ಮೌನದಮನಿ, ಮೃದುಲೆ ಆಕೆ,
ಮನದ ಧಾಮವ ಮೆರೆಸುವಾಕೆ,
ಕುಸುಮಗಂಧಿನಿ, ಮನವಿಹಾರಿಕೆ!
ಹೃದಯಚುಂಬಿತ ಶಿಶಿರಚಂದ್ರಿಕೆ!
.
ಮದಿರೆಗಿಂತಲೂ ಮಧುವು ಮಧುರ
ಅಧರದಾ ಮಧು ಸಿಗಲು ಸದರ
ಎಂದೂ ಆರದ ಕಣ್ಣ ಚಂದಿರ
ಕೆಂಡಸಂಪಿಗೆ ನಿತ್ಯ ಸುಂದರ
ಕೆಂಡಸಂಪಿಗೆ
. . . . . ಕವನತನಯ ಸಖ್ಯಮೇಧ
ಸೀತವ್ವ ಬಸುರಿ….!!
ಪ್ರತಿಮಂದಿ ಊರಲ್ಲಿ ಆಡಿಕೊಂಬರು
ಸಂಜೆ-
ಕೆಳಮನೆಯ ಸೀತವ್ವ ಎಂಬುವಳು ಬಂಜೆ!
ಹರಕೆ, ಹಾರೈಕೆಗಳಿಗಾಗಿಲ್ಲ ಕೂಸು,
ಆಲೈಸುವವರಾರು ಅವಳೊಡಲ ತ್ರಾಸು?!
.
ಆ ದಿನದ ಸುದ್ದಿಯದು-ಸೀತವ್ವ ಬಸುರಿ!
ಊರೊಳಗೆ ಹರಡಿತ್ತು, ಪ್ರತಿ ಕಿವಿಯಲುಸುರಿ!
ಅವರ ಲೆಕ್ಕದಲೀಗ ಕಣ್ದೆರೆದ ದೇವರು!
ಸೀತವ್ವ ನೆಲದ ಮೇಲಿಲ್ಲವೆಂದೆಂಬರು!
.
ಸೀತವ್ವನಿಗೆ ಹಿಗ್ಗು; ಬೆಳೆವ ಹೊಟ್ಟೆಯ
ಕಂಡು!
ಅವಳ ಸೇವೆಗೆ ಈಗ ಊರ ಜನರಾ ಹಿಂಡು!
ಸಿಹಿ ಹುಣಿಸೆ, ಹುಳಿ ಮಾವು, ವಿವಿಧ ಸಿಹಿತಿನಿಸು..
ಅವಳ ಹೊಟ್ಟೆಯಲಿರುವ ಮಗುವಿನದೇ ಕನಸು..
.
ಸೀಮಂತ ಬಂತು ಬಿಡಿ, ಊರಿಗೇ ಪಾಯಸ!
ಆ ಸೊಬಗ ನೋಡುವುದೇ ಕಣ್ಣುಗಳ ಕೆಲಸ!
ಆರತಿಯು ಸಾಕು ಬಿಡಿ, ಉಷ್ಣವಾದೀತು!
ಕಲಶಜಲ ಸೋಕದಿರಿ, ಥಂಡಿಯಾದೀತು!
.
ಸೀತವ್ವ ನಡೆವುದು ಬೇಡ, ಸುಸ್ತು ಬಡಿವುದು ಕೂಸು!
ತುಂಬು ಬಸುರಿಯು ಅವಳು, ಬೇಗ ಕಂಬಳಿ ಹಾಸು!
ಹತ್ತು ವರ್ಷದ ಹರಕೆ ಕೈಗೂಡುತಿದೆ ಈಗ,
ಒಳಗಿಂದ ಗಂಡುಮಗು ಹೊರಗೆ ಬರಲೀ
ಬೇಗ!
.
ಹೋಳಿಗೆಗೆ ಹದ ಹಾಕಿ, ಸೀತವ್ವನಿಗೆ ಬೇನೆ!
ಹೊಸಜೀವದಾಸೆಯಲಿ ನಗುತಿಹುದು ‘ಕೆಳಮನೆ’!
ಸುದ್ದಿ ತಂದರು ಯಾರೋ- “ಒಳಗೆಲ್ಲ ನೀರಂತೆ!”
“ಗರ್ಭ ತುಂಬಿದ ನೀರು ಹರಿದು ಹೋಯ್ತಂತೆ!”
. . . . ಕವನತನಯ ಸಖ್ಯಮೇಧ
ಗುರುವೇ…
ಕಡಲದಡದಲಿ ಎಡೆಬಿಡದ ಮೊರೆತ,
ಮೋಡದೊಡಲಲಿ ಕಡುಗುಡುಗಿನ ಕೆನೆತ,
ಕಾಡಡವಿಯಲಿ ಕೂಡುವಾ ಹಕ್ಕಿಜೋಡಿಯ ಉಲಿತ,
ಸುಡುಗಾಡಲಿ ಬಾಡುತಿಹ ಕುಡಿಹುಲ್ಲಿನ ನೆನೆತ-
ನಿನ್ನ ಲಾಲಿಗೆ ಪಲ್ಲವಿ! ಗುರುವೇ!,
ನಿನ್ನ ಕಾಲಿಗೆ ಸಲ್ಲಲಿ!
.
ಮಕರಂದ, ಮಧುಬಿಂದು, ಸಿಹಿನೀರ
ತೊರೆ ಸಿಂಧು,
ಬಿರಿದಿರುವ ಕಸ್ತೂರಿ, ಗಿಳಿಕೊರಳ ತುತ್ತೂರಿ,
ಜಾವದಲಿ ಅವತರಿತ ಹೂವಿನಾ ಸವಿಭಾವ
ನಿನ್ನ ಕಣ್ಣಲೇ ಮುಳುಗಿ ಉದಯಿಸುವ ಚಂದ್ರ!-
ನಿನ್ನ ಹೆಸರಿಗೆ ಅರ್ಪಿತ! ಗುರುವೇ!,
ನಿನ್ನ ಹೆಸರದು ಶಾಶ್ವತ!
.
ಹೊಂಬಿಸಿಲು, ಬಾಂದಳದ ಸಿಂಧೂರ ನಿನಗಾಗಿ,
ಕುಡಿದೀಪ, ನಿಡಿಬಿಸಿಲು, ಸಿಡಿಲಬಳ್ಳಿಯು ಬೆಳಗಿ,
ವಿಶ್ವ ನಿನ್ನೊಳಗಿಹುದು, ನನ್ನೊಳಗೆ
ನೀನು!
ಸಿರಿಸಾರ, ಪರಿಹಾರ, ಮನಮೂರ್ತಿ! ಕೇಳು!
ನೀ ಜಗದ ಗಾನ! ಗುರುವೇ!,
ಒಳಮನದ ಮೌನ!
(‘ಗೀತಾಂಜಲಿ‘ ಯ ‘ವಾತ್ಸಲ್ಯ’ ಗೀತೆ
ಓದಿದಾಗ ಅನಿಸಿದ್ದು,)
. . . . ಕವನತನಯ ಸಖ್ಯಮೇಧ
ಕೆಂಡಸಂಪಿಗೆ
‘ಮಧು’ ಬೆರೆತ ಮೃದು ಅಧರ
ಮದಭರಿತ ನಗೆ ಮಧುರ
ಮುದವೀವ ಮೊಗಮಂದಾರ
ಮಂದನಡೆ, ಮಾದಕತೆ ಮೈಪೂರ
…………………………………………….
ಎದೆಕದವ ಮೊದಲು ತೆರೆ-
ದಳಿದುಳಿದ ಪ್ರೀತಿಯನು
ಅದಲುಬದಲಾಗಿಸುತ
ಹೃದಯ ಗೆದ್ದವಳಾಕೆ-
ಕೆಂಡಸಂಪಿಗೆ !!
ಕೆಂಡಸಂಪಿಗೆ
ವ್ಯಾಪ್ತಿಯಿಲ್ಲದ ಪ್ರೀತಿ ನಿನ್ನದು
ಪ್ರಾಪ್ತವಾಗಲು ತೃಪ್ತ ನಾನು
ಸುಪ್ತಗನಸಿನ ಆಪ್ತ ಹುಡುಗೀ..
ಗುಪ್ತಮೋಹದ ಲಿಪ್ತ ನಾನು…
( ನಿನ್ನ ಕಂಡು…)
ಸಪ್ತಸರ ಸಂ-ಕ್ಷಿಪ್ತಗೊಂಡಿದೆ
ಎದೆಯ ಸಂಪದ ಜಪ್ತಿಗೊಂಡಿದೆ
ನೂರು ಭಾವವು ವ್ಯಕ್ತವಾಗಿದೆ
ವಿರಹಬಾಧೆಯು ಮುಕ್ತಿ ಕಂಡಿದೆ.
ಮಲೆನಾಡು
ಹಸಿರು ಹುಲ್ಲಿನ ರತ್ನಗಂಬಳಿ, ಬಸಿರು ತುಂಬಿದ
ಮರಗಳೋಕುಳಿ
ಕೆಸರು ನೀರಲಿ ಕಮಲಗಳ ಬಳಿ- ಕೊಸರುತಿಹ
ದುಂಬಿಗಳ ಹಾವಳಿ
ಉಸಿರು ನೀಡುವ ಚಿಗುರು ತರುತಳಿ, ಹೆಸರು ಇಲ್ಲದ
ಹಕ್ಕಿ ಮರದಲಿ
ಆಸರೆಯ ಜೊತೆ ಬಿಳಲ ಕಳಕಳಿ , ಉಸುರುವೆನು-
ಇದು ನಾಕ! ಕೇಳಿ!
.
ಮಲೆನಾಡು_ಮೆಳೆಕಾಡು
. . . . . . . . . ಸಖ್ಯಮೇಧ
ಕೆಂಡಸಂಪಿಗೆ
ಮಿರುಮಿರುಗೊ ಮುಖದವಳು ಮಾರಳತೆ ಜಡೆಯವಳು
ಮೋರೆ ತೋರುತ ನಕ್ಕು ಮರೆಗೆ ಸರಿದಳು ಯುವತಿ
ಮೊರೆಕರೆದರಾಲಿಸದ ಮರೆಯಲಾಗದ ಗೆಳತಿ
.
#ಕೆಂಡಸಂಪಿಗೆ
. . . . . . . . . . . . ಸಖ್ಯಮೇಧ
ಮಲೆನಾಡು
ಪಾರಿಜಾತವು ಚೆಲ್ಲಿ ವನಕೆವನವೇ ಬೆಳ್ಳಿ!
ಮಲೆನಾಡ ಕಡುಗಾಡಲ್ಲಿ ಇಬ್ಬನಿಯ ರಂಗವಲ್ಲಿ
ಗಿಳಿ ಗುಬ್ಬಿ ಜೊತೆ ಮಿಂಚುಳ್ಳಿ, ಹಕ್ಕಿಗಳ ರಾಗವಲ್ಲಿ
.
#ಮಲೆನಾಡು_ಮೆಳೆಕಾಡು
. . . . . . ಸಖ್ಯಮೇಧ
ಚೆಲುವೆ…
ಪುಟ್ಟ ಸಿಂಧೂರ ತಲೆ-ಮಟ್ಟಕ್ಕೆ ಸೆರಗು
ಪಟ್ಟದಾ ರಾಣಿಯಂತಿಟ್ಟಿರುವ ಮೂಗುತಿಯು
ಗುಟ್ಟಾದ ಮುಖಕಮಲ ರಟ್ಟಾದ ವೇಳೆಯಲಿ,,,
ಮೋಹಕ ಚೆಲುವೆಯಾಕೆ,ಮಾಯಕದ ಶಿಲಾಬಾಲಿಕೆ
ನಾನೊಬ್ಬ ಅನುರಾಗಿ, ಈಗಾದೆ ಬೈರಾಗಿ
ತುಸುಸರಿಯಿತು ಸೆರಗು, ನಸುನಕ್ಕಳು ಆಕೆ..
ಮನೆಗೆ ಬರದವಳು, ಮನದಲ್ಲೇ ಉಳಿದಳು..
ಕೆಂಡಸಂಪಿಗೆ
ಕೆಂಡಸಂಪಿಗೆಯಂತೆ ಹೆಚ್ಚು ತಂಪು!
ಗಂಧದಾ ಮರ ಕೂಡ ಅಂದಿತ್ತು ಚಂದದಲಿ-
“ಕೆಂಡಸಂಪಿಗೆಗೇನೆ ಹೆಚ್ಚು ಕಂಪು”!!
. . . . . . . . ಸಖ್ಯಮೇಧ