ಚಂದ ನಿನ್ನಯ ಸಂಗ
ತಂದ ಸುಖದುತ್ತುಂಗ ;
ಸಾಂಗತ್ಯ ದೊರೆತರೆ ಬೇಗ
ಪ್ರೀತಿ ಸಂಗತಿ ಸಾಂಗ…
ಸಂಗಾತಿ ನೀ ಕರೆದಾಗ
ಸನಿಹಕ್ಕೆ ಬಾ ಎಂದಾಗ
ಪ್ರೇಮಸೌಧದ ಶೃಂಗ
ತಲುಪಿ ನಕ್ಕೆನು ಆಗ…
ಕಂಗಳಲಿ ನೀರಿಳಿದಾಗ
ನೀ ತುಂಬ ದೂರಾದಾಗ
ಎದೆನಡುಗಿ ಮನಸಿಗೆ ರೋಗ
ಒಲವ ಭಾವದ ಭಂಗ…
ಮಾಯಕದ #ಕೆಂಡಸಂಪಿಗೆ
. . . . . .ಸಖ್ಯಮೇಧ
ಜೊತೆ
ಕೆಂಪು ರಂಗೇರಿದೆ ಗಗನ
ತಂಪು ತಂಗಾಳಿಯ ಗಾನ
ಮಂಪರಿನ ಸವಿಸಂಜೆ ಯಾನ…
ಕಂಪೆರೆವ ಹಳೆನೆನಪ ಮನನ…
.
ಆಸರೆಗೆ ತರುಲತೆಗೆ ಮರವು ಇರಬೇಕು..
ಕುಸುಮಕ್ಕೆ ಭ್ರಮರದಾ ಸ್ಪರ್ಶವಿರಬೇಕು…
ನೇಸರನು ತೊಲಗಿದರೆ ಚಂದಿರನು ಬರಬೇಕು..
ಬೇಸರವು ಬಂದಾಗ ನಿನ್ನ ಜೊತೆ ಬೇಕು…
ಮಾಯಕದ # ಕೆಂಡಸಂಪಿಗೆ
. . . . . . ಸಖ್ಯಮೇಧ
ಅಮಾವಾಸ್ಯೆ
ಅಯ್ಯೋ …!!
ಚಂದ್ರ ಕಾಣೆಯಾಗಿಬಿಟ್ಟಿದ್ದಾನೆ..!!
ಗೆಳತೀ …..
ಹುಡುಕಲೇನು…
ನಿನ್ನ ಕಂಗಳಲ್ಲಿ……!!
ಬಾಹುಬಂಧನ
ಬಾಹುಬಂಧನ – ಅದುವೆ – ಭಾವಬಂಧನ!!
ತನುವ ಮಂಥನ-ಮನವು- ನಂದನವನ..!
ಮನದ ಮಿಲನ-ಚಂದ – ಮಂತ್ರಸಮ್ಮೋಹನ..
ನಿನ್ನ ಮನನ- ಹೊಸತು ಭಾವ ಜನನ…!!
. . . . . . ಸಖ್ಯಮೇಧ
ಭಾವಾಮೃತ
ಭಾವಾಮೃತವೇ….,
ಚಂದದಾ ಹಣೆಮೇಲೆ ದುಂಡುಬಿಂದಿಯನಿಟ್ಟು
ಕಣ್ಣಲ್ಲೇ ನೀ ನಾಟ್ಯವಾಡುವಾಗ..
ಮುದ್ದುಕ್ಕಿ ಬಂದಿತ್ತು ಭಾವಬಿಂದಿಗೆ ತುಂಬಿ-
ವಾತ್ಸಲ್ಯದಾ ಪ್ರಸವ – ಮನ ಬೀಗಿದಾಗ..!
.
ಪುಟ್ಟಮೂಗಿನ ಮೇಲೆ
ಪಟ್ಟದಾ ಮೂಗುತಿ..
ಪಟ್ಟಕದ ರೀತಿಯಲಿ ಹೊಳೆಯುವಾಗ..
ತುಟ್ಟಿಯಾಯಿತು ಪ್ರೀತಿ; ಕಣ್ಕಟ್ಟಿತೂ ಬೆಳಕು
ಎದೆತಟ್ಟಿ ಒಲವ ಮನೆ ಕಟ್ಟುವಾಗ…!
.
ಅಡಗಿ ಕುಳಿತಿಹ ಕಿವಿಯ
ಬೆಡಗ ಬಣ್ಣಿಸಲೆಂದು
ಮಡಗಿದಾ ಒಡವೆಯಿದು ಕಿವಿಯೋಲೆ ಕಾಣು..!
ಬಿಡುವು ಆದಾಗೆಲ್ಲ ಕೈಯಿಡುತ ಮುಂಗುರುಳ
ಸಡಿಸುತಲಿ ಕಿವಿ ಮೇಲೆ ಇಡುತಲಿರು ನೀ..!
.
ಮಲ್ಲಿಗೆಯ ಹೊತ್ತು ತಾ ಚೆಲ್ಲಾಟವಾಡುತಿಹ
ಜಡೆಯ ಪಲ್ಲಟ ನಿಮಿಷನಿಮಿಷಕೊಮ್ಮೆ..!
ಗಲ್ಲದಾ ಬೊಟ್ಟಿಗೂ ಇಲ್ಲಿರುವ ಕೂದಲಿಗೂ
ಸಲ್ಲುತಿದೆ ಅಚ್ಚು ಕಲ್ಗಪ್ಪು ಬಣ್ಣ..!
….
ಲಜ್ಜೆಗೆಂಪಿನ ಹಿಮ್ಮಡದ
ಮೇಲ್ಜೋತುಬಿದ್ದಿಹ ಗೆಜ್ಜೆಯು..!
ಮುಚ್ಚುಮರೆಯಲಿ ಹುಚ್ಚು ಹಿಡಿಸಿದೆ
ಇಚ್ಛೆ ಹೆಚ್ಚಿದೆ ಮನದಲಿ..!
.
ಕೆಂಡಸಂಪಿಗೆ …
. . . . . . ಸಖ್ಯಮೇಧ
ಬಳ್ಳಿ
ಅ ನುದಿನವೂ ಹಳೆ ನೆನಪು
ಆ ಕರ್ಷಣೆಯ ಹೊಳಪು
ಇ ರುಳಲ್ಲೂ ನಿನ್ನ ನೆನೆವ
ಈ ಪರಿಯ ಹೊಸ ಹುರುಪು
ಉ ಸಿರಲ್ಲೂ ನಿನ್ನತನ
ಊ ನವಾಗಿಹುದು ಮನ
ಎ ಲ್ಲಿ ದೂರಾಗಿರುವೆ
ಏ ತಕ್ಕೆ ಅಡಗಿರುವೆ
ಐ ಕ್ಯವಾಗುವ ಬೇಗ ಬಂದುಬಿಡು ನೀ…
ಒ ಮ್ಮೆ ನೀ ಬಾ ಸನಿಹ
ಓ ಡಿಸುತ ಈ ವಿರಹ
ಔ ಪಾಸಿಸಿಹೆ ನಿನ್ನ ಹೆಸರ ಅನವರತ…
ಅಂತರಾತ್ಮವು ನಿನ್ನ ಬರಕಾಯುತಿಹುದು…
ಅಹುದು ಆಗಲಿ ಎಂದು ಬಂದುಬಿಡು ನೀ…
.
ಕೆಂಡಸಂಪಿಗೆ
. . . . . . . . ಸಖ್ಯಮೇಧ
ಹೂ…
ನೀನಿರದೇ….,,,
ಗೆಳತೀ …,
ನೀನಿರದಿರೆ….
ಖುಷಿನೀಡದು ಶಶಿಯುಷೆಯೂ
ತೃಷೆನೀಗದು ಪೀಯೂಷವೂ
ನಶೆಯೇರದು ನಿಶೆಯಲ್ಲೂ
ದಿಶೆತಪ್ಪಿದೆ ಆಶೆಯದು…
.
ವಶವಾಗಿಹೆ ಕುಶಲತೆಗೆ
ಸುಷ್ಮಸುಮಸಮಾಕರ್ಷಣೆಗೆ…
ಕೃಶವಾಗಿಹೆ ಮನಸೋತಿಹೆ
ಹೊಸಭಾವದ ಘರ್ಷಣೆಗೆ…!
ಕೆಂಡಸಂಪಿಗೆ
ಶಿಶಿರ
. . . . . . . ಸಖ್ಯಮೇಧ
ಅವಳು
ಮಂಜಿನೋಕುಳಿ ನಡುವೆ
ತೊಯ್ದಿರುವ ಗರಿಕೆಯಾ-
ಮೇಲಿರುವ ಇಬ್ಬನಿಯು
ಅವಳ ಕಣ್ಣಂತೆ…!
ಬೀಸುಗಾಳಿಗೆ ಕೊಂಚ-
ಕೊಂಚವೇ ಬಳುಕುವಾ
ಹೊಂಬಾಳೆ ಬಿರಿದಂತೆ
ಅವಳ ನಗುವು…!
ಕಲ್ಪವೃಕ್ಷದ ಮೇಲೆ
ಇಬ್ಬನಿಯು ಒಂದಾಗಿ
ಹನಿಯು ಕೆಳಗಿಳಿವಂತೆ
ಅವಳ ಮಾತು…!
. . . . . ಸಖ್ಯಮೇಧ
ಮೆರವಣಿಗೆ
ಮನದ ಬಾನಲ್ಲಿ ನೀ ನಲಿವ ನಕ್ಷತ್ರ…
ಕನಸ ಗೋಡೆಯ ತುಂಬ ನಿನ್ನದೇ ಸುಚಿತ್ರ…
ಅನುನಯದಿ ಒಲವಾದೆ ನೀ ಕೆಂಡಸಂಪಿಗೆ …
ಎದೆಯ ಬೀದಿಯ ತುಂಬ
ನಿನ್ನದೇ ಮೆರವಣಿಗೆ …
.
ನಿನ್ನ ಮನನದಿ ನನ್ನತನವಿನ್ನು ಗೌಣ…
ನಿನ್ನ ನಗುವಲಿ ನನ್ನ ತ್ರಾಣವೂ ಲೀನ…
ನಿನ್ನ ನೆನಪಲಿ ಮನವು ಅನುದಿನವೂ ತಲ್ಲೀನ…
ನಿನ್ನ ಮಿಲನದಿ ನನ್ನ ಜನ್ಮವೂ ಧನ್ಯ…
. . . . . ಸಖ್ಯಮೇಧ