ರಾಯರ ರಾತ್ರಿ

ಪಾರಿಜಾತದ ಗಂಧ, ಅರೆಚಂದ್ರ ಅರಳಿದ್ದ
ಬೀರುತ್ತ ಒಂಚೂರು ಬೆಳ್ಳಿಬೆಳಕು
ಸೂರು ಸೋರಲು ಬಾನ ನಕ್ಷತ್ರಗಳು ನಗಲು
ಜೋರು ಮನದಲಿ ಮೆರೆವ ಆಸೆ ಝಲಕು

ಬಲು ಆಸೆ ರಾಯರಿಗೆ, ಬರಿ ಮುನಿಸು ಪದುಮಳಿಗೆ
ಒಲಿಸಿಕೊಳ್ಳುವುದೆಂತು ತನ್ನ ಬಳಿಗೆ?
ಸುಲಭದಲಿ ಬರದವಳು, ಬಹುಸೂಕ್ಷ್ಮ ಮನದವಳು
ಚೆಲುವೆ ಮಲಗಿಹಳಿಂದು ಸರಿದು ಬದಿಗೆ!

ಮುಟ್ಟಿದರೆ ಸಿಡುಕುವಳು, ಮುತ್ತಿಟ್ಟರಿನ್ನೆಂತೊ!
ಗುಟ್ಟಾಗಿ ಬಳಿಸಾರೆ, ಸರಿವಳಾಚೆ!
ಗಟ್ಟಿದನಿಯಲಿ ಕರೆಯೆ – ‘ನೀರು ಬೇಕೇ?’ ಎಂದು
ಒಟ್ಟು ಮಾತನು ದಾರಿ ತಪ್ಪಿಸುವಳು!

ಹೊರಳಿ ಅತ್ತಿಂದಿತ್ತ, ವೇಗದುಸಿರು ಬಿಡುತ್ತ
ನರಳಿದರು ತಲೆನೋವು ಬಂತು ಎಂದು
ಕರಗಿತ್ತು ತರಳೆ ಮನ, ಬಳಿಸರಿದಳಾ ಪದುಮ
ಸುರಿಸಿ ಕಣ್ಣೀರ, ‘ಮನ್ನಿಸಿ’ ಎಂದಳು…

‘ತಲೆನೋವು ಬರಿಸುಳ್ಳು, ನಿನಗಾಗಿ ನಾಟಕವು
ಅಳಬೇಡ, ನನ ಮೇಲೆ ಮುನಿಸು ಏಕೆ?’
‘ಮುನಿಸೆಲ್ಲ ನಾಟಕವು, ನಿಮ್ಮಲ್ಲಿ ಒಲವೆನಗೆ
ಹೊಸಸೀರೆ ಇಂದು ಕೊಡಿಸಿಲ್ಲವೇಕೆ?’

‘ಸೀರೆಯಾದರು ಕೊಡುವೆ, ಒಡವೆಗಳನೂ ಸುರಿವೆ
ನಿನಗಾಗಿ ಏನಾದರೂ ಮಾಡುವೆ
ನೀ ಹೀಗೆ ಬಳಿಯಲ್ಲಿ ಪ್ರೀತಿಸುರಿಯುತಲಿರಲು
ಜಗವನ್ನೆ ಗೆದ್ದು ಕೈಯಲ್ಲಿ ಇಡುವೆ’

ಸಲ್ಲಾಪ ರಾತ್ರಿಯಲಿ, ರಾಯರಾ ಮಂಚದಲಿ
ಮತ್ತೊಮ್ಮೆ ಪದುಮಳನು ಕರೆದರವರು
ಇಂಪಾಗಿ ಏನೆಂದು ಅವಳು ಕೇಳಲು ಇವರು
‘ನೀರು ಬೇಕೆಂದು’ ತಾ ಛೇಡಿಸುವರು

ಕವನತನಯ

ಈ ಪೋಸ್ಟ್ ಅನ್ನು ಶೇರ್ ಮಾಡಲು:

Leave a Reply

Your email address will not be published. Required fields are marked *