ಮೇದಿನಿ ಪರ್ವತ ಚಾರಣ

ಮೇದಿನಿ.. ಮೇದಿನಿ..
ಮೇದಿನಿ.. ಮೇದಿನಿ..

ಅಲೆಯಲೆಯಾಗಿ ಹಬ್ಬಿದ ಮಲೆನಾಡಿನ ಮಳೆಬೆಟ್ಟಗಳ, ವಿಪಿನಪರ್ವತಗಳ ಸೌಂದರ್ಯವನ್ನ ಪದಗಳಲ್ಲಿ ವರ್ಣಿಸೋದು ಅಷ್ಟು ಸುಲಭ ಅಲ್ಲ ಬಿಡಿ. ಅಷ್ಟಕ್ಕೂ ಅದೊಂದು ಅನುಭೂತಿ. ಕಾಲಿಡಲು ಜಾಗವಿಲ್ಲದಂತಹ ದಟ್ಟ ಕಾನನವು ವಸುಂಧರೆಯ ಕುಚಕಲಶಗಳ ಮೇಲೆಲ್ಲ ಹಬ್ಬಿದಂತೆ ಆ ಮಲೆನಾಡು.. ಅಷ್ಟಷ್ಟು ದೂರಕ್ಕೆ ಹರಿವ ತೊರೆಗಳನ್ನೆಲ್ಲ ತನ್ನೊಳಗೆ ಸೇರಿಸಿಕೊಂಡು ಹರಿವ ರಭಸದ ಹಳ್ಳಗಳು ಥೇಟ್ ನದಿಗಳಂತೆ ತೋರುತ್ತವೆ. ಕೆಲವು ಸ್ಫಟಿಕಶುಭ್ರ ನೀರಿನ ಹೊಳೆಗಳಾದರೆ ಇನ್ನು ಕೆಲವು ಕೆಂಪು ಬಣ್ಣದ ಕೆಸರಿನ ಹರಿವುಗಳು.. ನಿತ್ಯ ನಿರಂತರ ಸುರಿವ ಮಳೆ, ಅಸಂಖ್ಯ ಪುಟ್ಟ ಪುಟ್ಟ ಜಲಪಾತಗಳು.. ಜೀವಜಲದ ಸೌಂದರ್ಯಧಾರೆಯನ್ನು ತುಡಿತ ತುಂಬಿದ ಓಟದಿಂದ ಓಡಿಸಿಕೊಂಡು ಹೋಗುವ ತೊರೆಗಳು… ಸದಾ ಆರ್ದ್ರವಾಗಿರುವ ವಾತಾವರಣ.. ಆಗಾಗ ಬರುವ ಎಳೆಬಿಸಿಲು ಆ ಗಗನಚುಂಬಿ ಪರ್ವತಗಳ ಮೈಯಲ್ಲಿರುವ ಅರ್ಧ ಪಾಚಿಗಟ್ಟಿದ, ಉಳಿದರ್ಧ ಒದ್ದೆಯಾಗಿ ಬಿಸಿಲನ್ನು ಪ್ರತಿಫಲಿಸಿ ಫಳಫಳಿಸುವ ಬಂಡೆಗಳನ್ನು ದೇವಲೋಕದಂತೆ ಮಿರಿಮಿರಿಗೊಳಿಸುತ್ತವೆ. ಬಿಸಿಲಿಗೆ ಮರಗಳೆಲ್ಲ ಫಳಫಳ ಹೊಳೆದು ಸ್ವರ್ಗ ಸೃಷ್ಟಿಯಾಗುತ್ತಿದ್ದಂತೆ ಮತ್ತೆ ಅದೆಲ್ಲಿಂದಲೋ ಮಂಜಿನಂತೆ ಬಂದ ಮೋಡಗಳು ಕಣ್ಮುಂದಿನ ಬೆಟ್ಟದಿಂದ ಆಕಾಶವನ್ನೆಲ್ಲ ವ್ಯಾಪಿಸಿ ನೋಡುವುದರೊಳಗೆ ಮಾರು ದೂರ ಕಾಣದಂತೆ ದಟ್ಟ ಮಳೆ ಸುರಿಸುತ್ತವೆ. ಈ ಎಲ್ಲ ಸೃಷ್ಟಿಯ ಬೃಹತ್ ಮೈದಾನದಲ್ಲಿ ಮನುಷ್ಯ ನಿರ್ಮಿಸಿದ ಕಪ್ಪು ರಸ್ತೆಗಳು.. ಅವುಗಳಲ್ಲಿ ಬೈಕ್ ಪಯಣ…

ಜೀವಜಲಪಾತ
ಜೀವಜಲಪಾತ

ಮಧ್ಯಾಹ್ನದ ಹೊತ್ತಿಗೆ ಹರೀಶಣ್ಣ ತಿರುಗಾಡಲಿಕ್ಕೆ ಹೋಗೋಣವಾ ಅಂತ ಕೇಳಿದಾಗ ಎಲ್ಲಿ ಅಂತ ಕೇಳಿದೆ. ಆತ ಮೇದಿನಿ ಪರ್ವತಕ್ಕೆ ಅಂದ. ಅದರ ಹೆಸರು ಕೇಳಿ ತಕ್ಷಣ ಪಕ್ಕಾ ಅಂದೆ. ಆ ಹೆಸರೇ ಎಷ್ಟು ಚೆನ್ನಿದೆ ನೋಡಿ!!

ಗೋಕರ್ಣದಿಂದ ಹೊರಟ ನಮ್ಮ ಸವಾರಿ ಕುಮಟಾ ದಾಟಿ ಸಿದ್ಧಾಪುರದ ರಸ್ತೆಯಲ್ಲಿ ಸಾಗಿತು. ಅದೆಷ್ಟೋ ದೂರ ಸಾಗಿದ ಮೇಲೆ ಬೆಟ್ಟದ ಮಧ್ಯದ ಒಂದು ಪುಟ್ಟ ಹಳ್ಳಿಯಲ್ಲಿ ಮೇದಿನಿಯ ವಿಳಾಸ ಕೇಳಿದೆವು. ಅವರು ಇನ್ನು ಸ್ವಲ್ಪ ಮುಂದೆ ಕ್ರಾಸ್ ಸಿಗುತ್ತೆ, ಅಲ್ಲಿಂದ 8 ಕಿ.ಮೀ. ಪರ್ವತ ಹತ್ತಬೇಕು. ಸಿಂಗಲ್ ಇದ್ದರೆ ಬೈಕ್ ಹತ್ತಿಸಬಹುದು. ಎರಡು ಘಟ್ಟ ತುಂಬಾ ಡೇಂಜರ್ ಇದೆ ಅಂದರು. ಸರಿ ಅಂತ ಮುಂದೆ ಹೊರಟೆವು.

ಉಪ್ಪಂಗಿ ಹಣ್ಣು...
ಉಪ್ಪಂಗಿ ಹಣ್ಣು…

ದಾರಿಯಲ್ಲಿ ಅಲ್ಲಲ್ಲಿ ಮೋಡಗಳ ರಾಶಿ ಕಣ್ಮುಂದೆ ಕುಸಿದು ಬಿದ್ದಂತೆ ಬೆಟ್ಟದ ತುದಿಗಳಿಂದ ಹರಿದು ಬಂದಂತೆ ಕಾಣುತ್ತಿದ್ದವು. ಮೇದಿನಿ ಕ್ರಾಸ್ ಬಂತು. ಬುಡದಿಂದಲೇ ಭಾರೀ ಘಟ್ಟ. ಸುಮಾರು ಐನೂರು ಮೀಟರ್ ಕಷ್ಟಪಟ್ಟು ಬೈಕ್ ಹತ್ತಿಸಿದೆವು. ಆದರೆ ಮುಂದಿನ ದಾರಿ ನೋಡಿ ಬೈಕ್ನಲ್ಲಿ ಮುಂದುವರೆಯಲು ಧೈರ್ಯ ಬರಲಿಲ್ಲ. ಅಲ್ಲೇ ಬೈಕ್ ನಿಲ್ಲಿಸಿ ನಡೆದು ಹೊರಟೆವು.ಅಲ್ಲಿ ನಡೆಯುವುದೊ ಕಷ್ಟವಿತ್ತು.

ಯಾರೂ ಒಂಟಿಯಲ್ಲ...
ಯಾರೂ ಒಂಟಿಯಲ್ಲ…

ಮೊದಲ ಘಟ್ಟ ಹತ್ತುವುದರೊಳಗೇ ಸಾಕುಸಾಕಾಗಿತ್ತು. ಆದರೆ ಮಧ್ಯೆ ಮಧ್ಯೆ ಸಿಗುತ್ತಿದ್ದ ಹಾಲ್ನೀರ ಜಲಪಾತಗಳು ಉತ್ಸಾಹ ತುಂಬುತ್ತಿದ್ದವು. ಅಂತೂ ಸುಮಾರು ಒಂದೂವರೆ ತಾಸು ಕಡುಗಾಡ ಹಾದಿಯಲ್ಲಿ ಸಾಗಿ, ಎಂಜಾಯ್ ಮಾಡಿ ವಾಪಸ್ ಬಂದು ನಿಧಾನಕ್ಕೆ ಬೈಕ್ ಇಳಿಸುವಾಗ ಏಳೂವರೆ.

ಎಲೆಮರೆಕಾಯಿ, ಹಣ್ಣು...
ಎಲೆಮರೆಕಾಯಿ, ಹಣ್ಣು…

ಅಲ್ಲಿಂದ ವಾಪಸ್ ಬರುವಾಗ ಜಟಾಪಟಿ ಮಳೆ. ರೋಡ್ ಚೂರೂ ಕಾಣುತ್ತಿರಲಿಲ್ಲ. ನಾನು ಆ ದಾರಿಗೆ ಹೊಸಬ. ಜೊತೆಯಿದ್ದ ಇನ್ನೆರಡು ಬೈಕಿನವರು ಮುಂದೆ ಹೋದರೆ ನಾನು ಸ್ವಲ್ಪ ಹಿಂದುಳಿದೆ. ನನ್ನ ಹಿಂದೆ ಕುಳಿತಿದ್ದ ವಿನ್ನಣ್ನ ಅಲಿಯಾಸ್ ವಿನಾಯಕ ಭಟ್, ಅವನಿಗೆ ದಾರಿ ಗೊತ್ತಿತ್ತು. ಆದರೆ ಆತ ಜೋರು ಮಳೆಗೆ ಕಣ್ಣು ಉರಿಯುತ್ತದೆ ಅಂತ ಕಣ್ಣು ಮುಚ್ಚಿಕೊಂಡು ಕುಳಿತಿದ್ದ. ಚಂದಾವರದ ಬಳಿ ನಾನು ಸರ್ಕಲ್ ಬಳಿ ಹೀಗಾ? ಅಂತ ಕೇಳಿದೆ. ಅವ ಕಣ್ಣು ಮುಚ್ಚಿಕೊಂಡೇಹೌದು ಅಂದ. ಅದು ಹೊನ್ನಾವರಕ್ಕೆ ಹೋಗುವ ರಸ್ತೆ! ಸುಮಾರು ಐದು ಕಿ.ಮೀ. ದಾಟಿದ ಮೇಲೆ ಹಿಂದಿನಿಂದ ಕಿರಣಣ್ಣನ ಬೈಕ್ ಬಂತು. ಗಾಡಿ ಅಡ್ಡ ಹಾಕಿ ಹುಚ್ಚ್ರಾ, ಎಲ್ಲ್ ಸಾಯೂಕ್ ಹೊಗ್ತಿದೀರಾ ಅಂತ ಬೈಸ್ಕೊಂಡು, ವಾಪಸ್ ಚಂದಾವರಕ್ಕೆ ಬಂದು , ಅಲ್ಲೊಂದು ಹೋಟೆಲಲ್ಲಿ ಬೆಲ್ಲದ ಚಹಾ ಕುಡಿದು ನಂತರ ಕುಮಟಾ ಕಡೆ ಸಾಗಿತು ಪಯಣ..

 

ಹೆಸರಿಲ್ಲದ ಹಣ್ಣು
ಹೆಸರಿಲ್ಲದ ಹಣ್ಣು

ಅಲ್ಲಿ ಒಂದೆಡೆ ಗೋಬಿ ತಿಂದು, ನಂತರ ಪಾಂಡುರಂಗ ಇಂಟರ್‍ನ್ಯಾಷನಲ್ ಹೋಟೆಲ್ಲಿನಲ್ಲಿ ಬಿರಿಯಾನಿ(ವೆಜ್) ತಿಂದು ರಾತ್ರಿ ಒಂಭತ್ತು ಮೂವತ್ತರ ಸುಮಾರಿಗೆ ಗೋಕರ್ಣ ತಲುಪಿದೆವು.

 

ಮೇದಿನಿ
ಅರಿ!, ಮಾನವ, ಮರವೇ ದಾರಿ!

ಬಾನು ಕಾಣದ ಕಾನು

ಹಬ್ಬಿ ನಿಂತಿದೆ ತಾನು!

ತಾಣ ತಾಣದಿ ಹಸಿರು ಹಬ್ಬಿತೇನು!

ಕಾಡು

ಈ ಅಮೋಘ ಸೃಷ್ಟಿಸೌಂದರ್ಯದ ಹಸಿರುಸಿರಿಯಲ್ಲಿ ಶಕ್ತಿರೂಪವಾಗಿ ಅಡಗಿರುವ ಆ ಭವತಾರಿಣಿಯನ್ನು, ನಿತ್ಯಶ್ಯಾಮಲೆ ಈಶ್ವರಿಯನ್ನು, ವಿಪಿನರೌದ್ರೆ ಭವಾನಿಯನ್ನು, ಕಾನನಗಾಮಿನಿ ಶಾಂತಲೆಯನ್ನು ಇದಕ್ಕಿಂತ ಹೆಚ್ಚು ಸದೃಶವಾಗಿ ಇನ್ನೆಲ್ಲಿ ಕಾಣಲು ಸಾಧ್ಯ?! ಈ ವನಗಳಲ್ಲಿ, ಮಲೆನಾಡಿನ ಅಸಂಖ್ಯ ಬೆಟ್ಟ ಗುಡ್ಡ ಜಲಪಾತಗಳಲ್ಲಿ ಆ ಶಕ್ತಿ ಸುಪ್ತವಾಗಿ, ಆದರೆ ಅವಳ ಮಕ್ಕಳ ಪಾಲಿಗೆ ಅಷ್ಟೇ ಮೂರ್ತರೂಪಿಣಿಯಾಗಿ ನೆಲೆಸಿದ್ದಾಳೆ…

ಕಾಡ ಹಾದಿ
ಕಾನನದ ಇಳಿಹಾದಿ

 

ಕಾಡು
Lets go!

 

 

ನೀರೊರತೆ
ನೀರೊರತೆ

 

ಹನಿ ಹಣ್ಣು
ಹಂಪಲಿಗೆ ತಂಪಲು

ಜೈ ಕಾನ್ದೇವಿ!

ಈ ಪೋಸ್ಟ್ ಅನ್ನು ಶೇರ್ ಮಾಡಲು:

Leave a Reply

Your email address will not be published. Required fields are marked *