ಚಂದ್ರೇಶ್ವರ ಭೂತನಾಥ ಪರ್ವತ – ಒಂದು ಪ್ರಯಾಣ.

ಗೋವಾದ ಖ್ಯಾತ ದೇವಳಗಳಲ್ಲಿ ಒಂದು ಚಂದ್ರೇಶ್ವರ ಭೂತನಾಥ ಮಂದಿರ. ಇಲ್ಲಿನವರ ಬಾಯಲ್ಲಿ ಇದು “ಪರ್ವತ”. ಬೃಹತ್ ಬೆಟ್ಟವೊಂದರ ತುದಿಯಲ್ಲಿ ಇರುವ ಈ ಮಂದಿರದ ಬಳಿಯಿಂದ ಸುತ್ತಮುತ್ತಲಿನ ದೂರದವರೆಗಿನ ಪ್ರದೇಶದ ಪಕ್ಷಿನೋಟ ಕಣ್ಸೆಳೆಯುತ್ತದೆ. ಮಳೆಗಾಲದಲ್ಲಿ ಭೇಟಿ ಕೊಡಲು ಇದು ಪ್ರಶಸ್ತ ಜಾಗ.

Chandreshwar Bhootnath Temple, Goa
ಪರ್ವತಕ್ಕಿಂತ ಮೊದಲು ಎದುರಾಗುವ ಕಮಾನು

 

A view from chandreshwar Bhootnath Temple, goa
ದೇವಳದ ಹೊರ ಆವರಣದಿಂದ ಕಾಣುವ ದೃಶ್ಯ.

ಪರ್ವತದ ಬಹುತೇಕ ತುದಿಯವರೆಗೂ ವಾಹನ ಒಯ್ಯಬಹುದು. ಆದರೆ ವಾಹನ ಚಲಾಯಿಸುವಾಗ ತುಂಬಾ ಎಚ್ಚರಿಕೆ ಅವಶ್ಯ. ಕಿರಿದಾದ ರಸ್ತೆಯ ಮೈ ಪೂರ್ತಿ ಘಟ್ಟ ಮತ್ತು ತಿರುವುಗಳೇ ತುಂಬಿವೆ. ದೇವಸ್ಥಾನಗಳಲ್ಲಿ ಫೋಟೋ ತೆಗೆಯುವುದು ನಿಷಿದ್ಧವಾದ್ದರಿಂದ ಒಳ ಆವರಣದ ಫೋಟೋಗಳು ಇಲ್ಲ.

Chandreshwar Bhootnath Temple, goa

ಅಂತಹ ಬೆಟ್ಟದ ತುದಿಯಲ್ಲೂ ಇಷ್ಟೊಂದು ವ್ಯವಸ್ಥಿತವಾಗಿ ದೇವಸ್ಥಾನ ಕಟ್ಟಿರುವ ಮಾನವ ಪ್ರಯತ್ನ ಸಣ್ಣದಲ್ಲ. ಅದಕ್ಕಿಂತ ಹೆಚ್ಚಾಗಿ ಅಲ್ಲೇ ಸ್ವಲ್ಪ ದೂರದಲ್ಲಿ ಒಂದು ಮೊಬೈಲ್ ಟವರ್ ಕಟ್ಟಿದ್ದಾರೆ. ಅದರ ಎತ್ತರ ಕಂಡು ಎಂಥವರೂ ಬೆರಗಾಗಬೇಕು. ಮಂದಿರದ ಬಳಿ ನಿಂತು ನೋಡಿದರೆ ಆ ಎತ್ತರದ ಟವರ್ ಬೃಹದಾಗಿ ಕಾಣುತ್ತಿದ್ದರೆ ಅದರ ಬುಡದಿ ನಿಂತ ಮನುಷ್ಯರು ಇರುವೆಗಿಂತ ಚಿಕ್ಕದಾಗಿ ಕಾಣುತ್ತಿದ್ದರು.

ದೇವಸ್ಥಾನದ ಮೆಟ್ಟಿಲ ಬಳಿ ಒಬ್ಬಾತ ಲಿಂಬು ಸೋಡಾ ಮಾರುತ್ತಾನೆ. ಒಂದು ಗ್ಲಾಸ್ ಹದವಾಗಿ ಬೆರೆಸಿದ ನಿಂಬು ಸೋಡಾ ಕುಡಿದರೆ ಸುತ್ತಾಡಿದ ಆಯಾಸವೆಲ್ಲ ಬಹುದೂರ.

Kavanatanaya vishwanath gaonkar ಕವನತನಯ
ನಡು ದಾರಿಯಲ್ಲಿ….

ಮಡಗಾಂವ್ ದಿಂದ ಇಲ್ಲಿಗೆ ಹೋಗಲು ನಲವತ್ತು ನಿಮಿಷ ಸರಾಸರಿ ಬೇಕು. airport ನಿಂದ ಕನಿಷ್ಠ ಒಂದೂವರೆ ತಾಸು. ಮಡಗಾಂವ್ ದಿಂದ quepem (ಕೆಪೆ)ಗೆ ಹೋಗುವ ದಾರಿಯ ಮಧ್ಯದಲ್ಲಿ ದೊಡ್ಡ ಕಮಾನು ಎದುರಾಗುತ್ತದೆ. ಅಲ್ಲಿಂದ ಬೆಟ್ಟದ ದಾರಿಯಲ್ಲಿ ಸಾಗಬೇಕು.

ಗೋವಾಕ್ಕೆ ಭೇಟಿ ಇತ್ತಾಗ ನೋಡಲೇ ಬೇಕಾದ ಸ್ಥಳಗಳಲ್ಲಿ ಇದೂ ಒಂದು.ಹತ್ತಿರದಲ್ಲಿ ಕುರ್ತರಿ ಮಹಾಮಾಯೆ, ಜಾಂಬಾವಲಿ ಮುಂತಾದ ನೋಡಬಹುದಾದ ಸ್ಥಳಗಳಿವೆ.

ಹಸ್ತಾಲಿಂಗನ….

ಕರದಿ ಸ್ಫುರಿಸಿದ ಪ್ರೇಮದಮೃತವು
ಹರಿಯಿತೊಲವಿನ ಹೊಳೆಯೊಲು
ಚರಮ ಸೀಮೆಯ ಅಮರ ಪ್ರೇಮವು
ಬೆರೆಯಿತೀ ತನುಮನದೊಳು

ಬೆಸೆದ ಬೆರಳೊಳು ಬಸಿವ ಪ್ರೀತಿಯು
ಹೊಸಗನಸಿಗಿದು ಆಸರೆ
ಹೊಸೆದ ಕೈಗಳು ಹುಸಿಯ ನುಡಿಯವು
ಹಸಿದೆನಗೆ ನೀ ಕೈಸೆರೆ

ವಿರಹ ತಾಪದಿ ಒಲವ ದೀಪಕೆ
ಎಣ್ಣೆ- ಕೈಯೊಳಗಿನ ಪಸೆ
ಸಾಂದ್ರ ಪ್ರೀತಿಗೆ ಸಾಕ್ಷಿ ನೀಡಿವೆ
ಬೆಸೆದ ಕೈಗಳ ಭರವಸೆ…!

ಬಾಹುಬಂಧನ, ಭಾವಬಂಧನ
ಹಸ್ತ ಹಸ್ತದ ಚುಂಬನ…
ಕೈಯ ಬೆಸೆದರೆ ಮೈಯ ತುಂಬಿತು
ಒಲವ ರಸ ರೋಮಾಂಚನ!

ತುಟಿಯ ಜೇನ್ಝರಿ ಬತ್ತಿ ತನುಸಿರಿ
ಸೊರಗಿ, ಮೈ ಸುಕ್ಕಾಗಲಿ
ಒಲವ ವಾಗ್ಝರಿ ಪ್ರೇಮದಾ ಸಿರಿ
ಎಂದಿಗೂ ಸ್ಫುಟವಾಗಲಿ

ಕವನತನಯ

ಕೃಷ್ಣಾ……

ಹರಿ ನಿನ್ನ ಕರುಣೆಯಲಿ ಬರಿಬಾಳು ಅರಳೀತು
ಸುರಿದೀತು ಸಿರಿಯ ಸುಧೆಯು
ಬಿರಿದ ಒಡಕಿನ ಬಿದಿರಲೊಸರೀತು ಹೊಸ ರಾಗ
ಮುರಳಿಲೋಲನೆ! ಮರಳಿ ಪೊರೆಯುವಾಗ

ಮೂಡೀತು ಮೈಮೇಲೆ ನೂರು ಮುಳ್ಳಿನ ಕಂತೆ
ಕ್ಷಮಿಸು ದೇವನೆ ಬಿದಿರಿನಪರಾಧವ
ಭವರೋಗವಿದು ತಾನೆ, ಬಾಳು ತಪ್ಪಿನ ಸಂತೆ
ಅವಗಾಣನೆಯು ಯಾಕೊ, ಓ ಮಾಧವ

ಸಿರಿ, ಸೊಗಸು, ಸೌಕರ್ಯ ಬಾಳಲೆಲ್ಲವು ಬಂತು
ಮರಳಿ ಬಂದಿಹ ದಾರಿಯಲ್ಲೆ ಹೋಯ್ತು
ಗಿರಿಧರನೆ, ನೂರುಂಟು ದೊರಕಿದ್ದು ಕಳೆದಿದ್ದು
ಮರಳಿ ಮನ ನಿನ್ನಲ್ಲಿ ದೀನವಾಯ್ತು

ಹೊಸೆದೆ ದಿನವನು, ಬೆಸೆದೆ ಬಂಧವನು ಮಾಧವನೆ
ಕಸಿದೆ ಪ್ರೀತಿಯ, ಎಸೆದೆ ಒಲವ ರನ್ನ
ಹಸಿಗೂಸು ಎದೆಗೊದೆಯೆ ಮನ್ನಿಸುವ ತಾಯಂತೆ
ಹೊಸಕನಸಿಗುಸಿರಿತ್ತು ಸಲಹು ನನ್ನ

 

ಕವನತನಯ

ರಾಯರ ರಾತ್ರಿ

ಪಾರಿಜಾತದ ಗಂಧ, ಅರೆಚಂದ್ರ ಅರಳಿದ್ದ
ಬೀರುತ್ತ ಒಂಚೂರು ಬೆಳ್ಳಿಬೆಳಕು
ಸೂರು ಸೋರಲು ಬಾನ ನಕ್ಷತ್ರಗಳು ನಗಲು
ಜೋರು ಮನದಲಿ ಮೆರೆವ ಆಸೆ ಝಲಕು

ಬಲು ಆಸೆ ರಾಯರಿಗೆ, ಬರಿ ಮುನಿಸು ಪದುಮಳಿಗೆ
ಒಲಿಸಿಕೊಳ್ಳುವುದೆಂತು ತನ್ನ ಬಳಿಗೆ?
ಸುಲಭದಲಿ ಬರದವಳು, ಬಹುಸೂಕ್ಷ್ಮ ಮನದವಳು
ಚೆಲುವೆ ಮಲಗಿಹಳಿಂದು ಸರಿದು ಬದಿಗೆ!

ಮುಟ್ಟಿದರೆ ಸಿಡುಕುವಳು, ಮುತ್ತಿಟ್ಟರಿನ್ನೆಂತೊ!
ಗುಟ್ಟಾಗಿ ಬಳಿಸಾರೆ, ಸರಿವಳಾಚೆ!
ಗಟ್ಟಿದನಿಯಲಿ ಕರೆಯೆ – ‘ನೀರು ಬೇಕೇ?’ ಎಂದು
ಒಟ್ಟು ಮಾತನು ದಾರಿ ತಪ್ಪಿಸುವಳು!

ಹೊರಳಿ ಅತ್ತಿಂದಿತ್ತ, ವೇಗದುಸಿರು ಬಿಡುತ್ತ
ನರಳಿದರು ತಲೆನೋವು ಬಂತು ಎಂದು
ಕರಗಿತ್ತು ತರಳೆ ಮನ, ಬಳಿಸರಿದಳಾ ಪದುಮ
ಸುರಿಸಿ ಕಣ್ಣೀರ, ‘ಮನ್ನಿಸಿ’ ಎಂದಳು…

‘ತಲೆನೋವು ಬರಿಸುಳ್ಳು, ನಿನಗಾಗಿ ನಾಟಕವು
ಅಳಬೇಡ, ನನ ಮೇಲೆ ಮುನಿಸು ಏಕೆ?’
‘ಮುನಿಸೆಲ್ಲ ನಾಟಕವು, ನಿಮ್ಮಲ್ಲಿ ಒಲವೆನಗೆ
ಹೊಸಸೀರೆ ಇಂದು ಕೊಡಿಸಿಲ್ಲವೇಕೆ?’

‘ಸೀರೆಯಾದರು ಕೊಡುವೆ, ಒಡವೆಗಳನೂ ಸುರಿವೆ
ನಿನಗಾಗಿ ಏನಾದರೂ ಮಾಡುವೆ
ನೀ ಹೀಗೆ ಬಳಿಯಲ್ಲಿ ಪ್ರೀತಿಸುರಿಯುತಲಿರಲು
ಜಗವನ್ನೆ ಗೆದ್ದು ಕೈಯಲ್ಲಿ ಇಡುವೆ’

ಸಲ್ಲಾಪ ರಾತ್ರಿಯಲಿ, ರಾಯರಾ ಮಂಚದಲಿ
ಮತ್ತೊಮ್ಮೆ ಪದುಮಳನು ಕರೆದರವರು
ಇಂಪಾಗಿ ಏನೆಂದು ಅವಳು ಕೇಳಲು ಇವರು
‘ನೀರು ಬೇಕೆಂದು’ ತಾ ಛೇಡಿಸುವರು

ಕವನತನಯ

ಕೆಂಡಸಂಪಿಗೆ

#ಕೆಂಡಸಂಪಿಗೆ

ಸೌಂದರ್ಯ ನಿನ್ನ ಕಾಲಾಳು ಚಿನ್ನ
ಮಾಧುರ್ಯ ನಿನ್ನ ಸ್ವತ್ತು
ಚಾತುರ್ಯ ನಿನ್ನ ಆಂತರ್ಯವನ್ನ
ತುಂಬಿಹುದು ಎಲ್ಲ ಹೊತ್ತು

ಇಂಚರದ ಮಾತು, ಮಿಂಚಿರುವ ಕಣ್ಣು
ಗೊಂಚಲಾಗಿಳಿದ ಹೆರಳು
ಚಂಚಲತೆ ಒಳಗೆ, ಅಂಚಿನಲಿ ಬೆರಗೆ
ತುಂಬಿರುವ ವದನದವಳು

ಕವನತನಯ

ಕೆಂಡಸಂಪಿಗೆ

#ಕೆಂಡಸಂಪಿಗೆ

ಚೆಲುವೆ ನಿನ್ನ ಸಲುವಾಗಿಯೆ
ಮನದಲಿಂದು ಚಳುವಳಿ
ಕೆಲವು ಕಾಲ ಒಲವ ತೋರಿ
ಕೊಡುವೆಯೇನು ಬಳುವಳಿ?

ಬಲವ ಬಳಸಿ ಬಹಳ ಬಯಸಿ
ಬಂದೆ ನಿನ್ನ ಬಳಿಯಲಿ
ನೆಲವ ತಣಿಸೊ ಜಲದ ರೀತಿ
ಬಳಿಬರುವೆಯ ಚಳಿಯಲಿ

ಕಣಕಣದಲು ಕ್ಷಣಕ್ಷಣದಲು
ಮನದಿ ನಿನದೆ ಸ್ಪಂದನ!
ನನಮನದೊಳಗನುದಿನವೂ
ನಿನ್ನ ನೆನಪ ಬಂಧನ!

ಕವನತನಯ

ನಿರ್ಲಿಪ್ತಿ…

ನಾಳೆಗಳ ನಿರ್ಲಿಪ್ತ ಬದುಕಿಗೆ
ನಿನ್ನ ನೆನಪೇ ಪ್ರೇರಣೆ
ನೀನು ಸಿಗದಿಹ ದುಃಖ ಮರೆಸಲು
ಸುಳ್ಳು ನಗುವಿನ ಧಾರಣೆ

ನಿನ್ನ ರೂಪ ಅಮೂರ್ತವೆನಿಸಿದೆ
ನಿನ್ನ ಪ್ರೀತಿ ಮರೀಚಿಕೆ
ನೀನಿರದ ನಾ ಶೂನ್ಯನೆನ್ನಲು
ಮನಕೆ ಇಲ್ಲವು ನಾಚಿಕೆ

ನೀನೆ ಗಮ್ಯ* , ಮನಸು ಹಾಕಿದೆ-
ನಭಕೆ ಕನಸಿನ ಏಣಿಯ
ಎಂದು ಮುರಿವುದೊ ಕಾಣೆ, ಮುಂದಿನ
ಯಾನಕರಸಿಹೆ ದೋಣಿಯ

ಇಳಿದು ಬಾ ಬೆಳಕಾಗಿ ಬಳಿಯಲಿ
ಹೊಳೆವ ದೀಪದ ರೂಪದಿ
ಸುಳಿವ ನೋವಿನ ಸ್ವಪ್ನವಡಗಿಸಿ
ಕುಳಿರ ಬೀಸುತ ತಾಪದಿ

ಕವನತನಯ

ಹೋಳಿ

ಎಷ್ಟು ಸುಟ್ಟರೇನು ಬಂತು
ಬೆಂಕಿಯಲ್ಲಿ ಕಾಮವ
ಬಿಟ್ಟು ಬಾಳಲಿಕ್ಕೆ ಬಹುದೆ
ಜಗದ ಸೃಷ್ಟಿ ನೇಮವ?