ಬಾಡುಮೊಗವದು ಯಾಕೆ ಚೆಲುವೆಯೆ
ನೀಡಲಾರೆನೆ ನೀಳ ಸೀತೆಯ
ದಂಡೆಯನು ಕೊಯ್ತಂದು ಮುಡಿಯಲಿ ಮುಡಿಸಿಬಿಡುವೆನು ನಾ
ನೋಡು ಹೂವನು, ಅದರ ಪರಿಯಲಿ
ಮೂಡಿಸುತ ಹೂ ನಗೆಯ ಮೊಗದಲಿ
ಹಾಡು ಒಲವಿನ ರಾಗ, ಪಡೆಯುತ ಸಿಹಿಯ ಚುಂಬನವ…
ನಿನ್ನ ಚೆಲುವಿಗೆ ಬಿಳುಪು ಮಲ್ಲಿಗೆ
ಮುನ್ನ ಬಾಡಿತು ವಿರಹ ತಾಪಕೆ
ಚಿನ್ನ, ಬೇಕೇ ತಂಪು ನೀಡಲು ಸೀತೆಯಾ ದಂಡೆ?
ನನ್ನ ಕಾಡಿದೆ ಹೂವ ಬೇಡಿದೆ
ಇನ್ನು ತಾಳೆನು ಹೂವ ತರುವೆನು
ಕೆನ್ನೆ ಮೇಲ್ಗಡೆ ಹತ್ತು ಮುತ್ತಿನ ಶುಲ್ಕ ನೀಡೀಗ…
ಮುಡಿದ ಹೂವಿನ ಗಂಟು ಬಿಡಿಸಲು
ಜಡೆಯ ಚಂದವ ಬಿಡಿಸಿ ನೋಡಲು
ಬಿಡದೆ ಬರುವೆನು ರಾತ್ರಿಯಲಿ ಚಂದಿರನ ಜೊತೆಯಲ್ಲಿ
ತುಡಿತ ತುಂಬಿದ ಆಸೆಗಣ್ಣನು
ಬಡಿತವೇರಿದ ಎದೆಯ ಹಾಡನು
ನಡುಗುವಧರವ ಹೊತ್ತು ಕೂತಿರು ಬರವ ಕಾಯುತಲಿ
ಆಕೆ:
ಹೋಗು ಆಚೆಗೆ, ಸಾಕು ಇಲ್ಲಿಗೆ
ಬೇಗ ನೀಡದೆ ತಂದ ಹೂವನು
ಕೈಗೆ ನೀಡದೆ ನಿನ್ನ ಕವಿತೆಯ ಉಸುರುತಿರುವೆಯ ನೀ
ಆಗುಹೋಗದ ಕನಸ ಕಾಣುತ
ಬೀಗದಿರು ಮನದೊಳಗೆ ನಲಿಯುತ
ಸಾಗು ಆಚೆಗೆ ತಂದ ಹೂವನು ನನ್ನ ಕೈಗಿಡುತ