ಕಣ್ಣು

ಗೆಳತೀ…,

ಆಕಾಶದಲ್ಲಿ
ನಕ್ಷತ್ರಗಳೆಷ್ಟಿವೆಯೋ
ಗೊತ್ತಿಲ್ಲ…
ಆದರೆ…
ಎಷ್ಟಿರಬೇಕಿತ್ತೋ
ಅದಕ್ಕಿಂತ ಎರಡು ಕಮ್ಮಿಯಿದೆ…
ಮತ್ತು…
ಆ ಎರಡೂ ನಿನ್ನ
ಕಂಗಳಲ್ಲಿವೆ….!!

. . . . . . ಸಖ್ಯಮೇಧ

ಆಕೆ

ಬಿಂಕದಲಿ ನಿಂತಿತ್ತು ಆ  ಕೆಂಡಸಂಪಿಗೆ
ಅದ ಕಂಡು ಮನದಲ್ಲಿ ನೆನಪುಗಳ ಮೆರವಣಿಗೆ…
ಹೂವಲ್ಲೂ, ಘಮದಲ್ಲೂ ಅವಳದ್ದೇ ನೆನಪು…
ಹೂವಲ್ಲೂ ಅವಳ ಮೊಗ ಅರಳುವುದೇ ಒನಪು…
.
ಗೆಳತೀ…
ಕತ್ತಲೆಯು ಏರುತಿರೆ
ನಿನ್ನ ನಗೆಯಾ ಹೂವು
ಅರಳುತಿರೆ- ನನಗಾಗ
ಮತ್ತೆ ಮುಂಜಾವು…!
. . . . . . ಸಖ್ಯಮೇಧ

ಹೂರಾಣಿ

ಹೂಗಳ ಸಂತೆಯಲ್ಲಿ …
ಮಲ್ಲಿಗೆಯ ಪರಿಮಳಕೆ ಎಲ್ಲರಿಗೂ ಉನ್ಮಾದ…
ಕೇದಿಗೆಯು ಬಂದಾಗ ಜೊತೆಗೆ ಉದ್ವೇಗ..!
ಜಾಜಿಯದೂ ಸೋಜಿಗ..! ಸರಿಸಾಟಿ ಯಾರೀಗ..?! –
ಕೆಂಡಸಂಪಿಗೆ ಬಂದಾಗ – ಬದಿಗೆ
ಸರಿದವು ಬೇಗ…!
.
ತನ್ನ ಕಂಪಿನ ಗಾಢತೆಗೆ
ಅಮಲೇರಿದಂತಾಗಿ
ಇನ್ನಷ್ಟು ಕೆಂಪೇರಿ-
-ದಳು ಕೆಂಡಸಂಪೀ….
. . . . . . . ಸಖ್ಯಮೇಧ

ಹುಡುಗಿ

ಮುದ್ದುಗಲ್ಲದ ಹುಡುಗಿ..! ಇನ್ನೊಮ್ಮೆ ನಾಚು….
ನೋಟದಲಿ ನಾಚಿಕೆಯ ಕೊಂಚ ಮರೆಮಾಚು…
ಮುಗುಳುನಗೆಯಾ ಸೂಸು, ಕೆಂಪೇರಲಿ ಕೆನ್ನೆ…
ನಿನ್ನ ನೋಡುತ ಮರೆವೆ ಪೂರ್ತಿ ಜಗವನ್ನೆ…!
.
ಹೊನ್ನಬಣ್ಣದಿ ಮಿಂದೆದ್ದು
ಬಂದವಳು ಇವಳು…
ಕೆಂಡಸಂಪಿಗೆ ತರದಿ
ನಳನಳಿಸುತಿಹಳು…
.
ಕೆಂಡಸಂಪಿಗೆಯಂಥವಳು …!
. . . . . . ಸಖ್ಯಮೇಧ

ಕೆನ್ನೆ

ಗೆಳತೀ….,
ಮಾತುಮಾತಿಗೆ ನೀನು ನಾಚಿ ನೀರಾಗುತಿರೆ
ಬಣ್ಣದೋಕುಳಿ ನಿನ್ನ ಕೆನ್ನೆ ತುಂಬಾ !
ನೀ ನಕ್ಕು ಕೆನ್ನೆ ಕೆಂಪೇರುತಿರೆ- ಅರಳುವುದು-
ಕೆಂಡಸಂಪಿಗೆ ಹೂವು ಕೆನ್ನೆ ಮೇಲೆ..!!
.
ನಕ್ಕು ಬಿಡು, ನಾಚಿ ಬಿಡು-
ಕೆಂಪೇರಲಿ ಗಲ್ಲ;
ಕದ್ದುಬಿಡು, ದೋಚಿಬಿಡು-
ಭುವಿಯ ಬಣ್ಣವನೆಲ್ಲ…!!
.
# ಅಪ್ಪಟ_ಕೆಂಡಸಂಪಿಗೆಯಂಥವಳು …!!
. . . . . . ಸಖ್ಯಮೇಧ

ಸಂತೆ

ಗೆಳತೀ ….
.
ಈ ಹಾಳು
ನೆನಪುಗಳನ್ನು
ಗುಜರಿಗೆ ಹಾಕಿ
ಕೊಂಚ ಪ್ರೀತಿಯನ್ನು
ಕೊಳ್ಳಬೇಕಿದೆ….
.
ಹೇಳು… ಎಲ್ಲಿದೆ ಸಂತೆ….?!
. . . . . . ಸಖ್ಯಮೇಧ