ಒಲವು…

ಕಣ್ಣ ಕಾಡಿಗೆ ಎನಿತು ಕಾಡಿದೆ!
ನನ್ನೊಳಾಸೆಯ ಸೇಚನ
ಕಂಡ ಕನಸಲು ಅವಳ ಹಾಡಿದೆ
ಅಷ್ಟು ಸೆಳೆಯುವ ಲೋಚನ

ಹೊನ್ನ ಬಣ್ಣದ ಪಸುಳೆವಿಸಿಲಲಿ
ಮಿಂದು ಮಿಂಚಿದ ಭೂರಮೆ
ಚೆನ್ನೆ ಆಕೆಯ ಕೆನ್ನೆಯೂ ಸಹ
ಚಿನ್ನ, ಆಕೆ ಮನೋರಮೆ!

ಬಿದಿಗೆ ಚಂದಿರನೆದೆಗೆ ಸುಂದರ
ಕನಸ ನಾಟಿದ ಚೂಟಿಯು
ಮನದ ಮಡಿಲೊಳು ಸ್ವಪ್ನ ಮಂದಿರ
ಅಲ್ಲಿ ನಮ್ಮಯ ಭೇಟಿಯು

ಬೆಣ್ಣೆ ಮಾತಲಿ, ಕಣ್ಣ ಹಾಡಲಿ
ಪ್ರೀತಿಯೊಂದೇ ತುಳುಕಿದೆ
ಕಮಲಕೋಮಲ ಕೆನ್ನೆ ಮೇಲ್ಗಡೆ
ಒಂದು ಮುತ್ತಿಡಬೇಕಿದೆ

ಈ ಪೋಸ್ಟ್ ಅನ್ನು ಶೇರ್ ಮಾಡಲು: