ಮದುವೆಯದು ‘ಬಂಧ’ವಲ್ಲ   ಸ್ವಚ್ಛಂದ|| – ಅಮೂಲ್ಯ ಭಾರದ್ವಾಜ್

ಇದು ಲೇಖಕಿ ಅಮೂಲ್ಯ ಭಾರದ್ವಾಜ್ ಅವರ ಅಂಕಣ…

ಪ್ರೀತಿ ಕುರುಡು ಅಂತಾರೆ, ಆದರೆ ಆ ಮುಚ್ಚಿರುವ ಕಣ್ತೆರೆಸಲು ಸೃಷ್ಟಿಯಾಗಿರುವ ಔಷಧಿಯೇ ಮದುವೆ ಎಂಬುದು ತಿಳಿದವರ ನಾಣ್ನುಡಿ. ಮದುವೆಯ ಕುರಿತು ಅನೇಕರು ತಮ್ಮ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಸಾರ್ವತ್ರಿಕ ಅಭಿಮತವಾಗಿ, ಅಷ್ಟೆ ಏಕೆ ಒಂದೊಂದು ಥಿಯರಿಯನ್ನಾಗಿಯೇ ನೀಡಿಬಿಟ್ಟಿದ್ದಾರೆ. ಆದರೆ ಮದುವೆಯ ಅನುಭವವಂತೂ ವ್ಯಕ್ತಿ ನಿರ್ಮಿತ ಅಂತೆಯೆ ವ್ಯಕ್ತಿ ಕಲ್ಪಿತ. ಕೆಲವೊಮ್ಮೆ ಸಾವಿರ ವ್ಯತ್ಯಯಗಳ ನಡುವೆ ‘ಸಾರಿ ಸಾರಿ’ ಹೇಳಿಕೊಂಡು, ಮತ್ತೆ ಕೆಲವೊಮ್ಮೆ ‘ಮೆರ್ರಿ ಗೊ’ ಹಾಡಿಕೊಂಡು ಇನ್ನೊಮ್ಮೆ ಮೈ ಪರಚಿಕೊಂಡು ಮಗದೊಮ್ಮೆ ಮೌನಿಯಾಗಿ, ಹೀಗೆ ಮದುವೆಯೆಂಬ ಈ ಮೂರಕ್ಷರದ ಪದ ಒಬ್ಬ ವ್ಯಕ್ತಿಯ ಅಂತರಾಳವನ್ನು ಪೂರ್ಣವಾಗಿ ಬೆತ್ತಲು ಮಾಡುತ್ತಾ ಮುಂಬಿಡುತ್ತದೆ. ಈ ಪರಿ ಸಾಗುವ ಜೀವನದಲ್ಲಿ ಯಾರೂ ಯಾವ ಭಾವನೆಯಿಂದಲೂ ವಂಚಿತವಾಗದಂತೆ ಕಟ್ಟುನಿಟ್ಟಾಗಿಯೂ ನೋಡಿಕೊಳ್ಳುತ್ತದೆ, ಪರಂತು ವ್ಯಕ್ತಿಯ ಭಾವ-ಭಕುತಿಗಳಿಗೆ ಅನುಗುಣವಾಗಿ.

ಹೀಗೆ ಸಾವಿರ ಸವಾಲುಗಳನ್ನು ಒಡ್ಡುವ ಮದುವೆಯನ್ನು ನೆನೆದರೆ, ಒಮ್ಮೊಮ್ಮೆ ಹೀಗೂ ಅನ್ನಿಸಿ ಬಿಡುತ್ತದೆ. “ನಮ್ಮ ದೇಶದ ಸಂಪ್ರದಾಯದಲ್ಲಿ ಈ ಮೂರಕ್ಷರಕ್ಕೆ ಅದೆಷ್ಟು ಬೆಲೆ? ಅದ್ಯಾಕಪ್ಪ!” ಎಂದು.

ಅದೊಂದು ಜೀವನದ ಪಾಠ ಕಲಿಸುವ ಅತ್ಯೆತ್ತರ ಘಟ್ಟ.

ಹಾಗಾದರೆ ಪರಿಚಯವೆ ಇಲ್ಲದ ಒಬ್ಬ      ವ್ಯಕ್ತಿಯೊಂದಿಗೆ ಹೇಗೆ ನಂಟು ಬೆಳೆದೇ ಸಾಗುತ್ತದೆ?

ಅದೇ ಮದುವೆಯ ಮಾಂತ್ರಿಕತೆ.

ಬೇಸರವೇ ಬಾರದೆ?  ಅದು ಹೇಗೆ? ಏಕೆ?

ಏಕೆ ಎಂಬುದಕ್ಕೆ ಬಲು ಸುಲಭದ ಉತ್ತರವೇ- ಮರೆವು. ಅದು ನಮ್ಮ ನಾಡಿಗೆ ದೈವದತ್ತವಾಗಿ ಒದಗಿರುವ ವರವೆಂದರೆ ತಪ್ಪಾಗದು. ಹೇಳಲು ಸುಲಭವಾದರೂ ಮರೆಯಲು ಬಲು ಕಷ್ಟ. ಆದರೂ, ಒಮ್ಮೆ ನಮ್ಮ ನೆಲದಲ್ಲಿ ಹುಟ್ಟಿ ಗಂಡನಿಂದ ಶೋಷಿತ ಹೆಣ್ಣುಮಗುವನ್ನು ಕೇಳಿ! “ಅಯ್ಯೋ ಹೋಗಲಿ ಬಿಡಿ. ನಮ್ಮ ಯಜಮಾನರು ಹಂಗೆನೆ” ಎನ್ನುವುದು ನಮ್ಮಗಳ ಕಿವಿಗೆ ಬೀಳುವ ಕಟ್ಟಿಟ್ಟ ಉತ್ತರ. ಬರಿಯ ಹೆಣ್ಣೊಬ್ಬಳೆ ಅಲ್ಲ. ಗಂಡನೂ ಅಷ್ಟೆ. ಅದೇನೆ ಇದ್ದರು “ನನ್ನವಳು” ಎಂಬ ಭಾವವನ್ನು ಅವನ ಮನದಿಂದ ಕಿತ್ತೊಗೆಯಲಾರ. ಅಷ್ಟಿಲ್ಲದೆ ಹೇಳುವರೆ? ಗಂಡಹೆಂಡಿರ ಜಗಳ ಉಂಡು ಮಲಗುವ ತನಕವೆಂದು.

ಅದು ಹೌದು. ಇಷ್ಟೆಲ್ಲಾ ಹೇಳಿದ ಮೇಲೆ ಮದುವೆ ಒಂದು ಸುಂದರ ಬಾಂಧವ್ಯವೆಂದಾಯಿತು. ಮತ್ತೆ ಸಮಸ್ಯೆ ಏನು? ಈ ಚರ್ಚೆ ಈಗೇಕೆ? ಹೀಗೆ ಕೇಳಲೇಬೇಕು. ಉತ್ತರವಂತೂ ಅತಿಸೂಕ್ಷ್ಮ.

ಈಗ ಹೆಚ್ಚುತ್ತಿರುವ ಸಂಬಂಧಗಳ ನಡುವಿನ ಬಿರುಕುಗಳು!

ಮದುವೆಯೆಂಬ ಬಾಂಧವ್ಯವನ್ನು ನುಂಗಲಾರದ ತುತ್ತಾಗಿ ಮಾಡಿ ತ್ರಿಶಂಕು ಸ್ಥಿತಿ ತಲುಪುತ್ತಿರುವ ನಮ್ಮಗಳ ಪರಿ. ಹೀಗೇಕೆ ಆಗುತ್ತಿದೆ ಎಂಬುದನ್ನು ನಾವು ಕೂಲಂಕುಷವಾಗಿ ಯೋಚಿಸದ ಹೊರತು ಸುಖವಿಲ್ಲ ಎಂಬುದು ಇಂದಿಗೆ ಜಗತ್ಜಾಹಿರ.    ಹಾಗಾದರೆ ಮದುವೆಯ ಗಂಟುಗಳು ಈಗ ಕಗ್ಗಂಟಾಗಿ ಕಾಣಿಸತೊಡಗುತ್ತಿರುವುದಾದರೂ ಏಕೆ?

ಹೇಳಲು ಸಾಧ್ಯವಿಲ್ಲ. ಏಕೆಂದರೆ ಇಂದಿಗೆ ಮದುವೆ ವ್ಯಕ್ತಿಗತ. ಆದರೂ ಕಾರಣಗಳನ್ನು ಹುಡುಕುತ್ತಾ ಹೋದರೆ, ಮೊದಲು ಎಲ್ಲರೂ ಬೊಟ್ಟು ಮಾಡುವುದು ಯಾರಿಗೂ ಅರಿಯದ ‘ವೆಸ್ಟರ್ನ್ ಕಲ್ಚರ್’ ಎಂದು. ಅದೆಷ್ಟರ ಮಟ್ಟಿಗೆ ದಿಟವೊ. ಇಂಗ್ಲೀಷ್ ಭಾಷೆಯನ್ನು ಅರಿದು ಕುಡಿದರೂ ನೋವಾದರೆ ಮಾತೃಭಾಷೆಯೇ ತೊದಲುವುದು ಎಂದು ನಂಬಿರುವ ಅಮಾಯಕರು ನಾವು.

ಮತ್ತೂ ಮುಂದುವರೆದರೆ ನಮಗೆ ಕಾಣುವುದು, ಹೆಣ್ಣಿನ ಸ್ಥಾನಪಲ್ಲಟ. ಭೇದಿಸಿ ನೋಡಿದವರ ಸಹಜ ಅಭಿಪ್ರಾಯ-  ಹೆಣ್ಣು ಆಗಿನ ಕಾಲದಲ್ಲಿ ಗಂಡ, ಅತ್ತೆ-ಮಾವಂದಿರ ಮಾತು ಕೇಳುತ್ತಿದ್ದಳು ಆದರೆ ಈಗ ಅವಳದೆ ಅವಳಿಗೆ, ಆಗ ಮನೆಯಲ್ಲಿಯೇ ಇರುತ್ತಿದ್ದಳು ಈಗ ಅವಳ ಸಂಪಾದನೆಯೂ ನಡೆಯುತ್ತಿದೆ, ಆಗಿನವರು ಎಲ್ಲವನ್ನು ಸಹಿಸುತ್ತಿದ್ದರು ಈಗಿನವರಿಗೆ ಎಲ್ಲಿಯ ಸಹನೆ?

ಹೀಗೆ ಅವಳ ಮೇಲಿನ ಮಾತಿನ ದಾಳಿ ಮುಂದುವರೆಯುತ್ತಲೆ, ಸ್ತ್ರೀವಾದ, ಸ್ತ್ರೀ ಸ್ವಾತಂತ್ರದ ಮಾತುಗಳಿಗೆ ಬುನಾದಿಯಾಗುತ್ತಿದೆ ಈ ವಿಷಯ. ಇದು ಇಂದಿಗೆ ಗಂಭೀರವಾದ ವಿಷಯವೂ ಹೌದು. ಹಾಗಾದರೆ ಹೆಣ್ಣು ಸಹಿಸಿ ಸುಮ್ಮನಿದ್ದು ಬಿಡುವುದು ಪರಿಹಾರವೆ? ಮತ್ಯಾವ ಇತರೆ ಕಾರಣಗಳಿವೆ?

ಯೋಚಿಸಿ.

ಕಾರಣವಾದರೊ, “……….”. ಅದೆ ಮುಖ್ಯ ಕಾರಣ.

ಹೌದು. ಮದುವೆಯ ಬಂಧ ಮುರಿಯಲು ಯಾರ ತಪ್ಪು-ಒಪ್ಪು ಎನ್ನುವ ಮೊದಲು ನನಗೆ ಜೀವನ ಹೇಗೆ ಬೇಕು ಎಂಬುದರ ಮೇಲೆ ನಿಂತಿರುತ್ತದೆ. ಗಂಡಾಗಲಿ ಹೆಣ್ಣಾಗಲಿ. ಇಬ್ಬರಿಗೂ ಖುಷಿಯಾಗಿರುವುದೆ ಮುಖ್ಯವೆಂದಾದರೆ ಅದಷ್ಟೆ ಮುಖ್ಯವಾಗುತ್ತದೆ. ಬೇರೆಲ್ಲ ಭಾವನೆಗಳು ಅದರಡಿ ತೂರಿಬಿಡುತ್ತದೆ. ಇಬ್ಬರಲ್ಲಿ ಯಾರೊಬ್ಬರ ಮನಸು ವೃಥಾ ಯೋಚಿಸಿದರೆ? ಅಲ್ಲಿಗೆ ಮುಗಿಯಿತು. ಹಾಗಾದರೆ ಕೋಪ ಬಂದರೂ, ಬೇಸರವಾದರೂ ಎಲ್ಲವನ್ನೂ ಸಹಿಸಿ ಸುಮ್ಮನಿರುವುದೆ?

ಖಂಡಿತ ಅಲ್ಲ. ಕೋಪ ಬಂದಾಗ ಸಿಡುಕುವುದು, ಪ್ರೀತಿ ಬಂದಾಗ ಮುದ್ದುಗರೆಯುವುದು, ಎಲ್ಲ ಭಾವನೆಗಳೂ ಮುಖ್ಯವೆ. ಆದರೆ ಇಲ್ಲಿ ನನ್ನ ಮಾತಿನ ಅರ್ಥ – ಆ ಎಲ್ಲ ಭಾವನೆಗಳನ್ನು ಸಹಿಸುವುದೆಂದಲ್ಲ. ಬದಲಾಗಿ ಎಲ್ಲಾ ಭಾವನೆಗಳ ಆಶಯ ಖುಷಿಯಾಗಿರಬೇಕು ಎಂಬುದಾಗಿರಬೇಕು. ಜಗಳದ ಆಶಯ ಜಗಳವಾಡುವುದೆ ಆಗಿಬಿಟ್ಟರೆ, ಆ ಮದುವೆ ಜಗಳದಲ್ಲಿಯೇ ಮುಗಿದುಬಿಡುತ್ತದೆ. ಕೆಲವೊಮ್ಮೆ ಹೀಗೂ ಆಗುವುದುಂಟು. ಒಂದೇ ಭಾವನೆಯ ಅಭ್ಯಾಸ. ಜಗಳವಾಡಿ ಆಡಿ, ಗಂಡ ಅಥವಾ ಹೆಂಡತಿ ಏನೇ ಮಾಡಿದರು ಅದರಲ್ಲಿ ಒಂದು ಕೊಂಕಾಡಿಬಿಡುವ ಅಭ್ಯಾಸ. ಮತ್ತೊಬ್ಬರ ಆಸೆಯ ಅರಿಯದೆ ತಮ್ಮದನ್ನು ಸಾಧಿಸಿಕೊಳ್ಳುವ ನಿರೀಕ್ಷೆಗಳು. ಇಂದು ಪತಿ ಅಥವಾ ಪತ್ನಿಯಿಂದ ನಿರೀಕ್ಷಿಸುವುದು ನಾಳೆ ಮಕ್ಕಳು-ಮೊಮ್ಮಕ್ಕಳಿಂದ. ನಿರೀಕ್ಷೆಗಳು ಹುಸಿಯಾದಂತೆಲ್ಲ ದುಃಖ ಖಚಿತ.  ಹೀಗೆ ಒಂದೇ ಭಾವನೆಯ ಅಭ್ಯಾಸವೂ ಸಲ್ಲದು.

ಹಾಗಾದರೆ ಮತ್ತೇನು ಸಲ್ಲುವುದು?

ಇಲ್ಲಿ ನಮ್ಮ ಹಳೆಯ ಮಾತೊಂದು ಹೇಳಬೇಕು. ಕಲ್ಲನ್ನು ಕೆತ್ತಿದರೆ ಮಾತ್ರ ಶಿಲೆಯಾಗುವುದು. ಈ ಮಾತು ಅಕ್ಷರಶಃ ಸತ್ಯ. Life is a journey towards inner mind. ಕಾಲಕಳೆದಂತೆ, ಮದುವೆಯ ಜೀವನ ನೀಡುವ ಈ ಪರಿ ಭಾವನೆಗಳೆಂಬ ಮಹಾಸಾಗರದ ಅಲೆಗಳನ್ನು ಈಜಿ ಅಂತರಂಗದ ಕಡೆಗೆ ನಡೆಯುವ ದಾರಿಯಲ್ಲಿ ಗಂಡ-ಹೆಂಡಿರು ಜೊತೆಯಾಗಿ ನಿಲ್ಲಬೇಕೆ ವಿನಃ ಭಾವನೆಗಳನ್ನು ಉದ್ವೇಗಿಸುವ ಸಾರಥಿಯಂತಲ್ಲ. ಬಹಿರಂಗದ ಚೆಲುವು ಎಷ್ಟಿದ್ದರೂ ಬದುಕಲು ಅಂತರಂಗವೆ ಮುಖ್ಯವೆಂಬುದು ತಿಳಿದೂ ತಿಳಿಯದಂತಿರುವ ಪ್ರಸ್ತುತ ನುಡಿ. ಅದನ್ನು ಒಪ್ಪುವ ಮನಸ್ಸಿರಬೇಕಷ್ಟೆ.

ಮುಪ್ಪಿಗೆ ಮೌನಕ್ಕಿಂತ ಒಳಿತಿನ ಸಂಗಾತಿ ಮತ್ತೊಂದಿಲ್ಲ ಎಂಬುದು ಬಲ್ಲವರ ಮಾತು. ಆದ್ದರಿಂದ ಮದುವೆ ಒಂದು ಆಧ್ಯಾತ್ಮಿಕ ಪಯಣವೇ ವಿನಃ ಮತ್ತೇನು ಅಲ್ಲ ಎಂಬುದು ಇಂದಿನ ನಾವು ಮನಗಂಡುಬಿಟ್ಟರೆ, ಅದಾವುದೇ ಮಹಾನ್ ಕಾರಣವಿರಲಿ, ಈ ಸಂತೋಷದ ಮುಂದೆ ಕಕ್ಕಾಬಿಕ್ಕಿಯಾಗಿ ನಿಲ್ಲುವುದು.

ಯೌವನಾವಸ್ಥೆಯಲ್ಲಿಯೇ ಈ ಸತ್ಯವನ್ನು ಅರಿತುಕೊಂಡು ಬಿಟ್ಟರೆ, ಪ್ರೌಡಾವಸ್ಥೆಯಲ್ಲಿ ಪ್ರೌಢಿಮೆ ಎದ್ದು ಕಾಣುವುದು. ಮನಃಶಾಂತಿ ತಾನಾಗಿಯೇ ಒಲಿಯುವುದು. ಇಲ್ಲವಾದರೆ ಮದುವೆಯೆಂಬುದು ಮನಸ್ಸಿನ ಸ್ವಾಸ್ಥ್ಯವನ್ನು ಕಸಿದುಬಿಡುತ್ತದೆ.

– ಅಮೂಲ್ಯ ಭಾರದ್ವಾಜ್

ಈ ಪೋಸ್ಟ್ ಅನ್ನು ಶೇರ್ ಮಾಡಲು:

Leave a Reply

Your email address will not be published. Required fields are marked *