ಮುರಳಿ ಗಾನ..

ಮರಳಿ ಮರಳಿ ಮುರಳಿ ಲಹರಿ
ಯಮುನೆ ಕಟಿಯ ತಟಿಯಲಿ!
ಅರಳಿ ಅರಳಿ ಬಿರಿವ ನಗೆಯು
ಚೆಲುವೆ ರಾಧೆ ತುಟಿಯಲಿ!

ಶ್ಯಾಮನೆಂಬ ಪ್ರೇಮಬಿಂಬ
ರಾಧೆಯ ತಿಳಿಗಣ್ಣಲಿ
ಕೊಳಲ ನಾದ ಕೇಳೆ ಮೋದ
ಸನಿಹ ಕುಳಿತ ಹೆಣ್ಣಲಿ

ರಾಗ ವೇಗ ಪಡೆಯುವಾಗ
ಮನದಿ ಜೇನ ಸ್ಫುರಣೆ
ನಾದ ದಾಹ ಶ್ಯಾಮ ಮೋಹ
ತೀರಿದಷ್ಟು ಕಡಿಮೆ

ರಂಗ ನುಡಿದ ಸ್ವರತರಂಗ
ಅಂತರಂಗದಲ್ಲಿ;
ಗುಂಗು ಬಹಳ, ರಂಗು ಸುರಿದ
ಮನದಿ ರಂಗವಲ್ಲಿ

ಈ ಪೋಸ್ಟ್ ಅನ್ನು ಶೇರ್ ಮಾಡಲು: