ಕೃಷ್ಣ

ಗೋವಿರದ ಮನೆಯಲ್ಲಿ ಬೆಣ್ಣೆ ದೂರದ ಮಾತು
ಚೊಂಬು ಹಾಲಿಗೆ ಅಷ್ಟು ನೀರು ಬೆರೆತು
ನೀರುಮಜ್ಜಿಗೆಯಲ್ಲೂ ಚೂರು ಬೆಣ್ಣೆಯು ಕಾಣ-
ಲದನು ತಿನ್ನುವ ನಾನು ಶ್ಯಾಮನಂತೆ! – ಕೃಷ್ಣ !
ತಾಯಿ ಪ್ರೀತಿಗೆ ಬೇರೆ ಎಲ್ಲೆಯುಂಟೆ?!

ನಿನ್ನ ಪರಿಯಲಿ ನಾನು ಬೆಣ್ಣೆಯನು ತಿಂದಿಲ್ಲ
ಆ ಯಶೋದೆಯೊಲಿದ್ದ ನನ್ನ ತಾಯಿ
ಬೆಣ್ಣೆಯಿರದಿರಬಹುದು ಹಣ್ಣು ಇರದಿರಬಹುದು
ಕೃಷ್ಣನಂತಿರುವೆಂದಳೆನ್ನ ತಾಯಿ – ಕೃಷ್ಣ !
ತಾಯಿಯೆಂಬುವಳೆಷ್ಟು ಮಾತೃಹೃದಯಿ!

ಕದಿಯಬಾರದು ಎಂದು ಕಿವಿಹಿಂಡಿ ಹೇಳಿದಳು
ತಿನ್ನಿಸುತ ತಾ ದುಡಿದ ತುತ್ತು ಅನ್ನ
ಸಂಜೆಯೇರಿದ ಮೇಲೆ ಬೆಳಕಿಲ್ಲ ಮನೆಯಲ್ಲಿ
ಕತ್ತಲಲಿ ನಾನೀಗ ಅವಳ ‘ಶ್ಯಾಮ’! -ಕೃಷ್ಣ!
ನಮಗಾಗಿ ಬೆಳಕ ಬೀರಿದನು ಸೋಮ!

ನಿನ್ನ ತಾಯಿಯ ಬಿಟ್ಟು ದೂರ ಸಾಗಿದೆ ನೀನು
ಅವಳು ಹೋದಳು ಇಲ್ಲಿ ನನ್ನ ಬಿಟ್ಟು
ದುಃಖವೇನೂ ಇಲ್ಲ ಆಶ್ರಿತರು ಎಲ್ಲರಿಗೂ
ಅನ್ನ ನೀಡುತ ಪೊರೆವ ತಾಯಿ ನೀನು! – ಕೃಷ್ಣ!
ನನ್ನ ಕಾಯುತಲಿರುವ ತಂದೆ ನೀನು!

ಹಣವೇನು ಮಾಡೀತು ಮನೆಯೇನು ಮಾಡೀತು
ನೂರುಶಶಿಮುಖಿಸುಖವು ಏನು ಕೊಟ್ಟೀತು?
ಕೃಷ್ಣ ಕೃಷ್ಣಾ! ಎಂದು ನಿನ್ನ ನೆನೆಯುವ ಬುದ್ಧಿ
ಬರದಿರಲು ಜೀವನವೆ ಕೈಯ ಕೊಟ್ಟೀತು! – ಕೃಷ್ಣ!
ನಿನ್ನ ಉಪದೇಶವದು ಬದುಕ ಕಟ್ಟೀತು!

ಏನಿಲ್ಲವೆಂದಿಲ್ಲ ನನಗೇನೂ ಬರವಿಲ್ಲ
ಒಮ್ಮೆ ನಿನ್ನಯ ಕಂಡು ನಮಿಸುವಾಸೆ
ಕಾಳಸರ್ಪನ ತುಳಿದ ನಿನ್ನ ಮೃದುಪಾದಗಳ
ಒಮ್ಮೆ ನನ್ನೆದೆ ಮೇಲೆ ಇಡಿಸುವಾಸೆ! -ಕೃಷ್ಣ!
ವಿಷ್ಣುಪದವಾಸ್ತವ್ಯ ಮಾಡುವಾಸೆ!

ಈ ಪೋಸ್ಟ್ ಅನ್ನು ಶೇರ್ ಮಾಡಲು:

Leave a Reply

Your email address will not be published. Required fields are marked *