img_20160917_044743

ಮುಕುಟದಲ್ಲಿಹ ಮಣಿಯು ಮಿರುಗಿ ತಾ ಮಿನುಗಿ
ಇಂದುರೂಪದ ಗಂಧ ಮುಂದಲೆಯಲಂದದಲಿ
ಮೆರೆಯೆ, ಗರಿಮಡಿ ಗರಿಮೆಯಿಂದಲಂಕರಿಸಿರಲು
ಸೊಗದಿ ನಗೆ ಸೂಸಿರಲು ಮೊಗವು ಸುಪ್ರಸನ್ನತೆಗೆ
ಮುರಳಿಲೋಲನು ಜಗದ ಒಡೆಯ ತಾ ಒಡವೆಗಳ
ಸೋಲಿಸುತ ಹೆಚ್ಚೆಚ್ಚು ಕಾಂತಿಯಲಿ ಹೊಳೆಯುವನು,
ಶತಕಾವ್ಯದೊಡೆಯ, ಮನವಿಪಿನಪರ್ವತಶಿಖರ-
ಸ್ಥಾನಾಕ್ರಮಿತ ಕವನಕಾನನದ ಸಂಚಾರಿ
ನಮಿಸಿ ಪಾದಕೆ ವಂದಿಸುವವನೆದೆಗೆ ಮುದವೀವ
ಮುದಕರನು ಶುಭಕರನು ಮಯೂರಗರಿಕೆಯ ಮೆರೆಸಿ
ಶಿರದಿ ಧರಿಸುತ ಧರೆಯ ಪೊರೆವವನು ನೀ ಕೃಷ್ಣ,
ಮೊರೆಕೇಳಿ ಹೊರೆಯಿಳಿಸು ಧರೆಯೆಲ್ಲ ಮೆರೆವಂತೆ
ಹಾರೈಸು, ಕೋರೈಸುವಾ ಮೊಗದಿ ಮುಗುಳುನಗೆ
ಸೂಸು, ಕನಕನ ಪ್ರಿಯನೆ, ಕಣಕಣವನುದ್ಧರಿಸು
ದರುಶನವ ಬಯಸಿರಲು ಮನದಂಧಕಾರವ ಸು-
ದರ್ಶನವೆನ್ನುವಾಯುಧದಿ ಸಂಹರಿಸಿ
ಮಮಕಾರ ತೋರು ನೀ ಸಾಕಾರರೂಪನೇ
ತಪ್ಪು ಒಪ್ಪುಗಳನ್ನು ತಪ್ಪದೆಯೇ ಕ್ಷಮಿಸುತ್ತ
ಕ್ಷಯಗೊಳ್ಳದಿರುವಂತೆ ಭಕ್ತಿ ಶಕ್ತಿಗಳೆಂದೂ
ಎತ್ತ ಇರಲತ್ತ ಎಮ್ಮ ಸುತ್ತಿಬಹ ಕಷ್ಟ ಕಾ-
ರ್ಪಣ್ಯ ರಾಶಿಯ ಕಳೆದು ರಕ್ಷಿಸುತ ಅನವರತ
ಕೃಪೆಮಾಡು ಮಾಧವನೆ! ಸಿರಿ ಸುಪ್ರಭಾತ..

ಈ ಪೋಸ್ಟ್ ಅನ್ನು ಶೇರ್ ಮಾಡಲು:

Leave a Reply

Your email address will not be published. Required fields are marked *