- ಮುಖಪುಸ್ತಕದ ಸ್ನೇಹಿತ, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ಭಾವಗವಿತೆಗಳ ಸಿಡಿ “ಪ್ರೇಮದ ಶರಧಿಗೆ…” ; ತರಿಸಿ ಇಷ್ಟು ದಿನದ ಮೇಲೆ ಲ್ಯಾಪ್ಟಾಪ್ ಸಿಕ್ಕಿದ್ದರಿಂದ ಹಾಡು ಕೇಳಲು ಸಾಧ್ಯವಾಯಿತು.. ಹಾಗೇ ಕೆಲವು ಕ್ಷಣ ಮೈಮರೆಯಲೂ..
ಕ್ಲಾಸಿಕಲ್ ಆದ, ಭಾವಗೀತೆಗಳನ್ನು ಕೇಳಿ ಖುಷಿಪಡುವವರಿಗೆ ಖಂಡಿತ ಇದು ಹೊಸ ಊಟ ಹಾಕಿದಂತೆ. ರಾಗ ತಾಳಗಳ ಬಗ್ಗೆ ವಿವರಿಸುವ ಬುದ್ಧಿಮತ್ತೆ ನನಗಿಲ್ಲ. ಆದರೆ ಹಾಡುಗಾರರು ಕವಿತೆಯ ಭಾವವನ್ನು ಕಟ್ಟಿಕೊಡುವಲ್ಲಿ ಸಫಲರಾಗಿದ್ದು ನಿಜ. ನನಗೆ ‘ಪ್ರೇಮದ ಶರಧಿಗೆ’ ಹಾಗೂ ‘ಯಾವ ರಾಗ ಬೆರೆಸಲಿ’ ‘ಹೆಜ್ಜೆ ಗುರುತು’ ಹಾಡುಗಳು ತುಂಬಾ ಇಷ್ಟವಾದವು… ಮಾತಿನ ಅರಮನೆ ಹಾಗೂ ಆಡು ಬಾ ಕಾಡು ಬಾ ಹಾಡುಗಳಲ್ಲಿ ಕೂಡ ಒಂಥರಾ ಸೆಳೆತವಿದೆ.
ಇನ್ನೂ ಅವರ ಪುಸ್ತಕವನ್ನು ಓದುವುದು ಬಾಕಿಯಿದೆ.. ಸಾಹಿತ್ಯ ಓದದೇ ಸಂಗೀತ ಸರಿಯಾಗಿ ಅರ್ಥವಾಗಲಿಕ್ಕಿಲ್ಲ.. ಯಾಕೆಂದರೆ ನಾನು ಓದಿದ ಕೆಲವೇ ಕವಿತೆಗಳಿಂದಲೇ ರವೀಂದ್ರ ಅವರ ಕವಿತಾಶಕ್ತಿ ಬಹಳ ಎಂದು ಅರ್ಥವಾಗಿದೆ. ಜೊತೆಗೆ ನನಗೆ ಒಳ್ಳೆಯ ಸಂಗೀತವನ್ನು ಕೇಳಿ ತಲೆದೂಗುವುದು ಗೊತ್ತು, ಅದನ್ನು ವಿಮರ್ಶಿಸಲು ಗೊತ್ತಿಲ್ಲ. ಒಟ್ಟಿನಲ್ಲಿ ಒಂದಿಷ್ಟು ಹೊಸ ಭಾವಗೀತೆಗಳು ಈಗ ನನ್ನ ಪ್ಲೇಲಿಸ್ಟ್ ಸೇರಿವೆ. ಅದಕ್ಕಾಗಿ ರವೀಂದ್ರರಿಗೆ ಧನ್ಯವಾದಗಳು..