ಸ್ಪೃಹಾ

#‎ಸ್ಪೃಹಾ‬

ಕಣ್ ಬದಿಯ ಕಾಡಿಗೆಯು
ನಡುವೆ ಹೊಳೆಯುವ ಕಣ್ಣು
ಕಾರಿರುಳ ರಾತ್ರಿಯಲೂ
ಚಂದ್ರ ಬಂದಂತೆ….

ಶಶಿಮುಖಿಯ ಕೊರಳಲ್ಲಿ
ಹೊಳೆವ ಚಂದದ ಸರವು
ಜೋತುಬಿದ್ದಿಹ ಪದಕ
ದಿನಕರನ ತುಣುಕು ….

ಕೈಬಳೆಯ ಮೇಲಿರುವ
ಆ ಸಾಲು ಚುಕ್ಕಿಗಳು
ರಾತ್ರಿ ಕಾನನದಲ್ಲಿ
ಮಿಂಚುಹುಳ ನಕ್ಕಂತೆ,..

ಕೈಯಲ್ಲಿ ಕಳೆದುಂಬಿ
ಕಾಣುತಿದೆ ಮದರಂಗಿ
ಚದುರಂಗವಾಡೋಣ
ಕೈ ಮೇಲೆ ಮುದ್ದಾಗಿ…

‪#‎ಕೆಂಡಸಂಪಿಗೆ‬

. . . . . . . ಸಖ್ಯಮೇಧ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ನೀರಡಿಕೆ

ಕುಡಿಕೆ ನೀರಿನ ಮಡಿಕೆ
ಭಾರವಾಯಿತು ದಡಕೆ
ನೀರಸೆಲೆಯಾ ನದಿಗೂ
ಈಗ ನೀರಡಿಕೆ…

ಮನವು ಭಾರ, ಬಯಕೆ ದೂರ
ಚೈತ್ರದಲ್ಲೂ ಮನದ ಮರ್ಮರ
ಇಲ್ಲ ಭರವಸೆ, ಎಲ್ಲ ತತ್ತರ
ಮನದ ಮಾರ್ಗದಿ ದೊಡ್ಡ ಹಂದರ

ಮಾಯಕದ ‪ಕೆಂಡಸಂಪಿಗೆ‬
. . . . . . .  ಸಖ್ಯಮೇಧ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಮುದ್ದು ಮುಖ

ಆ ನೀಳ ಮುಂಗುರುಳು
ಗಾಳವನು ಹಾಕಿದೆ
ತಾಳ ತಪ್ಪಿದ ಮನವು
ಅದಕೆ ವಶವಾಗಿದೆ…

ಮುದ್ದಾದ ನುಣುಪಾದ
ಅವಳ ಮೂಗಿನಮೇಲೆ
ಜಾರುಬಂಡಿ ಆಡುತಿದೆ
ಹುಚ್ಚು ಕನಸು…

ಮೃದುವಾದ ಕಿವಿಯೆಂಬ
ಅಂದದಾ ಬಾವಿಯೊಳು
ಬೀಳಬೇಕೆನ್ನುತಿದೆ
ಎದೆಯ ಉಸಿರು ….

ಚಂದದಾ ಕೈ ನೆನೆದು
ಕೆನ್ನೆ ಕೆಂಪಾಗಿದೆ…
ಕೈತುತ್ತು ತಿನುವಾಸೆ
ಹಸಿವು ಹೆಚ್ಚಾಗಿದೆ…

‘ಮುತ್ತಿನ’ ಹಾರವನು
ತೊಡಿಸಲೇ ಕೊರಳಿಗೆ..
ಅಪ್ಪುಗೆಯ ಬಹುಮಾನ
ಕೊಡಲೇನು ಆ ಜಡೆಗೆ…

ಅ….
ಅಯ್ಯೋ !! ಸಾಕು ಸಾಕು…

‪#‎ಕೆಂಡಸಂಪಿಗೆ‬
. . . . ಸಖ್ಯಮೇಧ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಅವಳೆಂದರೆ…

ಮಳೆಬರುವ ಮೊದಲಕ್ಷಣ
ಆಗಸವ ತುಂಬಿರುವ
ಮೇಘಗಳ ಗಾಂಭೀರ್ಯ
ಅವಳ ನಡೆಯಲ್ಲಿ…

. ಮಂಜಿನಲೂ ತಾನರಳಿ
. ಅಂಜದೆಯೇ ಘಮ ಬೀರಿ
. ಮುದ ನೀಡುವಾ ಸುಮವು
. ಅವಳ ಕಣ್ಣಂತೆ…

ಬಾನೆತ್ತರಕೆ ಬೆಳೆದು
ತಂಪು ನೆರಳನ್ನೀಯ್ವ
ಹೊಂಗೆ ವೃಕ್ಷದ ತರಹ
ಭರವಸೆಯ ಕಣ್ಣು…

. ಫಲಭರಿತ ಹೊಸದೊಂದು
. ಮರವೊಂದ ಕಂಡಾಗ
. ಹಕ್ಕಿಗಳು ನಕ್ಕಂತೆ
. ಬಳೆಯ ಸದ್ದು…

ಹಸಿರು ಗದ್ದೆಯ ನಡುವೆ
ಬೀಸುಗಾಳಿಯು ಹಾದು
ತೆನೆ ಬಳುಕಿ ನಕ್ಕಂತೆ
ಅವಳ ಮುಂಗುರುಳು…

. ಅತ್ತಿತ್ತ ಓಡಾಡಿ
. ಪೆದ್ದಾಗಿ ಕುಣಿಯುತಿಹ
. ಎಳೆಗರುವಿನಂತಹುದೇ
. ಮುಗ್ಧ ಮನಸು…

‪‎ಕೆಂಡಸಂಪಿಗೆ‬
. . . . . . ಸಖ್ಯಮೇಧ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಯುಗಾದಿ

ಎಂದೆಂದೂ ಮುಗಿಯದೀ ಹಾದಿ
ಯಾವತ್ತೂ ಮಾಗದೀ ಯುಗಾದಿ
ಗರಿಗೆದರಿವೆ ಕನಸುಗಳು ಮನದಿ
ನನಸಾಗಲಿ ಮನ್ಮಥನ ಹಸ್ತದಿ

ಹೊಸವರುಷದ ಹಾರ್ದಿಕ ಶುಭಾಶಯಗಳು

celebrating ಯುಗಾದಿ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಚಂದಿರ

ಗೆಳತೀ ….,
ಆಕಾಶದಲ್ಲಿ ನಿನ್ನ
ಮುಖದ ಬಿಂಬ
ಪ್ರತಿಫಲನಗೊಂಡಿದೆ…
ಮತ್ತು
ಜನರು ಅದನ್ನು
ಚಂದಿರನೆನ್ನುತ್ತಾರೆ…

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಇಚ್ಛೆ

ಹುಚ್ಚು ಪ್ರೀತಿಯ ಇಚ್ಛೆ ಹೆಚ್ಚಳ
ಮುಚ್ಚುಮರೆಯಲಿ ಆಸೆ ನಿಚ್ಚಳ….
ಒಲವ ಸೀಸೆಗೆ ನಗೆಯ ಮುಚ್ಚಳ
ಬಿಚ್ಚಿ ತೆರೆದರೆ ಪ್ರೀತಿ ಸಪ್ಪಳ..

ಸ್ವಚ್ಛ ಒಲವಿನ ಭಾವ ಹೆಚ್ಚಿದೆ
ಹೊಚ್ಚ ಹೊಸ ಅನುಭೂತಿ ಮೆಚ್ಚಿದೆ…
ಎದೆಯ ಕಿಚ್ಚಿಗೆ ತಂಪು ಹಚ್ಚುವ
ನಗೆಯ ಗುಚ್ಛವ ನೆಚ್ಚಿದೆ…

ತುಚ್ಛ ಕೃತಿಗಳು ಬೆಚ್ಚಿಬಿದ್ದಿವೆ
ಹಚ್ಚ ಹಸಿರಿನ ಪ್ರೀತಿ ಕಂಡು….
ಕೆಚ್ಚಿನಲಿ ಚುಚ್ಚುವಾ ಬಯಕೆಯು
ಇಚ್ಛೆಯಿಲ್ಲದ ಮಿಥ್ಯೆಗಳನು…

ಹಳೆಯ ಯೋಚನೆ ನುಚ್ಚುನೂರು
ಹಳೆಯ ಕಿಚ್ಚಿಗೆ ಬಿತ್ತು ನೀರು…
ಅಚ್ಚ ಪ್ರೀತಿಗೆ ವೆಚ್ಚ ಇಲ್ಲ
ಬಿಚ್ಚು ಮನಸಿನ ನುಡಿಯೇ ಎಲ್ಲ…

# ಕೆಂಡಸಂಪಿಗೆ
. . . . ಸಖ್ಯಮೇಧ
(ಕೃತಿ= ಕಾರ್ಯ ಎಂಬರ್ಥದಲ್ಲಿ ಬಳಸಲಾಗಿದೆ.
ಹಾಗೂ ಸಂಬಂಧಗಳು ಎಂಬರ್ಥದಲ್ಲಿ
ಕೊಂಡಿ ಪದ ಬಳಸಿದೆ.)

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಸಂಗ

ಚಂದ ನಿನ್ನಯ ಸಂಗ
ತಂದ ಸುಖದುತ್ತುಂಗ ;
ಸಾಂಗತ್ಯ ದೊರೆತರೆ ಬೇಗ
ಪ್ರೀತಿ ಸಂಗತಿ ಸಾಂಗ…
ಸಂಗಾತಿ ನೀ ಕರೆದಾಗ
ಸನಿಹಕ್ಕೆ ಬಾ ಎಂದಾಗ
ಪ್ರೇಮಸೌಧದ ಶೃಂಗ
ತಲುಪಿ ನಕ್ಕೆನು ಆಗ…
ಕಂಗಳಲಿ ನೀರಿಳಿದಾಗ
ನೀ ತುಂಬ ದೂರಾದಾಗ
ಎದೆನಡುಗಿ ಮನಸಿಗೆ ರೋಗ
ಒಲವ ಭಾವದ ಭಂಗ…
ಮಾಯಕದ #ಕೆಂಡಸಂಪಿಗೆ
. . . . . .ಸಖ್ಯಮೇಧ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಜೊತೆ

ಕೆಂಪು ರಂಗೇರಿದೆ ಗಗನ
ತಂಪು ತಂಗಾಳಿಯ ಗಾನ
ಮಂಪರಿನ ಸವಿಸಂಜೆ ಯಾನ…
ಕಂಪೆರೆವ ಹಳೆನೆನಪ ಮನನ…
.
ಆಸರೆಗೆ ತರುಲತೆಗೆ ಮರವು ಇರಬೇಕು..
ಕುಸುಮಕ್ಕೆ ಭ್ರಮರದಾ ಸ್ಪರ್ಶವಿರಬೇಕು…
ನೇಸರನು ತೊಲಗಿದರೆ ಚಂದಿರನು ಬರಬೇಕು..
ಬೇಸರವು ಬಂದಾಗ ನಿನ್ನ ಜೊತೆ ಬೇಕು…
ಮಾಯಕದ # ಕೆಂಡಸಂಪಿಗೆ
. . . . . . ಸಖ್ಯಮೇಧ

ಈ ಪೋಸ್ಟ್ ಅನ್ನು ಶೇರ್ ಮಾಡಲು: