X

ಕೆಂಡಸಂಪಿಗೆ

ಶಾಲ್ಮಲೆಯ ತೀರದಲಿ ನಲ್ಮೆಯಿಂದರಳಿಹುದು
ಕೆಂಡಸಂಪಿಗೆ ಹೂವು ಘಮಲು ಬೀರಿ..
ಕಲ್ಮನವನೂ ಕೊರೆದು ಒಲ್ಮೆಯಲೆಯನು ಹರಿಸಿ\
ಹರಿವ ನದೀತೀರ ಹೂವು ಅವಳು-
ತೀರಾ ಹೂವು ಅವಳು….

ಕೆಂಡಸಂಪಿಗೆ ಬಳಿಗೆ ಆ ಗಾಢ ಗಂಧ!
ಅವಳ ನೆನಪಿನ ಒಳಗೆ ಅದೆಂಥಾ ಬಂಧ!
ಮಿದುಮೊಗ್ಗು ಅರಳಿ ಸಂಪಿಗೆ ಹೂವು ನಗುವಂತೆ
ಅವಳ ತುಟಿ ಅರಳುತಿರೆ ಅದೆಂಥಾ ಚಂದ!!

ವನದ ಸಂಪಿಗೆ ಕಂಪು ಊರಿನೆದೆಯೊಳಗಿಳಿಯೆ
ಅವಳ ನೆನಪಿನ ತಂಪು ಮನದೊಳಗೆ ಉಳಿಯೆ!
ಬಲುಮಧುರ ಹೂವಂದ, ಅವಳ ಅನುಬಂಧ!
ಕೆಂಡಸಂಪಿಗೆಯೊಡನೆ ಒಡನಾಟದಿಂದ!

ಅವಳೆಂದರವಳಲ್ಲ; ಸಂಪಿಗೆಯು ಹೂವಲ್ಲ;
ಅವರೀರ್ವರೂ ಬೇರೆ ಬೇರೆಯೇ ಅಲ್ಲ!;
ಅವಳುಸಿರೆ ಆ ಘಮಲು, ಸಂಪಿಗೆಯೆ ಅವಳು,
ಕೆಂಡಸಂಪಿಗೆಯೆನಲು ನೆನಪಾಗುವವಳು!!

ಈ ಪೋಸ್ಟ್ ಅನ್ನು ಶೇರ್ ಮಾಡಲು:
ಕವನತನಯ:

ಈ websiteನಲ್ಲಿ cookies ಬಳಸಲಾಗುತ್ತದೆ.