ಕೆಂಡಸಂಪಿಗೆ

ತಪ್ತ ನನ್ನನು ತೃಪ್ತನಾಗಿಸು
ಬೀಸು ಒಲವಿನ ಚಾಮರ
ನೊಂದ ಚಾದಗೆ ಬೆಂದ ಕೇದಗೆ
ನಾನು ಕಾದಿಹ ಮಾಮರ

ತುಂಬು ಹೆರಳಿನ ತುಂಗದಲಿ
ಉತ್ತುಂಗಕೇರಿದೆ ಸಂಪಿಗೆ
ತಾಳಲಾರದೆ ತೋಳ ಬಂಧಿಸಿ
ನಲಿವೆ, ಹೂವಿನ ಕಂಪಿಗೆ

ಬಾನ ತಾರಕೆ ಬುವಿಯ ತೀರಕೆ
ಬಂದ ಪರಿಯಲಿ ತೋರಿಕೆ
ನನ್ನ ಚಂದ್ರಿಕೆ, ಒಲವ ಕಾಣಿಕೆ
ನೀಡು, ನನ್ನಯ ಕೋರಿಕೆ

ಬತ್ತದಿಹ ಬತ್ತಳಿಕೆ ನಿನ್ನಾ
ಮುತ್ತಿನಾ ನಿಧಿಯಧರವು
ಮತ್ತೆ ಮತ್ತೆನ್ನದೆಯೆ ಮುತ್ತಿಡು
ತುಂಬದೀ ಹಸಿದುದರವು

ಕವನತನಯ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಕೆಂಡಸಂಪಿಗೆ

ನಯನಸಾಗರ ಬಯಕೆಯಾಗರ
ನಿನ್ನ ನಿಲುವು ವಿಹಂಗಮ
ವದನ ಸುಂದರ ಮದನ ಮಂದಿರ
ಎಂದು ನಮ್ಮ ಸಮಾಗಮ?!

ರಾಣಿ, ಗಿಣಿ, ನೀನೇನೆ ರಾಗಿಣಿ
ರಮಣಿ ನನ್ನನುರಾಗಿಣಿ!
ಕಾಮ ಪೂರಿಣಿ ಪ್ರೇಮಧಾರಿಣಿ
ಪ್ರಣಯ ಪರಿಣಯ ಪ್ರೇರಿಣಿ!

ನೀರೆ ನೀನಿರೆ ನಿತ್ಯ ಸೌರವ
ಮನವ ತುಂಬುವ ಕಲರವ
ನಿನ್ನ ವಿರಹವೊ ನಿರಸ ನೀರವ
ತರುವುದತಿಶಯ ಭಾರವ

ಕವನತನಯ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ತಾಯ್ನುಡಿ…

ನಲ್ನುಡಿಯೆನ್ನುವ ಕನ್ನಡಿಯೊಳಗಡೆ
ಕಾವ್ಯದ ಬಿಂಬವು ಮೂಡುತಿರೆ
ಅತಿಶಯ ಚಂದಕೆ ಮನ ಬೆರಗಾಯಿತು
ಬಲುಸುಂದರ ಕನ್ನಡದ ತಿರೆ

ಬಾ ಮಡಿಲಿಗೆ ಕಂದನೆ ಎಂದೆನುತಲಿ
ಕೂಗುತ ಕರೆವುದು ತವರ ಧರೆ
ತವರಿನ ಭಾಷೆಯ ತೊದಲಿದ ಭಾಷೆಯ-
ನೋದುತಲಿರೆ ಜಗವೆಲ್ಲ ಮರೆ

ಕನ್ನಡಭುವಿ ಬೆಳೆಸಿದ ನನ್ನಯ ತನು-
ಚುಕ್ಕಿಯ ಹೊತ್ತಿದೆ ನುಡಿ ಬಾನು!
ಆ ಬಾನಲಿ ತಾ ಹೊಳೆವುದೊ ಕೊಳೆವುದೊ
ಏನಾಗಲಿ, ಧನ್ಯನು ನಾನು..

ಈ ಪೋಸ್ಟ್ ಅನ್ನು ಶೇರ್ ಮಾಡಲು:

ನಿರತ ಶಾಂತಲಾ….

ಬಡ ಜೋಗಿ ನನ್ನೆದೆಯ ಮೆಟ್ಟಿಲನು ಸಾಗಿ ಬಾ, ನನ್ನ ತಾಯೀ
ತಡವಿರದೆ ಮಮತೆಯಾ ತೊಟ್ಟಿಲನು ತೂಗಿ ಬಾ, ಪ್ರೇಮದಾಯೀ ||

ಕಂದನೆದೆಗುಂದದಂತಿಂದು ಚಂದದಿ ಬಂದು
ಹಿಂದೆಂದಿಗಿರದಂತೆ, ಕರುಳ ಬಂಧು!
ಕುಂದನೆಲ್ಲವ ಮರೆತು, ನನ್ನ ಮುಂದೆಯೆ ನಿಂದು
ಒಂದು ಸಲ ಪ್ರೇಮಮಾಕಂದ ತಿಂದು
ಹರಸಿಬಿಡು ತಾಯೆ, ನನ್ನೊಲವ ಬಿಂದು!

ನಿತ್ಯ ಶಾಂತಲೆ ನೀನು, ನಿರತ ಪ್ರೀತಲೆ ನೀನು
ನಿನ್ನ ನೆನೆದನವರತ ನಲುಗೊ ಮಗು ನಾ
ಈ ನಿರೀಕ್ಷೆಯ ಪರ್ವ ಮುಗಿಯುವುದು ಒಂದು ದಿನ
ನೀ ಬರಲು, ಇಲ್ಲ ನಾನಲ್ಲಿ ಬರಲು

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಕೆಂಡಸಂಪಿಗೆ

ಇರುಳು ಉರುಳಿದೆ, ತರಳೆ ನಿನ್ನಯ
ಮರುಳುಗೊಳಿಸುವ ಸನ್ನಿಧಿ!
ಕುರುಳು ಹೊರಳಿದೆ, ಅರಳು ಮೊಗದಲಿ 
ಮಧುರ ಅಧರದ ಮಧುನಿಧಿ!

ಕಣ್ಣ ದೀಪಕೆ ಕುರುಳ ಧೂಪಕೆ
ಅಪ್ಪುಗೆಯ ಬಿಸಿ ತಾಪಕೆ
ಬಿತ್ತು ಹೃದಯವು ಒಲವ ಕೂಪಕೆ
ನಿನ್ನ ಪಲ್ಲವ ರೂಪಕೆ!

ಮತ್ತು ಏರಿದೆ, ಹೊತ್ತು ಕಳೆದಿದೆ
ಒತ್ತಿ ನೀಡಿದ ಮುತ್ತಿಗೆ
ಮತ್ತು ಬೇಕಿದೆಯೆನಿಸೊ ಹೊತ್ತಿಗೆ
ಪಡೆವೆ ಮುತ್ತಿನ ಗುತ್ತಿಗೆ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಮುರಳಿ ಗಾನ..

ಮರಳಿ ಮರಳಿ ಮುರಳಿ ಲಹರಿ
ಯಮುನೆ ಕಟಿಯ ತಟಿಯಲಿ!
ಅರಳಿ ಅರಳಿ ಬಿರಿವ ನಗೆಯು
ಚೆಲುವೆ ರಾಧೆ ತುಟಿಯಲಿ!

ಶ್ಯಾಮನೆಂಬ ಪ್ರೇಮಬಿಂಬ
ರಾಧೆಯ ತಿಳಿಗಣ್ಣಲಿ
ಕೊಳಲ ನಾದ ಕೇಳೆ ಮೋದ
ಸನಿಹ ಕುಳಿತ ಹೆಣ್ಣಲಿ

ರಾಗ ವೇಗ ಪಡೆಯುವಾಗ
ಮನದಿ ಜೇನ ಸ್ಫುರಣೆ
ನಾದ ದಾಹ ಶ್ಯಾಮ ಮೋಹ
ತೀರಿದಷ್ಟು ಕಡಿಮೆ

ರಂಗ ನುಡಿದ ಸ್ವರತರಂಗ
ಅಂತರಂಗದಲ್ಲಿ;
ಗುಂಗು ಬಹಳ, ರಂಗು ಸುರಿದ
ಮನದಿ ರಂಗವಲ್ಲಿ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಮೇದಿನಿ ಪರ್ವತ ಚಾರಣ

ಮೇದಿನಿ.. ಮೇದಿನಿ..
ಮೇದಿನಿ.. ಮೇದಿನಿ..

ಅಲೆಯಲೆಯಾಗಿ ಹಬ್ಬಿದ ಮಲೆನಾಡಿನ ಮಳೆಬೆಟ್ಟಗಳ, ವಿಪಿನಪರ್ವತಗಳ ಸೌಂದರ್ಯವನ್ನ ಪದಗಳಲ್ಲಿ ವರ್ಣಿಸೋದು ಅಷ್ಟು ಸುಲಭ ಅಲ್ಲ ಬಿಡಿ. ಅಷ್ಟಕ್ಕೂ ಅದೊಂದು ಅನುಭೂತಿ. ಕಾಲಿಡಲು ಜಾಗವಿಲ್ಲದಂತಹ ದಟ್ಟ ಕಾನನವು ವಸುಂಧರೆಯ ಕುಚಕಲಶಗಳ ಮೇಲೆಲ್ಲ ಹಬ್ಬಿದಂತೆ ಆ ಮಲೆನಾಡು.. ಅಷ್ಟಷ್ಟು ದೂರಕ್ಕೆ ಹರಿವ ತೊರೆಗಳನ್ನೆಲ್ಲ ತನ್ನೊಳಗೆ ಸೇರಿಸಿಕೊಂಡು ಹರಿವ ರಭಸದ ಹಳ್ಳಗಳು ಥೇಟ್ ನದಿಗಳಂತೆ ತೋರುತ್ತವೆ. ಕೆಲವು ಸ್ಫಟಿಕಶುಭ್ರ ನೀರಿನ ಹೊಳೆಗಳಾದರೆ ಇನ್ನು ಕೆಲವು ಕೆಂಪು ಬಣ್ಣದ ಕೆಸರಿನ ಹರಿವುಗಳು.. ನಿತ್ಯ ನಿರಂತರ ಸುರಿವ ಮಳೆ, ಅಸಂಖ್ಯ ಪುಟ್ಟ ಪುಟ್ಟ ಜಲಪಾತಗಳು.. ಜೀವಜಲದ ಸೌಂದರ್ಯಧಾರೆಯನ್ನು ತುಡಿತ ತುಂಬಿದ ಓಟದಿಂದ ಓಡಿಸಿಕೊಂಡು ಹೋಗುವ ತೊರೆಗಳು… ಸದಾ ಆರ್ದ್ರವಾಗಿರುವ ವಾತಾವರಣ.. ಆಗಾಗ ಬರುವ ಎಳೆಬಿಸಿಲು ಆ ಗಗನಚುಂಬಿ ಪರ್ವತಗಳ ಮೈಯಲ್ಲಿರುವ ಅರ್ಧ ಪಾಚಿಗಟ್ಟಿದ, ಉಳಿದರ್ಧ ಒದ್ದೆಯಾಗಿ ಬಿಸಿಲನ್ನು ಪ್ರತಿಫಲಿಸಿ ಫಳಫಳಿಸುವ ಬಂಡೆಗಳನ್ನು ದೇವಲೋಕದಂತೆ ಮಿರಿಮಿರಿಗೊಳಿಸುತ್ತವೆ. ಬಿಸಿಲಿಗೆ ಮರಗಳೆಲ್ಲ ಫಳಫಳ ಹೊಳೆದು ಸ್ವರ್ಗ ಸೃಷ್ಟಿಯಾಗುತ್ತಿದ್ದಂತೆ ಮತ್ತೆ ಅದೆಲ್ಲಿಂದಲೋ ಮಂಜಿನಂತೆ ಬಂದ ಮೋಡಗಳು ಕಣ್ಮುಂದಿನ ಬೆಟ್ಟದಿಂದ ಆಕಾಶವನ್ನೆಲ್ಲ ವ್ಯಾಪಿಸಿ ನೋಡುವುದರೊಳಗೆ ಮಾರು ದೂರ ಕಾಣದಂತೆ ದಟ್ಟ ಮಳೆ ಸುರಿಸುತ್ತವೆ. ಈ ಎಲ್ಲ ಸೃಷ್ಟಿಯ ಬೃಹತ್ ಮೈದಾನದಲ್ಲಿ ಮನುಷ್ಯ ನಿರ್ಮಿಸಿದ ಕಪ್ಪು ರಸ್ತೆಗಳು.. ಅವುಗಳಲ್ಲಿ ಬೈಕ್ ಪಯಣ…

ಜೀವಜಲಪಾತ
ಜೀವಜಲಪಾತ

ಮಧ್ಯಾಹ್ನದ ಹೊತ್ತಿಗೆ ಹರೀಶಣ್ಣ ತಿರುಗಾಡಲಿಕ್ಕೆ ಹೋಗೋಣವಾ ಅಂತ ಕೇಳಿದಾಗ ಎಲ್ಲಿ ಅಂತ ಕೇಳಿದೆ. ಆತ ಮೇದಿನಿ ಪರ್ವತಕ್ಕೆ ಅಂದ. ಅದರ ಹೆಸರು ಕೇಳಿ ತಕ್ಷಣ ಪಕ್ಕಾ ಅಂದೆ. ಆ ಹೆಸರೇ ಎಷ್ಟು ಚೆನ್ನಿದೆ ನೋಡಿ!!

ಗೋಕರ್ಣದಿಂದ ಹೊರಟ ನಮ್ಮ ಸವಾರಿ ಕುಮಟಾ ದಾಟಿ ಸಿದ್ಧಾಪುರದ ರಸ್ತೆಯಲ್ಲಿ ಸಾಗಿತು. ಅದೆಷ್ಟೋ ದೂರ ಸಾಗಿದ ಮೇಲೆ ಬೆಟ್ಟದ ಮಧ್ಯದ ಒಂದು ಪುಟ್ಟ ಹಳ್ಳಿಯಲ್ಲಿ ಮೇದಿನಿಯ ವಿಳಾಸ ಕೇಳಿದೆವು. ಅವರು ಇನ್ನು ಸ್ವಲ್ಪ ಮುಂದೆ ಕ್ರಾಸ್ ಸಿಗುತ್ತೆ, ಅಲ್ಲಿಂದ 8 ಕಿ.ಮೀ. ಪರ್ವತ ಹತ್ತಬೇಕು. ಸಿಂಗಲ್ ಇದ್ದರೆ ಬೈಕ್ ಹತ್ತಿಸಬಹುದು. ಎರಡು ಘಟ್ಟ ತುಂಬಾ ಡೇಂಜರ್ ಇದೆ ಅಂದರು. ಸರಿ ಅಂತ ಮುಂದೆ ಹೊರಟೆವು.

ಉಪ್ಪಂಗಿ ಹಣ್ಣು...
ಉಪ್ಪಂಗಿ ಹಣ್ಣು…

ದಾರಿಯಲ್ಲಿ ಅಲ್ಲಲ್ಲಿ ಮೋಡಗಳ ರಾಶಿ ಕಣ್ಮುಂದೆ ಕುಸಿದು ಬಿದ್ದಂತೆ ಬೆಟ್ಟದ ತುದಿಗಳಿಂದ ಹರಿದು ಬಂದಂತೆ ಕಾಣುತ್ತಿದ್ದವು. ಮೇದಿನಿ ಕ್ರಾಸ್ ಬಂತು. ಬುಡದಿಂದಲೇ ಭಾರೀ ಘಟ್ಟ. ಸುಮಾರು ಐನೂರು ಮೀಟರ್ ಕಷ್ಟಪಟ್ಟು ಬೈಕ್ ಹತ್ತಿಸಿದೆವು. ಆದರೆ ಮುಂದಿನ ದಾರಿ ನೋಡಿ ಬೈಕ್ನಲ್ಲಿ ಮುಂದುವರೆಯಲು ಧೈರ್ಯ ಬರಲಿಲ್ಲ. ಅಲ್ಲೇ ಬೈಕ್ ನಿಲ್ಲಿಸಿ ನಡೆದು ಹೊರಟೆವು.ಅಲ್ಲಿ ನಡೆಯುವುದೊ ಕಷ್ಟವಿತ್ತು.

ಯಾರೂ ಒಂಟಿಯಲ್ಲ...
ಯಾರೂ ಒಂಟಿಯಲ್ಲ…

ಮೊದಲ ಘಟ್ಟ ಹತ್ತುವುದರೊಳಗೇ ಸಾಕುಸಾಕಾಗಿತ್ತು. ಆದರೆ ಮಧ್ಯೆ ಮಧ್ಯೆ ಸಿಗುತ್ತಿದ್ದ ಹಾಲ್ನೀರ ಜಲಪಾತಗಳು ಉತ್ಸಾಹ ತುಂಬುತ್ತಿದ್ದವು. ಅಂತೂ ಸುಮಾರು ಒಂದೂವರೆ ತಾಸು ಕಡುಗಾಡ ಹಾದಿಯಲ್ಲಿ ಸಾಗಿ, ಎಂಜಾಯ್ ಮಾಡಿ ವಾಪಸ್ ಬಂದು ನಿಧಾನಕ್ಕೆ ಬೈಕ್ ಇಳಿಸುವಾಗ ಏಳೂವರೆ.

ಎಲೆಮರೆಕಾಯಿ, ಹಣ್ಣು...
ಎಲೆಮರೆಕಾಯಿ, ಹಣ್ಣು…

ಅಲ್ಲಿಂದ ವಾಪಸ್ ಬರುವಾಗ ಜಟಾಪಟಿ ಮಳೆ. ರೋಡ್ ಚೂರೂ ಕಾಣುತ್ತಿರಲಿಲ್ಲ. ನಾನು ಆ ದಾರಿಗೆ ಹೊಸಬ. ಜೊತೆಯಿದ್ದ ಇನ್ನೆರಡು ಬೈಕಿನವರು ಮುಂದೆ ಹೋದರೆ ನಾನು ಸ್ವಲ್ಪ ಹಿಂದುಳಿದೆ. ನನ್ನ ಹಿಂದೆ ಕುಳಿತಿದ್ದ ವಿನ್ನಣ್ನ ಅಲಿಯಾಸ್ ವಿನಾಯಕ ಭಟ್, ಅವನಿಗೆ ದಾರಿ ಗೊತ್ತಿತ್ತು. ಆದರೆ ಆತ ಜೋರು ಮಳೆಗೆ ಕಣ್ಣು ಉರಿಯುತ್ತದೆ ಅಂತ ಕಣ್ಣು ಮುಚ್ಚಿಕೊಂಡು ಕುಳಿತಿದ್ದ. ಚಂದಾವರದ ಬಳಿ ನಾನು ಸರ್ಕಲ್ ಬಳಿ ಹೀಗಾ? ಅಂತ ಕೇಳಿದೆ. ಅವ ಕಣ್ಣು ಮುಚ್ಚಿಕೊಂಡೇಹೌದು ಅಂದ. ಅದು ಹೊನ್ನಾವರಕ್ಕೆ ಹೋಗುವ ರಸ್ತೆ! ಸುಮಾರು ಐದು ಕಿ.ಮೀ. ದಾಟಿದ ಮೇಲೆ ಹಿಂದಿನಿಂದ ಕಿರಣಣ್ಣನ ಬೈಕ್ ಬಂತು. ಗಾಡಿ ಅಡ್ಡ ಹಾಕಿ ಹುಚ್ಚ್ರಾ, ಎಲ್ಲ್ ಸಾಯೂಕ್ ಹೊಗ್ತಿದೀರಾ ಅಂತ ಬೈಸ್ಕೊಂಡು, ವಾಪಸ್ ಚಂದಾವರಕ್ಕೆ ಬಂದು , ಅಲ್ಲೊಂದು ಹೋಟೆಲಲ್ಲಿ ಬೆಲ್ಲದ ಚಹಾ ಕುಡಿದು ನಂತರ ಕುಮಟಾ ಕಡೆ ಸಾಗಿತು ಪಯಣ..

 

ಹೆಸರಿಲ್ಲದ ಹಣ್ಣು
ಹೆಸರಿಲ್ಲದ ಹಣ್ಣು

ಅಲ್ಲಿ ಒಂದೆಡೆ ಗೋಬಿ ತಿಂದು, ನಂತರ ಪಾಂಡುರಂಗ ಇಂಟರ್‍ನ್ಯಾಷನಲ್ ಹೋಟೆಲ್ಲಿನಲ್ಲಿ ಬಿರಿಯಾನಿ(ವೆಜ್) ತಿಂದು ರಾತ್ರಿ ಒಂಭತ್ತು ಮೂವತ್ತರ ಸುಮಾರಿಗೆ ಗೋಕರ್ಣ ತಲುಪಿದೆವು.

 

ಮೇದಿನಿ
ಅರಿ!, ಮಾನವ, ಮರವೇ ದಾರಿ!

ಬಾನು ಕಾಣದ ಕಾನು

ಹಬ್ಬಿ ನಿಂತಿದೆ ತಾನು!

ತಾಣ ತಾಣದಿ ಹಸಿರು ಹಬ್ಬಿತೇನು!

ಕಾಡು

ಈ ಅಮೋಘ ಸೃಷ್ಟಿಸೌಂದರ್ಯದ ಹಸಿರುಸಿರಿಯಲ್ಲಿ ಶಕ್ತಿರೂಪವಾಗಿ ಅಡಗಿರುವ ಆ ಭವತಾರಿಣಿಯನ್ನು, ನಿತ್ಯಶ್ಯಾಮಲೆ ಈಶ್ವರಿಯನ್ನು, ವಿಪಿನರೌದ್ರೆ ಭವಾನಿಯನ್ನು, ಕಾನನಗಾಮಿನಿ ಶಾಂತಲೆಯನ್ನು ಇದಕ್ಕಿಂತ ಹೆಚ್ಚು ಸದೃಶವಾಗಿ ಇನ್ನೆಲ್ಲಿ ಕಾಣಲು ಸಾಧ್ಯ?! ಈ ವನಗಳಲ್ಲಿ, ಮಲೆನಾಡಿನ ಅಸಂಖ್ಯ ಬೆಟ್ಟ ಗುಡ್ಡ ಜಲಪಾತಗಳಲ್ಲಿ ಆ ಶಕ್ತಿ ಸುಪ್ತವಾಗಿ, ಆದರೆ ಅವಳ ಮಕ್ಕಳ ಪಾಲಿಗೆ ಅಷ್ಟೇ ಮೂರ್ತರೂಪಿಣಿಯಾಗಿ ನೆಲೆಸಿದ್ದಾಳೆ…

ಕಾಡ ಹಾದಿ
ಕಾನನದ ಇಳಿಹಾದಿ

 

ಕಾಡು
Lets go!

 

 

ನೀರೊರತೆ
ನೀರೊರತೆ

 

ಹನಿ ಹಣ್ಣು
ಹಂಪಲಿಗೆ ತಂಪಲು

ಜೈ ಕಾನ್ದೇವಿ!

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಆಷಾಢ…

ಜೋಯಿಸರ ಮನೆಯಲ್ಲಿ ನಿಶ್ಶಬ್ಧ ಕೋಣೆಯಲಿ
ಯಾವುದೋ ಗುಂಗಿನಲಿ ಕುಳಿತಳಾಕೆ
ಬಂದಾಗ ತುಂಬಿದ್ದ ಉತ್ಸಾಹ ಈಗಿಲ್ಲ
ಕಾಲ ಸರಿಯುತ್ತಿಲ್ಲ ಹೀಗೆ ಯಾಕೆ?

ಎಷ್ಟು ತಪಿಸುತ್ತಿಹನೊ ನನ್ನ ನಲ್ಲನು ಅಲ್ಲಿ
ಎಂಬ ಚಿಂತೆಯಲವಳು ಬೆಂದು ಬೆಂದು
ಇಷ್ಟು ವಿರಹದ ನೋವ ನಾನು ನೀಡೆನು ಅವಗೆ
ಇಷ್ಟು ದಿನ ಬಿಟ್ಟಿರೆನು, ತಾಳೆನೆಂದೂ

ಅಡುಗೆ ಮಾಡುತಲಿರಲು ಬಂದು ತಬ್ಬುವರಿಲ್ಲ
ಮುದ್ದಾಗಿ ಮುತ್ತನಿಡೊ ಚೆಲುವನಿಲ್ಲ
ನೆಪವಿರದೆ ಬಳಸುತಲಿ ಕಿವಿಯಲುಸುರುವರಿಲ್ಲ
ನನ್ನ ತುಟಿ ಅರಳಿಸುವ ನಲ್ಲನಿಲ್ಲ.

ಏನಡುಗೆ ಮಾಡಿದನೊ ನಸುಕಲೇನ್ ತಿಂದನೋ
ಬಾಡಿಹೋದಾನು ನನ್ನ ನೆನೆದು ಕೊರಗಿ
ಶ್ರಾವಣವು ಬಂದೊಡನೆ ಮೊದಲು ತೆರಳುವೆನಲ್ಲಿ
ಉಳಿದುದನು ಚಿಂತಿಸುವೆ ಎದೆಗೆ ಒರಗಿ!

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಸೀತೆ ದಂಡೆ


ಬಾಡುಮೊಗವದು ಯಾಕೆ ಚೆಲುವೆಯೆ
ನೀಡಲಾರೆನೆ ನೀಳ ಸೀತೆಯ
ದಂಡೆಯನು ಕೊಯ್ತಂದು ಮುಡಿಯಲಿ ಮುಡಿಸಿಬಿಡುವೆನು ನಾ
ನೋಡು ಹೂವನು, ಅದರ ಪರಿಯಲಿ
ಮೂಡಿಸುತ ಹೂ ನಗೆಯ ಮೊಗದಲಿ
ಹಾಡು ಒಲವಿನ ರಾಗ, ಪಡೆಯುತ ಸಿಹಿಯ ಚುಂಬನವ…

 

ನಿನ್ನ ಚೆಲುವಿಗೆ ಬಿಳುಪು ಮಲ್ಲಿಗೆ
ಮುನ್ನ ಬಾಡಿತು ವಿರಹ ತಾಪಕೆ
ಚಿನ್ನ, ಬೇಕೇ ತಂಪು ನೀಡಲು ಸೀತೆಯಾ ದಂಡೆ?
ನನ್ನ ಕಾಡಿದೆ ಹೂವ ಬೇಡಿದೆ
ಇನ್ನು ತಾಳೆನು ಹೂವ ತರುವೆನು
ಕೆನ್ನೆ ಮೇಲ್ಗಡೆ ಹತ್ತು ಮುತ್ತಿನ ಶುಲ್ಕ ನೀಡೀಗ…

 

ಮುಡಿದ ಹೂವಿನ ಗಂಟು ಬಿಡಿಸಲು
ಜಡೆಯ ಚಂದವ ಬಿಡಿಸಿ ನೋಡಲು
ಬಿಡದೆ ಬರುವೆನು ರಾತ್ರಿಯಲಿ ಚಂದಿರನ ಜೊತೆಯಲ್ಲಿ
ತುಡಿತ ತುಂಬಿದ ಆಸೆಗಣ್ಣನು
ಬಡಿತವೇರಿದ ಎದೆಯ ಹಾಡನು
ನಡುಗುವಧರವ ಹೊತ್ತು ಕೂತಿರು ಬರವ ಕಾಯುತಲಿ

 

ಆಕೆ:
ಹೋಗು ಆಚೆಗೆ, ಸಾಕು ಇಲ್ಲಿಗೆ
ಬೇಗ ನೀಡದೆ ತಂದ ಹೂವನು
ಕೈಗೆ ನೀಡದೆ ನಿನ್ನ ಕವಿತೆಯ ಉಸುರುತಿರುವೆಯ ನೀ
ಆಗುಹೋಗದ ಕನಸ ಕಾಣುತ
ಬೀಗದಿರು ಮನದೊಳಗೆ ನಲಿಯುತ
ಸಾಗು ಆಚೆಗೆ ತಂದ ಹೂವನು ನನ್ನ ಕೈಗಿಡುತ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ದುರ್ಗಾ

ಭೀತಜನಭಯಹಾರಿ, ಮಾತೆ, ಸಂ-
ಪ್ರೀತೆ, ಸತತ ಸುಹಾಸಿನಿ
ಆರ್ತಭಕ್ತೋದ್ಧಾರಿ, ದೇವಿ, ಸಂ-
ಗೀತಗಾಯನನಂದಿನಿ

ತಪ್ತಭಕ್ತಮನೋಕ್ತಿಪೂರಿಣಿ
ಮುಕ್ತಿಮಾರ್ಗಸುದರ್ಶಿನಿ
ಶಕ್ತಿರೂಪಿಣಿ ಪ್ರಣತಸಜ್ಜನ-
ತಾಂತರಂಗ ವಿಲಾಸಿನಿ

ಈ ಪೋಸ್ಟ್ ಅನ್ನು ಶೇರ್ ಮಾಡಲು: