ನನ್ನ ಮುದ್ಮುದ್ದು ಗೆಳತೀ…
ಕನಸು ಕೇದಿಗೆ, ಮನಸು ಮಂದಾರ.. ನಿನ್ನ ಸೊಗಸೇ ಸಂಪಿಗೆ…
ಇದು ಮಲೆನಾಡ ಪ್ರೀತಿ.. ಏರಿ ಏರಿ ಬರುವ ವೇಗತೀವ್ರತೆಯ ಕಪ್ಪು ಬೃಹನ್ಮೇಘಗಳ ಪ್ರಚ್ಛನ್ನತೆಯ ಒಲವು ನನಗೆ, ನಿನ್ನ ಕುರಿತು..
ನೀನು ಕೆಮ್ಮಣ್ಣು ಸಾರಿಸಿ ದೀಪ ಹೊತ್ತಿಸಿದ ತುಳಸಿ ಕಟ್ಟೆಯ ಸೊಗಸು ಸಂಜೆಯ ಕೆಂಬಾನಿನೊಡನೆ ಸೆಣಸಿದೆ.. ಕೊನೆಗೂ ಗೆದ್ದಿದ್ದು ನಾ ಮುತ್ತಿಟ್ಟ ನಿನ್ನ ಕೆನ್ನೆಯೇ…
ಬೆಳಗಾಗೆದ್ದರೆ ಗೋಪಿ ಹಕ್ಕಿಯ ಉಲ್ಲಾಸಭರಿತ ಪ್ರೇಮರಾಗ, ಮಧ್ಯಾಹ್ನ ಗುಬ್ಬಚ್ಚಿ ಕೂಗು, ಸಂಜೆ ಕೋಗಿಲೆಯ ರಾಗ, ಮುಸ್ಸಂಜೆ ಗಿಳಿವಿಂಡಿನ ಉಲಿ… ಎಲ್ಲಾ ಇಲ್ಲವೀಗ. ನೀ ಆಗಾಗ ಹಾಡಿಕೊಳ್ಳುತ್ತಿರಬಾರದೇ..?
ಆಗಾಗ ಜ್ವರ ಬಂದರೆ ಚೆನ್ನಾಗಿರುತ್ತೆ.. ಮಮತೆಯಿಂದ ತಲೆಸವರೋ ನಿನ್ನ ಕೈ ಹಿತವಾಗಿರುತ್ತೆ..
ನೀನು ಗೆಜ್ಜೆ ಹಾಕದಿದ್ದರೂ ಹೆಜ್ಜೆ ಇಡುವಾಗ ಘಲ್ ಘಲ್ ಇಂಚರ ಬರುವುದರ ಗುಟ್ಟೇನೇ?
ನೀನು ಹಾಗೆ ನೋಡಿದಾಕ್ಷಣ ಒಮ್ಮೆ ಕಣ್ಮಿಟುಕಿಸಿ ಕೈಮುತ್ತು ತೂರಿಬಿಡುವಾಸೆ.. ಇನ್ನೊಮ್ಮೆ ಬರುವಾಗ ಅತ್ತೆಯ ಜೊತೆ ಬರಬೇಡ…
ನೀನು ಹಾಗೆ ನಡೆವಾಗಲೆಲ್ಲ ನನ್ನಂತರಂಗದಲ್ಲೂ ಒಬ್ಬಳು ಹೃದಯದ ಮೇಲೆ ನಡೆದು ಬರುತ್ತಾಳೆ.. ನೀನು ಹತ್ತಿರವಿದ್ದಷ್ಟೂ ಕಮ್ಮಿ, ದೂರವಿದ್ದರೂ ಹತ್ತಿರ..
ಬಾಳೆಗೊನೆ ತರಲು ತೋಟಕ್ಕೆ ಹೋಗುವಾಗ ನಿನ್ನನ್ನೂ ಜೊತೆಗೊಯ್ದು ಕೆಲಸ ಕೆಟ್ಟಿದ್ದಕ್ಕೆ ನನಗೇನೂ ಚಿಂತೆಯಿಲ್ಲ ಬಿಡು.. ಥ್ಯಾಂಕ್ಸ್ ಕಣೇ… ಬಂದಿದ್ದಕ್ಕೆ..
ನವಿಲುಗರಿಯ ನಡು ಉಳುಕಿದ್ದು ನಿನ್ನ ಕಣ್ರೆಪ್ಪೆಗೂದಲ ಕಂಡು…
ನವಿಲುಗರಿಯ ಮರಿಹಾಕಲು ಇಡೋದು ಬೇಡ ಬಿಡು.. ನಾನೇ ಗೊಂಚಲು ಗೊಂಚಲು ಹೆಕ್ಕಿ ತರುವೆ.. ಆದರೆ ಒಂದು ಶರತ್ತು.. ಕೈಯಲ್ಲಿ ತೆಗೆದುಕೊಳ್ಳುವಂತಿಲ್ಲ, ನಾನೇ ಆ ದಪ್ಪ ಹೆರಳಿಗೆ ಮುಡಿಸುವೆ, ಮೊನ್ನೆಯಂತೆ..
……………