ಬೆಲ್ಲಮೆಲ್ಲುವ ಸಿಹಿಯ ಓದುಗನಿಗೀದು!
ಮೆಲ್ಲನುಲ್ಲಾಸದಲಿ ಬರೆದೆಲ್ಲ ಸಾಲುಗಳು
ಸಲ್ಲುತಲಿ ಬಲ್ಲವರ ಮನಗೆಲ್ಲುವಂತೆ!
.
. . . . ಕವನತನಯ ಸಖ್ಯಮೇಧ
ಇದು ಭಾವಾಲಾಪಗಳ ಸುರಿಮಳೆ
ಘನಘನಿತ ಮೇಘ ಘೀಳಿಡುವ ಮಲೆಘಟ್ಟ
ಖಗಮೃಗಗಳ್ನಗುವಾಗ ಮುಗುಳಾಗೊ ಗಿರಿಬೆಟ್ಟ
ಕಲಕಲನೆ ಜಲಸೆಲೆಯು ಮೆಲುಹರಿವ ತಾಣ
ತರುಸಿರಿಯು ಮೆರೆವ ಕಿರಿದಿರುಳ ಹಿರಿದಾಣ
ಅವಳಿ ಕನ್ನಡಿ ಅವಳ ಕಣ್ಣ ಜೋಡಿ
ಜವಳಿಯಂಗಡಿ ಅವಳು ನಿಂತರೇ ಮೋಡಿ
ಕವಳಗೆಂಪು ತುಟಿ ಅವಳುಲಿಯುವಳು ಮನಮೀಟಿ
ಬಹಳ ನುಲಿವ ಕಟಿ, ಅವಳಿಗವಳೇ ಸರಿಸಾಟಿ
ಕೆಂಡಸಂಪಿಗೆ
. . . . . . ಕವನತನಯ ಸಖ್ಯಮೇಧ
ಹಿಮಧಾರೆ ಹರಿಹರಿದು ಧರೆಪೂರ ಬಿಳಿಸೀರೆ
ರವಿರಾಯ ಗಿರಿಯೇರಿ ನಗೆಬೀರಿ ಮನಸೂರೆ
ಥಳಥಳನೆ ಹೊಳೆಯುತಿದೆ ಬಿಳಿಶಿಖರ ಬಿಸಿಲಿಗೆ
ತಿಳಿಗಾಳಿ ಬಳಿಸುಳಿದು ಕಚಗುಳಿಯು ದೇಹಕೆ
.
. . . . . ಕವನತನಯ ಸಖ್ಯಮೇಧ
ನೋವೊಂದು ನವೆಯಾಗಿ ನವಚಿಂತೆ ಬಲಿತಿರಲು
ನೆವವಿರದೆ ಮನನಾವೆ ನೀರಿನಲಿ ಮಗುಚಿರಲು-
ನವಿರಾಗಿ ಬಳಿಬಂದು “ನಾವಿರಲು ಹೆದರದಿರು”
ಎಂದವರೇ ದೇವರು, ಭುವಿಯಲ್ಲಿ ಸ್ನೇಹಿತರು !
.
ಓ ಸ್ನೇಹಿತ ! ನೀ ನನ್ನ ಹಿತ!
ಜೊತೆಯಲಿರು ಅನವರತ!
ಬಿಳಿಕೆನ್ನೆ, ಗುಳಿಚಿನ್ನೆ, ತಿಳಿನಗೆಯ ಮೊಗವನ್ನೆ-
ಬಳಿನಿಂತು ಗಿಳಿಯಂತೆ ನೋಡುತಿಹೆ ನಿನ್ನೇ!
ಇಳಿಬಿದ್ದ ಸುಳಿಗೂದಲೊಡತಿ, ಓ ಗೆಳತಿ!
ಚಳಿಗಾಳಿ ಸೆಳೆಯುತಿದೆ ಬೆಚ್ಚಗಾಗಿಸು ಬಾ!
.
ಕುಳಿತು ಕಳೆಯುವ ಸಮಯ ಕೆಲ ಘಳಿಗೆ ಕಾಲ-
ಅಳಿದ ಹಳೆನೆನಪುಗಳ ಮರುಕಳಿಸುವಾ ಬಾ
ತುಳಿದ ಎಳೆಹುಲ್ಲುಗಳ ಮೇಲಾಟವಾಡುವ ಬಾರೆ
ಮಳೆ ಬಿದ್ದು ಹೊಳೆಯುತಿಹ ಇಳೆಯಂತ
ನೀರೆ…
ಕೆಂಡಸಂಪಿಗೆ
. . . . . . . . ಕವನತನಯ ಸಖ್ಯಮೇಧ