ಕೆಂಡಸಂಪಿಗೆ

#ಕೆಂಡಸಂಪಿಗೆ

ಮಾಂಡೋವಿಯ ಮಡಿಲಲ್ಲೂ ಶಾಲ್ಮಲೆಯದೆ ಕನವರಿಕೆ
ಮಲೆನಾಡಿನ ಕಡುಸಂಪಿಗೆ ನನ್ನದೆಂಬ ಮನವರಿಕೆ

ಸಂಪಿಗೆಯಂಥಾ ಹುಡುಗಿಯ ಒಲವಿನ ಹುಚ್ಚೆನಗೆ
ಅವಳ ಬಿಟ್ಟು ಜಗದ ಎಲ್ಲ ಸಿರಿಸುಖ ಹೆಚ್ಚೆನಗೆ
ಮೃದುಲೆ ಬಿಟ್ಟು ಹೋದ ಬೆಳಕೆ ಬದುಕಿಗೆ ರಹದಾರಿ
ಸಾಂಗತ್ಯದ ರುಚಿಯ ತೋರಿ ಹೋದಳು ಈ ಕುವರಿ

ಈ ಮೋಹದ ಹೂವು ಅರಳಿ ಎದೆಶಾಲ್ಮಲೆ ತೀರದಿ
ತಿಳಿಮನದಲಿ ತಂಗಾಳಿಗೆ ಕಂಪು ಬೆರೆಸಿ ಬೆರಗಾಗಿಸಿ
ಅಂತರಂಗವೆಲ್ಲ ಕೆಂಡಸಂಪಿಗೆಯೊಲು ಕೆಂಪೇರುತ
ಸಂಭ್ರಮವಿದೆ ಮನದತುಂಬ ಭ್ರಮರ ಮೆರೆವ ಪರಿಯಲಿ..

ಅವಳು ಕೂಡ ಸಂಪಿಗೆಸುಮದಂಥ ಗುಣದ ಹುಡುಗಿ
ಒಮ್ಮೆ ಕಂಡ ಅವಳ ಕಂಪು ಬದುಕೆಲ್ಲಾ ಹರಡಿ
ದಾರಿ ತುಂಬ ಅಮಲು, ಘಮಲು, ನಾನೇ ಸರದಾರ
ಜೊತೆನೀಡಲು ಬರುವಳೇನು, ತರುತ ನಗೆಯ ಹಾರ?!

ಕವನತನಯ

ಕೆಂಡಸಂಪಿಗೆ
ಕೆಂಡಸಂಪಿಗೆ

ಯುಗಾದಿ

#ಕೆಂಡಸಂಪಿಗೆ
ತಗಾದೆ ತೆಗೆಯದಿರು ನೀ, ಯುಗಾದಿ ಬಂತೆಂದು
ಹೊಸ ಸೀರೆ ಬೇಕೆಂದು, ನನ್ನ ಚಿನ್ನ!
ಬೇಗುದಿಯು ಇದ್ದದ್ದೆ, ಒಗೆದ ಅಂಗಿಯ ಕಿಸೆಯು
ಬರಿದಾಗಿ ನಗುತಿಹುದು, ನನ್ನ ರನ್ನ!
.
ನನ್ನ ತೋಳಿನ ಉಡುಗೆ, ಬಳಸುಕೈಗಳ ತೊಡುಗೆ
ಚೆಲುವೆ ಅದುವೇ ನನ್ನ ಒಲವ ಕೊಡುಗೆ!
ಮಾಡಿಬಿಡು ಸಿಹಿ ಅಡುಗೆ, ಹೋಗೋಣ ನಡೆ ಗುಡಿಗೆ
ಸೀರೆ ಬೇಕೆನ್ನದಿರು ಮತ್ತೆ ಕಡೆಗೆ!
_____________________________________
೧೯೫೦ರಲ್ಲಿ ಬದುಕಿದ್ದರೆ ಹೀಗೆ ಬರೆಯಬಹುದಿತ್ತೇನೋ ಅಂತ 😉

ಕೆಂಡಸಂಪಿಗೆ

#ಕೆಂಡಸಂಪಿಗೆ

ಪೀತಪುತ್ಥಳಿಯಂಥವಳ ಬಳಿ
ಪ್ರೀತಿ ಪರಿಮಳಪುಷ್ಪವರಳಿ
ಛಾತಿ ಮೆರೆದಿದೆ ಮೋಹದಾ ಸುಳಿ,
ಗೆಳತಿ ಮುತ್ತಿನ ಬಳುವಳಿ

ಕೆಂಡಸಂಪಿಗೆ ನೆನಪು ಬರುತಿದೆ
ಕಂಡು ಅವಳಾ ಮೊಗವನು
ಭಂಡ ಮನಸೇ, ತಡವು ಏತಕೆ
ಹಿಂಡು ಕೆನ್ನೆಯ ತುಂಡನು

ಬಂಧಿಸುತ ತುಟಿ ಬಾಹುಭುಜಗಳ
ಸಂಧಿಸುತ ಸಿರಿದೇಹವ
ಗಂಧವಿಲ್ಲದೆ ಕಂಪು, ಕಂಪನ
ಸಿಂಧು ಪ್ರೇಮದ ಇಂಪನ

ತೀರ ಸನಿಹದಿ ನನ್ನ ಸಂಪಿಗೆ
ಬರಲು ಮೊಗ್ಗಿನ ಭಾವದಿ
ಚೂರು ಚೂರೇ ಅರಳಿ ನಕ್ಕಳು
ಇರಲು ಎನ್ನಯ ಮಡಿಲಲಿ..

. . . . . . ಕವನತನಯ (ಕಾಲ್ಪನಿಕವಷ್ಟೇ)

ಭಾರತಿ

ಬಹುವಿಶಾಲಳೀ ಭಾರತಿ
‘ಸರ್ವದಾ’ತೆ ಸುಸ್ಮಿತೆ
ಧರ್ಮ ಧೈರ್ಯ ಸಿರಿಸಂಸ್ಕೃತಿ
ಈ ಮಾತೆಯ ಅಸ್ಮಿತೆ! ।।

ಹರಿವ ಸುರಿವ ಹನಿನೀರೂ
ಸಿಹಿನೀರಿನ ಗಂಗೆ
ಮಣ್ಣಮಡಿಲಲೊರಗುವವಗೆ
ತಂಪನೀವ ಹೊಂಗೆ
ರಾಮ ಬುದ್ಧ ಯುವವಿವೇಕ
-ರುಸಿರಿದೆ ಕಣಕಣದಿ
ಒಮ್ಮೆ ನೆನೆದು ಧನ್ಯನೆನ್ನು
ಭಕ್ತಿದುಂಬಿ ಮನದಿ

ಇಲ್ಲದಿರುವುದನ್ನು ನೆನೆದು
ಮರುಗಬೇಡ ನೀ ವೃಥಾ
ಇರುವ ಸಿರಿಯ ಕಂಡು ಸುಖಿಸು
ನುಡಿವೆಯೇಕೆ ಅನೃತ
ಭಾರತೀಯನೆಂಬ ಪದವಿ
-ಗಿಂತ ಸಿರಿಯು ಬೇಕೇ?
ಒಮ್ಮೆ ಅರಿತು ಹೆಮ್ಮೆ ಪಡಲು
ಬೇರೆ ಸುಖವು ಬೇಕೇ?!

ಕೆಂಡಸಂಪಿಗೆ

ಮಿನುಗುತಾರೆಯ ರಾತ್ರಿ, ಜಿನುಗುತಿರೆ ಪ್ರೇಮಮಧು
ಗುನುಗುತಿಹೆ ಜೇನ್ದುಟಿಯ ಹುಡುಗಿ ಹೆಸರ
ಹೂನಗೆಯ ಬೀರುವಳು, ಮನಗಿರಿಯ ನವಿಲವಳು
ರಮಿಸಿ ಸಿಹಿಮುತ್ತಿಡಲು ನನಗವಸರ

ಮುತ್ತಿಟ್ಟ ಘಳಿಗೆಯಲಿ ಹಚ್ಚಿಟ್ಟ ಕಿರುದೀಪ
ಮಿಸುಕಾಡಿ ನಾಚಿಕೆಗೆ ಆರಿಹೋಯ್ತು
ಮೃದುಗೈಯ ಬಳಸುತಿರೆ ತಂಗಾಳಿ ಸುಳಿದಾಡಿ
ಅರೆತೆರೆದ ಕಿಟಕಿಯೂ ಮುಚ್ಚಿಹೋಯ್ತು

ಕತ್ತಲಲಿ, ಮತ್ತಲ್ಲಿ, ಅವಳ ಕಣ್ಣಲಿ ಕಾಂತಿ
ಅದರ ತುಂಬಾ ನನ್ನ ಕುರಿತು ಪ್ರೀತಿ
ಕೆಂಡಸಂಪಿಗೆಯಂಥ ಅವಳ ಮೊಗದಾ ತುಂಬ
ಮುತ್ತಿಡುವೆ ಮೊದಲ ಮಳೆ ಸುರಿವ ರೀತಿ

ನನ್ನ ಗೋಕುಲದಲ್ಲಿ ಅವಳೇನೆ ರಾಧಿಕೆಯು
ಅವಳ ರಾಗದಿ ಕರೆವ ಶ್ಯಾಮ ನಾನು
ಅವಳು ನನ್ನನು, ನಾನು ಅವಳನ್ನು ಧೇನಿಸಲು
ನಡುವೆ ಹರಿವಳು ಪ್ರೀತಿ ಯಮುನೆ ತಾನು!

‘ನನ್ನ ನಲ್ಲನೆ!’ ಎಂದು ಮುತ್ತಿಡಲು ನನ್ನಾಕೆ
ಸುತ್ತೆಲ್ಲ ಯಾಕೇನೊ ಮಸುಕು ಮಸುಕು
ಬಿದ್ದ ಕನಸದು ಹರಿದು ಎಚ್ಚರವು ನನಗಾಗೆ
ಬಹುನಿರಾಸೆಯ ಸಮಯವದುವೆ ನಸುಕು
ಕನಸುಗಳ ಕಾಣುತಿರೆ ಚಂದ ಬದುಕು…

– ಕವನತನಯ

ಕೃಷ್ಣ

ಗೋವಿರದ ಮನೆಯಲ್ಲಿ ಬೆಣ್ಣೆ ದೂರದ ಮಾತು
ಚೊಂಬು ಹಾಲಿಗೆ ಅಷ್ಟು ನೀರು ಬೆರೆತು
ನೀರುಮಜ್ಜಿಗೆಯಲ್ಲೂ ಚೂರು ಬೆಣ್ಣೆಯು ಕಾಣ-
ಲದನು ತಿನ್ನುವ ನಾನು ಶ್ಯಾಮನಂತೆ! – ಕೃಷ್ಣ !
ತಾಯಿ ಪ್ರೀತಿಗೆ ಬೇರೆ ಎಲ್ಲೆಯುಂಟೆ?!

ನಿನ್ನ ಪರಿಯಲಿ ನಾನು ಬೆಣ್ಣೆಯನು ತಿಂದಿಲ್ಲ
ಆ ಯಶೋದೆಯೊಲಿದ್ದ ನನ್ನ ತಾಯಿ
ಬೆಣ್ಣೆಯಿರದಿರಬಹುದು ಹಣ್ಣು ಇರದಿರಬಹುದು
ಕೃಷ್ಣನಂತಿರುವೆಂದಳೆನ್ನ ತಾಯಿ – ಕೃಷ್ಣ !
ತಾಯಿಯೆಂಬುವಳೆಷ್ಟು ಮಾತೃಹೃದಯಿ!

ಕದಿಯಬಾರದು ಎಂದು ಕಿವಿಹಿಂಡಿ ಹೇಳಿದಳು
ತಿನ್ನಿಸುತ ತಾ ದುಡಿದ ತುತ್ತು ಅನ್ನ
ಸಂಜೆಯೇರಿದ ಮೇಲೆ ಬೆಳಕಿಲ್ಲ ಮನೆಯಲ್ಲಿ
ಕತ್ತಲಲಿ ನಾನೀಗ ಅವಳ ‘ಶ್ಯಾಮ’! -ಕೃಷ್ಣ!
ನಮಗಾಗಿ ಬೆಳಕ ಬೀರಿದನು ಸೋಮ!

ನಿನ್ನ ತಾಯಿಯ ಬಿಟ್ಟು ದೂರ ಸಾಗಿದೆ ನೀನು
ಅವಳು ಹೋದಳು ಇಲ್ಲಿ ನನ್ನ ಬಿಟ್ಟು
ದುಃಖವೇನೂ ಇಲ್ಲ ಆಶ್ರಿತರು ಎಲ್ಲರಿಗೂ
ಅನ್ನ ನೀಡುತ ಪೊರೆವ ತಾಯಿ ನೀನು! – ಕೃಷ್ಣ!
ನನ್ನ ಕಾಯುತಲಿರುವ ತಂದೆ ನೀನು!

ಹಣವೇನು ಮಾಡೀತು ಮನೆಯೇನು ಮಾಡೀತು
ನೂರುಶಶಿಮುಖಿಸುಖವು ಏನು ಕೊಟ್ಟೀತು?
ಕೃಷ್ಣ ಕೃಷ್ಣಾ! ಎಂದು ನಿನ್ನ ನೆನೆಯುವ ಬುದ್ಧಿ
ಬರದಿರಲು ಜೀವನವೆ ಕೈಯ ಕೊಟ್ಟೀತು! – ಕೃಷ್ಣ!
ನಿನ್ನ ಉಪದೇಶವದು ಬದುಕ ಕಟ್ಟೀತು!

ಏನಿಲ್ಲವೆಂದಿಲ್ಲ ನನಗೇನೂ ಬರವಿಲ್ಲ
ಒಮ್ಮೆ ನಿನ್ನಯ ಕಂಡು ನಮಿಸುವಾಸೆ
ಕಾಳಸರ್ಪನ ತುಳಿದ ನಿನ್ನ ಮೃದುಪಾದಗಳ
ಒಮ್ಮೆ ನನ್ನೆದೆ ಮೇಲೆ ಇಡಿಸುವಾಸೆ! -ಕೃಷ್ಣ!
ವಿಷ್ಣುಪದವಾಸ್ತವ್ಯ ಮಾಡುವಾಸೆ!

ಕೃಷ್ಣಂ ವಂದೇ ಜಗದ್ಗುರುಂ

ಜಗವೆನ್ನ ಒಳಗಿರಲು ಭಗವಂತ ನಗುತಿರಲು
ನನ್ನೊಳಗೆ ನೂರಾರು ರುದ್ರಲೀಲೆ
ಗಿರಿಧರನೆ ನೀ ನಿಜದಿ ಕಂಡ ಲೀಲೆಗಳೆಲ್ಲ
ಎನ್ನೊಳಗೆ ಸಂಭವಿಸಿ ನಗೆಯ ಮಾಲೆ…

ನೀನೆನಗೆ ಶ್ರೀಕೃಷ್ಣ ನಾ ನಿನಗೆ ಶ್ರೀಕೃಷ್ಣ
ನೀನುನಾನೆಂಬ ಅಂತರವೂ ಕರಗಿ
ನಾನಿಲ್ಲ ನೀನಿಲ್ಲ ಜಗವೆಲ್ಲವೂ ಒಂದು
ಬಿಂದುವಲಿ ಸಂಧಿಸಿರೆ ಸೋತೆ ಬಾಗಿ

ಮೇರುವಿಂಧ್ಯಾದ್ರಿಯಲಿ ಸೌಂದರ್ಯಕಾಶಿಯಲಿ
ತಪಿಸುತಿಹ ಪರಮಶಿವ ಶ್ರೀಉಮೇಶ
ಪರಮಶಿವನೆದೆಯಲ್ಲಿ ಕುಳಿತು ಜಗ ನೋಡುತಿರೆ
ನಾಕನೂಪುರ ಕೂಡ ಕಾಲಕೆಳಗೆ

ಕೃಷ್ಣನಂತಿಹ ವಿಷ್ಣು ಪರಮಶಿವ ಈಶನೂ
ಸಂಧಿಸಿದ ಪರಿಯಲ್ಲಿ ಈಗ ನನ್ನಲ್ಲಿ-
ಎದೆಯಲ್ಲಿ ಮುದ’ಮೋಹಿನಿ’ಯು ಪ್ರೀತಿ’ಶಿವ’ನನ್ನು
ವರಿಸೆ -ಕಣ್ಣೀರ’ಮಣಿ, ಕಂಠ’ತುಂಬಿ

ಕೆಂಡಸಂಪಿಗೆ

#ಕೆಂಡಸಂಪಿಗೆ

ಸಂಪ್ರೀತಿ ಸಮಪ್ರೀತಿ ತುಸುಸರಸ ಸಲ್ಲಾಪ
ನನ್ನ ಮತ್ತವಳ ಬಳಿ ಒಲವಿನದೇ ಆಲಾಪ

ಬೆಣ್ಣೆಗೆನ್ನೆಗೆ ಬಣ್ಣವೇರಿಸಲು ಮುತ್ತಿಡಲು
ನಾಚುವಳು, ರಾತ್ರಿಯನು ನಾಚಿಸುವಳು
ನನ್ನೆದೆಯಲವಳೆಂಬ ಹಾಲ್ಗಡಲು ಮಲಗಿರಲು
ಈ ರಾತ್ರಿ, ಈ ಬದುಕು ಸ್ವರ್ಗ ಕೇಳು!

ಗೆಜ್ಜೆ ಘಲ್ಲೆನಿಸುತ್ತ ಮನೆತುಂಬ ಓಡಾಡಿ
ತುಂಬುವಳು ಈ ಮನದ ಖಾಲಿತನವ
ಉಲಿಯುತ್ತ ಮುತ್ತಂತ ಮುದ್ದುಮಾತುಗಳನ್ನ
ನಲಿಯುವಳು ಬೆಳಗುವಳು ನನ್ನ ದಿನವ

ಮಡದಿಯೆನ್ನುವ ನಲ್ಲೆ ಸಂಪಿಗೆಯ ಹೂಮಾಲೆ
ಘಮಿಸುವಳು ಎಂದಿಗೂ ಬಾಡದಂತೆ
ತುಂಬಿಹಳು ಬದುಕಲ್ಲಿ ಸಂತೃಪ್ತ ಸುಖಭಾವ
ದೇವರಲಿ ಇನ್ನೇನೂ ಬೇಡದಂತೆ

-ಕವನತನಯ ( ನನಗೂ ಇದಕ್ಕೂ ಸಂಬಂಧವಿಲ್ಲಾ… 😉 )

img_20160917_044743

ಮುಕುಟದಲ್ಲಿಹ ಮಣಿಯು ಮಿರುಗಿ ತಾ ಮಿನುಗಿ
ಇಂದುರೂಪದ ಗಂಧ ಮುಂದಲೆಯಲಂದದಲಿ
ಮೆರೆಯೆ, ಗರಿಮಡಿ ಗರಿಮೆಯಿಂದಲಂಕರಿಸಿರಲು
ಸೊಗದಿ ನಗೆ ಸೂಸಿರಲು ಮೊಗವು ಸುಪ್ರಸನ್ನತೆಗೆ
ಮುರಳಿಲೋಲನು ಜಗದ ಒಡೆಯ ತಾ ಒಡವೆಗಳ
ಸೋಲಿಸುತ ಹೆಚ್ಚೆಚ್ಚು ಕಾಂತಿಯಲಿ ಹೊಳೆಯುವನು,
ಶತಕಾವ್ಯದೊಡೆಯ, ಮನವಿಪಿನಪರ್ವತಶಿಖರ-
ಸ್ಥಾನಾಕ್ರಮಿತ ಕವನಕಾನನದ ಸಂಚಾರಿ
ನಮಿಸಿ ಪಾದಕೆ ವಂದಿಸುವವನೆದೆಗೆ ಮುದವೀವ
ಮುದಕರನು ಶುಭಕರನು ಮಯೂರಗರಿಕೆಯ ಮೆರೆಸಿ
ಶಿರದಿ ಧರಿಸುತ ಧರೆಯ ಪೊರೆವವನು ನೀ ಕೃಷ್ಣ,
ಮೊರೆಕೇಳಿ ಹೊರೆಯಿಳಿಸು ಧರೆಯೆಲ್ಲ ಮೆರೆವಂತೆ
ಹಾರೈಸು, ಕೋರೈಸುವಾ ಮೊಗದಿ ಮುಗುಳುನಗೆ
ಸೂಸು, ಕನಕನ ಪ್ರಿಯನೆ, ಕಣಕಣವನುದ್ಧರಿಸು
ದರುಶನವ ಬಯಸಿರಲು ಮನದಂಧಕಾರವ ಸು-
ದರ್ಶನವೆನ್ನುವಾಯುಧದಿ ಸಂಹರಿಸಿ
ಮಮಕಾರ ತೋರು ನೀ ಸಾಕಾರರೂಪನೇ
ತಪ್ಪು ಒಪ್ಪುಗಳನ್ನು ತಪ್ಪದೆಯೇ ಕ್ಷಮಿಸುತ್ತ
ಕ್ಷಯಗೊಳ್ಳದಿರುವಂತೆ ಭಕ್ತಿ ಶಕ್ತಿಗಳೆಂದೂ
ಎತ್ತ ಇರಲತ್ತ ಎಮ್ಮ ಸುತ್ತಿಬಹ ಕಷ್ಟ ಕಾ-
ರ್ಪಣ್ಯ ರಾಶಿಯ ಕಳೆದು ರಕ್ಷಿಸುತ ಅನವರತ
ಕೃಪೆಮಾಡು ಮಾಧವನೆ! ಸಿರಿ ಸುಪ್ರಭಾತ..

ಕೆಂಡಸಂಪಿಗೆ

medialy-jhakaas-abhinetri-rinku-rajguru

 

ಶಾಲ್ಮಲೆಯ ಮಡಿಲ ಸಂಪಿಗೆಹೂವೆ ಚೆಲುವೆ

ಧಮನಿಗಳ ತುಂಬ ಜೇನ್ಹೊಳೆಯ ತಂದವಳೇ

ನೆನೆಯೆ ಜಾಣೆಯೆ ನಿನ್ನ, ದಿನವೆಲ್ಲ ದಣಿವಿಲ್ಲ

ಎದೆಯ ಕೋಣೆಗೆ ನಿನ್ನ ಬರವಿರದೆ ಸೊಗಸಿಲ್ಲ

 

ಊಟ ತೊರೆಯುತ ಕೂತೆನಂದು ನಿನ್ನಾ ನುಡಿಗೆ

ನೀನಾಡೊ ಸಿಹಿಮಾತು ಮಂದಹಾಸದ ಬೆಡಗೆ!

ಇಂದೇಕೆ ಸುಮ್ಮನಿಹೆ ಹಾಗೇಕೆ ದೂರಾದೆ

ನಮ್ಮ ನಡುವಲಿ ಪ್ರೀತಿ ಹೂವರಳದೆ?

 

ಎದೆಖಾಲಿ ತಲೆಖಾಲಿ ಮನಖಾಲಿಯಾದಾಗ

ನಿನ್ನ ನೆನಪೇ ನನ್ನ ತುಂಬಿ ಬರಲು

ಕಹಿಯೆಲ್ಲ ಸಿಹಿಯಾಗಿ ಹೂವೆಲ್ಲ ನೀನಾಗಿ

ಕಂಡ ಹೂವಲ್ಲೆಲ್ಲ ನಿನ್ನ ಬಿಂಬ

ನೀನೇನೆ ತುಂಬಿರುವೆ ಎದೆಯ ತುಂಬ