ಕೆಂಡಸಂಪಿಗೆ

ತಪ್ತ ನನ್ನನು ತೃಪ್ತನಾಗಿಸು
ಬೀಸು ಒಲವಿನ ಚಾಮರ
ನೊಂದ ಚಾದಗೆ ಬೆಂದ ಕೇದಗೆ
ನಾನು ಕಾದಿಹ ಮಾಮರ

ತುಂಬು ಹೆರಳಿನ ತುಂಗದಲಿ
ಉತ್ತುಂಗಕೇರಿದೆ ಸಂಪಿಗೆ
ತಾಳಲಾರದೆ ತೋಳ ಬಂಧಿಸಿ
ನಲಿವೆ, ಹೂವಿನ ಕಂಪಿಗೆ

ಬಾನ ತಾರಕೆ ಬುವಿಯ ತೀರಕೆ
ಬಂದ ಪರಿಯಲಿ ತೋರಿಕೆ
ನನ್ನ ಚಂದ್ರಿಕೆ, ಒಲವ ಕಾಣಿಕೆ
ನೀಡು, ನನ್ನಯ ಕೋರಿಕೆ

ಬತ್ತದಿಹ ಬತ್ತಳಿಕೆ ನಿನ್ನಾ
ಮುತ್ತಿನಾ ನಿಧಿಯಧರವು
ಮತ್ತೆ ಮತ್ತೆನ್ನದೆಯೆ ಮುತ್ತಿಡು
ತುಂಬದೀ ಹಸಿದುದರವು

ಕವನತನಯ

ಈ ಪೋಸ್ಟ್ ಅನ್ನು ಶೇರ್ ಮಾಡಲು: