ವಾಸ್ಕೋದಿಂದ ಮನೆಗೆ ಸುಮಾರು ಇಪ್ಪತ್ತು ಕಿಲೋಮೀಟರ್. ಯಾವತ್ತೂ ಕಾಲೇಜ್ಗೆ ಕದಂಬ ಬಸ್ಸಿಗೆ ಹೋಗೋದು ನನ್ನ ರೂಢಿ. ಆ ಬಸ್ಸಿನಲ್ಲಿ ಎಡಗಡೆ ಕಿಟಕಿಯ ಬಳಿ ಹಿಂದಿನಿಂದ ಎರಡನೇ ಸೀಟು(ಆ ಸೀಟಿಗೆ ಸ್ವಲ್ಪ ದೊಡ್ಡ ಕಿಟಕಿ ಇರುತ್ತದೆ) ನನ್ನ ಖಾಯಂ ಜಾಗ. ಒಂದುವೇಳೆ ಯಾರಾದರೂ ಅಲ್ಲಿ ಕೂತಿದ್ದರೆ ನೆಕ್ಸ್ಟ್ ಬಸ್ ಬರೋವರೆಗೆ ಕಾಯ್ತಿದ್ದೆ.
ಆ ಬಸ್ಸು ಹೋಗೋ ರಸ್ತೆ ಸುಮಾರು ಹತ್ತು ಕಿಲೋಮೀಟರಿನಷ್ಟು ಝುವಾರಿ ನದಿಯ ಪಕ್ಕದಲ್ಲೆ ಸಾಗುತ್ತದೆ. ರಸ್ತೆಯ ಪಕ್ಕದಲ್ಲೇ ವಿಸ್ತಾರವಾದ ಝುವಾರಿ ನದಿ ನಮ್ಮೊಡನೆ ಸಾಗುತ್ತಿದೆ ಅನಿಸುತ್ತೆ. ಮೇಲಾಗಿ ನದಿಯ ಮೇಲಿಂದ ಬೀಸುವ ಕಿರುಮಾರುತಗಳು ಬಸ್ಸಿನ ಕಿಟಕಿಯ ಮೂಲಕ ಅಪ್ಪಳಿಸಿ ಮುದ ನೀಡುತ್ತವೆ. ಜೊತೆಗೆ ಅಲ್ಲಲ್ಲಿ ನದಿಯ ದಂಡೆಯಲ್ಲಿ ನಿಲ್ಲಿಸಿರೋ ಹಾಳಾದ ಬೋಟುಗಳು ಮತ್ತು ಹಡಗುಗಳು ಆ ನಡಿಗೊಂದು ವಿಶೇಷ ಸೌಂದರ್ಯ ಕೊಡುತ್ತವೆ.
ಕರಾವಳಿಯ ಮಳೆ ಗೋವಾವನ್ನು ಅಪ್ಪಳಿಸುವಾಗ ನದಿ ಮೇಲಿನ ಅಕಾಶವೆಲ್ಲ ಕರಿಮೋಡಗಳಿಂದ ತುಂಬಿ ಅಡ್ಡಾದಿಡ್ಡಿ ಗಾಳಿಗೆ ಹುಚ್ಚುಮಳೆ ಸುರಿವಾಗ ಕದಂಬ ಬಸ್ಸಿನ ಅರೆಬರೆ ಒದ್ದೆ ಸೀಟಿನ ಮೇಲೆ ಕುಳಿತು ಇಯರ್ಫೋನ್ ಹಾಕಿಕೊಂಡು ಹರಿಪ್ರಸಾದ್ ಚೌರಾಸಿಯಾ ಅವರ ಕೊಳಲು ಕೇಳ್ತಾ ಇದ್ದರೆ ಸ್ವರ್ಗಕ್ಕೆ ತನ್ನಿಂತಾನೇ ಕಿಚ್ಚು ಹಚ್ಚಿಕೊಳ್ಳುತ್ತೆ. ಅದು ಮೇಘರಾಗವೋ ಇಲ್ಲ ಮೇಘಮಲ್ಹಾರವೋ ಗೊತ್ತಿಲ್ಲ. ಅಥವಾ ಬೇರೆ ರಾಗವೂ ಆಗಿದ್ದೀತು. ಪುಣ್ಯವಶಾತ್ ಮೊಬೈಲಿಗೆ ಸೇರಿಕೊಂಡ ಆ ರಾಗಕ್ಕೆ ಬೇರೆ ಹೆಸರು ಬೇಕಿಲ್ಲ. ಅದು ಮಳೆಯ ರಾಗ. ಈಗಲೂ ಏಕಾಂತದಲ್ಲಿ ಅದನ್ನು ಹಚ್ಚಿಕೊಂಡು ಕುಳಿತರೆ ಮನಸ್ಸು ಮಲೆನಾಡಿಗೆ ಹೋಗಿ ಕಪ್ಪುಗಾಡುಗಳ ನಡುವೆ ವರ್ಷಧಾರೆ ಸುರುವ, ಮಳೆಯ ಒದ್ದೆಗಾಳಿಯು ಮೈಮನವ ಕೊರೆವ ಅನುಭವ ಆಗುತ್ತದೆ. ಬಹುಶಃ ಮಳೆಯ ಮತ್ತು ಆ ರಾಗದ ಲಯ ಒಂದೇ ಇರಬಹುದು. ಬಿರುಬೆಸಿಗೆಯಲ್ಲೂ ಅದನ್ನು ಕೇಳುತ್ತಾ ಕುಳಿತರೆ ಮಳೆಯಲ್ಲಿ ನೆನೆವ ಮನದ ಬಯಕೆ ತೀರುತ್ತದೆ.
ಈ ಕೊಳಲು ಎಂದರೇ ಹಾಗೆ. ತೀರಾ ಸೂಕ್ಷ್ಮ ಭಾವಗಳನ್ನು ಅಷ್ಟೇ ಸೂಕ್ಷ್ಮ ಆಲಾಪಗಳಲ್ಲಿ ಅರುಹುತ್ತದೆ. ಕರಡಿಗೆಮನೆಯಲ್ಲಿದ್ದಾಗ ಓದುವುದಕ್ಕೆ ಅಂತ ಹೇಳಿ ಎಷ್ಟೋ ಸಲ ತೋಟಕ್ಕೋ ಅಶೋಕವನಕ್ಕೋ ಹೋಗಿ ಪ್ರವೀಣ್ ಗೋಡ್ಖಿಂಡಿ ಅವರ ಕೊಳಲು ವಾದನ ಕೇಳಿ ಮೈಮರೆಯುತ್ತಾ ಇದ್ದೆ. ರಾಗಜ್ಞಾನವಿಲ್ಲದೆ ಇದ್ದರೂ ಯಾವ್ಯಾವುದೋ ಭಾವಗಳು ವೇದ್ಯವಾಗಿ ಬಹಳಷ್ಟು ಬಾರಿ ಕಣ್ಣು ಒದ್ದೆಯಾಗುತ್ತಿತ್ತು.
ಮಳೆ ಎಂದ ಕ್ಷಣ ನೆನಪಾಗುವುದು ಮಲೆನಾಡು. ಝುವಾರಿಯ ತೀರದ ಮಳೆಯ ಆರ್ಭಟವೂ ಕೊನೆಗೆ ನೆನಪಿಗೆ ತರುವುದೂ ಆ ಮಲೆನಾಡನ್ನೇ. ಹಾಗೇ ಕೊಳಲು ಎಂದಾಗೆಲ್ಲ ಅವಳೊಮ್ಮೆ ನೆನಪಾಗುತ್ತಾಳೆ. ಆಟೋಗ್ರಾಫ್ ಪಟ್ಟಿಯಲ್ಲಿ ಕೊಳಲಿನ ಬಗ್ಗೆ ಏನೋ ಬರೆದಿದ್ದಳಲ್ಲ ಅವಳು…
ಮಳೆ , ನದಿ , ಕಾಡು ಎಲ್ಲ ಇಲ್ಲೂ ಇವೆ. ಆದರೂ ಯಾಕೋ ಮಲೆನಾಡೇ ಬೇಕು ಅನಿಸುತ್ತೆ.
ಮಾಂಡೋವಿಯ ಮಾಡಿಲಲ್ಲೂ ಶಾಲ್ಮಲೆಯದೆ ಕನವರಿಕೆ
ಮಲೆನಾಡಿನ ಕಡುಸಂಪಿಗೆ ನನ್ನದೆಂಬ ಮನವರಿಕೆ…..
ಆ ಮಲೆನಾಡಿನ ಕುರಿತ ತುಡಿತವನ್ನು ಚೂರು ಚೂರು ತಣಿಸುತ್ತದೆ ಈ ಬಾನ್ಸುರಿ ಎಂಬ ಮಧುರವಾದ್ಯ… ಆ ರಾಗಗಳ ಶರಾಧಿಯಲ್ಲಿ ಮುಳುಗೇಳುತ್ತಾ……