ಮೀನಲೋಚನೆ!, ಕುಸುಮಕಕಂಗಳ
ಮಿಟುಕಿ ಕಾಡಲುಬೇಡವೇ
ಕೆಂಪುಗೆನ್ನೆಯ ಮುದ್ದುಗಲ್ಲವ
ತೋರಿ ಕೆರಳಿಸಬೇಡವೇ…
ತುಟಿಯನರಳಿಸಿ ದಂತಪಂಕ್ತಿಯ
ಚಂದ ತೋರಲುಬೇಡವೇ
ಕಿವಿಯ ಕೆಳಗಿನ ನವಿರುಗೂದಲ
ಸರಿಸಿ ಸೆಳೆಯಲುಬೇಡವೇ…
ಮೃದುಲ ಪಾದದ ಮುದ್ದು ನಾದವ
ನನಗೆ ಕೇಳಿಸಬೇಡವೇ
ಬಳೆಯ ಝಣಝಣ ನಾದದೌತಣ
ಉಣಿಸಿ ತಣಿಸಲುಬೇಡವೇ
ಕೈಗೆ ಸಿಗುತಲಿ ನುಣುಚಿ ಓಡುತ
ಆಟವಾಡಲುಬೇಡವೇ
ಪ್ರೀತಿಪುಷ್ಪದ ಘಮವ ತೋರಿಸಿ
ಹೂವನಡಗಿಸಬೇಡವೇ…
ಕವನತನಯ