೃಷ್ಣ
ನೀನುನಾನೆಂಬ ಅಂತರವೂ ಕರಗಿ
ನಾನಿಲ್ಲ ನೀನಿಲ್ಲ ಜಗವೆಲ್ಲವೂ ಒಂದು
ಬಿಂದುವಲಿ ಸಂಧಿಸಿರೆ ಸೋತೆ ಬಾಗಿ

ಮೇರುವಿಂಧ್ಯಾದ್ರಿಯಲಿ ಸೌಂದರ್ಯಕಾಶಿಯಲಿ
ತಪಿಸುತಿಹ ಪರಮಶಿವ ಶ್ರೀಉಮೇಶ
ಪರಮಶಿವನೆದೆಯಲ್ಲಿ ಕುಳಿತು ಜಗ ನೋಡುತಿರೆ
ನಾಕನೂಪುರ ಕೂಡ ಕಾಲಕೆಳಗೆ

ಕೃಷ್ಣನಂತಿಹ ವಿಷ್ಣು ಪರಮಶಿವ ಈಶನೂ
ಸಂಧಿಸಿದ ಪರಿಯಲ್ಲಿ ಈಗ ನನ್ನಲ್ಲಿ-
ಎದೆಯಲ್ಲಿ ಮುದ’ಮೋಹಿನಿ’ಯು ಪ್ರೀತಿ’ಶಿವ’ನನ್ನು
ವರಿಸೆ -ಕಣ್ಣೀರ’ಮಣಿ, ಕಂಠ’ತುಂಬಿ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಕೆಂಡಸಂಪಿಗೆ

#ಕೆಂಡಸಂಪಿಗೆ

ಸಂಪ್ರೀತಿ ಸಮಪ್ರೀತಿ ತುಸುಸರಸ ಸಲ್ಲಾಪ
ನನ್ನ ಮತ್ತವಳ ಬಳಿ ಒಲವಿನದೇ ಆಲಾಪ

ಬೆಣ್ಣೆಗೆನ್ನೆಗೆ ಬಣ್ಣವೇರಿಸಲು ಮುತ್ತಿಡಲು
ನಾಚುವಳು, ರಾತ್ರಿಯನು ನಾಚಿಸುವಳು
ನನ್ನೆದೆಯಲವಳೆಂಬ ಹಾಲ್ಗಡಲು ಮಲಗಿರಲು
ಈ ರಾತ್ರಿ, ಈ ಬದುಕು ಸ್ವರ್ಗ ಕೇಳು!

ಗೆಜ್ಜೆ ಘಲ್ಲೆನಿಸುತ್ತ ಮನೆತುಂಬ ಓಡಾಡಿ
ತುಂಬುವಳು ಈ ಮನದ ಖಾಲಿತನವ
ಉಲಿಯುತ್ತ ಮುತ್ತಂತ ಮುದ್ದುಮಾತುಗಳನ್ನ
ನಲಿಯುವಳು ಬೆಳಗುವಳು ನನ್ನ ದಿನವ

ಮಡದಿಯೆನ್ನುವ ನಲ್ಲೆ ಸಂಪಿಗೆಯ ಹೂಮಾಲೆ
ಘಮಿಸುವಳು ಎಂದಿಗೂ ಬಾಡದಂತೆ
ತುಂಬಿಹಳು ಬದುಕಲ್ಲಿ ಸಂತೃಪ್ತ ಸುಖಭಾವ
ದೇವರಲಿ ಇನ್ನೇನೂ ಬೇಡದಂತೆ

-ಕವನತನಯ ( ನನಗೂ ಇದಕ್ಕೂ ಸಂಬಂಧವಿಲ್ಲಾ… 😉 )

ಈ ಪೋಸ್ಟ್ ಅನ್ನು ಶೇರ್ ಮಾಡಲು:

img_20160917_044743

ಮುಕುಟದಲ್ಲಿಹ ಮಣಿಯು ಮಿರುಗಿ ತಾ ಮಿನುಗಿ
ಇಂದುರೂಪದ ಗಂಧ ಮುಂದಲೆಯಲಂದದಲಿ
ಮೆರೆಯೆ, ಗರಿಮಡಿ ಗರಿಮೆಯಿಂದಲಂಕರಿಸಿರಲು
ಸೊಗದಿ ನಗೆ ಸೂಸಿರಲು ಮೊಗವು ಸುಪ್ರಸನ್ನತೆಗೆ
ಮುರಳಿಲೋಲನು ಜಗದ ಒಡೆಯ ತಾ ಒಡವೆಗಳ
ಸೋಲಿಸುತ ಹೆಚ್ಚೆಚ್ಚು ಕಾಂತಿಯಲಿ ಹೊಳೆಯುವನು,
ಶತಕಾವ್ಯದೊಡೆಯ, ಮನವಿಪಿನಪರ್ವತಶಿಖರ-
ಸ್ಥಾನಾಕ್ರಮಿತ ಕವನಕಾನನದ ಸಂಚಾರಿ
ನಮಿಸಿ ಪಾದಕೆ ವಂದಿಸುವವನೆದೆಗೆ ಮುದವೀವ
ಮುದಕರನು ಶುಭಕರನು ಮಯೂರಗರಿಕೆಯ ಮೆರೆಸಿ
ಶಿರದಿ ಧರಿಸುತ ಧರೆಯ ಪೊರೆವವನು ನೀ ಕೃಷ್ಣ,
ಮೊರೆಕೇಳಿ ಹೊರೆಯಿಳಿಸು ಧರೆಯೆಲ್ಲ ಮೆರೆವಂತೆ
ಹಾರೈಸು, ಕೋರೈಸುವಾ ಮೊಗದಿ ಮುಗುಳುನಗೆ
ಸೂಸು, ಕನಕನ ಪ್ರಿಯನೆ, ಕಣಕಣವನುದ್ಧರಿಸು
ದರುಶನವ ಬಯಸಿರಲು ಮನದಂಧಕಾರವ ಸು-
ದರ್ಶನವೆನ್ನುವಾಯುಧದಿ ಸಂಹರಿಸಿ
ಮಮಕಾರ ತೋರು ನೀ ಸಾಕಾರರೂಪನೇ
ತಪ್ಪು ಒಪ್ಪುಗಳನ್ನು ತಪ್ಪದೆಯೇ ಕ್ಷಮಿಸುತ್ತ
ಕ್ಷಯಗೊಳ್ಳದಿರುವಂತೆ ಭಕ್ತಿ ಶಕ್ತಿಗಳೆಂದೂ
ಎತ್ತ ಇರಲತ್ತ ಎಮ್ಮ ಸುತ್ತಿಬಹ ಕಷ್ಟ ಕಾ-
ರ್ಪಣ್ಯ ರಾಶಿಯ ಕಳೆದು ರಕ್ಷಿಸುತ ಅನವರತ
ಕೃಪೆಮಾಡು ಮಾಧವನೆ! ಸಿರಿ ಸುಪ್ರಭಾತ..

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಕೆಂಡಸಂಪಿಗೆ

medialy-jhakaas-abhinetri-rinku-rajguru

 

ಶಾಲ್ಮಲೆಯ ಮಡಿಲ ಸಂಪಿಗೆಹೂವೆ ಚೆಲುವೆ

ಧಮನಿಗಳ ತುಂಬ ಜೇನ್ಹೊಳೆಯ ತಂದವಳೇ

ನೆನೆಯೆ ಜಾಣೆಯೆ ನಿನ್ನ, ದಿನವೆಲ್ಲ ದಣಿವಿಲ್ಲ

ಎದೆಯ ಕೋಣೆಗೆ ನಿನ್ನ ಬರವಿರದೆ ಸೊಗಸಿಲ್ಲ

 

ಊಟ ತೊರೆಯುತ ಕೂತೆನಂದು ನಿನ್ನಾ ನುಡಿಗೆ

ನೀನಾಡೊ ಸಿಹಿಮಾತು ಮಂದಹಾಸದ ಬೆಡಗೆ!

ಇಂದೇಕೆ ಸುಮ್ಮನಿಹೆ ಹಾಗೇಕೆ ದೂರಾದೆ

ನಮ್ಮ ನಡುವಲಿ ಪ್ರೀತಿ ಹೂವರಳದೆ?

 

ಎದೆಖಾಲಿ ತಲೆಖಾಲಿ ಮನಖಾಲಿಯಾದಾಗ

ನಿನ್ನ ನೆನಪೇ ನನ್ನ ತುಂಬಿ ಬರಲು

ಕಹಿಯೆಲ್ಲ ಸಿಹಿಯಾಗಿ ಹೂವೆಲ್ಲ ನೀನಾಗಿ

ಕಂಡ ಹೂವಲ್ಲೆಲ್ಲ ನಿನ್ನ ಬಿಂಬ

ನೀನೇನೆ ತುಂಬಿರುವೆ ಎದೆಯ ತುಂಬ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಕವನ ಸತ್ತಿತು ಇಂದು ಎದೆಯ ಮೇಲೆ

ನೂರಾರು ಕವನಗಳ ಮಸಣವೆನ್ನೆದೆ ನೋಡು

ಒಂದರಾ ಅಡಿಗೆ ಇನ್ನೊಂದು ಗೋರಿ

ಮಸಣ ಮಾಲೀಕನಿಗೆ ತಿಳಿದಿಲ್ಲ ತನ್ನೊಡನೆ

ಮಲಗಿರುವ ಗೋರಿಗಳ ಸಂಖ್ಯೆಯೆಷ್ಟು…

 

ತಾಯಿಯೆನ್ನುವ ಕವನ ತಾಯ್ನೆಲದ ನೀಳ್ಗವನ

ನೆನಪಿನಲಿ ಮೆರೆದ ದಿನಗಳ ಮೆರೆವ ಕವನ

ಸಿಕ್ಕ ಪ್ರೀತಿಯ ಕವನ ಸಿಗದ ಪ್ರೀತಿಯ ಕವನ

ಎಲ್ಲದರ ಗೋರಿಯಿದೆ ಸಾಲುಸಾಲಾಗಿ…

 

ನಾನೂ ಹೋಗುವೆ ಬೇಗ ಜಗವ ತೊಲಗಿ…

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಕೊಂದುಬಿಡು ಗಮ್ಯವನು ಸೇರೊ ಮೊದಲೇ…

ಎಂದಿಗೂ ಫಲನೀಡದಿರುವ ಹಾದಿಯೊಳೆನ್ನ

ಕೊಂದುಬಿಡು ಗಮ್ಯವನು ಸೇರೊ ಮೊದಲೇ

ಯಾರಿಗೂ ಬೇಕಿರದ ಗಂಗೆ ತರುವಾ ಮುನ್ನ

ಸಾರಿಬಿಡು ನನ್ನ ಹೆಣ ಸತ್ತಿತೆಂದು

 

ತಂಪು ಗಿರಿವಿಪಿನದಲಿ ಹುಟ್ಟಿಹರಿದಾ ಒರತೆ

ಮರುಭೂಮಿಯಲ್ಲೇಕೆ ಬದುಕಿರುವುದು?

ಯಾರು ಕುಡಿಯದ ಕೆರೆಯ ಸೇರಿ ಕರಗುವ ಮುನ್ನ

ಇಂಗಿಹೋಗಲಿ ಬೆಂದ ಮರಳ ಮೇಲೆ…

 

ವಿಪಿನವಾಗದ ಬದುಕು ರಣಭೂಮಿಯಾದರೂ

ಸರಿಯೆ, ಮಸಣದ ನೀರವತೆಯು ಬೇಡ

ಬದುಕದೆಯೆ ಬದುಕಿಸದೆ ಜೀವತುಂಬದೆ ಕೊರಗಿ

ಅಸುವಳಿವ ಮುನ್ನವೇ ಕೊಂದುಬಿಡೆಯಾ…

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಅವಸಾನ…

1966 ಜುಲೈ ತಿಂಗಳು

ಮಹಾರಣ್ಯಗಳು ದಟ್ಟೈಸಿ ಮೇಳವಿಸಿದ ಪಶ್ಚಿಮ ಘಟ್ಟಗಳ ಮಹಾಸಾಲುಗಳಲ್ಲಿ ಹೂತುಹೋದಂತಿರುವ ಕುಗ್ರಾಮ ಕೇರಿಮನೆ. ಕೇರಿಮನೆ ಎಂಬುದೊಂದು ಊರಾದರೂ ಯಲ್ಲಾಪುರದಂತಹ ಮಲೆಗಳ ನಾಡಿನಲ್ಲಿ ಊರಿಗೊಂದೇ ಮನೆ ಇರುವ ರೂಢಿ. ಪೂರ್ವೋತ್ತರ ದಕ್ಷಿಣಗಳಲ್ಲಿ ಕವಿದಿರುವ ಮಲೆಬೆಟ್ಟಗಳು, ಪಶ್ಚಿಮಕ್ಕೆ ನೀಳವಾಗಿ ಸಮಾನ ಎತ್ತರದ ಅಡಿಕೆ ಮರಗಳುಳ್ಳ ಹಳೇತೋಟ, ಅದರ ಪಕ್ಕದಲ್ಲೇ ವರ್ಷಪೂರ್ತಿ ಹರಿಯುವ , ಮಾರುಮಾರುದ್ದಕ್ಕೂ ಜೋಂಡುಗಳ ಮೆಳೆಯೇ ಬೆಳೆದು ಹಾವು-ಹಕ್ಕಿಗಳ ಆವಾಸಸ್ಥಾನವಾಗಿರುವ ದೊಡ್ಡದಾದ ಹಳ್ಳ, ಇವೆಲ್ಲವುಗಳ ಗರ್ಭದಲ್ಲಿ ಕರಿಗಟ್ಟಿ ಕಳೆಗುಂದಿದ ಹೆಂಚುಗಳಿಂದಾದರೂ, ತನ್ನ ಅರೆಗೆಂಪು ಬಣ್ಣದಿಂದಲೇ ಎದ್ದು ಕಾಣುವ ಕೇರಿಮನೆಯ ನಾಣ ಹೆಗಡೆ- ಅರ್ಥಾತ್ ನಾರಾಯಣ ಹೆಗಡೆಯವರ ವಿಶಾಲ ಮನೆ. ಮಲೆನಾಡಿನ ಭೀಮಗಾತ್ರದ ಮನೆಗಳಿಗಿಂತಲೂ ಕೊಂಚ ಹೆಚ್ಚೇ ದೊಡ್ಡದಾದ ಮನೆಯೊಳಗೆ ಸದಾಕಾಲ ಬಚ್ಚಲು ಒಲೆಯಲ್ಲೋ, ಅಡುಗೆ ಒಲೆಯಲ್ಲೋ, ಅಥವಾ ಮುರುಗು ಕಾಯಿಸುವ ಒಲೆಯಲ್ಲೋ – ಒಂದಲ್ಲಾ ಒಂದು ಕಡೆ ಇದ್ದೇ ಇರುವ ಅಗ್ನಿದೇವ ಹೊಮ್ಮಿಸುವ ಹೊಗೆ ಮನೆಯ ಸಂದು-ಗೊಂದು ಮಾಡುಗಳನ್ನೆಲ್ಲ ತಿಕ್ಕಿ ತೀಡಿ, ಮನೆಯ ಮರಮುಟ್ಟುಗಳು, ಅಟ್ಟ, ಎಲ್ಲವನ್ನು ಕಪ್ಪುಗೊಳಿಸಿ, ಕ್ರಿಮಿ ಕೀಟಗಳಿಂದ ದೀರ್ಘರಕ್ಷಣೆಯ ಅಭಯವನ್ನಿತ್ತು, ಕೊನೆಗೆ ಹೆಂಚುಗಳ ಸಂದಿಯಿಂದ ಹೊರಬಿದ್ದು ಮನೆಯ ಮೇಲೆ ಸದಾ ಹೊಗೆಯ ಮೋಡ ಕವಿದೇ ಇರುತ್ತಿತ್ತು. ಮಣ್ಣಿನ ನೆಲ, ಮಣ್ಣಿನ ಗೋಡೆಯ ಆ ವಿಶಾಲ ಮನೆಯ ಬಹುಪಾಲು ಭಾಗದಲ್ಲಿ ಸದಾ ಕತ್ತಲೆಯೇ ಕವಿದಿರುತ್ತಿತ್ತು. ಮಳೆಗಾಲದ ರಭಸಕ್ಕೆ, ಚಳಿಗಾಲದ ಕೊರೆತಕ್ಕೆ ದಾರಿ ನೀಡದೆಂಬಂತೆ ಚಿಕ್ಕದಾಗಿ, ದಪ್ಪನಾಗಿ ಮಾಡಿದ್ದ ಮರದ ಕಿಟಕಿಗಳು ಬಹುಪಾಲು ಬೆಳಕನ್ನು ತಾವೇ ನುಂಗುತ್ತಿದ್ದವೇನೋ.

ಅಂದು ಕೇರಿಮನೆಯ ವಾತಾವರಣದಲ್ಲಿ ಶುಂಠಿ, ಅರಿಶಿನ, ಎಣ್ಣೆ, ಅದು ಇದು ಎಂದು ಹೇಳಲಾಗದ ಹಲವಾರು ವಸ್ತುಗಳ ಸಮ್ಮಿಶ್ರ ಗಂಧ ಮೂಗಿಗೆ ಬಡಿಯುತ್ತಿತ್ತು. ಎರಡು ದಿನಗಳಿಂದ ಬಿಡದೇ ಸುರಿಯುತ್ತಿದ್ದ ಮಳೆಯ ಶಬ್ಧ ಆಗೊಮ್ಮಿ ಈಗೊಮ್ಮೆ ಯಾರ ಬಾಯಲ್ಲಾದರೂ ಬೈಗುಳ ತಿಂದರೂ ಅನ್ಯಥಾ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಜೊತೆಗೆ ಅಂದಷ್ಟೇ ಆಗಮಿಸಿದ್ದ ಪುರಾಣಿಕರ ಹರಟೆಯ ಶಬ್ಧ ಮನೆಯೊಳಗೆಲ್ಲ ಪ್ರತಿಧ್ವನಿಸುತ್ತಿತ್ತು.

ಸೀತಮ್ಮನ ಹೆರಿಗೆ ದಿನ ಹತ್ತಿರ ಬಂತೆಂದು, ಈ ಮಳೆಗಾಲದಲ್ಲಿ ಓಡಾಟ ಕಷ್ಟವೆಂದು ನಾಣ ಹೆಗಡೆಯವರು ಹೆರಿಗೆಯ ನಂತರದ ಶುಭಕಾರ್ಯಗಳಿಗಾಗಿ ಪುರಾಣಿಕರನ್ನೂ, ಹೆರಿಗೆಯ ಕೆಲಸಕ್ಕೆಂದು ಪಕ್ಕದೂರಿಗೆ ಕೊಟ್ಟು ಮದುವೆ ಮಾಡಿರುವ ತಮ್ಮ ಅಕ್ಕನನ್ನು ಮೊದಲೇ ಕರೆಸಿದ್ದರು. ಮನೆಗೆ ಬರುವ ನಿತ್ಯದ ಆಳುಗಳಂತೂ ಇದ್ದೇ ಇದ್ದರು.

ಇಂತಹ ಸಮಯದಲ್ಲಿ ಗಂಡಸರ ಕೆಲಸ ಬಹಳ ಕಡಿಮೆ. ಯಾವುದಾದರೂ ಸಾಮಾನು ಸರಂಜಾಮು ಬೇಕೆಂದರೂ ಮಲೆನಾಡಿನವರಿಗೆ ಹೆಂಗಸರಿಗೆ ಆಜ್ಞೆ ಮಾಡಿ ರೂಢಿಯೇ ಹೊರತು ತಾವು ಕೆಲಸ ಮಾಡುವ ಪದ್ಧತಿ ಗೊತ್ತಿಲ್ಲ . ಒಟ್ಟಿನಲ್ಲಿ ಹೆಂಗಸರ ಕಾರುಬಾರಿನಲ್ಲೇ ಶುಕ್ರವಾರ , ಸಿದ್ಧಾರ್ಥಿ ಸಂವತ್ಸರದ ಆಷಾಢ ಕೃಷ್ಣ ದ್ವಾದಶಿಯಂದು ಅಪರಾಹ್ನದಲ್ಲಿ ಹಲವಾರು ವರ್ಷಗಳ ನಂತರ ಕೇರಿಮನೆಯೊಳಗೊಂದು ಮಗುವಿನ ಧ್ವನಿ ಕೇಳಿಬಂತು. ತೀರಾ ವ್ಯಾವಹಾರಿಕ ಮನೋಭಾವದ, ಕಲ್ಲು ಹೃದಯದ ನಾಣ ಹೆಗಡೆಯವರಿಗೂ ಆನಂದದಿಂದ ಕಣ್ತುಂಬಿ ಬಂತು.

ಮಗು ಹುಟ್ಟಿ ಹನ್ನೊಂದನೇ ದಿನ ಪುರಾಣಿಕರು ಶಾಸ್ತ್ರೋಕ್ತವಾಗಿ ದುಂಡುಚಂದ್ರನಂತಿದ್ದ ಗಂಡುಮಗುವಿಗೆ ‘ಮಾಧವ’ ಎಂದು ನಾಮಕರಣ ಮಾಡಿಸಿದರು.
____________________________
1984 ಜೂನ್ ತಿಂಗಳು
ಕೇಶವ ಮಠ, ಯಲ್ಲಾಪುರ

ಎಂತಹ ಕಠಿಣ ಹೃದಯದಲ್ಲೂ ಭಾವಗಳ ಸುಗ್ಗಿ ಹಬ್ಬವಾಡಿಸುವ ಶಕ್ತಿ ಇರುವುದು ಮಲೆನಾಡಿನ ಮಳೆಗೆ. ಅದನ್ನು ಸ್ವತಃ ಕಂಡು ನೆನೆದು ಅದರ ರುದ್ರರಮಣೀಯತೆಯನ್ನು ಕಣ್ತುಂಬಿಕೊಳ್ಳಬೇಕೇ ವಿನಹ ಅದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ .

ಕಾರ್ಮೋಡಗಳು ಸರಣಿಸರಣಿಯಾಗಿ ಬೀಸಿ ಬಂದು ಮೇಲಾಕಾಶವನ್ನು ಕವಿಯುತ್ತಿದ್ದವು. ಅಪರಾಹ್ನ ನಾಲ್ಕರ ಹೊತ್ತಿಗೇ ಸಂಜೆ ಕವಿದಷ್ಟು ಕತ್ತಲೆ ತುಂಬಿತ್ತು. ಹುಚ್ಚುಗಾಳಿಯು ವೇಗದಲ್ಲಿ ತರಗೆಲೆ ಧೂಳು ಮಣ್ಣು ಕಸ ಕಡ್ಡಿಗಳನ್ನೆಲ್ಲ ಹೊತ್ತು ಎಲ್ಲೆಡೆ ಬೀಸುತ್ತಿತ್ತು. ಇನ್ನೇನು ಮಳೆ ಬರುತ್ತದೆ ಎಂಬ ಆಸೆ ಹುಟ್ಟಿಸಿ ಬೀಸಿ ಬೀಸಿ ಸುಯ್ಯುವ ಗಾಳಿ ಭಾವಪ್ರಪಂಚದಲ್ಲಿ ಮಹಾವರ್ಷಧಾರೆ ಸುರಿಯುವಂತೆ ನೂರಾರು ನೆನಪುಗಳನ್ನು ಹೊತ್ತು ತರುತ್ತಿತ್ತು. ಮಲೆಯ ಮೊದಲ ಮಳೆಯಲ್ಲಿ ಅವ್ಯಕ್ತ ಆನಂದದ ಹನಿಗಳೂ ಕೂಡಿವೆ.

ಕೇಶವ ಮಠದ ಹಿಂಬದಿಯಿಂದ ಬೆಟ್ಟವೇರಿ ಹೋಗಲು ಕಾಲುದಾರಿಯಿದೆ. ಬಹಳ ಕಡಿಮೆ ಬಳಕೆಯಲ್ಲಿದ್ದ ಆ ದಾರಿಯನ್ನು ಹಳುಗಳು ಬೆಳೆದು ಭಾಗಶಃ ಮುಚ್ಚಿಬಿಟ್ಟಿವೆ. ಕಾಲುದಾರಿಯ ಪೂರ್ವಪರಿಚಯ ಇದ್ದರಷ್ಟೇ ಮುಂದುವರೆಯಲು ಸಾಧ್ಯವಾಗುವ ಆ ದಾರಿಯಲ್ಲಿ ಸುಂದರಕಾಯದ ಹದಿನೆಂಟರ ತರುಣನೊಬ್ಬ ಮನದಲ್ಲೇ ಏನೋ ಮೆಲುಕು ಹಾಕುತ್ತಾ ನಿಧಾನವಾಗಿ ನಡೆಯುತ್ತಿದ್ದಾನೆ. ಬಿಳಿದಾದ, ಪಾದದವರೆಗೆ ಇಳಿದಿರುವ ಅಡ್ಡಪಂಚೆ, ಉತ್ತರೀಯದಂತೆ ಹಾಕಿರುವ ಕೇಸರಿ ಬಣ್ಣದ ಶಾಲು- ಇಷ್ಟೇ ಮೇಲುಡುಗೆಯಾದರೂ ಯೌವನದ ಕಾಂತಿ ಆತನಲ್ಲಿ ಎದ್ದು ಕಾಣುತ್ತಿತ್ತು . ಮಳೆರಾಯನ ಪೂರ್ವತಯಾರಿಯ ಪ್ರಭಾವ ಆತನ ಭಾವಸಾಮ್ರಾಜ್ಯದ ಮೇಲೂ ಆಗಿದ್ದುದಕ್ಕೆ ತೇವತುಂಬಿದ್ದ, ಕಾರ್ಮೋಡಗಳನ್ನು ಪ್ರತಿಫಲಿಸುತ್ತಿದ್ದ ಕಾಂತಿಕಂಗಳೇ ಸಾಕ್ಷಿ. ಆ ದಟ್ಟಾರಣ್ಯದ ನಡುವೆ ನಡೆವಾಗ ಪ್ರಕೃತಿ ಸೌಂದರ್ಯದೆಡೆಗೂ , ತನ್ನೊಳಗೆ ನಡೆಯುತ್ತಿದ್ದ ಯೋಚನೆಗಳೆಡೆಗೂ- ಎರಡೂ ಕಡೆ ಮನಸ್ಸು ವಾಲಾಡುತ್ತಿತ್ತು.

ಆ ಕಾಲುದಾರಿಯು ಕೊಂಚ ದೂರ ಕ್ರಮಿಸಿ ನಂತರ ಬೆಟ್ಟದ ತುದಿಯಲ್ಲಿದ್ದ ಕೊಂಚ ಬಯಲು ಪ್ರದೇಶವನ್ನು ಸೇರುತ್ತಿತ್ತು. ಅಲ್ಲಲ್ಲಿ ಬೆಳೆದಿರುವ ನೆಲ್ಲಿ ಮರಗಳ ಜೊತೆಗೆ ಮಾಧವ ಪ್ರತಿನಿತ್ಯ ಬಂದು ಕೂರುತ್ತಿದ್ದ ಕರಿಗಲ್ಲಿನ ಬಂಡೆಯೂ ಅಲ್ಲಿತ್ತು.

ಅಲೆಅಲೆಯಾಗಿ ಕಾಣುತ್ತಿದ್ದ ದೂರದೂರದ ಮಲೆ ಬೆಟ್ಟಗಳೆಡೆಗೆ ಕಣ್ಣಾಗಿ ಕುಳಿತನು ಮಾಧವ. ಹರೆಯದ ಬಿಸಿರಕ್ತದ ಆತನ ಮನಸ್ಸು ಯೋಚಿಸುತ್ತಿದ್ದದ್ದು ತರುಣಿಯೊಬ್ಬಳ ಬಗ್ಗೆ ಎಂದು ವಿಶೇಷವಾಗಿ ಹೇಳಬೇಕಿಲ್ಲ.

ಕೇಶವ ಮಠ ಹೆಸರು ಹೇಳುವಷ್ಟು ದೊಡ್ಡ ಸಂಸ್ಥಾನವೇನೂ ಅಲ್ಲ. ತುಂಬಾ ಇಕ್ಕಟ್ಟಾಗಿದ್ದ ವಿಷ್ಣುಮಂದಿರ, ಜೊತೆಗೆ ಪಕ್ಕದಲ್ಲಿ ಪುರೋಹಿತರಿಗಾಗಿ ಇದ್ದ ಚಿಕ್ಕದಾದ ಮನೆ, ಮಕ್ಕಳಿಗೆ ವೇದಾಭ್ಯಾಸ ವ್ಯವಸ್ಥೆ ಕಲ್ಪಿಸಲು ಇದ್ದ ಚಿಕ್ಕ ವಿದ್ಯಾರ್ಥಿಗೃಹ, ದೇವಸ್ಥಾನದ ಪಕ್ಕ ಚಪ್ಪರ ಹಾಕಿ ಮಾಡಿದ್ದ ಪುಟ್ಟ ಯಜ್ಞಶಾಲೆ, ಮತ್ತು ಇವುಗಳೆದುರಿಗೆ ದೇವಸ್ಥಾನಕ್ಕೆ ಸೇರಿದ್ದ ಎರಡೆಕರೆ ಅಡಿಕೆ ತೋಟ. – ಇಷ್ಟು ಮಾತ್ರ ಅಲ್ಲಿಯ ಆಸ್ತಿ . ಆದರೂ ಆ ದೇವಸ್ಥಾನದ ಕುರಿತು ಹಲವು ಊರುಗಳ ಜನರಲ್ಲಿ ಶ್ರದ್ಧೆಯಿದ್ದು ಆಗಾಗ ಹರಕೆ ಹೊರಲು ಜನ ಬರುತ್ತಿದ್ದರು. ಜೊತೆಗೆ ವರ್ಷಕ್ಕೊಮ್ಮೆ ಪ್ರತಿಷ್ಠಾಪನಾ ದಿವಸ ತುಂಬಾ ಜನರು ಸೇರಿ ಆರಾಧನೆ ನಡೆಸಿ, ಸ್ಥಳಾಭಾವದಿಂದಾಗಿ ‘ವನಭೋಜನ’ ನಡೆಸಿ ಹಿಂದಿರುಗುತ್ತಿದ್ದರು.

ಮಾಧವ ವೇದಾಭ್ಯಾಸ ಮಾಡಲು ಬಂದು ಅಲ್ಲೇ ಉಳಿದುಕೊಂಡಿದ್ದ. ನಾಲ್ಕೈದು ವರ್ಷಗಳಿಂದ ಅಲ್ಲಿ ಯಾವ ವಿದ್ಯಾರ್ಥಿಯೂ ಇರಲಿಲ್ಲ. ನರಸಿಂಹ ಶಾಸ್ತ್ರಿಗಳು ದೇವಸ್ಥಾನದ ಪೂಜೆ ಪುನಸ್ಕಾರಕ್ಕೆ ಸಹಾಯವಾಗುತ್ತದೆಂದೂ, ಅನುಕೂಲಕ್ಕೆಂದೂ ವಿದ್ಯಾರ್ಥಿಗಾಗಿ ಹುಡುಕುತ್ತಿದ್ದಾಗ ಕಂಡದ್ದು ಮಾಧವ. ಗುರುದಕ್ಷಿಣೆಯಾಗಿ ತನಗೇನೂ ಬೇಡವೆಂದೂ, ತನ್ನ ವಿದ್ಯಾರ್ಥಿಯಾಗಿ ಮಠದಲ್ಲಿ ಉಳಿಯಬೇಕೆಂದೂ ಹೇಳಿ ಅವನನ್ನು ಕರೆತಂದಿದ್ದರು. ಒಬ್ಬನೇ ಮಗನಾದ ಮಾಧವನಿಗೆ ಅಕ್ಷರಾಭ್ಯಾಸ, ಗಣಿತಾಭ್ಯಾಸ ಮೊದಲೇ ಸಿದ್ಧಿಸಿದ್ದವು.

ವಿದ್ಯಾರ್ಥಿಗೃಹದಲ್ಲಿ ಆತನ ವಾಸವಾದರೂ ಊಟ ತಿಂಡಿ ಎಲ್ಲಾ ಶಾಸ್ತ್ರಿಗಳ ಮನೆಯಲ್ಲಿ ನಡೆಯುತ್ತಿತ್ತು. ಅವನೊಬ್ಬನಿಗೆ ಹೆಚ್ಚಿಗೆ ಅಡಿಗೆ ಮಾಡುವುದು ಅವರ ಹೆಂಡತಿಗೆ ಕಷ್ಟವೇನೂ ಆಗಿರಲಿಲ್ಲ .

ಮೊನ್ನೆಮೊನ್ನೆಯಷ್ಟೇ ನಡೆದ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾಧವನ ಹರೆಯದ ಕಣ್ಣಿಗೆ ಮತ್ತೆ ಮತ್ತೆ ಬಿದ್ದಿದ್ದು ಗಾಯತ್ರಿ. ಕೇಶವಮಠದಿಂದ ನಾಲ್ಕೈದು ಮೈಲಿ ದೂರದ ಕಾನ್ಮನೆ ಸುಬ್ಬಣ್ಣ ಭಟ್ಟರ ಮಗಳು. ಅವಳನ್ನು ಚಿಕ್ಕಂದಿನಲ್ಲಿ ತುಂಬಾ ಸಲ ನೋಡಿದ್ದರೂ ಈ ಬಾರಿ ಎಂದಿಗಿಂತಲೂ ಭಿನ್ನವಾಗಿ ಕಂಡಿದ್ದಳು. ದುಂಡಾದ ಕಪ್ಪುಕಂಗಳಲ್ಲಿ ಸದಾ ಸೂಸುವ ನಾಚಿಕೆ, ನವಿರಾದ ಕದಪು, ಕೆಂಪು ಗಲ್ಲ, ಪುಟ್ಟದಾದ ಹೂವಿನೆಸಳಿನಂತ ತುಟಿಗಳು, ಕಟಿಮುಟ್ಟುವ ಜಡೆ, ಎಷ್ಟು ನೋಡಿದರೂ ಸಾಲದ ಸೌಂದರ್ಯ . ನರಸಿಂಹ ಶಾಸ್ತ್ರಿಗಳ ಸಂಗ್ರಹದಲ್ಲಿದ್ದ ಹತ್ತಾರು ಪುಸ್ತಕಗಳನ್ನು ಓದಿದ್ದ, ತುಂಬಾ ವಿಚಾರವಂತನಾಗಿದ್ದ ಮಾಧವನಿಗಿದ್ದ ಸೌಂದರ್ಯಪ್ರಜ್ಞೆ ಅಲ್ಲಿ ಇನ್ನಾರಿಗೂ ಇರಲಿಲ್ಲ. ಗಾಯತ್ರಿ ಕೂಡ ಮತ್ತೆ ಮತ್ತೆ ತನ್ನನ್ನೇ ದಿಟ್ಟಿಸಿದಾಗ ಪ್ರತಿ ಬಾರಿ ದೇಹದಲ್ಲಿ ರಕ್ತದ ವೇಗ ಏರಿಳಿಯುತ್ತಿತ್ತು. ಎದೆ ಬಡಿತ ಹೆಚ್ಚುತ್ತಿತ್ತು. ಬೆಳ್ಳಗಿನ ಮುದ್ದಾದ ಅವಳ ಮುಖದಲ್ಲಿ ಅದೆಷ್ಟು ಅಪರಿಮಿತ ಸೌಂದರ್ಯವಿದೆ ಎಂದು ಮಾಧವ ಆಶ್ಚರ್ಯಪಟ್ಟಿದ್ದ.
ಮಧ್ಯಾಹ್ನಾನಂತರ ಎಲ್ಲ ಕೈಂಕರ್ಯಗಳು ಮುಗಿದ ತರುವಾಯ ಒಬ್ಬೊಬ್ಬರಾಗಿ ಹೊರಟುನಿಂತಾಗ ಎಂದೂ ಇಲ್ಲದ ವಿಷಾದದ ಛಾಯೆಯೊಂದು ಮಾಧವನ ಮನಸಲ್ಲಿ ಮೂಡಿತು. ಯಾರೋ ಹೃದಯವನ್ನು ಬಲವಾಗಿ ಹಿಂಡಿದಂತೆ, ಯಾರೋ ತನ್ನ ಜೀವನವನ್ನೇ ಕಸಿದುಕೊಂಡಂತೆ. ಇಂತಹ ಭಾವ ತನ್ನೆಂದೂ ಕಾಡಿರಲೇ ಇಲ್ಲ. ಇದೇ ರೀತಿ ಗಾಯತ್ರಿಯೂ ಯೋಚಿಸುತ್ತಿರಬಹುದೇ ಎಂದು ಮಾಧವ ಆಶ್ಚರ್ಯಪಟ್ಟ.

ತನ್ನ ಪರಿವಾರದೊಡನೆ ಗಾಯತ್ರಿ ಹೊರಟೊಡನೇ ಎಂದೂ ಇಲ್ಲದ ಖಿನ್ನತೆ, ನ್ಯೂನತೆ ಮಾಧವನನ್ನು ಕಾಡಿತು. ಒಂದೇ ದಿನದಲ್ಲಿ ತನ್ನಲ್ಲಿ ಇಂತಹ ಬದಲಾವಣೆಯಾಯಿತಲ್ಲ ಎಂದು ಆಶ್ಚರ್ಯವಾದರೂ ಇದು ವಿರಹಬಾಧೆಯೆಂದು ಅರಿಯಲು ಹೆಚ್ಚು ಸಮಯ ಹಿಡಿಯಲಿಲ್ಲ.

ಕಂಗಳಲ್ಲಿ ನೀರು ತುಂಬಿದಂತಾಗಿ ತಡೆಯಲಾಗದೇ ಮಾಧವ ಕಾಲುದಾರಿಯನ್ನು ಹಾದು ಕರಿಬಂಡೆಯಿದ್ದಲ್ಲಿ ಹೋಗಿ ಕುಳಿತು ಸಮಾಧಾನ ಆಗುವವರೆಗೂ ಕಂಬನಿ ಹರಿಸಿ ಬಂಡೆಗಲ್ಲನ್ನು ತಬ್ಬಿ ಕುಳಿತನು. ಅಷ್ಟು ಹೊತ್ತಿ ಇಳಿಹೊತ್ತಿನಲ್ಲಿ ದೂರದಲ್ಲಿ ಸೂರ್ಯ ಮುಳುಗತೊಡಗಿ ಕೆಂಪು ಸೂರ್ಯನು ಕೆಂಬೆಳಕನ್ನು ಆಗಸದಲ್ಲೆಲ್ಲ ಚೆಲ್ಲಿ ನಗುತ್ತಿರಲು ಮಾಧವನ ಮೇಲೆ ಮೋಡಿ ಮಾಡಿದಂತಾಗಿ ಕೆಲವೇ ಕ್ಷಣಗಳಲ್ಲಿ ಅನಿರ್ವಚನೀಯ ಆನಂದವೊಂದು ಆತನಲ್ಲಿ ತುಂಬಿತ್ತು. ಗಾಯತ್ರಿ ಕೇವಲ ಮನೆಗೆ ಹೋಗಿದ್ದಕ್ಕೆ ಇಷ್ಟೊಂದು ಭಾವ ಸಲ್ಲ ಎಂದು ತನ್ನನ್ನೇ ಸಮಾಧಾನ ಮಾಡಿಕೊಂಡು ಅವಳ ಅಂದವನ್ನೇ ನೆನಪಿಗೆ ತರುತ್ತಿದ್ದ ರಕ್ತಾರುಣನಿಗೆ ಕೈಮುಗಿದು ಕುಳಿತುಬಿಟ್ಟನು. ಕೆಲವೇ ಕ್ಷಣಗಳಲ್ಲಿ ಅವನ ಕಂಗಳಲ್ಲಿ ಮತ್ತೆ ಸಂತೋಷಭಾಷ್ಪ ಉಕ್ಕಿ ಹರಿಯಿತು. ಮೈಮನಗಳಲ್ಲಿ ಹೊಸ ಉತ್ಸಾಹಾನಂದ ತುಂಬಿ ಬಂತು. ಎಂದಿದ್ದರೂ ಗಾಯತ್ರಿಯೇ ತನ್ನ ಸಹಚಾರಿಣಿ ಎಂದು ಆತನ ಮನಸ್ಸಾಗಲೇ ನಿರ್ಧರಿಸಿತ್ತು.ಇದು ವಾರದ ಹಿಂದೆ ನಡೆದ ಘಟನೆ .

ಅಂದಿನಿಂದ ಪ್ರತಿದಿನ ಮಾಧವನ ಕೈಂಕರ್ಯ ಅದೇ ಆಯಿತು- ಸಮಯ ಸಿಕ್ಕಾಗಲೆಲ್ಲ ಬಂದು ಬಂಡೆಯ ಮೇಲೆ ಕುಳಿತು ಮನೋಪಟಲದ ಕಾಗದದ ಮೇಲೆ ಗಾಯತ್ರಿಯ ವಿಧವಿಧದ ಚಿತ್ರ ಬಿಡಿಸುವುದು. ಸಾತ್ವಿಕ ಪ್ರೇಮದ ಶಕ್ತಿಯು ಏನೆಂಬುದು ಮಾಧವನಿಗೆ ಅರಿವಾಗತೊಡಗಿತ್ತು.

ಅಂದು ಕೂಡ ಮಾಧವ ಮಳೆ ಬರುವ ಎಲ್ಲಾ ಲಕ್ಷಣಗಳಿದ್ದರೂ ಅದನ್ನು ನಿರ್ಲಕ್ಷಿಸಿ ಆ ದಾರಿಯಲ್ಲಿ ಸಾಗುತ್ತಿದ್ದ. ಆತ ಇನ್ನೇನು ಕರಿಬಂಡೆಯ ಬಳಿ ತಲುಪಬೇಕು- ಅಷ್ಟರಲ್ಲಿ ದಪ್ಪದಪ್ಪ ಹನಿಗಳ ಭೀಕರ ವರ್ಷಧಾರೆ- ವರ್ಷದ ಮೊದಲ ಮಳೆ – ಧೋ ಎಂದು ಸುರಿಯಿತು. ಕ್ಷಣಗಳಲ್ಲಿ ಮಾಧವ ಪೂರ್ತಿಯಾಗಿ ನೆನೆದಿದ್ದ. ಇಂತಹ ಮಲೆನಾಡಿನ ಮಲೆಪರ್ವತದ ತುದಿಗೆ ವರ್ಷಧಾರೆಗೆ ಎದೆಯೊಡ್ಡಿ ನಿಲ್ಲುವ ಸೌಭಾಗ್ಯ ತನ್ನದಾಗಿದ್ದಕ್ಕೆ ಮಾಧವನ ಮೈಮನದಲ್ಲೆಲ್ಲ ಧನ್ಯತಾಭಾವ ಮೂಡಿತು. ತನ್ನೆದುರು ನಿಂತಿದ್ದ ಅಪರಿಮಿತ ಅರಣ್ಯ ಪರ್ವತಗಳು ಒದ್ದೆಯಾಗುತ್ತಿರುವುದನ್ನು ಕಂಡು ಅಂತಃಶಕ್ತಿ ಉಕ್ಕಿ ಬಂತು. ಮಳೆಯಲ್ಲೇ ಅಂತರ್ಮನಸ್ಕನಾಗಿ ಕಣ್ಮುಚ್ಚಿ ಕುಳಿತುಬಿಟ್ಟನು ಮಾಧವ.

……
ತನ್ನ ನಿತ್ಯದ ಜಪ ತಪಗಳಿಗಿಂತಲೂ ಹೆಚ್ಚಾಗಿ , ಶ್ರದ್ಧೆಯಿಂದ ಅನುಷ್ಠಾನಾದಿಗಳನ್ನು ಮಾಡುತ್ತಿದ್ದ ಮಾಧವನ ಸಾತ್ವಿಕ ಶಕ್ತಿಯ ಪ್ರಭಾವವೋ, ಅಥವಾ ಪಂಡಿತ, ಪಾಮರ ರಾಜ ಸೇವಕನೆನದೇ ಎಲ್ಲರನ್ನೂ ಸೋಲಿಸುವ ಪ್ರೇಮದ ಶಕ್ತಿಯೋ, ಅಥವಾ ವಿಧವಿಧದ ಆಟಗಳನ್ನು ಆಡಿಸಿ ನಲಿಯುವ ವಿಧಿಯ ನಿರ್ಧಾರವೋ- ಮಾಧವ ಗಾಯತ್ರಿಯನ್ನು- ತನ್ನ ಅಪಾರ ಪ್ರೀತಿಯ ಕ್ಷೀರದಲ್ಲಿ ಮೀಯಲು ಯೋಗ್ಯಳಾದ ಸೌಂದರ್ಯಮೂರ್ತಿಯನ್ನು, ಪ್ರೇಮಪ್ರತಿಮೆಯನ್ನು ಇನ್ನೊಮ್ಮೆ ಭೇಟಿಮಾಡುವ ಸುದಿನ ಸುಯೋಗ ಬೇಗನೇ ಕೂಡಿಬಂತು.

…. may continue…..

 

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಕೆಂಡಸಂಪಿಗೆ‬

images-12

ಕಂಗಳೊಳಗಿಹ ಕಣ್ಗೊಳದಲೂ
ಕಂಗೊಳಿಸುತಿದೆ ಕೆಂಡಸಂಪಿಗೆ!
ನೇಹಗಂಧವು ಬಂಧಿಸುತ್ತಿರೆ
ಸೋತು ಹೋಗಿದೆ ಗುಂಡಿಗೆ!!
.
ಮನದ ತಾಣದಿ ಪ್ರೇಮ ಭರ್ತನ
ಅವಳ ನೆನಪಿನ ನರ್ತನ..
ಅವಳ ಮಿಂಚಿನ ನೋಟದಿಂಪನ
ಎನ್ನ ಎದೆಯಲಿ ಕಂಪನ!
.
ಸುರುಳಿಗುರುಳಿನ ಹೊರಳುವಾಟಕೆ
ಗುಳಿಯ ಕೆನ್ನೆಯೂ ಆಟಿಕೆ
ಮಧುವಲದ್ದಿದ ಮುದ್ದು ಅಧರಕೆ
ಮಧುರ ಮುತ್ತಿನ ಕಾಣಿಕೆ!
.
. . . . . . . ಕವನತನಯ ಸಖ್ಯಮೇಧ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಕೆಂಡಸಂಪಿಗೆ

img_20161003_163913

ಶಾಲ್ಮಲೆಯ ತೀರದಲಿ ನಲ್ಮೆಯಿಂದರಳಿಹುದು
ಕೆಂಡಸಂಪಿಗೆ ಹೂವು ಘಮಲು ಬೀರಿ..
ಕಲ್ಮನವನೂ ಕೊರೆದು ಒಲ್ಮೆಯಲೆಯನು ಹರಿಸಿ\
ಹರಿವ ನದೀತೀರ ಹೂವು ಅವಳು-
ತೀರಾ ಹೂವು ಅವಳು….

ಕೆಂಡಸಂಪಿಗೆ ಬಳಿಗೆ ಆ ಗಾಢ ಗಂಧ!
ಅವಳ ನೆನಪಿನ ಒಳಗೆ ಅದೆಂಥಾ ಬಂಧ!
ಮಿದುಮೊಗ್ಗು ಅರಳಿ ಸಂಪಿಗೆ ಹೂವು ನಗುವಂತೆ
ಅವಳ ತುಟಿ ಅರಳುತಿರೆ ಅದೆಂಥಾ ಚಂದ!!

ವನದ ಸಂಪಿಗೆ ಕಂಪು ಊರಿನೆದೆಯೊಳಗಿಳಿಯೆ
ಅವಳ ನೆನಪಿನ ತಂಪು ಮನದೊಳಗೆ ಉಳಿಯೆ!
ಬಲುಮಧುರ ಹೂವಂದ, ಅವಳ ಅನುಬಂಧ!
ಕೆಂಡಸಂಪಿಗೆಯೊಡನೆ ಒಡನಾಟದಿಂದ!

ಅವಳೆಂದರವಳಲ್ಲ; ಸಂಪಿಗೆಯು ಹೂವಲ್ಲ;
ಅವರೀರ್ವರೂ ಬೇರೆ ಬೇರೆಯೇ ಅಲ್ಲ!;
ಅವಳುಸಿರೆ ಆ ಘಮಲು, ಸಂಪಿಗೆಯೆ ಅವಳು,
ಕೆಂಡಸಂಪಿಗೆಯೆನಲು ನೆನಪಾಗುವವಳು!!

ಈ ಪೋಸ್ಟ್ ಅನ್ನು ಶೇರ್ ಮಾಡಲು: