ಅತಿಮೃದುಲ ಕಣ್ಣುಗಳು, ಕಿಲಕಿಲನೆ ನಗುವವಳು
ಹೊಂಗೂದಲದು ಚೆನ್ನ, ನಗೆಗೆ ಸಾವಿರ ಬಣ್ಣ
ಎತ್ತಿಕೊಳುವಾಸೆ, ಮುಗ್ಧ ಅಂದದ ಕೂಸೇ..
ಇದು ಭಾವಾಲಾಪಗಳ ಸುರಿಮಳೆ
ಹಿಗ್ಗು ತುಂಬಿದ ಕಣ್ಣ ಹುಬ್ಬು-
ಸುಗ್ಗಿ ಸಂಭ್ರಮ ಕೂಡ ಮಬ್ಬು!
ಲಗ್ಗೆಯಿಡು ಬಾ, ತೊರೆದು ಕೊಬ್ಬು
ಮಗ್ಗುಲಲಿ ಮಲಗುವೆನು, ತಬ್ಬು
.
ಕೆಂಡಸಂಪಿಗೆ
. . . . . . . . . . . ಸಖ್ಯಮೇಧ
ಬೆಳಕು ಹೀರಿದ ಹುಡುಗಿ, ಬಡಗಿ ಕೆತ್ತಿದ ಬೆಡಗಿ
ತುಳುಕಿ ಚೆಲ್ಲುವ ಹೆರಳು, ಬಳುಕಿ ನುಲಿಯುವ ಬೆರಳು
ತಳುಕು ಹಾಕುವ ಪಾದ, ಘಿಲಕು ಗೆಜ್ಜೆಯ ನಾದ
ಪುಳಕ ಬೀರುವ ದೃಷ್ಟಿ, ಚಳಕ ನಿನ್ನಯ ಸೃಷ್ಟಿ
.
ಕೆಂಡಸಂಪಿಗೆ
. . . . . . . . ಸಖ್ಯಮೇಧ
ನೀನೊಂದು ಸಾಹಿತ್ಯ, ನನ್ನೆದೆಯ ಲಾಲಿತ್ಯ
ಅತಿಮಧುರ ಸಾಂಗತ್ಯ, ಈ ಪ್ರೀತಿ ಸಿಹಿಸತ್ಯ
ಬೆರಳುಗಳ ದಾಂಪತ್ಯ, ನಡೆಸೋಣ ಪ್ರತಿನಿತ್ಯ
ನೀ ಬದುಕಿನಾಗತ್ಯ, ಈ ಬಂಧವೇ ಅಂತ್ಯ
.
ನಿನ್ನ ಕಂಗಳ ನೃತ್ಯ, ನನ್ನ ಕಣ್ಣಿಗೆ ಭತ್ಯ
ತುಂಟ ಕೂದಲ ಕೃತ್ಯ, ನನ್ನೆದೆಗೆ ಆತಿಥ್ಯ
ಕೇಶನಿಯಮದ ರೀತ್ಯ, ಆ ಜಡೆಯ ಸಾರಥ್ಯ
ನೀನಿರದ ಮನ ಮಿಥ್ಯ, ನೀ ಸಿಗಲು ಕೃತಕೃತ್ಯ
.
ಕೆಂಡಸಂಪಿಗೆ
. . . . . . . . . ಸಖ್ಯಮೇಧ
ಕನ್ನಹಾಕುವ ಕಣ್ಣಸನ್ನೆಯು
ಖಿನ್ನಗೊಳಿಸುವ ಕೆನ್ನೆಬಣ್ಣವು
ಬೆನ್ನಮೇಲ್ಗಡೆ ಚಿನ್ನದಾ ಜಡೆ
ಹೊನ್ನತೇಜದ ನಗುವ ಮುನ್ನಡೆ…
.
ಮೆಲ್ಲನಾಚಿದೆ ಬೆಳ್ಳಗಲ್ಲವು
ಎಲ್ಲನೋಟದ ಕಳ್ಳಬಿಂದುವು
ಎಲ್ಲೆ ಮೀರದ ಚೆಲ್ಲುಮಾತಿಗೆ
ಕಲ್ಲು ಹೃದಯವೂ ಹಲ್ಲೆಗೊಂಡಿದೆ…
ಕೆಂಡಸಂಪಿಗೆ
. . . . . . . . . . ಸಖ್ಯಮೇಧ
ಅರೆ…!
.
ಸೂರ್ಯ ಪಶ್ಚಿಮಕ್ಕಿದ್ದಾನೆ,
ಸೂರ್ಯಕಾಂತಿಯ ಮುಖ ಪೂರ್ವಕ್ಕೆ…!!
.
ಓ…!! ಪೂರ್ವಕ್ಕೆ ನನ್ನವಳು ನಿಂತಿದ್ದಾಳೆ..!
ಕೆಂಡಸಂಪಿಗೆ
ಕೆನ್ನೆ ಕಿತ್ತಳೆ, ಕತ್ತು ಬೆತ್ತಲೆ
ಮುಖವು ನೈದಿಲೆ, ಒಮ್ಮೆ ಮುಟ್ಟಲೆ?
‘ನತ್ತು’ ನಕ್ಕರೆ ಹೊಳೆವಳವಳೇ
ಅಧರ ಅದುರಿರೆ ಮುತ್ತಿನಾಹೊಳೆ..
.
ಹತ್ತುಸುತ್ತಿನ ಒತ್ತು ಜಡೆಯು
ಗತ್ತು ತುಂಬಿಹ ಸುತ್ತು ನಡೆಯು
ಒತ್ತಿ ತೀಡಿದ ಅಚ್ಚ ಕಾಡಿಗೆ
ಅತ್ತರಿನ ಘಮ ಮತ್ತೂ ಸನಿಹಕೆ…
.
ಕೆಂಡಸಂಪಿಗೆ