ಕಥೆ…

ನಿರಂಕಲ್ ರಸ್ತೆಗೆ ಡಾಂಬರು ಹಾಕೋ ಕೆಲಸ ಮೊನ್ನೆಮೊನ್ನೆ ಅಷ್ಟೇ ಮುಗಿದಿದೆ. ಕಪ್ಪು ಬಣ್ಣದ ತಗಡಿನ ಡಾಂಬರು ಡಬ್ಬಿಗಳು ಅಲ್ಲಲ್ಲಿ ರಸ್ತೆ ಬದಿ ಬಿದ್ದಿವೆ. ಹೊಸ ರಸ್ತೆಯ ಅಚ್ಚಗಪ್ಪು ಬಣ್ಣ ತನ್ನ ಹೊಸತನದ ಘಮಲಿನೊಡನೆ ದಾರಿಹೋಕರ ಮನಸೆಳೆಯುತ್ತೆ. ದಟ್ಟಗಾಡಿನಲ್ಲಿ ತುಂಬಾ ತಿರುವುಮುರುವು ಏರಿಳಿತಗಳಿಂದ ಕೂಡಿದ ರಸ್ತೆಯಲ್ಲಿ ಐವತ್ತರ ಮೇಲೆ ಬೈಕ್ ಓಡಿಸಲು ಸಾಧ್ಯವೇ ಇಲ್ಲ. ಅದೂ ಕೂಡಾ ಜಬರ್ದಸ್ತಾದ ಕೆಲವು ತಿರುವುಗಳಲ್ಲಿ ಬಹುತೇಕ ಬೈಕ್ ನಿಲ್ಲುವ ಹಂತಕ್ಕೆ ತಲುಪಬೇಕು. ಇಲ್ಲದೇ ಹೋದರೆ ಬೈಕು ರಸ್ತೆ ಬಿಟ್ಟು ಗುಂಡಿ ಹಾರುವುದೋ ಏರಿಗೆ ಗುದ್ದುವುದೋ ಏನಾದರೊಂದು ಆಗುವುದು ಖಚಿತ. ಕೇರಿ ದೇವಸ್ಥಾನದ ಭಟ್ಟರ ಮಗ ವಾರದ ಹಿಂದೆ ಜೋರಾಗಿ ಬೈಕ್ ಓಡಿಸಿ ಬೀರಪ್ಪನ ಹಳ್ಳದ ಹತ್ತಿರದ ತಿರುವಿನಲ್ಲಿ ಗುಂಡಿಗೆ ಬಿದ್ದು ಕೈ ಮುರಿದಿದ್ದೂ ಎಲ್ಲರಿಗೂ ಗೊತ್ತಿದ್ದದ್ದೇ.
ನಿರಂಕಲ್ಲಿಗೆ ಹೋಗುವ ಈ ಹತ್ತು ಕಿಲೋಮೀಟರ್ ದಾರಿ ಹಗಲಲ್ಲೇ ಸ್ವಲ್ಪ ಭಯಾನಕವಾಗಿದ್ದು ಮೇಲಾಗಿ ಆ ಬೆಟ್ಟದ ಘೋರ ಕಥೆಗಳೊಂದಿಷ್ಟು ಜನಮಾನಸದಲ್ಲಿ ಹಬ್ಬಿ ಜನ ಇನ್ನಷ್ಟು ಹೆದರುತ್ತಿದ್ದರು. ಅಂತಾದ್ದರಲ್ಲಿ ರಾತ್ರಿ ಹೊತ್ತಲ್ಲಿ ಒಂಟಿಯಾಗಿ ಅಲ್ಲಿ ನಡೆದು ಹೋಗ್ತಿರೋ ಗೋಪಣ್ಣನ ಧೈರ್ಯ ಮೆಚ್ಚಲೇ ಬೇಕು.

ನಿರಂಕಲ್ ಊರು ತುಂಬಾ ವಿಶಾಲವಾದದ್ದೇ. ಆದರೆ ಜನನಿಬಿಡತೆ ಕಮ್ಮಿ. ದೂರದೂರದ ಮನೆಗಳು ಮತ್ತು ಎಲ್ಲೆಡೆ ಬೆಸೆದಿರುವ ಹೆಗ್ಗಾಡು ಆ ಊರಿಗೆ ಬರುವವರಿಗೆ ಪುರಾತನ ಕಾಲಕ್ಕೆ ಬಂದ ಅನುಭವ ನೀಡುತ್ತಿತ್ತು. ಹಗಲಲ್ಲೂ ಹೆದರಿಕೆ ಹುಟ್ಟುವಂತಿದ್ದ ಆ ಊರಿನ ಹೊರವಲಯದ ಒಂಟಿರಸ್ತೆಯಲ್ಲಿ ಗೋಪಣ್ಣ ನಡೆದು ಹೋಗುತ್ತಿದ್ದುದರ ಹಿಂದೆ ಇದ್ದ ಕಾರಣವೂ ಅಲಕ್ಷಿಸುವಂಥದ್ದೇನಾಗಿರಲಿಲ್ಲ…

ನಿರಂಕಲ್ ಎಂಬ ಕುಗ್ರಾಮದಲ್ಲಿ ಹುಟ್ಟಿಯೂ ಚುರುಕಾಗಿ ಕಲಿತು ಈಗ ಪೇಟೆಯಲ್ಲಿ ಜರ್ನಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾನೆ ಶರತ್. ನೀಳದೇಹ, ಉದ್ದಮುಖ, ಉದ್ದ ಕೂದಲು ಶರತ್ ಒಬ್ಬ ಇಚ್ಛಾನುಸಾರಿ ಎಂಬುದನ್ನು ಹೇಳುತ್ತಿದ್ದವು. ಅಂದುಕೊಂಡಿದ್ದನ್ನು ಮಾಡುವ ಬಯಕೆಯೇ ಅವನಲ್ಲಿ ಛಲವನ್ನೂ ತಂದಿತ್ತು.

ನಿರಂಕಲ್ಲಿನ ನಾಗಸರದ ಬಗ್ಗೆ ಮಾಹಿತಿ ಕಲೆಹಾಕಿದ್ದ ಶರತ ಅದರ ರಿಪೋರ್ಟ್ ಕೂಡಾ ತಾನೇ ತಯಾರಿಸಬೇಕೆಂದು ಅವತ್ತು ಏಳರವರೆಗೂ ಆಫೀಸಿನಲ್ಲೇ ಕುಳಿತು ಕೆಲಸ ಮುಗಿಸಿ ಹೊರಬರುವಾಗ ಶ್ರೀಕೃಷ್ಣ ಬೇಕರಿ ಹತ್ತಿರದ ಗೂಡಂಗಡಿಯಿಂದ ಗೋಳಿ ಭಜೆ ಘಮ್… ಎಂದು ಪರಿಮಳದಲ್ಲೇ ಕರೆದಾಗ ಶರತನ ಹೊಟ್ಟೆ ಕೂಡಾ ಚುರುಗುಟ್ಟಿತು. ಇನ್ನು ಗೂಡಂಗಡಿಯ ಅಜ್ಜಿಗೆ ಎರಡು ನೋಟು ಕೊಟ್ಟು ಹೊರಬೀಳುವಾಗ ಏಳೂಮುಕ್ಕಾಲು. ಬಸ್ಟ್ಯಾಂಡಿಗೆ ನಿಧಾನಕ್ಕೆ ನಡೆದು ಬಂದು ತಲುಪುವಾಗ ಹತ್ತಿರ ಹತ್ತಿರ ಎಂಟೂವರೆ. ನಿರಂಕಲ್ ಸ್ಟಾಪಿನಲ್ಲಿ ಬಸ್ಸಿಳಿದಾಗ ಒಂಭತ್ತಾಯಿತು. ಅಷ್ಟೊತ್ತಿಗೆ ಸಹೋದ್ಯೋಗಿ ನವೀನ್ ಫೋನ್ ಮಾಡಿ ಲೋಕಲ್ ರಾಜಕಾರಣಿ ಒಬ್ಬನ ಕುರಿತು ಮಾಹಿತಿ ಕಲೆಹಾಕೋ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯಿತು. ಅಂತೂ ಗೋಪಣ್ಣನ ದುರದೃಷ್ಟ ಎಂಬಂತೆ ಸರಿಯಾಗಿ ಹತ್ತು ಗಂಟೆ ಸಮಯಕ್ಕೆ ಶರತನೂ ಅದೇ ರಸ್ತೆಯಲ್ಲಿ ನಡೆದು ಬರುತ್ತಿದ್ದ. ರಸ್ತೆ ಕಾಣುವಷ್ಟು ಬೆಳದಿಂಗಳಿತ್ತಲ್ಲದೇ, ತಲೆತುಂಬಾ ಯೋಚನೆಗಳನ್ನೇ ತುಂಬಿಕೊಂಡಿದ್ದ ಶರತನಿಗೆ ಮೊಬೈಲ್ ಟಾರ್ಚ್ ಆನ್ ಮಾಡಬೇಕು ಅನ್ನಿಸಲಿಲ್ಲ.

ದಿಢೀರನೇ ಶರತನ ನಡಿಗೆ ಚುರುಕಾಗಿ ಅಲ್ಲೇ ಪಕ್ಕದ ಮತ್ತಿ ಮರವೊಂದರ ಹಿಂಬದಿ ತೂರಿಕೊಂಡನು. ಕತ್ತಲೆಗೆ ಹೊಂದಿಕೊಂಡ ಕಣ್ಣುಗಳಿಗೆ ತನ್ನ ಸುತ್ತಲಿನ ವಸ್ತುಗಳು ಬೆಳದಿಂಗಳಲ್ಲೇ ಸ್ಪಷ್ಟವಾಗಿ ಕಾಣುತ್ತಿದ್ದವು. ಯಾರೂ ಇರಲ್ಲ ಅನ್ನೋ ಧೈರ್ಯದ ಮೇಲೆ ಗೋಪಣ್ಣ ಹತ್ತಿಸಿದ್ದ ಎಲ್.ಇ.ಡಿ. ಟಾರ್ಚ್ ನ ಬೆಳಕು ದೂರದಿಂದ ಕಂಡ ಕ್ಷಣವೇ ಶರತನ ಚುರುಕುಮತಿ ಜಾಗೃತಗೊಂಡಿತ್ತು. ಈ ಹೊತ್ತಿನಲ್ಲಿ ಈ ರಸ್ತೆಯಲ್ಲಿ ಯಾರೋ ನಡೆದು ಹೋಗುವುದು ಅನುಮಾನಾಸ್ಪದವಾಗಿ ಕಂಡಿತು ಶರತನಿಗೆ.

ಸುಮಾರು ಐವತ್ತು ಮೀಟರ್ ಹತ್ತಿರಕ್ಕೆ ಗೋಪಣ್ಣ ಬರುವ ಹೊತ್ತಿಗೆ ಶರತನಿಗೆ ಇದು ಗೋಪಣ್ಣನೇ ಎಂಬುದು ಖಚಿತವಾಗಿತ್ತು. ಅವನ ನಡಿಗೆ ನೋಡಿಯೇ ಅವ ಗೋಪಣ್ಣ ಎಂದು ಗುರುತು ಹಿಡಿಯಬಹುದಿತ್ತು.

ಊರವರ ಪಾಲಿಗೆ ಗೋಪಣ್ಣ ತೀರಾ ಕ್ಷುದ್ರ ವ್ಯಕ್ತಿಯಂತಿದ್ದು ಪೂರ್ತಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ. ಆದರೆ ಅವನ ಇತಿಹಾಸವನ್ನೊಮ್ಮೆ ಗಮನಿಸಿದರೆ ಹಲವಾರು ಪ್ರಶ್ನೆಗಳು ಮೂಡದೇ ಇರುತ್ತಿರಲಿಲ್ಲ. ಕೆಲವೊಮ್ಮೆ ತೀರಾ ಹತಾಶೆಗೊಳ್ಳುವ ಗೋಪಣ್ಣ ಕೆಲವೊಮ್ಮೆ ಊರ ಮಕ್ಕಳಿಗೆಲ್ಲ ಸಿಹಿ ಹಂಚುತ್ತಿದ್ದ.( ತಂದೆ ತಾಯಿಯರ ಮೂಲಕ ಗೋಪಣ್ಣನ ಕುರಿತು ಅನೇಕಾನೇಕ ಸುದ್ದಿ ಕೇಳಿ ಹೆದರಿದ್ದ ಮಕ್ಕಳು ತಿಂಡಿ ಮೇಲಿನ ಆಸೆಯನ್ನೂ ಹತ್ತಿಕ್ಕಿ ಅದನ್ನು ತಿನ್ನದೇ ಎಸೆಯುತ್ತಿದ್ದುದು ಗೋಪಣ್ಣನಿಗೆ ಗೊತ್ತಿರಲಿಲ್ಲ.) ಊರಿನ ವಿದ್ಯಾವಂತ ಮಕ್ಕಳು ಹೆಸರೂ ಕೇಳಿರದ ಹೊಸದೊಂದು ದುಬಾರಿ ಮೊಬೈಲ್ ಕೊಂಡು ತಂದಿದ್ದ ಗೋಪಣ್ಣ ಒಂದೇ ತಿಂಗಳೊಳಗೆ ಅದನ್ನು ಮಾರಿದ್ದಲ್ಲದೇ ಒಂದು ಸಂಜೆ ಲಜ್ಜೆ ಬಿಟ್ಟು ಪಕ್ಕದ ಮನೆಗೆ ಒಂದು ಸೇರು ಅಕ್ಕಿಯನ್ನು ಕಡವಾಗಿ ಬೇಡಲು ಹೋಗಿದ್ದ. ಒಟ್ಟಿನಲ್ಲಿ ಅರ್ಥವಿರದ ಅವನ ನಡೆಯಿಂದ ಜನರ ಗಮನಪರಿಧಿಯಿಂದ ಆತ ದೂರ ಸರಿಯುತ್ತಿದ್ದ ಎಂಬುದು ಎಷ್ಟು ಸತ್ಯವೋ ಒಮ್ಮೆಲೆ ಹಣ ಮಾಡುವ ಆಸೆಗೆ ಆತ ಇದ್ದಬಿದ್ದ ಕಳ್ಳದಂಧೆಗೆಲ್ಲಾ ಕೈ ಹಾಕಿದ್ದೂ ಅಷ್ಟೇ ಸತ್ಯ.

ಗೋಪಣ್ಣ ಈ ರಾತ್ರಿಯಲ್ಲಿ ಒಂಟಿಯಾಗಿ ಹೋಗುತ್ತಿದ್ದರೆ ಏನೋ ಗಹನ ಕಾರಣ ಇರಬೇಕೆಂದು ನಿಶ್ಚಯಿಸಿದ ಶರತನ ಬುದ್ಧಿ ಅದನ್ನು ಕಂಡುಹಿಡಿಯಬೇಕೆಂದು ಹಂಬಲಿಸಿತು. ಆ ರಾತ್ರಿಯಲ್ಲಿ ರಸ್ತೆಯಲ್ಲಿ ಒಂದು ಕಿಲೋಮೀಟರ್ ವರೆಗೂ ಗೋಪಣ್ಣನನ್ನು ದೂರದಿಂದ ಹಿಂಬಾಲಿಸಿದ ಶರತ ಆತ ಒಂದೆಡೆ ಕಾಡು ಹೊಕ್ಕ ಕೂಡಲೇ ಇನ್ನಷ್ಟು ಹತ್ತಿರದಿಂದ ಹಿಂಬಾಲಿಸಿದ .

ಬೆಟ್ಟದೊಳಗೆ ರಸ್ತೆಯಷ್ಟು ಚೆನ್ನಾಗಿ ಬೆಳದಿಂಗಳು ಬೀರುತ್ತಿರಲಿಲ್ಲ. ಜೊತೆಗೆ ಕಲ್ಲು ಮುಳ್ಳು ಮರಗಳ ದೊಡ್ಡ ದೊಡ್ಡ ಬೇರುಗಳು ಮುಂತಾದ ಹತ್ತಾರು ಅಡಚಣೆಗಳು. ಟಾರ್ಚ್ ಬೆಳಕಿನಲ್ಲಿ ಸಾಕಷ್ಟು ವೇಗವಾಗಿ ಸಾಗುತ್ತಿದ್ದ ಗೋಪಣ್ಣನ ಹಿಂದೆ ತಕ್ಕಷ್ಟು ಪ್ರಯಾಸದಿಂದಲೇ ಶರತ ಸಾಗುತ್ತಿದ್ದ. ಗೋಪಣ್ಣನಿಗೆ ಕೇಳುವಷ್ಟು ದೊಡ್ಡದಾಗಿ ಶಬ್ಧ ಮಾಡದೇ ನಡೆಯುವ ಅನಿವಾರ್ಯತೆ ಕೂಡ ಅವನಿಗಿತ್ತು.

ತನ್ನ ಮೊಬೈಲಲ್ಲಿ ಗೂಗಲ್ ನಕ್ಷೆ ತೆಗೆದು ನೋಡಿದ ಶರತನಿಗೆ ಈಗ ಗೋಪಣ್ಣ ಮತ್ತು ತಾನು ನಾಗಸರಕ್ಕೆ ಸಮೀಪಿಸುತ್ತಿರುವುದು ಗೊತ್ತಾಯಿತು. ಆ ಕಾಡಿನಲ್ಲಿ ಹರಿಯುತ್ತಿರುವ ಹಳ್ಳವೊಂದರ ಪಕ್ಕ ಪುಟ್ಟದಾಗಿ ಶಿವನ ಗುಡಿ ಕಟ್ಟಿದ್ದರು. ಅಮಾವಾಸ್ಯೆಗೆ ಒಮ್ಮೆ ಪೂಜೆಗೆ ಬಿಟ್ಟರೆ ಅಲ್ಲಿ ಇನ್ಯಾರೂ ಬರುತ್ತಿರಲಿಲ್ಲ. ಹರಿಯುವ ಹಳ್ಳ ಅಲ್ಲಿ ಸೃಷ್ಟಿಸಿದ್ದ ಪುಟ್ಟ ಜಲಪಾತವೊಂದು ಸೃಜಿಸಿದ ಗುಂಡಿಯಲ್ಲಿ ಕೆಲವೊಮ್ಮೆ ಇದ್ದಕ್ಕಿದ್ದಂತೆ ನೂರಾರು ಹಾವುಗಳು ಕಾಣಿಸಿಕೊಳ್ಳುವ ಭೀಕರ ದೃಶ್ಯವನ್ನು ಬಹುತೇಕ ಜನರು ಕಂಡಿದ್ದರು. ಆ ಗುಂಡಿಯ ಆಳದಲ್ಲಿ ನಾಗಲೋಕ ಇದೆ ಅಂತಲೂ, ಅಲ್ಲಿರುವ ಸಾವಿರಾರು ವಜ್ರಗಳನ್ನು ಹಾವುಗಳು ಕಾಪಾಡುತ್ತವೆ ಅಂತಲೂ ಮೂಢಜನ ನಂಬಿದ್ದರು. ಈ ಕಾರಣಕ್ಕೇ ನಿರಂಕಲ್ ಊರಿನ ಕಾಡು ಇನ್ನಷ್ಟು ಖ್ಯಾತವಾದದ್ದು.

ಗುಂಡಿಯ ಸಮೀಪ ಬಂದ ಗೋಪಣ್ಣ ತಾನು ತಂದಿದ್ದ ಒಂದು ಡಬ್ಬಿಯಿಂದ ಕೆಟ್ಟ ವಾಸನೆ ಬರುತ್ತಿದ್ದ ಏನನ್ನೋ ತೆಗೆದು ಗುಂಡಿಯಲ್ಲಿ ಹಾಕಿದ. ಅದೆಲ್ಲಿದ್ದವೋ, ನೂರಾರು ಹಾವುಗಳು ನೀರಮೇಲೆ ಬಂದು ಆತ ಹಾಕಿದ್ದನ್ನು ಕೆಲವೇ ನಿಮಿಷಗಳಲ್ಲಿ ತಿಂದು ಮುಗಿಸಿದವು. ಇದೆಲ್ಲಾ ಶರತನ ಮೊಬೈಲ್ ನಲ್ಲಿ ರೆಕಾರ್ಡ್ ಆಗುತ್ತಿತ್ತು. ಅಷ್ಟಾದಮೇಲೆ ಬಂದ ದಾರಿಯಲ್ಲಿ ಗೋಪಣ್ಣ ಹಿಂದಿರುಗಿದ. ಅವನಿಂದ ಕೊಂಚ ದೂರದಲ್ಲಿ ನಡೆಯುತ್ತ ಶರತನೂ ಮನೆ ಸೇರಿಕೊಂಡ.

ಮರುದಿನ ಗೋಪಣ್ಣನ ಮನೆಯ ಬಳಿ ಅತ್ತ ಇತ್ತ ಓಡಾಡುತ್ತಿದ್ದ ಶರತ ಗೋಪಣ್ಣ ಮನೆಯಿಂದ ಹೊರಬೀಳುವನೇ ಎಂದು ನಿಗಾವಹಿಸಿದ್ದ. ಸಂಜೆ ಐದರ ಸುಮಾರಿಗೆ ಗೋಪಣ್ಣ ಜೋಳಿಗೆಯಂತಹ ಒಂದೆರಡು ಕೈಚೀಲ ಹಿಡಿದುಕೊಂಡು ಹೊರಬಿದ್ದಾಗ ಅವನನ್ನು ಮತ್ತೆ ಹಿಂಬಾಲಿಸಿದ .
ನಾಗಸರ ತಲುಪುವ ಹೊತ್ತಿಗೆ ಗುಂಡಿಯಲ್ಲಿದ್ದ ಹಾವುಗಳೆಲ್ಲಾ ಸತ್ತುಬಿದ್ದಿದ್ದವು. ಬಟ್ಟೆ ಬಿಚ್ಚಿಟ್ಟು ನಿಧಾನಕ್ಕೆ ನೀರಿಗಿಳಿದ ಗೋಪಣ್ಣ. ಆ ಆಳದ ಗುಂಡಿಯಲ್ಲೂ ಅಷ್ಟು ನಿರಾಯಾಸವಾಗಿ ಒಂದೆಡೆ ಈಜಿ ತಲುಪಿದ ಅವನಿಗೆ ಆ ಗುಂಡಿ ಬಹಳ ಪರಿಚಿತ ಅನ್ನೋದು ನೋಡಿದರೇ ತಿಳಿಯುತ್ತಿತ್ತು. ಕೈಲಿದ್ದ ಪುಟ್ಟ ಚೀಲವೊಂದರಿಂದ ಒಂದು ಕಲ್ಲಿನ ಮೂರ್ತಿ, ಹೊಳೆಯುತ್ತಿದ್ದ ವಜ್ರದಂತಿದ್ದ ವಸ್ತುಗಳನ್ನು ತೆಗೆದು ನೀರಿನೊಳಗೆ ಅಡಗಿಸಿಟ್ಟ ಗೋಪಣ್ಣ ವಾಪಸ್ಸು ಬಂದ ಮೇಲೆ ಉದ್ದ ಕೋಲೊಂದನ್ನು ಬಳಸಿ ಸತ್ತ ಹಾವುಗಳನ್ನೆಲೆಯ ಎಳೆದುಹಾಕಿ ನೀರಿನಲ್ಲಿ ಹರಿದು ಹೋಗುವಂತೆ ಮಾಡಿದ. ನಂತರ ಮೇಲೆ ಬಂದು, ಇರುವುದರಲ್ಲೇ ದೊಡ್ಡ ಚೀಲದ ಗಂಟು ಬಿಚ್ಚಿ ನೀರಿನಲ್ಲಿ ಸುರುವಿದ. ಅದರಲ್ಲಿದ್ದ ನೂರಾರು ಜೀವಂತ ಹಾವಿನ ಮರಿಗಳು ಮತ್ತೆ ಗುಂಡಿ ಸೇರಿಕೊಂಡವು.

ಇವೆಲ್ಲವನ್ನೂ ಶರತನ ಕೈಲಿದ್ದ ಕ್ಯಾಮೆರಾ ಹಿಡಿದಿಡುತ್ತಿತ್ತು.

ಮರುದಿನ ಬೆಳಿಗ್ಗೆ ಊರಿಗೆ ಬಂದ ಪೋಲೀಸರು ಗೋಪಣ್ಣನನ್ನು ಬಂಧಿಸಿದರು. ಊರಿನ ಒಂದಿಷ್ಟು ಜನರ ಸಹಾಯ ಪಡೆದು ನೀರಲ್ಲಿದ್ದ ವಸ್ತುಗಳನ್ನು ಹೊರತೆಗೆಸಿದರು. ಇತ್ತೀಚೆ ಕಳುವಾದ ಉಗ್ರಮುಖಿ ಹನುಮಂತ ದೇವಸ್ಥಾನದ ಪುರಾತನ ಕಲ್ಲಿನ ಮೂರ್ತಿ, ಅದೇ ದೇವರ ವಜ್ರಾಭರಣ ಅಲ್ಲಿತ್ತು. ಅದನ್ನು ಊರ ಜನರಿಗೆ ಕೊಟ್ಟು, ಗೋಪಣ್ಣನನ್ನು ಕರೆದೊಯ್ದು ಬಾಯಿ ಬಿಡಿಸಿದರು.

ಭೂಗತ ಪಾತಕಿಗಳೊಡನೆ ಸಂಪರ್ಕದಲ್ಲಿದ್ದ ಗೋಪಣ್ಣ ಕೆಲವೊಮ್ಮೆ ತಾನು ಇನ್ನು ಕೆಲವೊಮ್ಮೆ ಅದೇ ದಂಧೆಯಲ್ಲಿದ್ದ ಇತರರು ಕದ್ದ ಅಮೂಲ್ಯ ವಸ್ತುಗಳನ್ನು ನಾಗಸರದ ಗುಂಡಿಯಲ್ಲಿ ಅಡಗಿಸಿಡುತ್ತಿದ್ದ. ಅದನ್ನು ಜನರಿಂದ ದೂರವಿಡಲು ತಾನೇ ಹಲ್ಲು ತೆಗೆದ ಹಾವುಗಳನ್ನು ತಂದು ಅದರಲ್ಲಿ ಬಿಡುತ್ತಿದ್ದ. ಕಾಡಿಗೆ ಹೊಕ್ಕುವ ಜನರನ್ನು ಹೆದರಿಸುವ ಕೆಲಸ ಕೂಡಾ ನಡೆಯುತ್ತಿತ್ತು. ಕದ್ದ ಮಾಲಿಗೆ ಗಿರಾಕಿ ಸಿಕ್ಕು ಅದನ್ನು ರಫ್ತು ಮಾಡಬೇಕಾಗಿ ಬಂದಾಗ ಹಾವುಗಳನ್ನೆಲ್ಲ ಕೊಂದು ಅದನ್ನು ತೆಗೆಯುತ್ತಿದ್ದ.

ಈ ದಂಧೆಯಲ್ಲಿ ಯಾರ್ಯಾರ ಕೈವಾಡ ಇದೆಯೋ ತನಿಖೆ ಮಾಡುವುದಾಗಿ ಪೋಲೀಸರು ಭರವಸೆ ಕೊಟ್ಟರು. ತನ್ನ ಪ್ರಾಜೆಕ್ಟ್ ಗೆ ಹೊಸ ತಿರುವು ಬಂದಿದ್ದರಿಂದ ಹೊಸದಾಗಿ, ಇನ್ನೊಮ್ಮೆ ಎಲ್ಲ ರಿಪೋರ್ಟ್ ತಯಾರು ಮಾಡಬೇಕು ಎಂದುಕೊಂಡ ಶರತ್. ಮರುದಿನದ ಸ್ಥಳೀಯ ಪತ್ರಿಕೆಯಲ್ಲಿ ತನ್ನದೇ ಫೋಟೋ ಬಂದಿದ್ದು ಕಂಡು ಹೆಮ್ಮೆಯೆನಿಸಿತು.

ಈ ಪೋಸ್ಟ್ ಅನ್ನು ಶೇರ್ ಮಾಡಲು:

Leave a Reply

Your email address will not be published. Required fields are marked *