ಸೀತವ್ವ ಬಸುರಿ….!!

ಪ್ರತಿಮಂದಿ ಊರಲ್ಲಿ ಆಡಿಕೊಂಬರು
ಸಂಜೆ-
ಕೆಳಮನೆಯ ಸೀತವ್ವ ಎಂಬುವಳು ಬಂಜೆ!
ಹರಕೆ, ಹಾರೈಕೆಗಳಿಗಾಗಿಲ್ಲ ಕೂಸು,
ಆಲೈಸುವವರಾರು ಅವಳೊಡಲ ತ್ರಾಸು?!
.
ಆ ದಿನದ ಸುದ್ದಿಯದು-ಸೀತವ್ವ ಬಸುರಿ!
ಊರೊಳಗೆ ಹರಡಿತ್ತು, ಪ್ರತಿ ಕಿವಿಯಲುಸುರಿ!
ಅವರ ಲೆಕ್ಕದಲೀಗ ಕಣ್ದೆರೆದ ದೇವರು!
ಸೀತವ್ವ ನೆಲದ ಮೇಲಿಲ್ಲವೆಂದೆಂಬರು!
.
ಸೀತವ್ವನಿಗೆ ಹಿಗ್ಗು; ಬೆಳೆವ ಹೊಟ್ಟೆಯ
ಕಂಡು!
ಅವಳ ಸೇವೆಗೆ ಈಗ ಊರ ಜನರಾ ಹಿಂಡು!
ಸಿಹಿ ಹುಣಿಸೆ, ಹುಳಿ ಮಾವು, ವಿವಿಧ ಸಿಹಿತಿನಿಸು..
ಅವಳ ಹೊಟ್ಟೆಯಲಿರುವ ಮಗುವಿನದೇ ಕನಸು..
.
ಸೀಮಂತ ಬಂತು ಬಿಡಿ, ಊರಿಗೇ ಪಾಯಸ!
ಆ ಸೊಬಗ ನೋಡುವುದೇ ಕಣ್ಣುಗಳ ಕೆಲಸ!
ಆರತಿಯು ಸಾಕು ಬಿಡಿ, ಉಷ್ಣವಾದೀತು!
ಕಲಶಜಲ ಸೋಕದಿರಿ, ಥಂಡಿಯಾದೀತು!
.
ಸೀತವ್ವ ನಡೆವುದು ಬೇಡ, ಸುಸ್ತು ಬಡಿವುದು ಕೂಸು!
ತುಂಬು ಬಸುರಿಯು ಅವಳು, ಬೇಗ ಕಂಬಳಿ ಹಾಸು!
ಹತ್ತು ವರ್ಷದ ಹರಕೆ ಕೈಗೂಡುತಿದೆ ಈಗ,
ಒಳಗಿಂದ ಗಂಡುಮಗು ಹೊರಗೆ ಬರಲೀ
ಬೇಗ!
.
ಹೋಳಿಗೆಗೆ ಹದ ಹಾಕಿ, ಸೀತವ್ವನಿಗೆ ಬೇನೆ!
ಹೊಸಜೀವದಾಸೆಯಲಿ ನಗುತಿಹುದು ‘ಕೆಳಮನೆ’!
ಸುದ್ದಿ ತಂದರು ಯಾರೋ- “ಒಳಗೆಲ್ಲ ನೀರಂತೆ!”
“ಗರ್ಭ ತುಂಬಿದ ನೀರು ಹರಿದು ಹೋಯ್ತಂತೆ!”
. . . . ಕವನತನಯ ಸಖ್ಯಮೇಧ

ಈ ಪೋಸ್ಟ್ ಅನ್ನು ಶೇರ್ ಮಾಡಲು:

Leave a Reply

Your email address will not be published. Required fields are marked *