ಹೊರ ನೋಟ

ಮಧುವ ಹೀರಿದ ದುಂಬಿ ತಾ
ಧನ್ಯತೆಯಿಂ ನಮಿಸುತಿರೆ
ಮಧು ನೀಡಿದ ಹೂವಿಗೋ
ಭಾವಪ್ರಾಪ್ತಿ..!!
.
ಮುಂಜಾನೆ ನಡೆದಿತ್ತು
ಇಬ್ಬನಿಯ ಜೊತೆ ಸರಸ
ಮಧ್ಯಾಹ್ನ ಗಿಡದುಂಬಿ
ಹೂವು ಅರಳಿತ್ತು..!!
.
ಮಳಗಾಲದಾ ತುಂಬ
ಜೊತೆಗಿದ್ದ ಮೋಡಗಳು
ದೂರವಾದೊಡೆ ರವಿಗೆ
ವಿರಹಬಾಧೆ..!!
.
ಕಡಲ ನೀರನಿಗಳಿಗೆ
ಕಾವೇರಿ ಮೇಲೇರಿ
ರವಿಯನ್ನು ಚುಂಬಿಸುವ
ಆಕರ್ಷಣೆ..!!
.
ಹರಿಬಂದ ನದಿಯನ್ನು
ಒಡಲೊಳಗೆ ಕಾಪಿಟ್ಟು
ಮಮತೆಯನು ತೋರಿತ್ತು
ಮಲತಾಯಿ- ಶರಧಿ..!!
.
ಮಳೆಗೆ ಅರಳಿದೆ ಭೂಮಿ
ಇಳೆತುಂಬ “ಹಸಿರು”
ತನ್ನ “ಮಕ್ಕಳ” ಕಂಡು
ಸುಖಿಸಿತ್ತು ಮೋಡ..!!
.
ನಿಂತಿದ್ದ ಹುಲ್ಲುಗಳ
ನಲುಗಿಸಿತು ಗಾಳಿ..
ಚುಂಬನವೋ ಅಪ್ಪುಗೆಯೋ
ಅವಕೂ ತಿಳಿಯಲಿಲ್ಲ..!!
.
ಬಿದಿರ ಮೆಳೆಗಳ ನಡುವೆ
ತೀಡುವಾ ಶಬ್ಧ..
ತನ್ನದೇ ಸಂಗೀತಕೆ ಬಿದಿರು
ತಲೆದೂಗುತಿತ್ತು..!!
. . . . . . . ಸಖ್ಯಮೇಧ

ಕನಸು

ಗೆಳತೀ ….
ಕನಸುಗಳಿಗೆ
ಕಣ್ಣೇ ದಾರಿಯೆಂದು
ಮುಚ್ಚಿದೆ ಕಂಗಳನ್ನು….
ಇನ್ನಷ್ಟು ಕಾಡಿದವು ನಿನ್ನ ನೆನಪುಗಳು…!!
ಜೊತೆಗೆ ಕನಸುಗಳೂ….
.
ಹೇಳು ಈಗ…
ಹೇಗೆ ಮುಚ್ಚಲಿ ಮನದ ಬಾಗಿಲ…?!
. . . . . . . ಸಖ್ಯಮೇಧ

ಅವಳು ಕೆಂಡಸಂಪಿಗೆ

ಕೆಂಡಸಂಪಿಗೆ ಕೊಯ್ದು
ಘಮದ ಹೂಗಳ ಆಯ್ದು
ಪಕಳೆಗಳ ತೇಯ್ದು
ಜಿನುಗೋ ನೀರನು ತೆಗೆದು
ಕೆಂಪು ಗಂಧವನುಳಿದು
ಕೊಂಚ ಚಂದನ ಬಳಿದು
ಜೊತೆಗೆ ಕೇಸರಿ ಅಳೆದು
ಬರುವ ಗಂಧದ ಹಿಟ್ಟಿನಲಿ
ಗೊಂಬೆಯೊಂದನು ಮಾಡೆ-
ಅವಳ ಬಣ್ಣವೇ ಬಂದಿತ್ತು..!
ಅವಳುಸಿರ ಘಮವಿತ್ತು!
.
ಕೆಂಡಸಂಪಿಗೆಯಂಥವಳು ..!
. . . . . . . ಸಖ್ಯಮೇಧ

ಮುತ್ತು

ಅವಳು ಪ್ರತಿಬಾರಿ ನಕ್ಕಾಗಲೂ
ಬೀಳುತ್ತಿದ್ದ ಮುತ್ತುಗಳನ್ನು
ಆಯ್ದು ಎದೆಯೊಳಗೆ ಬಚ್ಚಿಡುತ್ತಿದ್ದೆ…
ಇಂದು ಎದೆಗೂಡನ್ನು ಎಷ್ಟೇ
ತಡಕಾಡಿದರೂ….
ನೆನಪುಗಳಷ್ಟೇ ಸಿಕ್ಕಿವೆ…
ಮುತ್ತೂ ಇಲ್ಲ.. ನಗುವೂ ಇಲ್ಲ..
. . . . . ಸಖ್ಯಮೇಧ

ಗೆಳತೀ …

ಅಂಗೈಲಿ ಹಿಡಿಯುವೆನು ಆ ಚಂದಿರನ ನಾನು!
ಸಪ್ತಸಾಗರವೀಜಿ ದಾಟಬಲ್ಲೆ…!!
ಬಲಗೈಲಿ ರಾಜ್ಯವನೇ ಆಳುವೆನು, ಗೆಳತೀ…
ನೀ ಎನ್ನ ಎಡಗೈಯ ಹಿಡಿದಿರುವಾಗ…!!
. . . . . . . ಸಖ್ಯಮೇಧ

ಕಣ್ಣು_ಕಾವ್ಯ

“ನಿನ್ನ ಕಂಗಳೆರಡು ಕಾವ್ಯಗಳು!”
ಅವನು ಬಾಯ್ತುಂಬ ಹೊಗಳಿದಾಗ
ಸಂತಸವಾದಂತೆ ನಟಿಸಿದಳು…
ಇರುಳ ತುಂಬ ನಿದ್ದೆಗೆಟ್ಟು
ಅವನ ಬರವು ಕಾಯುತ್ತಿದ್ದ ಕಂಗಳು
ಸತ್ಯ ಹೇಳುತ್ತಿದ್ದವು…
. . . . . ಸಖ್ಯಮೇಧ

ಕೆಂಡಸಂಪಿಗೆ …

ಕೆಂಡಸಂಪಿಗೆ ನಕ್ಕು
ಹಾಲ್ಗಡಲು ಹರಿದಿಹುದು!
ಬೆರೆತಿಹುದು ಕೇಸರಿಯೂ
ಅವಳ ಘಮದಿಂದ..!
.
ನಾಜೂಕು ಜೋಕೊಂದ
ಅವಳಿಗುಸುರುವ ತನಕ
ಕೆಂಡಸಂಪಿಗೆ ಕಣ್ಣು
ಕಾಮನಾ ಬಿಲ್ಲು..!
.
ನನ್ನನ್ನು ತಾ ನಗಿಸಿ
ಒಳಗೊಳಗೆ ತಾ ನಗುವ
ಅವಳ ಹಾಲ್ಗೆನ್ನೆಯಲಿ
ರಂಗು ರಂಗೋಲಿ .!!
.
ಕಡಲೊಳಗೆ ಇಹುದಂತೆ
ಹವಳ ಮುತ್ತಿನ ರಾಶಿ
ಅವಳೂನು ಕಡಲೇನೆ!
ಸಂತಸದ ರಾಶಿ.!!
.
ಯಾವನೋ ಹೇಳಿದ್ದು
ನಕ್ಷತ್ರ ಬೀಳದು ಎಂದು
ಅವಳ ಕಣ್ಣಲಿ ಹೇಗೆ
ಬಂತು ಮತ್ತೆ..?
. . . . . . ಸಖ್ಯಮೇಧ

ಪ್ರೀತಿ

ಅವನ ಕಂಗಳ ಶರಧಿಯಲ್ಲಿ
ಅವಳು ಮುಳುಗೇಳುತ್ತಾಳೆ…
ಅವಳ ಕಂಗಳ ಶರಧಿಯ ವಿಸ್ತಾರ ಕಂಡು
ಅವನು ಬೆರಗಾಗುತ್ತಾನೆ…
ಅವನು ‘ಅವಳೇ ಕಾವ್ಯ ‘ ಎನ್ನುತ್ತಾನೆ…
ಅವಳು ‘ಅವನುಸಿರಿನಲಿ ಕಾವ್ಯ ಹುಟ್ಟಿತು’ ಎನ್ನುತ್ತಾಳೆ…
ಅವನ ಬಾಳಿಗೆ ಅವಳ ಕಂಗಳ ಕಾಂತಿ
ದಾರಿ ತೋರಿಸಿದುವಂತೆ…
ಅವಳಿಗೆ ಅವನೇ ಬಾಳ ದಾರಿಯಂತೆ…
ಯಾರ ಪ್ರೀತಿ ದೊಡ್ಡದೋ…?!
. . . . . ಸಖ್ಯಮೇಧ

ಅವಳು…

ಬಿಸಿಲಲ್ಲಿ ಹೊಳೆಹೊಳೆವ
ಎಲೆತುದಿಯ ಹನಿಯಂತೆ
ಚಿಗುರೆಲೆಯ ಕಂಗಳಲಿ
ನಗುವಳಾಕೆ..!

ಮೇಘರಾಶಿಯ ನಡುವೆ
ಇಣುಕುವಾ ರವಿಯಂತೆ
ಓರೆನೋಟವ ಬೀರಿ
ನೋಡುವಾಕೆ..!
. . . . . ಸಖ್ಯಮೇಧ