ಗೊಂದಲದ ಹುಡುಗಿಯೇ,
ಹಂಬಲದ ಹುಡುಗ ನಾ,..
ಚಂಚಲವ ಬದಿಗಿಟ್ಟು
ಸಂಚಲನವಾಗು ಬಾ…
___________
ನಿನ್ನ ನೆನಪಾಗಿ ಒಲೆ ಮೇಲಿರುವ ಅನ್ನದ ಪಾತ್ರೆ ಮೇಲಿನ
ಬಟ್ಟಲಿನಂತಾಡುತ್ತದೆ ಮನಸ್ಸು… ನಿನ್ನ ನೆನಪು
ತೀವ್ರವಾಗಿ ಅದರಲ್ಲೇ ಮುಳುಗಿದಾಗಲೇ ಅದು ಮತ್ತೆ
ಸ್ಥಿಮಿತಕ್ಕೆ ಬರೋದು..
ಕೊನೇ ಬಾರಿ ಸಿಕ್ಕಾಗ ಏನನ್ನು ಬಿಟ್ಟು ಹೋದೆಯೋ
ಗೊತ್ತಿಲ್ಲ.. ಸಂಪಿಗೆಯ ಘಮ ಮೂಗಿಗೆ
ಬಡಿದಾಗಲೆಲ್ಲ ನಿನ್ನದೇ ನೆನಪು..
ನಿಜ ಹೇಳ್ತೀನಿ, ಆ ನಿನ್ನ ಮುಖವನ್ನು ಸರಿಯಾಗಿ
ನೋಡಬೇಕೆಂದು ಎಷ್ಟೋ ಬಾರಿ
ಅಂದುಕೊಂಡಿದ್ದೇನೆ..
ನೀ ಸಿಕ್ಕಾಗಲೆಲ್ಲ ಮನಸ್ಸು ಗೊಂದಲದ
ಗೂಡಾಗಿ ಏನಾಗುವುದೋ ನನಗೇ ತಿಳಿಯುವುದಿಲ್ಲ..
ಆ ಮುಖವನ್ನು ಸರಿಯಾಗಿ ನೋಡಿಬಿಟ್ಟರೆ ಎಲ್ಲಿ ನನ್ನ
ಎದೆಬಡಿತ ನಿನಗೂ ಕೇಳಿಬಿಡುವಷ್ತು ಹೆಚ್ಚುವುದೋ ಎಂಬ
ಆತಂಕ… ಕನಸಿನಲ್ಲೂ ನಿನ್ನ ಮುಖದ ನಬದಲು
ಮುಂಗುರುಳು ಕಾಣುವುದೇ ಹೆಚು..
�
ಕೆಂಡಸಂಪಿಗೆ
ಪರಿಸರ
ಅವಸಾನದ ವಸನ ಹೊತ್ತು
ಪ್ರಹಸನದ ವ್ಯಸನಕಂಜಿ
ಮಸಣದೆಡೆಗೆ ವದನವಿಟ್ಟು
ನಸುನಲುಗಿದೆ ಪರಿಸರ…
ಹಸನಾಗುವ ಕನಸ ತೊರೆದು
ಮುಸಿನಗುತಿಹ ಮನಸ ಶಪಿಸಿ
ಹಸೆಯೇರುವ ವಧುವಿನಂತೇ
ಚಿತೆಯೇರಿದೆ ಪರಿಸರ…
— feeling ಪರಿಸರ ಉಳಿಸಿ…
ಬಳ್ಳಿ
ಕೆಂಡಸಂಪಿಗೆ
↓
ನ ಗುವ ಹವಳವು ಅವಳ ಕಂಗಳು
ನಾ ದ ಸೂಸುವ ಬಳೆಯ ಕೈಗಳು
ನಿ ಯತ ಹಾರುವ ಮುದ್ದು ಮುಂಗುರುಳು
ನೀ ಳ ಮೂಗಿನ ಕೆಳಗೆ ಮುಗುಳು
ನು ರಿತ ಕಂಗಳ ಒಳಗೂ ನಾಚಿಕೆ
ನೂ ರು ಬಿಮ್ಬದ ಮರಿ ಮರೀಚಿಕೆ
ನೆ ಪವೇ ಇಲ್ಲದೆ ನಾಚುವಾ ಮೊಗ
ನೇ ಮ ತಪ್ಪದ ಕೂದಲೇ ಸೊಗ
ನೈ ದಿಲೆಯು ಸಹ ನಾಚಿತೀಗ
ನೊ ಸಲ ಮೆಗಡೆ ಮುಡಿದ ಹೂವು
ನೋ ಡಿ ಖುಷಿಯಲಿ ಕುಣಿದ ಮನವು
ನೌ ಕೆಗೊಬ್ಬನೇ ಇರುವ ನಾವಿಕ
ನಂ ಟಿಲ್ಲವೆನಗೆ ನಿನ್ನ ಬಳಿಕ , ನಿನ್ನ ವಿ-
ನಃ ಎಲ್ಲ ನರಕ….
. . . . ಸಖ್ಯಮೇಧ
ಕೆನ್ನೆ
ಬೆಲ್ಲ ತುಂಬಿದ ದೊನ್ನೆ
ಮರುಕಳಿಸೋ ಕಣ್ಸನ್ನೆ
ಅವಳೀಗ ಮನದನ್ನೆ…
ದೇಹಕ್ಕೂ ನೇಹಕ್ಕೂ ಮಧುಮೇಹ ಬಂದಿದೆ
ಹುಸಿಕಲಹ ಹೆಚ್ಚಿದೆ, ತುಸು ಸನಿಹ ಬಾ ಎಂದು
ಮುಸಿನಗುತ ಓಡದಿರು ಮನಸಿಂದು ಬೇಡಿದೆ…
#ಕೆಂಡಸಂಪಿಗೆ
. . . . . . . ಸಖ್ಯಮೇಧ
ಸ್ಪೃಹಾ
ಕಣ್ ಬದಿಯ ಕಾಡಿಗೆಯು
ನಡುವೆ ಹೊಳೆಯುವ ಕಣ್ಣು
ಕಾರಿರುಳ ರಾತ್ರಿಯಲೂ
ಚಂದ್ರ ಬಂದಂತೆ….
ಹೊಳೆವ ಚಂದದ ಸರವು
ಜೋತುಬಿದ್ದಿಹ ಪದಕ
ದಿನಕರನ ತುಣುಕು ….
ಕೈಬಳೆಯ ಮೇಲಿರುವ
ಆ ಸಾಲು ಚುಕ್ಕಿಗಳು
ರಾತ್ರಿ ಕಾನನದಲ್ಲಿ
ಮಿಂಚುಹುಳ ನಕ್ಕಂತೆ,..
ಕೈಯಲ್ಲಿ ಕಳೆದುಂಬಿ
ಕಾಣುತಿದೆ ಮದರಂಗಿ
ಚದುರಂಗವಾಡೋಣ
ಕೈ ಮೇಲೆ ಮುದ್ದಾಗಿ…
. . . . . . . ಸಖ್ಯಮೇಧ
ಕೆಂಡಸಂಪಿಗೆ
ಹೃದ್ಯವಾಗಿದೆ ಅವಳ ಪದ್ಯವು
ನೀರಧಾರೆಯ ಮಂದ ನಾಟ್ಯದಿ
ನಿತ್ಯ ಕಂಡಿದೆ ಅವಳ ನೃತ್ಯವು…..
ನಾಚಿಕೊಂಡಿದೆ ಅಧರ ಕಂಡು
ಶಿಶಿರಕಾಲದ ತುಂಬು ಚಂದ್ರನ
ಮರೆಯಮಾಡಿದೆ ಹಣೆಯ ಚಂದನ….
ಸಾಲು ಶ್ರೇಣಿಯ ರಜತ ಪರ್ವತ-
ದಂತೆ ಕಂಡಿದೆ ದಂತ ಪಂಕ್ತಿಯು
ಕಿವಿಯ ಲೋಲಕ ಬಹಳ ಮೋಹಕ
ಮನದಿ ಹೊಮ್ಮಿದೆ ಭಾವ ಸೂಕ್ತಿಯು….
ಕೆಂಡಸಂಪಿಗೆ ನಕ್ಕ ವೇಳೆಗೆ
ಮಿಕ್ಕ ಹೂಗಳು ಪಕ್ಕ ಸರಿದವು
ಚಿಕ್ಕ ಹೃದಯದಿ ಪುಕ್ಕ ಪಡೆಯಿತು
ಪ್ರೇಮಹಕ್ಕಿಯು ನಕ್ಕು ನಲಿಯಿತು…
#ಕೆಂಡಸಂಪಿಗೆ
ಮುದ್ದು ಮುಖ
ಗಾಳವನು ಹಾಕಿದೆ
ತಾಳ ತಪ್ಪಿದ ಮನವು
ಅದಕೆ ವಶವಾಗಿದೆ…
ಅವಳ ಮೂಗಿನಮೇಲೆ
ಜಾರುಬಂಡಿ ಆಡುತಿದೆ
ಹುಚ್ಚು ಕನಸು…
ಮೃದುವಾದ ಕಿವಿಯೆಂಬ
ಅಂದದಾ ಬಾವಿಯೊಳು
ಬೀಳಬೇಕೆನ್ನುತಿದೆ
ಎದೆಯ ಉಸಿರು ….
ಚಂದದಾ ಕೈ ನೆನೆದು
ಕೆನ್ನೆ ಕೆಂಪಾಗಿದೆ…
ಕೈತುತ್ತು ತಿನುವಾಸೆ
ಹಸಿವು ಹೆಚ್ಚಾಗಿದೆ…
‘ಮುತ್ತಿನ’ ಹಾರವನು
ತೊಡಿಸಲೇ ಕೊರಳಿಗೆ..
ಅಪ್ಪುಗೆಯ ಬಹುಮಾನ
ಕೊಡಲೇನು ಆ ಜಡೆಗೆ…
ಅ….
ಅಯ್ಯೋ !! ಸಾಕು ಸಾಕು…
#ಕೆಂಡಸಂಪಿಗೆ
. . . . ಸಖ್ಯಮೇಧ
ನೀರಡಿಕೆ
ಭಾರವಾಯಿತು ದಡಕೆ
ನೀರಸೆಲೆಯಾ ನದಿಗೂ
ಈಗ ನೀರಡಿಕೆ…
ಚೈತ್ರದಲ್ಲೂ ಮನದ ಮರ್ಮರ
ಇಲ್ಲ ಭರವಸೆ, ಎಲ್ಲ ತತ್ತರ
ಮನದ ಮಾರ್ಗದಿ ದೊಡ್ಡ ಹಂದರ
ಮಾಯಕದ ಕೆಂಡಸಂಪಿಗೆ
. . . . . . . ಸಖ್ಯಮೇಧ
ಯುಗಾದಿ
ಯಾವತ್ತೂ ಮಾಗದೀ ಯುಗಾದಿ
ಗರಿಗೆದರಿವೆ ಕನಸುಗಳು ಮನದಿ
ನನಸಾಗಲಿ ಮನ್ಮಥನ ಹಸ್ತದಿ
— celebrating ಯುಗಾದಿ
ಅವಳೆಂದರೆ…
ಆಗಸವ ತುಂಬಿರುವ
ಮೇಘಗಳ ಗಾಂಭೀರ್ಯ
ಅವಳ ನಡೆಯಲ್ಲಿ…
. ಅಂಜದೆಯೇ ಘಮ ಬೀರಿ
. ಮುದ ನೀಡುವಾ ಸುಮವು
. ಅವಳ ಕಣ್ಣಂತೆ…
ಬಾನೆತ್ತರಕೆ ಬೆಳೆದು
ತಂಪು ನೆರಳನ್ನೀಯ್ವ
ಹೊಂಗೆ ವೃಕ್ಷದ ತರಹ
ಭರವಸೆಯ ಕಣ್ಣು…
. ಫಲಭರಿತ ಹೊಸದೊಂದು
. ಮರವೊಂದ ಕಂಡಾಗ
. ಹಕ್ಕಿಗಳು ನಕ್ಕಂತೆ
. ಬಳೆಯ ಸದ್ದು…
ಹಸಿರು ಗದ್ದೆಯ ನಡುವೆ
ಬೀಸುಗಾಳಿಯು ಹಾದು
ತೆನೆ ಬಳುಕಿ ನಕ್ಕಂತೆ
ಅವಳ ಮುಂಗುರುಳು…
. ಅತ್ತಿತ್ತ ಓಡಾಡಿ
. ಪೆದ್ದಾಗಿ ಕುಣಿಯುತಿಹ
. ಎಳೆಗರುವಿನಂತಹುದೇ
. ಮುಗ್ಧ ಮನಸು…
ಕೆಂಡಸಂಪಿಗೆ
. . . . . . ಸಖ್ಯಮೇಧ