ನೀನೇ ಚುಂಬಕ…

ಪ್ರಣಯ ಮೇದಿನಿ ಹೃದಯ ಮೋದಿನಿ
ಎಷ್ಟು ಮೃದು ನಿನ್ನಿನಿದನಿ!
ಭಾವ ಸ್ಪಂದಿನಿ ಚಿತ್ತ ಮೋಹಿನಿ
ನೀನೆ ಮನವನಗಾಮಿನಿ!

ಎರಡು ಅಂಬಕ ಸೆಳೆವ ಚುಂಬಕ
ಗಲ್ಲವಿನ್ನೂ ಮೋಹಕ
ತುಂಟ ನೋಟವು ಪ್ರೇಮಪ್ರೇರಕ
ಸ್ಪರ್ಶ ಮನಸಿಗೆ ಪೂರಕ

ಮಲೆಯ ನಾಡಿನ ಮಳೆಯ ಹುಡುಗೀ
ಬಳಿಗೆ, ಬಾಳಿಗೆ ಬರುವೆಯ
ನಿನ್ನ ಅನುಮತಿ ಸಿಕ್ಕ ಕ್ಷಣವೇ
ನಿಗದಿ ಮಾಡುವೆ ಮದುವೆಯ 😉

ಕವನತನಯ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ನನ್ನ ಬಾಳಿಗೆ ನೀನೆ ಹೋಳಿಗೆ…

ಖಾಲಿ ಜೋಳಿಗೆ ಹೊತ್ತ ಬಾಳಿಗೆ
ನೆನಪೆ ಎದೆಮನೆ ಮಾಳಿಗೆ
ನೀನು ನಗುತಲಿ ಬಂದ ವೇಳೆಗೆ
ತಿಂದ ತುತ್ತೂ ಹೋಳಿಗೆ

ಕ್ಲಿಕ್ : Venu Bhat 😊

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಒಲವು…

ಕಣ್ಣ ಕಾಡಿಗೆ ಎನಿತು ಕಾಡಿದೆ!
ನನ್ನೊಳಾಸೆಯ ಸೇಚನ
ಕಂಡ ಕನಸಲು ಅವಳ ಹಾಡಿದೆ
ಅಷ್ಟು ಸೆಳೆಯುವ ಲೋಚನ

ಹೊನ್ನ ಬಣ್ಣದ ಪಸುಳೆವಿಸಿಲಲಿ
ಮಿಂದು ಮಿಂಚಿದ ಭೂರಮೆ
ಚೆನ್ನೆ ಆಕೆಯ ಕೆನ್ನೆಯೂ ಸಹ
ಚಿನ್ನ, ಆಕೆ ಮನೋರಮೆ!

ಬಿದಿಗೆ ಚಂದಿರನೆದೆಗೆ ಸುಂದರ
ಕನಸ ನಾಟಿದ ಚೂಟಿಯು
ಮನದ ಮಡಿಲೊಳು ಸ್ವಪ್ನ ಮಂದಿರ
ಅಲ್ಲಿ ನಮ್ಮಯ ಭೇಟಿಯು

ಬೆಣ್ಣೆ ಮಾತಲಿ, ಕಣ್ಣ ಹಾಡಲಿ
ಪ್ರೀತಿಯೊಂದೇ ತುಳುಕಿದೆ
ಕಮಲಕೋಮಲ ಕೆನ್ನೆ ಮೇಲ್ಗಡೆ
ಒಂದು ಮುತ್ತಿಡಬೇಕಿದೆ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಪ್ರಭಾತ

ಗೋಪೀ ಹಕ್ಕಿಯ ಉದಯರಾಗದುದಕಾಭ್ಯಂಜನವ ಮುಗಿಸುತಲಿ ತಾ
ಬಾನ್ಪುರುಷನ ರಕ್ತಾಕ್ಷಿಯೋಳುದಿಸಿ ಕೆಂಬಣ್ಣದಲ್ಮೆರೆವ ರವಿಯೇ
ಜೇನ್ಬಿಸಿಲಿನ ಬೆಳಗನ್ನು ಹೊತ್ತು ಭುವಿಗವತರಿಸುತಲಿ ಮಾಧುರ್ಯದಿಂ
ಸಾನಂದದಿ ಅಂಧತೆಯ ಕಳೆವ ರವಿಯೇ ಶುಭಸುಪ್ರಭಾತ ನಿನಗೆ..

 

ಕವನತನಯ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಶಾಂತಲಾ…

ಲವಲವಿಕೆ ಮೈವೆತ್ತಿ ಮಮತೆ ತಾ ಮರುಹುಟ್ಟಿ
ತಳೆದ ತಾಯಿಯ ರೂಪ ಅವಳು ತಾನೇ
ಕಣ್ಣ ತುಂಬಾ ಹೊಳಪು, ಮಂದಹಾಸವು ನಿರತ
ಅವಳ ವಾತ್ಸಲ್ಯಕ್ಕೆ ಸೋತೆ ನಾನೇ

ಬರಿದೆದೆಯ ಜೋಳಿಗೆಯ ಸಂಪದದಿ ತುಂಬುವೊಲು
ವಾತ್ಸಲ್ಯ ಪೀಯೂಷ ಸುರಿಸಿದವಳು!
ಎನಿತು ಜನ್ಮದ ಋಣವೊ, ಕಾರುಣ್ಯಮೂರ್ತಿ ತಾ
ಅಮ್ಮನಾಗೆನ್ನ ಮನ ನಲಿಸಿದವಳು

ಚಂದ್ರಶಾಲೆಯಲಿಂದು ಚಂದಿರನ ಬೆಳಕಿಲ್ಲ
ಉರಿದಿದ್ದ ಹಣತೆಯೂ ಮಾಯವಾಯ್ತು
ತನು ಬಿರಿಯುವೊಲು ನೋವು, ಅವಳಿಲ್ಲವಂತಲ್ಲ
ಆಟ ನಿಲ್ಲಿಸು ಕೃಷ್ಣ, ಇದು ನಾ ಸೋತ ಹೊತ್ತು..

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಕಮಲ ಕೋಮಲ..

ಪಸುಳೆವಿಸಿಲಲಿ ಪಕಳೆ ಅರಳಿದೆ
ಕೋಮಲವು ಕಮಲದ ದಳ!
ತಬ್ಬಿದಿಬ್ಬನಿ ಮುತ್ತಿನೊಡವೆಯು
ಮುತ್ತುತಿದೆ ಹೂ ದಳಗಳ!

ಮಗುವಿನ ಹೂವಿನ ಮೊಗಗಳು ಎರಡೂ

ಅರೆಬಿರಿದಿವೆ, ಅರೆ! ಮುದ್ಮುದ್ದು!

ಮಗುವಿನ ಹೂಮೊಗದಲಿ ನಗುವಿಗು ನಗು

ಸೊಗಸಿನ ಹೂ ಮಗು ಬೊಗಸೆಯಲಿ…

ಚಿತ್ರಕೃಪೆ : ಸ್ಫೂರ್ತಿ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ರುಕ್ಮಿಣಿಯ ಕಿರುಹನಿ

(ನಿಮ್ಮ ಶ್ಯಾಮಸ್ಮರಣೆ ಸರಣಿ
ಕವನವೋದಿ ರುಕ್ಮಿಣಿ
‘ಈ ಭಕ್ತಿಗೆ ಒಲಿದುಬಿಡಲು
ನನಗೆ ಸಿಗನು ಕಣ್ಮಣಿ’
ಎಂದು ಅರಿತು ಬರೆದಳಿಂದು
ಈ ಕೋರಿಕೆ ಕಿರುಹನಿ)

ನಿನ್ನ ಚರಿತೆ ಲೀಲೆಯೊರತೆ
ನನ್ನ ಪಾಲ ಸರಿತೆ
ಎನ್ನ ಮೊರೆತವೇಕೆ ಮರೆತೆ
ಚೆನ್ನ ಕೃಷ್ಣ, ಬರಿತೆ?

ನಿನ್ನ ಬೆರೆತೆ ನನ್ನ ಮರೆತೆ
ನಲಿವ ದಾರಿಯರಿತೆ
ನಿನ್ನ ಕುರಿತೆ ಧ್ಯಾನ ನಿರತೆ
ನಾನು ತಪ್ತ ವನಿತೆ

ನಿನ್ನ ಮಾತೆ ನನಗೆ ಗೀತೆ
ಸನಿಹ ಬಾರೊ ಮಾಧವ
ನೀನು ತ್ವರಿತ ಬಳಿಗೆ ಬರುತ
ನೀಡುವೆನಗೆ (ನೀಡುವೆ ನಗೆ) ಮೋದವ

 

ಕವನತನಯ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಚಂದ್ರೇಶ್ವರ ಭೂತನಾಥ ಪರ್ವತ – ಒಂದು ಪ್ರಯಾಣ.

ಗೋವಾದ ಖ್ಯಾತ ದೇವಳಗಳಲ್ಲಿ ಒಂದು ಚಂದ್ರೇಶ್ವರ ಭೂತನಾಥ ಮಂದಿರ. ಇಲ್ಲಿನವರ ಬಾಯಲ್ಲಿ ಇದು “ಪರ್ವತ”. ಬೃಹತ್ ಬೆಟ್ಟವೊಂದರ ತುದಿಯಲ್ಲಿ ಇರುವ ಈ ಮಂದಿರದ ಬಳಿಯಿಂದ ಸುತ್ತಮುತ್ತಲಿನ ದೂರದವರೆಗಿನ ಪ್ರದೇಶದ ಪಕ್ಷಿನೋಟ ಕಣ್ಸೆಳೆಯುತ್ತದೆ. ಮಳೆಗಾಲದಲ್ಲಿ ಭೇಟಿ ಕೊಡಲು ಇದು ಪ್ರಶಸ್ತ ಜಾಗ.

Chandreshwar Bhootnath Temple, Goa
ಪರ್ವತಕ್ಕಿಂತ ಮೊದಲು ಎದುರಾಗುವ ಕಮಾನು

 

A view from chandreshwar Bhootnath Temple, goa
ದೇವಳದ ಹೊರ ಆವರಣದಿಂದ ಕಾಣುವ ದೃಶ್ಯ.

ಪರ್ವತದ ಬಹುತೇಕ ತುದಿಯವರೆಗೂ ವಾಹನ ಒಯ್ಯಬಹುದು. ಆದರೆ ವಾಹನ ಚಲಾಯಿಸುವಾಗ ತುಂಬಾ ಎಚ್ಚರಿಕೆ ಅವಶ್ಯ. ಕಿರಿದಾದ ರಸ್ತೆಯ ಮೈ ಪೂರ್ತಿ ಘಟ್ಟ ಮತ್ತು ತಿರುವುಗಳೇ ತುಂಬಿವೆ. ದೇವಸ್ಥಾನಗಳಲ್ಲಿ ಫೋಟೋ ತೆಗೆಯುವುದು ನಿಷಿದ್ಧವಾದ್ದರಿಂದ ಒಳ ಆವರಣದ ಫೋಟೋಗಳು ಇಲ್ಲ.

Chandreshwar Bhootnath Temple, goa

ಅಂತಹ ಬೆಟ್ಟದ ತುದಿಯಲ್ಲೂ ಇಷ್ಟೊಂದು ವ್ಯವಸ್ಥಿತವಾಗಿ ದೇವಸ್ಥಾನ ಕಟ್ಟಿರುವ ಮಾನವ ಪ್ರಯತ್ನ ಸಣ್ಣದಲ್ಲ. ಅದಕ್ಕಿಂತ ಹೆಚ್ಚಾಗಿ ಅಲ್ಲೇ ಸ್ವಲ್ಪ ದೂರದಲ್ಲಿ ಒಂದು ಮೊಬೈಲ್ ಟವರ್ ಕಟ್ಟಿದ್ದಾರೆ. ಅದರ ಎತ್ತರ ಕಂಡು ಎಂಥವರೂ ಬೆರಗಾಗಬೇಕು. ಮಂದಿರದ ಬಳಿ ನಿಂತು ನೋಡಿದರೆ ಆ ಎತ್ತರದ ಟವರ್ ಬೃಹದಾಗಿ ಕಾಣುತ್ತಿದ್ದರೆ ಅದರ ಬುಡದಿ ನಿಂತ ಮನುಷ್ಯರು ಇರುವೆಗಿಂತ ಚಿಕ್ಕದಾಗಿ ಕಾಣುತ್ತಿದ್ದರು.

ದೇವಸ್ಥಾನದ ಮೆಟ್ಟಿಲ ಬಳಿ ಒಬ್ಬಾತ ಲಿಂಬು ಸೋಡಾ ಮಾರುತ್ತಾನೆ. ಒಂದು ಗ್ಲಾಸ್ ಹದವಾಗಿ ಬೆರೆಸಿದ ನಿಂಬು ಸೋಡಾ ಕುಡಿದರೆ ಸುತ್ತಾಡಿದ ಆಯಾಸವೆಲ್ಲ ಬಹುದೂರ.

Kavanatanaya vishwanath gaonkar ಕವನತನಯ
ನಡು ದಾರಿಯಲ್ಲಿ….

ಮಡಗಾಂವ್ ದಿಂದ ಇಲ್ಲಿಗೆ ಹೋಗಲು ನಲವತ್ತು ನಿಮಿಷ ಸರಾಸರಿ ಬೇಕು. airport ನಿಂದ ಕನಿಷ್ಠ ಒಂದೂವರೆ ತಾಸು. ಮಡಗಾಂವ್ ದಿಂದ quepem (ಕೆಪೆ)ಗೆ ಹೋಗುವ ದಾರಿಯ ಮಧ್ಯದಲ್ಲಿ ದೊಡ್ಡ ಕಮಾನು ಎದುರಾಗುತ್ತದೆ. ಅಲ್ಲಿಂದ ಬೆಟ್ಟದ ದಾರಿಯಲ್ಲಿ ಸಾಗಬೇಕು.

ಗೋವಾಕ್ಕೆ ಭೇಟಿ ಇತ್ತಾಗ ನೋಡಲೇ ಬೇಕಾದ ಸ್ಥಳಗಳಲ್ಲಿ ಇದೂ ಒಂದು.ಹತ್ತಿರದಲ್ಲಿ ಕುರ್ತರಿ ಮಹಾಮಾಯೆ, ಜಾಂಬಾವಲಿ ಮುಂತಾದ ನೋಡಬಹುದಾದ ಸ್ಥಳಗಳಿವೆ.

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಹಸ್ತಾಲಿಂಗನ….

ಕರದಿ ಸ್ಫುರಿಸಿದ ಪ್ರೇಮದಮೃತವು
ಹರಿಯಿತೊಲವಿನ ಹೊಳೆಯೊಲು
ಚರಮ ಸೀಮೆಯ ಅಮರ ಪ್ರೇಮವು
ಬೆರೆಯಿತೀ ತನುಮನದೊಳು

ಬೆಸೆದ ಬೆರಳೊಳು ಬಸಿವ ಪ್ರೀತಿಯು
ಹೊಸಗನಸಿಗಿದು ಆಸರೆ
ಹೊಸೆದ ಕೈಗಳು ಹುಸಿಯ ನುಡಿಯವು
ಹಸಿದೆನಗೆ ನೀ ಕೈಸೆರೆ

ವಿರಹ ತಾಪದಿ ಒಲವ ದೀಪಕೆ
ಎಣ್ಣೆ- ಕೈಯೊಳಗಿನ ಪಸೆ
ಸಾಂದ್ರ ಪ್ರೀತಿಗೆ ಸಾಕ್ಷಿ ನೀಡಿವೆ
ಬೆಸೆದ ಕೈಗಳ ಭರವಸೆ…!

ಬಾಹುಬಂಧನ, ಭಾವಬಂಧನ
ಹಸ್ತ ಹಸ್ತದ ಚುಂಬನ…
ಕೈಯ ಬೆಸೆದರೆ ಮೈಯ ತುಂಬಿತು
ಒಲವ ರಸ ರೋಮಾಂಚನ!

ತುಟಿಯ ಜೇನ್ಝರಿ ಬತ್ತಿ ತನುಸಿರಿ
ಸೊರಗಿ, ಮೈ ಸುಕ್ಕಾಗಲಿ
ಒಲವ ವಾಗ್ಝರಿ ಪ್ರೇಮದಾ ಸಿರಿ
ಎಂದಿಗೂ ಸ್ಫುಟವಾಗಲಿ

ಕವನತನಯ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಶ್ರೀ ಶ್ರೀಧರ ಸ್ವಾಮಿಗಳ ಅಪರೂಪದ ವಿಡಿಯೋ

ಸದ್ಗುರು ಶ್ರೀಧರ ಸ್ವಾಮಿಗಳ ಅಪರೂಪದ ವಿರಳ ವಿಡಿಯೋ. ಹೀಗೇ ಗೂಗಲಿಸುವಾಗ ಸಿಕ್ಕಿತು. ಇದರಲ್ಲಿ ಕಾಣುವ ಸ್ಥಳಗಳನ್ನು ಗುರುತಿಸಲು ಪ್ರಯತ್ನಿಸಿ. 🙂

ಈ ಪೋಸ್ಟ್ ಅನ್ನು ಶೇರ್ ಮಾಡಲು: