ಆಕಾಶದಲ್ಲಿ ನಿನ್ನ
ಮುಖದ ಬಿಂಬ
ಪ್ರತಿಫಲನಗೊಂಡಿದೆ…
ಮತ್ತು
ಜನರು ಅದನ್ನು
ಚಂದಿರನೆನ್ನುತ್ತಾರೆ…
ಇದು ಭಾವಾಲಾಪಗಳ ಸುರಿಮಳೆ
ಹುಚ್ಚು ಪ್ರೀತಿಯ ಇಚ್ಛೆ ಹೆಚ್ಚಳ
ಮುಚ್ಚುಮರೆಯಲಿ ಆಸೆ ನಿಚ್ಚಳ….
ಒಲವ ಸೀಸೆಗೆ ನಗೆಯ ಮುಚ್ಚಳ
ಬಿಚ್ಚಿ ತೆರೆದರೆ ಪ್ರೀತಿ ಸಪ್ಪಳ..
ಸ್ವಚ್ಛ ಒಲವಿನ ಭಾವ ಹೆಚ್ಚಿದೆ
ಹೊಚ್ಚ ಹೊಸ ಅನುಭೂತಿ ಮೆಚ್ಚಿದೆ…
ಎದೆಯ ಕಿಚ್ಚಿಗೆ ತಂಪು ಹಚ್ಚುವ
ನಗೆಯ ಗುಚ್ಛವ ನೆಚ್ಚಿದೆ…
ತುಚ್ಛ ಕೃತಿಗಳು ಬೆಚ್ಚಿಬಿದ್ದಿವೆ
ಹಚ್ಚ ಹಸಿರಿನ ಪ್ರೀತಿ ಕಂಡು….
ಕೆಚ್ಚಿನಲಿ ಚುಚ್ಚುವಾ ಬಯಕೆಯು
ಇಚ್ಛೆಯಿಲ್ಲದ ಮಿಥ್ಯೆಗಳನು…
ಹಳೆಯ ಯೋಚನೆ ನುಚ್ಚುನೂರು
ಹಳೆಯ ಕಿಚ್ಚಿಗೆ ಬಿತ್ತು ನೀರು…
ಅಚ್ಚ ಪ್ರೀತಿಗೆ ವೆಚ್ಚ ಇಲ್ಲ
ಬಿಚ್ಚು ಮನಸಿನ ನುಡಿಯೇ ಎಲ್ಲ…
# ಕೆಂಡಸಂಪಿಗೆ
. . . . ಸಖ್ಯಮೇಧ
(ಕೃತಿ= ಕಾರ್ಯ ಎಂಬರ್ಥದಲ್ಲಿ ಬಳಸಲಾಗಿದೆ.
ಹಾಗೂ ಸಂಬಂಧಗಳು ಎಂಬರ್ಥದಲ್ಲಿ
ಕೊಂಡಿ ಪದ ಬಳಸಿದೆ.)
ಚಂದ ನಿನ್ನಯ ಸಂಗ
ತಂದ ಸುಖದುತ್ತುಂಗ ;
ಸಾಂಗತ್ಯ ದೊರೆತರೆ ಬೇಗ
ಪ್ರೀತಿ ಸಂಗತಿ ಸಾಂಗ…
ಸಂಗಾತಿ ನೀ ಕರೆದಾಗ
ಸನಿಹಕ್ಕೆ ಬಾ ಎಂದಾಗ
ಪ್ರೇಮಸೌಧದ ಶೃಂಗ
ತಲುಪಿ ನಕ್ಕೆನು ಆಗ…
ಕಂಗಳಲಿ ನೀರಿಳಿದಾಗ
ನೀ ತುಂಬ ದೂರಾದಾಗ
ಎದೆನಡುಗಿ ಮನಸಿಗೆ ರೋಗ
ಒಲವ ಭಾವದ ಭಂಗ…
ಮಾಯಕದ #ಕೆಂಡಸಂಪಿಗೆ
. . . . . .ಸಖ್ಯಮೇಧ
ಕೆಂಪು ರಂಗೇರಿದೆ ಗಗನ
ತಂಪು ತಂಗಾಳಿಯ ಗಾನ
ಮಂಪರಿನ ಸವಿಸಂಜೆ ಯಾನ…
ಕಂಪೆರೆವ ಹಳೆನೆನಪ ಮನನ…
.
ಆಸರೆಗೆ ತರುಲತೆಗೆ ಮರವು ಇರಬೇಕು..
ಕುಸುಮಕ್ಕೆ ಭ್ರಮರದಾ ಸ್ಪರ್ಶವಿರಬೇಕು…
ನೇಸರನು ತೊಲಗಿದರೆ ಚಂದಿರನು ಬರಬೇಕು..
ಬೇಸರವು ಬಂದಾಗ ನಿನ್ನ ಜೊತೆ ಬೇಕು…
ಮಾಯಕದ # ಕೆಂಡಸಂಪಿಗೆ
. . . . . . ಸಖ್ಯಮೇಧ
ಕ ದಪುಗಳು ಕೆಂಪೇರಿ ನೀ ನಾಚಿ ನಗುವಾಗ
ಕಾ ಲಲ್ಲೇ ನಿಂತಲ್ಲೇ ರಂಗೋಲಿ ಬರೆವಾಗ
ಕಿ ರಿದಾದ ನಗುವೊಂದು ಕಣ್ಣಲ್ಲಿ ಕಂಡಾಗ
ಕೀ ಲಿಕೈ ನೀನಾದೆ ಪ್ರೀತಿ ಬಾಗಿಲಿಗೆ….
ಕು ಶಲತೆಯ ಆ ಮಾತು, ಕೇಳುವಿಕೆಗಿಂಪು..
ಕೂ ತಲ್ಲಿ ನಂತಲ್ಲಿ ನಿನ್ನದೇ ನೆನಪು…!
ಕೆ ತ್ತಿಹೆನು ಎದೆಯಲ್ಲಿ ನಿನ್ನ ಹೆಸರನ್ನು ..
ಕೇ ಳಿಲ್ಲಿ ಒಂದುಕ್ಷಣ ಎದೆಬಡಿತವನ್ನು…
ಕೈ ಗೂಸಿನಂತೆಣಿಸಿ ಪ್ರೀತಿಸುವೆನು…
ಕೊ ರಗು ಕರಗಿಸು,
ಪ್ರೀತಿಸೌಧವನು ನೀ ಕಟ್ಟು
ಕೋ ರಿಕೆಯ ಒಪ್ಪಿ ಬಂದಪ್ಪಿ ಸಂತೈಸು…
ಕೌ ತುಕವ ಬದಿಗಟ್ಟಿ ಪ್ರೀತಿ ಸಾಲವ ನೀಡು
ಕಂತುಕಂತುಗಳಲ್ಲಿ ತೀರಿಸುವೆ-ಮುತ್ತುಗಳ..!!
ಕಹಿಬದುಕ ಸಿಹಿಗೊಳಿಸು, ಬಂದುಬಿಡು ನೀ…
. . . . . . ಸಖ್ಯಮೇಧ
ಬಾಹುಬಂಧನ – ಅದುವೆ – ಭಾವಬಂಧನ!!
ತನುವ ಮಂಥನ-ಮನವು- ನಂದನವನ..!
ಮನದ ಮಿಲನ-ಚಂದ – ಮಂತ್ರಸಮ್ಮೋಹನ..
ನಿನ್ನ ಮನನ- ಹೊಸತು ಭಾವ ಜನನ…!!
. . . . . . ಸಖ್ಯಮೇಧ
ಭಾವಾಮೃತವೇ….,
ಚಂದದಾ ಹಣೆಮೇಲೆ ದುಂಡುಬಿಂದಿಯನಿಟ್ಟು
ಕಣ್ಣಲ್ಲೇ ನೀ ನಾಟ್ಯವಾಡುವಾಗ..
ಮುದ್ದುಕ್ಕಿ ಬಂದಿತ್ತು ಭಾವಬಿಂದಿಗೆ ತುಂಬಿ-
ವಾತ್ಸಲ್ಯದಾ ಪ್ರಸವ – ಮನ ಬೀಗಿದಾಗ..!
.
ಪುಟ್ಟಮೂಗಿನ ಮೇಲೆ
ಪಟ್ಟದಾ ಮೂಗುತಿ..
ಪಟ್ಟಕದ ರೀತಿಯಲಿ ಹೊಳೆಯುವಾಗ..
ತುಟ್ಟಿಯಾಯಿತು ಪ್ರೀತಿ; ಕಣ್ಕಟ್ಟಿತೂ ಬೆಳಕು
ಎದೆತಟ್ಟಿ ಒಲವ ಮನೆ ಕಟ್ಟುವಾಗ…!
.
ಅಡಗಿ ಕುಳಿತಿಹ ಕಿವಿಯ
ಬೆಡಗ ಬಣ್ಣಿಸಲೆಂದು
ಮಡಗಿದಾ ಒಡವೆಯಿದು ಕಿವಿಯೋಲೆ ಕಾಣು..!
ಬಿಡುವು ಆದಾಗೆಲ್ಲ ಕೈಯಿಡುತ ಮುಂಗುರುಳ
ಸಡಿಸುತಲಿ ಕಿವಿ ಮೇಲೆ ಇಡುತಲಿರು ನೀ..!
.
ಮಲ್ಲಿಗೆಯ ಹೊತ್ತು ತಾ ಚೆಲ್ಲಾಟವಾಡುತಿಹ
ಜಡೆಯ ಪಲ್ಲಟ ನಿಮಿಷನಿಮಿಷಕೊಮ್ಮೆ..!
ಗಲ್ಲದಾ ಬೊಟ್ಟಿಗೂ ಇಲ್ಲಿರುವ ಕೂದಲಿಗೂ
ಸಲ್ಲುತಿದೆ ಅಚ್ಚು ಕಲ್ಗಪ್ಪು ಬಣ್ಣ..!
….
ಲಜ್ಜೆಗೆಂಪಿನ ಹಿಮ್ಮಡದ
ಮೇಲ್ಜೋತುಬಿದ್ದಿಹ ಗೆಜ್ಜೆಯು..!
ಮುಚ್ಚುಮರೆಯಲಿ ಹುಚ್ಚು ಹಿಡಿಸಿದೆ
ಇಚ್ಛೆ ಹೆಚ್ಚಿದೆ ಮನದಲಿ..!
.
ಕೆಂಡಸಂಪಿಗೆ …
. . . . . . ಸಖ್ಯಮೇಧ
ಅ ನುದಿನವೂ ಹಳೆ ನೆನಪು
ಆ ಕರ್ಷಣೆಯ ಹೊಳಪು
ಇ ರುಳಲ್ಲೂ ನಿನ್ನ ನೆನೆವ
ಈ ಪರಿಯ ಹೊಸ ಹುರುಪು
ಉ ಸಿರಲ್ಲೂ ನಿನ್ನತನ
ಊ ನವಾಗಿಹುದು ಮನ
ಎ ಲ್ಲಿ ದೂರಾಗಿರುವೆ
ಏ ತಕ್ಕೆ ಅಡಗಿರುವೆ
ಐ ಕ್ಯವಾಗುವ ಬೇಗ ಬಂದುಬಿಡು ನೀ…
ಒ ಮ್ಮೆ ನೀ ಬಾ ಸನಿಹ
ಓ ಡಿಸುತ ಈ ವಿರಹ
ಔ ಪಾಸಿಸಿಹೆ ನಿನ್ನ ಹೆಸರ ಅನವರತ…
ಅಂತರಾತ್ಮವು ನಿನ್ನ ಬರಕಾಯುತಿಹುದು…
ಅಹುದು ಆಗಲಿ ಎಂದು ಬಂದುಬಿಡು ನೀ…
.
ಕೆಂಡಸಂಪಿಗೆ
. . . . . . . . ಸಖ್ಯಮೇಧ
ಒಮ್ಮೆ ಹೂ ಅರಳುವುದ ನೋಡುವಾಸೆ….
ಗೆಳತೀ ….
ನಕ್ಕುಬಿಡು…