ಅಂಗೈಲಿ ಹಿಡಿಯುವೆನು ಆ ಚಂದಿರನ ನಾನು!
ಸಪ್ತಸಾಗರವೀಜಿ ದಾಟಬಲ್ಲೆ…!!
ಬಲಗೈಲಿ ರಾಜ್ಯವನೇ ಆಳುವೆನು, ಗೆಳತೀ…
ನೀ ಎನ್ನ ಎಡಗೈಯ ಹಿಡಿದಿರುವಾಗ…!!
. . . . . . . ಸಖ್ಯಮೇಧ
ಕವನ
“ಕವನ”
ಅವಳು ನೆನಪಾಗಿ
ಬದಲಾದಾಗ
ಉಳಿದ ಅವಶೇಷವೇ
ಕವನ..
. . . . . ಸಖ್ಯಮೇಧ
ಕಣ್ಣು_ಕಾವ್ಯ
“ನಿನ್ನ ಕಂಗಳೆರಡು ಕಾವ್ಯಗಳು!”
ಅವನು ಬಾಯ್ತುಂಬ ಹೊಗಳಿದಾಗ
ಸಂತಸವಾದಂತೆ ನಟಿಸಿದಳು…
ಇರುಳ ತುಂಬ ನಿದ್ದೆಗೆಟ್ಟು
ಅವನ ಬರವು ಕಾಯುತ್ತಿದ್ದ ಕಂಗಳು
ಸತ್ಯ ಹೇಳುತ್ತಿದ್ದವು…
. . . . . ಸಖ್ಯಮೇಧ
ಕೆಂಡಸಂಪಿಗೆ …
ಕೆಂಡಸಂಪಿಗೆ ನಕ್ಕು
ಹಾಲ್ಗಡಲು ಹರಿದಿಹುದು!
ಬೆರೆತಿಹುದು ಕೇಸರಿಯೂ
ಅವಳ ಘಮದಿಂದ..!
.
ನಾಜೂಕು ಜೋಕೊಂದ
ಅವಳಿಗುಸುರುವ ತನಕ
ಕೆಂಡಸಂಪಿಗೆ ಕಣ್ಣು
ಕಾಮನಾ ಬಿಲ್ಲು..!
.
ನನ್ನನ್ನು ತಾ ನಗಿಸಿ
ಒಳಗೊಳಗೆ ತಾ ನಗುವ
ಅವಳ ಹಾಲ್ಗೆನ್ನೆಯಲಿ
ರಂಗು ರಂಗೋಲಿ .!!
.
ಕಡಲೊಳಗೆ ಇಹುದಂತೆ
ಹವಳ ಮುತ್ತಿನ ರಾಶಿ
ಅವಳೂನು ಕಡಲೇನೆ!
ಸಂತಸದ ರಾಶಿ.!!
.
ಯಾವನೋ ಹೇಳಿದ್ದು
ನಕ್ಷತ್ರ ಬೀಳದು ಎಂದು
ಅವಳ ಕಣ್ಣಲಿ ಹೇಗೆ
ಬಂತು ಮತ್ತೆ..?
. . . . . . ಸಖ್ಯಮೇಧ
ಅವಳು…
ಬಿಸಿಲಲ್ಲಿ ಹೊಳೆಹೊಳೆವ
ಎಲೆತುದಿಯ ಹನಿಯಂತೆ
ಚಿಗುರೆಲೆಯ ಕಂಗಳಲಿ
ನಗುವಳಾಕೆ..!
ಮೇಘರಾಶಿಯ ನಡುವೆ
ಇಣುಕುವಾ ರವಿಯಂತೆ
ಓರೆನೋಟವ ಬೀರಿ
ನೋಡುವಾಕೆ..!
. . . . . ಸಖ್ಯಮೇಧ
ಪ್ರೀತಿ
ಅವನ ಕಂಗಳ ಶರಧಿಯಲ್ಲಿ
ಅವಳು ಮುಳುಗೇಳುತ್ತಾಳೆ…
ಅವಳ ಕಂಗಳ ಶರಧಿಯ ವಿಸ್ತಾರ ಕಂಡು
ಅವನು ಬೆರಗಾಗುತ್ತಾನೆ…
ಅವನು ‘ಅವಳೇ ಕಾವ್ಯ ‘ ಎನ್ನುತ್ತಾನೆ…
ಅವಳು ‘ಅವನುಸಿರಿನಲಿ ಕಾವ್ಯ ಹುಟ್ಟಿತು’ ಎನ್ನುತ್ತಾಳೆ…
ಅವನ ಬಾಳಿಗೆ ಅವಳ ಕಂಗಳ ಕಾಂತಿ
ದಾರಿ ತೋರಿಸಿದುವಂತೆ…
ಅವಳಿಗೆ ಅವನೇ ಬಾಳ ದಾರಿಯಂತೆ…
ಯಾರ ಪ್ರೀತಿ ದೊಡ್ಡದೋ…?!
. . . . . ಸಖ್ಯಮೇಧ
ಮುತ್ತು
ನೆನಪುಗಳ ಹಾರ
ಪೋಣಿಸುತ್ತಿದ್ದವಳಿಗೆ
ಮುತ್ತುಗಳು ಸಾಲದೇ ಹೋದವು….
ತಡಕಾಡಿದಳು-
ಅವನ ಕಂಗಳಲ್ಲಿ..!!
. . . . ಸಖ್ಯಮೇಧ
ನನ್ನೋಳು
ಗಾಢಗಂಧದ ಮಗಳು ಈ ಕೆಂಡಸಂಪಿಗೆ…
ಬೆಳದಿಂಗಳಾ ಕುವರ ಆ ಚಂದ್ರಮ…
ಪಂಚವರ್ಣದ ಕೂಸು ನರ್ತಿಸುವ ನವಿಲು…
ಮುಗ್ಧಪ್ರೀತಿಯ ಕುವರಿ ಆಕೆ ನನ್ನಾಕೆ…!
. . . . . . . . . . ಸಖ್ಯಮೇಧ
ಬಡ್ಡೇಗೆ ಬರೆದಿದ್ದು…
“ನಗುವಾ ನಲಿವಾ ಓ ಕೆಂಡಸಂಪಿಗೆ …
ನನಗೆ ಹದಿನೆಂಟು, ನಿನಗೆಷ್ಟೇ ಪ್ರಾಯ..?”
.
“ಹೇಳುವೆನು ಕೇಳು ಓ ಪ್ರಿಯತಮ…
ಹೂವಿಗೊಂದು ದಿವಸ; ಕಂಪಿಗೆ ಸಹಸ್ರಮಾನ…!”
. . . . ಸಖ್ಯಮೇಧ
ಕನಸು ಸೊಗಸು
ರಾತ್ರಿ ಕನಸಲಿ ಬಂದ ಕೆಂಡಸಂಪಿಗೆಯ
ಪರಿಮಳ ಬೆಳಿಗ್ಗೆಯೂ ಸೂಸುವುದು….
ರಾತ್ರಿ ಕನಸಲಿ ಬರುವ ನನ್ನಾಕೆ
ಬೆಳಿಗ್ಗೆ ಮನಸಲಿ ಕಚಗುಳಿ ಇಡುವಳು….
. . . . . . . . . . ಸಖ್ಯಮೇಧ