ಕೃಷ್ಣಾ……

ಹರಿ ನಿನ್ನ ಕರುಣೆಯಲಿ ಬರಿಬಾಳು ಅರಳೀತು
ಸುರಿದೀತು ಸಿರಿಯ ಸುಧೆಯು
ಬಿರಿದ ಒಡಕಿನ ಬಿದಿರಲೊಸರೀತು ಹೊಸ ರಾಗ
ಮುರಳಿಲೋಲನೆ! ಮರಳಿ ಪೊರೆಯುವಾಗ

ಮೂಡೀತು ಮೈಮೇಲೆ ನೂರು ಮುಳ್ಳಿನ ಕಂತೆ
ಕ್ಷಮಿಸು ದೇವನೆ ಬಿದಿರಿನಪರಾಧವ
ಭವರೋಗವಿದು ತಾನೆ, ಬಾಳು ತಪ್ಪಿನ ಸಂತೆ
ಅವಗಾಣನೆಯು ಯಾಕೊ, ಓ ಮಾಧವ

ಸಿರಿ, ಸೊಗಸು, ಸೌಕರ್ಯ ಬಾಳಲೆಲ್ಲವು ಬಂತು
ಮರಳಿ ಬಂದಿಹ ದಾರಿಯಲ್ಲೆ ಹೋಯ್ತು
ಗಿರಿಧರನೆ, ನೂರುಂಟು ದೊರಕಿದ್ದು ಕಳೆದಿದ್ದು
ಮರಳಿ ಮನ ನಿನ್ನಲ್ಲಿ ದೀನವಾಯ್ತು

ಹೊಸೆದೆ ದಿನವನು, ಬೆಸೆದೆ ಬಂಧವನು ಮಾಧವನೆ
ಕಸಿದೆ ಪ್ರೀತಿಯ, ಎಸೆದೆ ಒಲವ ರನ್ನ
ಹಸಿಗೂಸು ಎದೆಗೊದೆಯೆ ಮನ್ನಿಸುವ ತಾಯಂತೆ
ಹೊಸಕನಸಿಗುಸಿರಿತ್ತು ಸಲಹು ನನ್ನ

 

ಕವನತನಯ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ರಾಯರ ರಾತ್ರಿ

ಪಾರಿಜಾತದ ಗಂಧ, ಅರೆಚಂದ್ರ ಅರಳಿದ್ದ
ಬೀರುತ್ತ ಒಂಚೂರು ಬೆಳ್ಳಿಬೆಳಕು
ಸೂರು ಸೋರಲು ಬಾನ ನಕ್ಷತ್ರಗಳು ನಗಲು
ಜೋರು ಮನದಲಿ ಮೆರೆವ ಆಸೆ ಝಲಕು

ಬಲು ಆಸೆ ರಾಯರಿಗೆ, ಬರಿ ಮುನಿಸು ಪದುಮಳಿಗೆ
ಒಲಿಸಿಕೊಳ್ಳುವುದೆಂತು ತನ್ನ ಬಳಿಗೆ?
ಸುಲಭದಲಿ ಬರದವಳು, ಬಹುಸೂಕ್ಷ್ಮ ಮನದವಳು
ಚೆಲುವೆ ಮಲಗಿಹಳಿಂದು ಸರಿದು ಬದಿಗೆ!

ಮುಟ್ಟಿದರೆ ಸಿಡುಕುವಳು, ಮುತ್ತಿಟ್ಟರಿನ್ನೆಂತೊ!
ಗುಟ್ಟಾಗಿ ಬಳಿಸಾರೆ, ಸರಿವಳಾಚೆ!
ಗಟ್ಟಿದನಿಯಲಿ ಕರೆಯೆ – ‘ನೀರು ಬೇಕೇ?’ ಎಂದು
ಒಟ್ಟು ಮಾತನು ದಾರಿ ತಪ್ಪಿಸುವಳು!

ಹೊರಳಿ ಅತ್ತಿಂದಿತ್ತ, ವೇಗದುಸಿರು ಬಿಡುತ್ತ
ನರಳಿದರು ತಲೆನೋವು ಬಂತು ಎಂದು
ಕರಗಿತ್ತು ತರಳೆ ಮನ, ಬಳಿಸರಿದಳಾ ಪದುಮ
ಸುರಿಸಿ ಕಣ್ಣೀರ, ‘ಮನ್ನಿಸಿ’ ಎಂದಳು…

‘ತಲೆನೋವು ಬರಿಸುಳ್ಳು, ನಿನಗಾಗಿ ನಾಟಕವು
ಅಳಬೇಡ, ನನ ಮೇಲೆ ಮುನಿಸು ಏಕೆ?’
‘ಮುನಿಸೆಲ್ಲ ನಾಟಕವು, ನಿಮ್ಮಲ್ಲಿ ಒಲವೆನಗೆ
ಹೊಸಸೀರೆ ಇಂದು ಕೊಡಿಸಿಲ್ಲವೇಕೆ?’

‘ಸೀರೆಯಾದರು ಕೊಡುವೆ, ಒಡವೆಗಳನೂ ಸುರಿವೆ
ನಿನಗಾಗಿ ಏನಾದರೂ ಮಾಡುವೆ
ನೀ ಹೀಗೆ ಬಳಿಯಲ್ಲಿ ಪ್ರೀತಿಸುರಿಯುತಲಿರಲು
ಜಗವನ್ನೆ ಗೆದ್ದು ಕೈಯಲ್ಲಿ ಇಡುವೆ’

ಸಲ್ಲಾಪ ರಾತ್ರಿಯಲಿ, ರಾಯರಾ ಮಂಚದಲಿ
ಮತ್ತೊಮ್ಮೆ ಪದುಮಳನು ಕರೆದರವರು
ಇಂಪಾಗಿ ಏನೆಂದು ಅವಳು ಕೇಳಲು ಇವರು
‘ನೀರು ಬೇಕೆಂದು’ ತಾ ಛೇಡಿಸುವರು

ಕವನತನಯ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಕೆಂಡಸಂಪಿಗೆ

#ಕೆಂಡಸಂಪಿಗೆ

ಸೌಂದರ್ಯ ನಿನ್ನ ಕಾಲಾಳು ಚಿನ್ನ
ಮಾಧುರ್ಯ ನಿನ್ನ ಸ್ವತ್ತು
ಚಾತುರ್ಯ ನಿನ್ನ ಆಂತರ್ಯವನ್ನ
ತುಂಬಿಹುದು ಎಲ್ಲ ಹೊತ್ತು

ಇಂಚರದ ಮಾತು, ಮಿಂಚಿರುವ ಕಣ್ಣು
ಗೊಂಚಲಾಗಿಳಿದ ಹೆರಳು
ಚಂಚಲತೆ ಒಳಗೆ, ಅಂಚಿನಲಿ ಬೆರಗೆ
ತುಂಬಿರುವ ವದನದವಳು

ಕವನತನಯ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಕೆಂಡಸಂಪಿಗೆ

#ಕೆಂಡಸಂಪಿಗೆ

ಚೆಲುವೆ ನಿನ್ನ ಸಲುವಾಗಿಯೆ
ಮನದಲಿಂದು ಚಳುವಳಿ
ಕೆಲವು ಕಾಲ ಒಲವ ತೋರಿ
ಕೊಡುವೆಯೇನು ಬಳುವಳಿ?

ಬಲವ ಬಳಸಿ ಬಹಳ ಬಯಸಿ
ಬಂದೆ ನಿನ್ನ ಬಳಿಯಲಿ
ನೆಲವ ತಣಿಸೊ ಜಲದ ರೀತಿ
ಬಳಿಬರುವೆಯ ಚಳಿಯಲಿ

ಕಣಕಣದಲು ಕ್ಷಣಕ್ಷಣದಲು
ಮನದಿ ನಿನದೆ ಸ್ಪಂದನ!
ನನಮನದೊಳಗನುದಿನವೂ
ನಿನ್ನ ನೆನಪ ಬಂಧನ!

ಕವನತನಯ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ನಿರ್ಲಿಪ್ತಿ…

ನಾಳೆಗಳ ನಿರ್ಲಿಪ್ತ ಬದುಕಿಗೆ
ನಿನ್ನ ನೆನಪೇ ಪ್ರೇರಣೆ
ನೀನು ಸಿಗದಿಹ ದುಃಖ ಮರೆಸಲು
ಸುಳ್ಳು ನಗುವಿನ ಧಾರಣೆ

ನಿನ್ನ ರೂಪ ಅಮೂರ್ತವೆನಿಸಿದೆ
ನಿನ್ನ ಪ್ರೀತಿ ಮರೀಚಿಕೆ
ನೀನಿರದ ನಾ ಶೂನ್ಯನೆನ್ನಲು
ಮನಕೆ ಇಲ್ಲವು ನಾಚಿಕೆ

ನೀನೆ ಗಮ್ಯ* , ಮನಸು ಹಾಕಿದೆ-
ನಭಕೆ ಕನಸಿನ ಏಣಿಯ
ಎಂದು ಮುರಿವುದೊ ಕಾಣೆ, ಮುಂದಿನ
ಯಾನಕರಸಿಹೆ ದೋಣಿಯ

ಇಳಿದು ಬಾ ಬೆಳಕಾಗಿ ಬಳಿಯಲಿ
ಹೊಳೆವ ದೀಪದ ರೂಪದಿ
ಸುಳಿವ ನೋವಿನ ಸ್ವಪ್ನವಡಗಿಸಿ
ಕುಳಿರ ಬೀಸುತ ತಾಪದಿ

ಕವನತನಯ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಪುಟ್ಟಿ ಜೊತೆ ಸ್ವಂತೀ…

ಖುದ್ದು ಮಾಧವನೆದ್ದು ಕಾಣುವ
ಮುದ್ದು ಮನಸಿನ ಮಗುವಲಿ
ಸಿದ್ಧಸಂತಸವಿತ್ತು ಕೃಷ್ಣನು
ನಲಿವ ಮಗುವಿನ ನಗುವಲಿ….

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಹೋಳಿ

ಎಷ್ಟು ಸುಟ್ಟರೇನು ಬಂತು
ಬೆಂಕಿಯಲ್ಲಿ ಕಾಮವ
ಬಿಟ್ಟು ಬಾಳಲಿಕ್ಕೆ ಬಹುದೆ
ಜಗದ ಸೃಷ್ಟಿ ನೇಮವ?

ಈ ಪೋಸ್ಟ್ ಅನ್ನು ಶೇರ್ ಮಾಡಲು:

ನಿರೀಕ್ಷೆ

(ಮದುವೆಯಾಗಿ ತಿಂಗಳುಗಳಾಗಿವೆ ಅಷ್ಟೇ, ಕೆಲಸಕ್ಕೆ ಹೋದ ಐತನ ಬರುವಿಕೆಗೆ ಪೀಂಚಲು ಗುಡಿಸಲಿನ ಬಾಗಿಲಲ್ಲಿ ಕಾದು, ಕನಸು ಕಾಣುತ್ತಾ ಕುಳಿತಿದ್ದಾಳೆ…)

ಸೋಗೆ ಹೊದೆಸಿದ ಮನೆಯೊಳಿಳಿದಿದೆ
ಚಂದಿರನ ಬೆಳದಿಂಗಳು
ಬಾಗಿಲಲಿ ಬರಕಾದು ಕುಳಿತಿವೆ
ಅವಳ ಚಂಚಲ ಕಂಗಳು

ಹುಣ್ಣಿವೆಯ ಚಂದಿರಗೆ ಲಘುಬಗೆ
ಹೊತ್ತು ಇಳಿಯುವ ಮುನ್ನವೇ
ರಾತ್ರಿಯೇರದೆ ಅವಳ ಮನಸಲಿ
ಇಷ್ಟು ಬಯಕೆಯು ಚೆನ್ನವೇ?!

ಗಂಡ ದಿನವಿಡಿ ದುಡಿದು ಬರುವನು
ಮಲ್ಲಿಗೆಯ ಹೂ ತರುವನು
ಹೂವ ಮಂಚದ ಮೇಲೆ ಇಡುವನು
ಕೆನ್ನೆ ಮೇಲ್ಗಡೆ ಮುತ್ತನು

ಸಪ್ಪೆ ಸಾರಿಗೆ ರುಚಿಯ ಸೇರಿಸಿ
ಹೊಗಳಿಕೆಯ ಮಳೆ ಸುರಿವನು
ಅವಳ ಕೈಗುಣ ಹೊಗಳೊ ನೆಪದಲಿ
ಕೈಗೆ ಕೈಯನು ಬೆಸೆವನು

ಊಟ ಮುಗಿಯಲು ಕವಳ ಹಾಕಲು
ತನ್ನನೂ ಜೊತೆ ಕರೆವನು
ಸ-ರಸ ವೀಳ್ಯವ ನಗುತ ಮೆಲ್ಲುತ
ತಮ್ಮ ಕೋಣೆಗೆ ಕರೆವನು

ದಿನವೂ ಪ್ರೇಮದ ಮಳೆಯ ಸುರಿವನು
ಪ್ರೀತಿಪರ್ವತರಾಜನು
ಇಂದು ಎಲ್ಲಿಗೆ ಹೋದ, ಇನ್ನೂ
ಎಷ್ಟು ಹೊತ್ತಿಗೆ ಬರುವನು?

ಅತ್ತ ಹೊರಗಡೆ ಕರುವು ಕೂಗಿತು
ನಲ್ಲ ಬರುತಿಹ ತುಡಿಯುತ
ಗೆಜ್ಜೆ ಕಾಲ್ಗಳ ಹೊತ್ತು ಬಂದಳು
ಒಳಗೊಳಗೆ ತುಟಿ ಕಡಿಯುತ

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಪ್ರೇಮದ ಶರಧಿಗೆ ಕವಿಮನದ ನಡಿಗೆ; ರಾಗದ ಜೊತೆಗೆ…

  • ಮುಖಪುಸ್ತಕದ ಸ್ನೇಹಿತ, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ಭಾವಗವಿತೆಗಳ ಸಿಡಿ “ಪ್ರೇಮದ ಶರಧಿಗೆ…” ; ತರಿಸಿ ಇಷ್ಟು ದಿನದ ಮೇಲೆ ಲ್ಯಾಪ್‍ಟಾಪ್ ಸಿಕ್ಕಿದ್ದರಿಂದ ಹಾಡು ಕೇಳಲು ಸಾಧ್ಯವಾಯಿತು.. ಹಾಗೇ ಕೆಲವು ಕ್ಷಣ ಮೈಮರೆಯಲೂ..

ಕ್ಲಾಸಿಕಲ್ ಆದ, ಭಾವಗೀತೆಗಳನ್ನು ಕೇಳಿ ಖುಷಿಪಡುವವರಿಗೆ ಖಂಡಿತ ಇದು ಹೊಸ ಊಟ ಹಾಕಿದಂತೆ. ರಾಗ ತಾಳಗಳ ಬಗ್ಗೆ ವಿವರಿಸುವ ಬುದ್ಧಿಮತ್ತೆ ನನಗಿಲ್ಲ. ಆದರೆ ಹಾಡುಗಾರರು ಕವಿತೆಯ ಭಾವವನ್ನು ಕಟ್ಟಿಕೊಡುವಲ್ಲಿ ಸಫಲರಾಗಿದ್ದು ನಿಜ. ನನಗೆ ‘ಪ್ರೇಮದ ಶರಧಿಗೆ’ ಹಾಗೂ ‘ಯಾವ ರಾಗ ಬೆರೆಸಲಿ’ ‘ಹೆಜ್ಜೆ ಗುರುತು’ ಹಾಡುಗಳು ತುಂಬಾ ಇಷ್ಟವಾದವು… ಮಾತಿನ ಅರಮನೆ ಹಾಗೂ ಆಡು ಬಾ ಕಾಡು ಬಾ ಹಾಡುಗಳಲ್ಲಿ ಕೂಡ ಒಂಥರಾ ಸೆಳೆತವಿದೆ.

ಇನ್ನೂ ಅವರ ಪುಸ್ತಕವನ್ನು ಓದುವುದು ಬಾಕಿಯಿದೆ.. ಸಾಹಿತ್ಯ ಓದದೇ ಸಂಗೀತ ಸರಿಯಾಗಿ ಅರ್ಥವಾಗಲಿಕ್ಕಿಲ್ಲ.. ಯಾಕೆಂದರೆ ನಾನು ಓದಿದ ಕೆಲವೇ ಕವಿತೆಗಳಿಂದಲೇ ರವೀಂದ್ರ ಅವರ ಕವಿತಾಶಕ್ತಿ ಬಹಳ ಎಂದು ಅರ್ಥವಾಗಿದೆ. ಜೊತೆಗೆ ನನಗೆ ಒಳ್ಳೆಯ ಸಂಗೀತವನ್ನು ಕೇಳಿ ತಲೆದೂಗುವುದು ಗೊತ್ತು, ಅದನ್ನು ವಿಮರ್ಶಿಸಲು ಗೊತ್ತಿಲ್ಲ. ಒಟ್ಟಿನಲ್ಲಿ ಒಂದಿಷ್ಟು ಹೊಸ ಭಾವಗೀತೆಗಳು ಈಗ ನನ್ನ ಪ್ಲೇಲಿಸ್ಟ್ ಸೇರಿವೆ. ಅದಕ್ಕಾಗಿ ರವೀಂದ್ರರಿಗೆ ಧನ್ಯವಾದಗಳು..

ಈ ಪೋಸ್ಟ್ ಅನ್ನು ಶೇರ್ ಮಾಡಲು:

ಮಧುಕಲ್ಪ….

[ ಬಾಸಲು ಊರಿನಿಂದ ನಾಲ್ಕೈದು ಮೈಲಿ ದೂರ, ಜನರು ವರ್ಷಕ್ಕೊಮ್ಮೆ ಕಸಬರಿಕೆ (ಹಿಡಿ) ಮಾಡಲು ಮಾತ್ರ ‘ಕರಿಕಾನಿಗೆ’ ಹೋಗುವ ಬೆಟ್ಟದ ಹಳು ತುಂಬಿದ ಹಾದಿಯಲ್ಲಿ, ತನ್ನದೇ ಯೋಚನೆಯಲ್ಲಿ ಸಾಗುತ್ತಿರುವ ಮಧು, ಆತನ ಮುಂದೆ ಹಬ್ಬಿಕೊಂಡಿರುವ ಬೃಹತ್ ಪಶ್ಚಿಮ ಘಟ್ಟಗಳ ಇಳಿಜಾರು, ಮತ್ತು ಆ ಇಳಿಜಾರಿನ ತುಂಬಾ ಅತ್ಯಂತ ಇಕ್ಕಟ್ಟಾಗಿ, ಭೂಮಿಯ ಅಂಗುಲ ಅಂಗುಲವನ್ನೂ ಬಿಡದೆ ತಬ್ಬಿಕೊಂಡ ಮಲೆನಾಡಿನ ವೈವಿಧ್ಯಪೂರ್ಣ ಸಸ್ಯರಾಶಿ.. ಮತ್ತು ಆ ಸಸ್ಯರಾಶಿಯ ವಸಾಹತುಶಾಹಿ ಗುಣದ ಪ್ರತೀಕವಾಗಿ, ಆ ಪಶ್ಚಿಮಘಟ್ಟ ಪರ್ವತದ ತುದಿಯಲ್ಲಿ ನಿಂತು ನೋಡಿದರೂ ದೂರದವರೆಗೆ ಹಬ್ಬಿರುವ ಸಸ್ಯಸಂಕುಲ… ದೃಷ್ಟಿಗೋಲದ ಕೆಳಾರ್ಧವನ್ನು ಮಲೆನಾಡ ಹಸಿರು ತುಂಬಿದರೆ ಉಳಿದರ್ಧವನ್ನು ನೀಲಿ ಆಕಾಶ ತುಂಬುತ್ತಿತ್ತು… ಅಲ್ಲಿವರೆಗೆ ತನ್ನದೇ ಯೋಚನೆಯಲ್ಲಿ ಮುಳುಗಿದ್ದ ಮಧು, ತತ್ಕ್ಷಣಕ್ಕೆ ತನ್ನೆದುರಿನ ಪ್ರಕೃತಿವೈಭವಕ್ಕೆ ಮರುಳಾಗಿ, ಎದುರಿನ ಮಹಾರಣ್ಯಪ್ರಪಾತವನ್ನೂ, ಅದರೆದುರಿನ ಹತ್ತಾರು ವಿಪಿನ ಪರ್ವತಗಳನ್ನೂ ಕಣ್ತುಂಬಿಕೊಂಡನು…..]
ತನ್ನ ಭಾವಗಳಿಗೂ ಮಲೆನಾಡ ಸೌಂದರ್ಯಕ್ಕೂ ಅವಿನಾಭಾವ ಸಂಬಂಧ ಕಲ್ಪಿಸಿದ್ದ ಮಧುವಿನ ಮಸ್ತಕದಲ್ಲಿ ಮತ್ತೆ ಯೋಚನೆಗಳು ಶುರುವಾದವು.. ಬೆಳಿಗ್ಗೆ ಗಿರಿಜತ್ತೆ ಮನೆಗೆ ಬಂದಿದ್ದ ಕಟ್ಟೆಮನೆ ಗಣಪತಿ ಭಟ್ಟರ ವ್ಯಕ್ತಿತ್ವ ಆತನನ್ನು ಬಹಳ ಆಕರ್ಷಿಸಿತ್ತು. ಮದುವೆಯಾಗದೆ ಬ್ರಹ್ಮಚಾರಿಯಾಗೆ ಉಳಿದ ಗಣಪತಿ ಭಟ್ಟರ ಪಾಂಡಿತ್ಯಕ್ಕೆ ಸಮನಾದವರು ಅಲ್ಲಿ ಯಾರೂ ಇರಲಿಲ್ಲ… ಅವರ ಸರಳತೆ, ವಿದ್ವತ್ಪೂರ್ಣ, ಅಷ್ಟೇ ಸಹಜ ಮಾತು, ಜೊತೆಗೆ ಮಧುವಿನ ಕುರಿತಾಗಿ ಆತ್ಮೀಯತೆಯಿಂದ ಅವರು ಹೇಳಿಕೊಂಡ ಅವರ ಅವರ ಪೂರ್ವಜೀವನದ ಕಥೆ… ಪ್ರಶಾಂತ, ನೆಮ್ಮದಿಯ ಜೀವನವನ್ನು ಬಯಸಿ, ತಮಗೆ ಬಂದ ಒಳ್ಳೊಳ್ಳೆಯ ಉದ್ಯೋಗಾವಕಾಶಗಳನ್ನು ಬಿಟ್ಟು, ಕಟ್ಟೆಮನೆಯ ತಮ್ಮ ಅಜ್ಜನ ಕಾಲದ ಮನೆಯಲ್ಲಿ ಸಾಧಾರಣ ರೀತಿಯ ಜೀವನ ನಡೆಸುತ್ತಿದ್ದರು. ಕಾವ್ಯ, ಸಾಹಿತ್ಯ ಸಂಗೀತ ಎಲ್ಲ ವಿಷಯಗಳಲ್ಲೂ ಅವರು ಉತ್ತಮ ಜ್ಞಾನ ಹೊಂದಿದ್ದರೂ ಅದನ್ನು ಪಾಂಡಿತ್ಯ ಪ್ರದರ್ಶನಕ್ಕೆ ಬಳಸದೇ ಸಾಧನೆಗಾಗಿ ಮಾತ್ರ ಬಳಸುತ್ತಿದ್ದರು.
ತನ್ನ ಮುಂದಿನ ಜೀವನಪಥವನ್ನು ನಿರ್ಣಯಿಸಲಾಗದೆ ಅತ್ತಿತ್ತ ಓಲಾಡುತ್ತಿದ್ದ ಮಧುವಿಗೆ ಎಲ್ಲದರ ಕುರಿತೂ ಅಸಹಾಯಕ ಆಕರ್ಷಣೆ… ಒಮ್ಮೆ ಗಣಪತಿ ಭಟ್ಟರಂತೆ ಹಳ್ಳಿ ಮೂಲೆಯಲ್ಲಿ ಆಡಂಬರರಹಿತ ಜೀವನ ನಡೆಸುವಾಸೆ, ಇನ್ನೊಮ್ಮೆ ಎಲ್ಲಾ ವಿದ್ಯೆಯ ಪ್ರವೀಣನಾಗುವಾಸೆ, ಇನ್ನೊಮ್ಮೆ ಏನಾದರೂ ಸರಿ, ಸೌಮ್ಯಳ ಮನವೊಲಿಸಿ ಅವಳನ್ನು ಮದುವೆಯಾಗಿ ಸುಖೀಜೀವನ ನಡೆಸುವಾಸೆ. ಇನ್ನೊಮ್ಮೆ ಹಾಳಾದ ವ್ಯವಸ್ಥೆಯನ್ನು ಕ್ರಾಂತಿ ಮಾಡಿ ಸರಿಮಾಡುವಾಸೆ… ಇನ್ನೊಮ್ಮೆ ಮುಂದುವರೆದ ತಂತ್ರಜ್ಞಾನದ ಸಾಧ್ಯತೆಗಳ ಆವಿಷ್ಕರಿಸುವಾಸೆ… ಒಂದು ಎರಡಲ್ಲ.. ಮನಮೆಚ್ಚಿದ ಪ್ರತಿ ಹಾದಿಯೂ ತನ್ನ ಜೀವನಕ್ಕೆ ಗುರಿಯಾಗಬಲ್ಲದೆಂಬ ಆಸೆ…

ಎಲ್ಲಕ್ಕೂ ಮಿಗಿಲಾಗಿ ಕಾಡುವುದು ಸೌಮ್ಯಳ ಜೊತೆ ಜೀವನ ಮಾಡುವ ಮತ್ತು ಆಧ್ಯಾತ್ಮ ಸಾಧನೆಯ ಆಸೆ. ಎರಡೂ ಒಂದು ರೀತಿ ವಿರುದ್ಧ ಆಯ್ಕೆಗಳು. ಅವೆರಡರ ನಡುವೆ ಯಾವುದನ್ನು ಆಯ್ದುಕೊಳ್ಳಲಿ ಎಂಬ ದ್ವಂದ್ವ ಆತನನ್ನು ತುಂಬಾ ಕಾಡುತ್ತದೆ. ಸೌಮ್ಯಳು ಸಿಗುವುದು ಖಾತ್ರಿ ಇಲ್ಲ. ಆಧ್ಯಾತ್ಮದಿಂದ ಕೊನೆಗೆ ನೆಮ್ಮದಿ ಸಿಕ್ಕೀತು ಎಂಬ ಪೂರ್ತಿ ನಂಬಿಕೆ ಇಲ್ಲ. ಲೌಖಿಕ ಸುಖವನ್ನು ತಿರಸ್ಕರಿಸಿ ಬದುಕಿ ಕೊನೆಗೆ ಪಶ್ಚಾತ್ತಾಪ ಪಡುವಂತೆ ಆಗಬಾರದಲ್ಲ… ಹಾಗೆ ಸೌಮ್ಯಳ ಹಿಂದೆ ಬಿದ್ದು ಇನ್ನೊಂದು ವ್ಯಕ್ತಿ ಹಿಂದೆ ಬಿದ್ದು ತನ್ನ ವ್ಯಕ್ತಿತ್ವ ನಾಶ ಮಾಡಿಕೊಂಡಂತೆ ಆಗಬಾರದಲ್ಲ… ದಾರಿಯಲ್ಲಿ ಸಿಗುವ ಕಷ್ಟಕ್ಕಿಂತ ಎರಡರಲ್ಲೊಂದು ದಾರಿಯನ್ನು ಆಯ್ದುಕೊಳ್ಳಲಾಗದೆ ಒದ್ದಾಡುವ ಕಷ್ಟವೇ ದೊಡ್ಡದೇನೋ…

ಕಣ್ಣಮುಂದೆ ನೂರಾರು ಮೈಲಿವರೆಗೆ ಮಲೆಬೆಟ್ಟಗಳು… ಕೊಂಚದೂರದವರೆಗಿನವು ಹಸಿರಾಗಿ ಕಂಡರೆ ನಂತರದವು ನೀಲಿಯಾಗಿ ಕಾಣುತ್ತವೆ… ಕೊನೆಯಲ್ಲಿ ದಿಗಂತ ಕೂಡ ಅಸ್ಪಷ್ಟವಾದಂತೆ ಆಗಸದೊಡನೆ ಭುವಿ ಸೇರುತ್ತದೆ. ಹತ್ತಿರದ ಬೆಟ್ಟಗಳಲ್ಲಿ ರಾಜಾರೋಷವಾಗಿ ಬೆಳೆದಿರುವ ಒತ್ತೊತ್ತು ಮರಗಳು…

“ಎಷ್ಟು ಸುಂದರ ಈ ಪ್ರಕೃತಿ!! ಕ್ಷಣಿಕ, ದುಃಖಮಯ ಎಂದು ಯಾವ ಲೋಕವನ್ನು ಅಧ್ಯಾತ್ಮ ಜರಿಯುತ್ತದೆಯೋ ಆ ಲೋಕ ಎಷ್ಟು ಚಂದವಿದೆ! ಇಲ್ಲಿ ಎಂಥ ಸೌಂದರ್ಯವಿದೆ! ಇಂಥ ಸುಂದರ ಅನುಭವಗಳನ್ನು ತ್ಯಜಿಸಿ, ಪ್ರಕೃತಿದತ್ತವಾದ ಆಸೆಗಳನ್ನು ಹತ್ತಿಕ್ಕಿ ಕಾಣದ ಲೋಕದ ಸುಖಕ್ಕಾಗಿ ಜನ್ಮ ಪೂರ್ತಿ ಸಾಧನೆ ಮಾಡುವುದು ಸರಿಯೇ..?! ಮುಂದೆ ಇದೆ ಎಂದು ಹೇಳಲಾಗುವ ಕಾಣದ ಪರಲೋಕದಲ್ಲಿ ಸುಖವಾಗಿರಲು ಈಗ ಸಿಕ್ಕಿರುವ ಜೀವನವನ್ನು ವ್ಯರ್ಥವಾಗಿಸುವುದಕ್ಕಿಂತ ಈ ಜೀವನವನ್ನು ಅನುಭವಿಸಿ, ಕಷ್ಟವನ್ನು ಪರಲೋಕದಲ್ಲಿ ಅನುಭವಿಸಬಹುದಲ್ಲ… ಛೇ!! ಈ ಪರಲೋಕ ಪಾಪ ಪುಣ್ಯ ಇಂಥ ಕ್ಷುಲ್ಲಕ ವಿಚಾರಗಳು ತನ್ನನ್ನು ಎಷ್ಟು ಕಾಡುತ್ತವೆ! ತನ್ನ ಜೀವನದ ಕುರಿತಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಡ್ಡಿಯಾಗಿರುವವು ಕೂಡ ಇವೇ ಅಲ್ಲವೇ..?! ಈ ಜಗತ್ತು ಮಿಥ್ಯೆ ಎಂಬುದಾದರೆ ಜಗತ್ತು ಇದೆ ಏಕೆ? ಜಗತ್ತು ಇದೆ ಅಂದ ಮೇಲೆ ಮಿಥ್ಯೆಯಾಗಲು ಹೇಗೆ ಸಾಧ್ಯ?!”

ಕಣ್ಣ ಮುಂದಿನ ಜಗತ್ತು ಚಂದವಾಗಿ ಕಾಣಲು ಈ ಜಗತ್ತೆಲ್ಲ ಚಂದ ಎಂಬ ಭಾವ ಮಧುವನ್ನು ಆವರಿಸಿತು. ಹೌದು, ಪರಲೋಕದಲ್ಲಿ ಸೌಮ್ಯಳಂತಹ ಇನ್ನೊಬ್ಬಳು ಹೆಣ್ಣು ಇರಲು ಸಾಧ್ಯವೇ? ಇದ್ದರೂ, ಅವಳು ಇನ್ನೊಬ್ಬಳೇ ವಿನಃ ಸೌಮ್ಯಳೇ ಅಲ್ಲವಲ್ಲ!! ಅವಳೊಬ್ಬಳು ಸಿಗುವುದಾದರೆ ತನಗೆ ಜೀವನದಲ್ಲಿ ಇನ್ನಾವ ಬೇಡಿಕೆಯೂ ಬಾಕಿ ಉಳಿಯಲಾರದು! ಸೌಂದರ್ಯದ ಗಣಿ ಅಲ್ಲವೇ ಆಕೆ! ಆದರೂ ಆಕೆ ತನಗೆ ಇಷ್ಟವಾದದ್ದು ಅವಳ ಚಂದದಿಂದಾಗಿ ಅಲ್ಲ. ಅವಳಿಗಿಂತ ಚಂದದ ಹುಡುಗಿಯರು ಇದ್ದಾರಲ್ಲ! ಅವಳ ಗುಣ? ಚೆನ್ನಾಗಿದೆ. ಆದರೆ ಅವಳಿಗಿಂತ ಗುಣವಂತೆಯರೂ ಇದ್ದಾರೆ. ಆದರೂ ಜನ್ಮಜನ್ಮಾಂತರದ ಬಂಧವೊಂದು ತನ್ನ ಬದುಕನ್ನು ಅವಳ ಹೆಸರಿಗೆ ಬರೆದುಬಿಟ್ಟಿದೆ.. ಅವಳೊಬ್ಬಳನ್ನು ನೆನೆದಾಗ ಈಗಲೂ ಎದೆ ಕಂಪಿಸುತ್ತದೆ… ಕೈಗಳು ಕವಿತೆ ಬರೆಯುತ್ತವೆ…

ಕಣ್ಣಿನೊಳಗಿನ ಕಪ್ಪು ಚಂದ್ರಗೆ
ಎಂಥ ಕಾಂತಿಯು, ನಲ್ಲೆಯೇ!
ಬೆಳ್ಳಿ ಬೆಳಕನು ಅವನು ಬೀರಲು
ಮನಕೆ ತಂಪಿದೆ ಇಲ್ಲಿಯೇ! , ನಿನ್ನ
              ಕಣ್ಣ ಕಾಂತಿಗೆ ಎಲ್ಲೆಯೇ?!

ಅವಳು ತನ್ನ ಜೀವನದ ಮರುಭೂಮಿ ಪಯಣದಲ್ಲಿ ಕಾಡುವ ಮರೀಚಿಕೆ… ತನ್ನ ಮನಸ್ಸಿನಲ್ಲಿ, ಮಲೆನಾಡಿನ ಚಂದದ ಊರಿನ ಪರಿಸರದಲ್ಲಿ ರೂಪುಗೊಂಡ ತನ್ನ ಭಾವಕೋಶದಲ್ಲಿ, ಮಾಧುರ್ಯತೆಯ ಪ್ರತೀಕವಾಗಿ ತನ್ನನ್ನು ಆವರಿಸಿಕೊಂಡಿದ್ದಾಳೆ…

ನೀನು ನಡೆಯುವ ದಾರಿ ತುಂಬಾ
ರಾಶಿ ಮಧುಮಾಲತಿ ಸುಮ
ಹೂವ ಕಂಪಿಗೆ ಸೆಡ್ಡು ಒಡ್ಡುವ
ನಿನ್ನ ಮೈಗಂಪಿನ ಘಮ –
                 ದುಂಡುಮಲ್ಲಿಗೆಯಾ ಸಮ

ಹೌದು.. ಅವಳು ಕೇವಲ ತನ್ನ ಕಾಮನೆಯ, ಪ್ರೀತಿಯ ಪ್ರತೀಕವಲ್ಲ… ತಾನು ತನ್ನ ಭೂತಕಾಲದ ಎಲ್ಲಾ ನೆನಪುಗಳನ್ನು ಅವಳೊಡನೆ ಸಮೀಕರಿಸಿಕೊಂಡಿದ್ದೇನೆ! ಅವಳು ಸಿಕ್ಕರೆ ತನ್ನ ಜೀವನಕ್ಕೆ ಅರ್ಥ… ಇಲ್ಲವಾದರೆ…?! ತನ್ನ ನೆನಪುಗಳೇ ಭಾವಗಳನ್ನು ಜೀವಂತವಿರಿಸಬೇಕು.. ಯಾಕೆಂದರೆ ಮನಸ್ಸನ್ನಾವರಿಸಿದ ಈ ಲಕ್ಷ ಲಕ್ಷ ಭಾವಗಳು ಯಾವತ್ತೂ ಸಾಯುತ್ತವೋ ಆವತ್ತು ತನ್ನ ಬದುಕಿಗೆ ಅರ್ಥವಿಲ್ಲ… ತಾನು ಭಾವಜೀವಿ…! ಭಾವವೇ ತನ್ನ ಜೀವನ…!!

ಭಾವ ಬದುಕಿನ ಜೀವವಾಗಲು
ಸಾವಿಗೆಲ್ಲಿದೆ ಜನನವು
ದೇಹ ಸತ್ತರು ಭಾವ ಸಾಯದು
ಭಾವ ಆತ್ಮದ ಬಂಧುವು!

ತಾನು ಸತ್ತರೂ ತನ್ನ ಭಾವ ಜೀವಂತ… ಆ ಭಾವಗಳು ಸತ್ತರೆ ತನ್ನ ಆತ್ಮವೂ ಸತ್ತಂತೆ..!!!

ಆ ಭಾವಗಳಿಗೆ ಇಂದು ಊಟ ಹಾಕುತ್ತಿರುವವು ಈ ನೆನಪುಗಳು… ಹಿಂದಿನ ಕಹಿ ಘಟನೆಗಳ ನೆನಪುಗಳು ಈಗ ಕಿರುನಗೆ ಮೂಡಿಸುತ್ತವೆ… ಅಂದು ನಕ್ಕ ಕ್ಷಣಗಳ ನೆನಪು ವಿಷಾದದ ರೇಖೆ ಮೂಡಿಸುತ್ತದೆ…!!

ನೋವ ನೆನಪಿಗೆ ನಗೆಯ ಲೇಪವು
ನಗೆಯ ನೆನಪಲಿ ನೋವಿದೆ
ಬದುಕಯಾತ್ರೆಯ ಈ ಚರಿತ್ರೆಗೆ
ಭಾವಕೋಶದಿ ನೆಲೆಯಿದೆ..
              ಅಳೆಯಲಾಗದ ಬೆಲೆಯಿದೆ…

ಹಾಗಂತ…?!
ನೆನಪುಗಳಲ್ಲೇ ಜೀವನವನ್ನು ಸಾಗಿಸಲು ಸಾಧ್ಯವಿಲ್ಲ…ಆದರೆ ಮನಸ್ಸು ಬಯಸಿದ್ದು ಸಿಗುವುದೂ ಇಲ್ಲ… ಈಗ ಮನಸ್ಸು ಏನು ಮಾಡುತ್ತದೆ.? ಅದೇ… ಪರ್ಯಾಯ ಜಗತ್ತು… ಹೌದು.. ನನಗೆ ಗೊತ್ತು… ನನ್ನ ಮನಸ್ಸು ಒಂದು ಘೋರ ಖಾಯಿಲೆಗೆ ತುತ್ತಾಗಿದೆ… ಈ ಮನೋರೋಗದ ಕುರಿತು ತನಗೆ ಚೆನ್ನಾಗೇ ಅರಿವಿದೆ.. ಒಂದು ರೀತಿಯಲ್ಲಿ ಅದು ವಾಸಿಯಾಗದಿದ್ದರೇ ಚೆನ್ನ…. ವಾಸ್ತವದಲ್ಲಿ ತನ್ನ ತೀವ್ರ ಸ್ವರೂಪದ ಬಯಕೆಗಳು ಸಿಗದಿದ್ದರಿಂದ ತನ್ನ ಮನಸ್ಸು ಭ್ರಮೆಯ ಲೋಕವೊಂದನ್ನು ಹುಟ್ಟು ಹಾಕಿಕೊಂಡಿದೆ…!! ಅಲ್ಲಿ ಬಯಸಿದ್ದೆಲ್ಲ ಸಿಗುತ್ತದೆ.. ಯಾಕೆಂದರೆ ಅದು ಭ್ರಮೆ..!! ಹುಚ್ಚು!! ಅದು ನಿಜವಲ್ಲ ಅಂತ ತಿಳಿದೂ ಅದರಿಂದ ಹೊರಬರುವ ಪ್ರಯತ್ನ ನಾನು ಮಾಡುತ್ತಿಲ್ಲ… ಯಾಕೆಂದರೆ ಈ ಜಗತ್ತಿಗಿಂತ ಭ್ರಮೆಯ ಲೋಕವೇ ಹೆಚ್ಚು ಆಪ್ಯಾಯಮಾನವಾಗಿದೆ..!

ಕನಸಿಗೆಂದೇ ಕಣ್ಣ ಆಳದಿ
ಬಣ್ಣ ಬಣ್ಣದ ಜಗವಿದೆ
ನಿಜದ ಜಗದಲಿ ಸಿಗದ ಬಯಕೆಯ
ಅಲ್ಲಿ ಸುಖಿಸುವ ಹಾಗಿದೆ…
                ಮನಕು ಅದುವೇ ಬೇಕಿದೆ…

ಪ್ರಕೃತಿಯ ಅವಲೋಕನದಲ್ಲಿ ಪ್ರಾರಂಭವಾದ ಮಧುವಿನ ಯೋಚನೆ ತನ್ನ ಮನಸ್ಸಿನ ಅವಲೋಕನದಲ್ಲಿ ತೊಡಗಿತ್ತು… ತನ್ನ ಮನಸ್ಸಿನ ಖಾಯಿಲೆ ಅವನಿಗೆ ಗೊತ್ತಿತ್ತು. ಅದರಿಂದ ಹೊರಬರುವುದಕ್ಕಿಂತ ಇನ್ನಷ್ಟು ಅದರಾಳಕ್ಕೆ ಇಳಿಯುವುದು ಲೇಸು ಅನ್ನಿಸುತ್ತಿತ್ತು…ಅಷ್ಟಕ್ಕೂ ನಿಜವಾದರೇನು, ಭ್ರಮೆಯಾದರೇನು.. ಜೀವನದ ಪರಮಗುರಿ ನೆಮ್ಮದಿ, ಶಾಂತಿ. ಅಷ್ಟೇ….

 

ಮಲೆನಾಡ ಪರ್ವತಗಳು ನಿಶ್ಚಲವಾಗಿದ್ದವು… ಮಧ್ಯಾಹ್ನದ ಬಿಸಿಲಿನಲ್ಲಿ ಮಹಾರಣ್ಯದ ಹಿನ್ನೆಲೆಯಲ್ಲಿ ಹಕ್ಕಿಯೊಂದು ನೀಳವಾಗಿ ಕೂಗುತ್ತಿತ್ತು.. ಮಧುವಿನ ಮನಸ್ಸು ಇನ್ನಷ್ಟು ಮತ್ತಷ್ಟು ಕಲ್ಪನೆಯ ಲೋಕದೊಳಗೆ ಜಾರುತ್ತಿತ್ತು…..

ಈ ಪೋಸ್ಟ್ ಅನ್ನು ಶೇರ್ ಮಾಡಲು: