ನಿರೀಕ್ಷೆ

(ಮದುವೆಯಾಗಿ ತಿಂಗಳುಗಳಾಗಿವೆ ಅಷ್ಟೇ, ಕೆಲಸಕ್ಕೆ ಹೋದ ಐತನ ಬರುವಿಕೆಗೆ ಪೀಂಚಲು ಗುಡಿಸಲಿನ ಬಾಗಿಲಲ್ಲಿ ಕಾದು, ಕನಸು ಕಾಣುತ್ತಾ ಕುಳಿತಿದ್ದಾಳೆ…)

ಸೋಗೆ ಹೊದೆಸಿದ ಮನೆಯೊಳಿಳಿದಿದೆ
ಚಂದಿರನ ಬೆಳದಿಂಗಳು
ಬಾಗಿಲಲಿ ಬರಕಾದು ಕುಳಿತಿವೆ
ಅವಳ ಚಂಚಲ ಕಂಗಳು

ಹುಣ್ಣಿವೆಯ ಚಂದಿರಗೆ ಲಘುಬಗೆ
ಹೊತ್ತು ಇಳಿಯುವ ಮುನ್ನವೇ
ರಾತ್ರಿಯೇರದೆ ಅವಳ ಮನಸಲಿ
ಇಷ್ಟು ಬಯಕೆಯು ಚೆನ್ನವೇ?!

ಗಂಡ ದಿನವಿಡಿ ದುಡಿದು ಬರುವನು
ಮಲ್ಲಿಗೆಯ ಹೂ ತರುವನು
ಹೂವ ಮಂಚದ ಮೇಲೆ ಇಡುವನು
ಕೆನ್ನೆ ಮೇಲ್ಗಡೆ ಮುತ್ತನು

ಸಪ್ಪೆ ಸಾರಿಗೆ ರುಚಿಯ ಸೇರಿಸಿ
ಹೊಗಳಿಕೆಯ ಮಳೆ ಸುರಿವನು
ಅವಳ ಕೈಗುಣ ಹೊಗಳೊ ನೆಪದಲಿ
ಕೈಗೆ ಕೈಯನು ಬೆಸೆವನು

ಊಟ ಮುಗಿಯಲು ಕವಳ ಹಾಕಲು
ತನ್ನನೂ ಜೊತೆ ಕರೆವನು
ಸ-ರಸ ವೀಳ್ಯವ ನಗುತ ಮೆಲ್ಲುತ
ತಮ್ಮ ಕೋಣೆಗೆ ಕರೆವನು

ದಿನವೂ ಪ್ರೇಮದ ಮಳೆಯ ಸುರಿವನು
ಪ್ರೀತಿಪರ್ವತರಾಜನು
ಇಂದು ಎಲ್ಲಿಗೆ ಹೋದ, ಇನ್ನೂ
ಎಷ್ಟು ಹೊತ್ತಿಗೆ ಬರುವನು?

ಅತ್ತ ಹೊರಗಡೆ ಕರುವು ಕೂಗಿತು
ನಲ್ಲ ಬರುತಿಹ ತುಡಿಯುತ
ಗೆಜ್ಜೆ ಕಾಲ್ಗಳ ಹೊತ್ತು ಬಂದಳು
ಒಳಗೊಳಗೆ ತುಟಿ ಕಡಿಯುತ

ಪ್ರೇಮದ ಶರಧಿಗೆ ಕವಿಮನದ ನಡಿಗೆ; ರಾಗದ ಜೊತೆಗೆ…

  • ಮುಖಪುಸ್ತಕದ ಸ್ನೇಹಿತ, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ಭಾವಗವಿತೆಗಳ ಸಿಡಿ “ಪ್ರೇಮದ ಶರಧಿಗೆ…” ; ತರಿಸಿ ಇಷ್ಟು ದಿನದ ಮೇಲೆ ಲ್ಯಾಪ್‍ಟಾಪ್ ಸಿಕ್ಕಿದ್ದರಿಂದ ಹಾಡು ಕೇಳಲು ಸಾಧ್ಯವಾಯಿತು.. ಹಾಗೇ ಕೆಲವು ಕ್ಷಣ ಮೈಮರೆಯಲೂ..

ಕ್ಲಾಸಿಕಲ್ ಆದ, ಭಾವಗೀತೆಗಳನ್ನು ಕೇಳಿ ಖುಷಿಪಡುವವರಿಗೆ ಖಂಡಿತ ಇದು ಹೊಸ ಊಟ ಹಾಕಿದಂತೆ. ರಾಗ ತಾಳಗಳ ಬಗ್ಗೆ ವಿವರಿಸುವ ಬುದ್ಧಿಮತ್ತೆ ನನಗಿಲ್ಲ. ಆದರೆ ಹಾಡುಗಾರರು ಕವಿತೆಯ ಭಾವವನ್ನು ಕಟ್ಟಿಕೊಡುವಲ್ಲಿ ಸಫಲರಾಗಿದ್ದು ನಿಜ. ನನಗೆ ‘ಪ್ರೇಮದ ಶರಧಿಗೆ’ ಹಾಗೂ ‘ಯಾವ ರಾಗ ಬೆರೆಸಲಿ’ ‘ಹೆಜ್ಜೆ ಗುರುತು’ ಹಾಡುಗಳು ತುಂಬಾ ಇಷ್ಟವಾದವು… ಮಾತಿನ ಅರಮನೆ ಹಾಗೂ ಆಡು ಬಾ ಕಾಡು ಬಾ ಹಾಡುಗಳಲ್ಲಿ ಕೂಡ ಒಂಥರಾ ಸೆಳೆತವಿದೆ.

ಇನ್ನೂ ಅವರ ಪುಸ್ತಕವನ್ನು ಓದುವುದು ಬಾಕಿಯಿದೆ.. ಸಾಹಿತ್ಯ ಓದದೇ ಸಂಗೀತ ಸರಿಯಾಗಿ ಅರ್ಥವಾಗಲಿಕ್ಕಿಲ್ಲ.. ಯಾಕೆಂದರೆ ನಾನು ಓದಿದ ಕೆಲವೇ ಕವಿತೆಗಳಿಂದಲೇ ರವೀಂದ್ರ ಅವರ ಕವಿತಾಶಕ್ತಿ ಬಹಳ ಎಂದು ಅರ್ಥವಾಗಿದೆ. ಜೊತೆಗೆ ನನಗೆ ಒಳ್ಳೆಯ ಸಂಗೀತವನ್ನು ಕೇಳಿ ತಲೆದೂಗುವುದು ಗೊತ್ತು, ಅದನ್ನು ವಿಮರ್ಶಿಸಲು ಗೊತ್ತಿಲ್ಲ. ಒಟ್ಟಿನಲ್ಲಿ ಒಂದಿಷ್ಟು ಹೊಸ ಭಾವಗೀತೆಗಳು ಈಗ ನನ್ನ ಪ್ಲೇಲಿಸ್ಟ್ ಸೇರಿವೆ. ಅದಕ್ಕಾಗಿ ರವೀಂದ್ರರಿಗೆ ಧನ್ಯವಾದಗಳು..

ಮಧುಕಲ್ಪ….

[ ಬಾಸಲು ಊರಿನಿಂದ ನಾಲ್ಕೈದು ಮೈಲಿ ದೂರ, ಜನರು ವರ್ಷಕ್ಕೊಮ್ಮೆ ಕಸಬರಿಕೆ (ಹಿಡಿ) ಮಾಡಲು ಮಾತ್ರ ‘ಕರಿಕಾನಿಗೆ’ ಹೋಗುವ ಬೆಟ್ಟದ ಹಳು ತುಂಬಿದ ಹಾದಿಯಲ್ಲಿ, ತನ್ನದೇ ಯೋಚನೆಯಲ್ಲಿ ಸಾಗುತ್ತಿರುವ ಮಧು, ಆತನ ಮುಂದೆ ಹಬ್ಬಿಕೊಂಡಿರುವ ಬೃಹತ್ ಪಶ್ಚಿಮ ಘಟ್ಟಗಳ ಇಳಿಜಾರು, ಮತ್ತು ಆ ಇಳಿಜಾರಿನ ತುಂಬಾ ಅತ್ಯಂತ ಇಕ್ಕಟ್ಟಾಗಿ, ಭೂಮಿಯ ಅಂಗುಲ ಅಂಗುಲವನ್ನೂ ಬಿಡದೆ ತಬ್ಬಿಕೊಂಡ ಮಲೆನಾಡಿನ ವೈವಿಧ್ಯಪೂರ್ಣ ಸಸ್ಯರಾಶಿ.. ಮತ್ತು ಆ ಸಸ್ಯರಾಶಿಯ ವಸಾಹತುಶಾಹಿ ಗುಣದ ಪ್ರತೀಕವಾಗಿ, ಆ ಪಶ್ಚಿಮಘಟ್ಟ ಪರ್ವತದ ತುದಿಯಲ್ಲಿ ನಿಂತು ನೋಡಿದರೂ ದೂರದವರೆಗೆ ಹಬ್ಬಿರುವ ಸಸ್ಯಸಂಕುಲ… ದೃಷ್ಟಿಗೋಲದ ಕೆಳಾರ್ಧವನ್ನು ಮಲೆನಾಡ ಹಸಿರು ತುಂಬಿದರೆ ಉಳಿದರ್ಧವನ್ನು ನೀಲಿ ಆಕಾಶ ತುಂಬುತ್ತಿತ್ತು… ಅಲ್ಲಿವರೆಗೆ ತನ್ನದೇ ಯೋಚನೆಯಲ್ಲಿ ಮುಳುಗಿದ್ದ ಮಧು, ತತ್ಕ್ಷಣಕ್ಕೆ ತನ್ನೆದುರಿನ ಪ್ರಕೃತಿವೈಭವಕ್ಕೆ ಮರುಳಾಗಿ, ಎದುರಿನ ಮಹಾರಣ್ಯಪ್ರಪಾತವನ್ನೂ, ಅದರೆದುರಿನ ಹತ್ತಾರು ವಿಪಿನ ಪರ್ವತಗಳನ್ನೂ ಕಣ್ತುಂಬಿಕೊಂಡನು…..]
ತನ್ನ ಭಾವಗಳಿಗೂ ಮಲೆನಾಡ ಸೌಂದರ್ಯಕ್ಕೂ ಅವಿನಾಭಾವ ಸಂಬಂಧ ಕಲ್ಪಿಸಿದ್ದ ಮಧುವಿನ ಮಸ್ತಕದಲ್ಲಿ ಮತ್ತೆ ಯೋಚನೆಗಳು ಶುರುವಾದವು.. ಬೆಳಿಗ್ಗೆ ಗಿರಿಜತ್ತೆ ಮನೆಗೆ ಬಂದಿದ್ದ ಕಟ್ಟೆಮನೆ ಗಣಪತಿ ಭಟ್ಟರ ವ್ಯಕ್ತಿತ್ವ ಆತನನ್ನು ಬಹಳ ಆಕರ್ಷಿಸಿತ್ತು. ಮದುವೆಯಾಗದೆ ಬ್ರಹ್ಮಚಾರಿಯಾಗೆ ಉಳಿದ ಗಣಪತಿ ಭಟ್ಟರ ಪಾಂಡಿತ್ಯಕ್ಕೆ ಸಮನಾದವರು ಅಲ್ಲಿ ಯಾರೂ ಇರಲಿಲ್ಲ… ಅವರ ಸರಳತೆ, ವಿದ್ವತ್ಪೂರ್ಣ, ಅಷ್ಟೇ ಸಹಜ ಮಾತು, ಜೊತೆಗೆ ಮಧುವಿನ ಕುರಿತಾಗಿ ಆತ್ಮೀಯತೆಯಿಂದ ಅವರು ಹೇಳಿಕೊಂಡ ಅವರ ಅವರ ಪೂರ್ವಜೀವನದ ಕಥೆ… ಪ್ರಶಾಂತ, ನೆಮ್ಮದಿಯ ಜೀವನವನ್ನು ಬಯಸಿ, ತಮಗೆ ಬಂದ ಒಳ್ಳೊಳ್ಳೆಯ ಉದ್ಯೋಗಾವಕಾಶಗಳನ್ನು ಬಿಟ್ಟು, ಕಟ್ಟೆಮನೆಯ ತಮ್ಮ ಅಜ್ಜನ ಕಾಲದ ಮನೆಯಲ್ಲಿ ಸಾಧಾರಣ ರೀತಿಯ ಜೀವನ ನಡೆಸುತ್ತಿದ್ದರು. ಕಾವ್ಯ, ಸಾಹಿತ್ಯ ಸಂಗೀತ ಎಲ್ಲ ವಿಷಯಗಳಲ್ಲೂ ಅವರು ಉತ್ತಮ ಜ್ಞಾನ ಹೊಂದಿದ್ದರೂ ಅದನ್ನು ಪಾಂಡಿತ್ಯ ಪ್ರದರ್ಶನಕ್ಕೆ ಬಳಸದೇ ಸಾಧನೆಗಾಗಿ ಮಾತ್ರ ಬಳಸುತ್ತಿದ್ದರು.
ತನ್ನ ಮುಂದಿನ ಜೀವನಪಥವನ್ನು ನಿರ್ಣಯಿಸಲಾಗದೆ ಅತ್ತಿತ್ತ ಓಲಾಡುತ್ತಿದ್ದ ಮಧುವಿಗೆ ಎಲ್ಲದರ ಕುರಿತೂ ಅಸಹಾಯಕ ಆಕರ್ಷಣೆ… ಒಮ್ಮೆ ಗಣಪತಿ ಭಟ್ಟರಂತೆ ಹಳ್ಳಿ ಮೂಲೆಯಲ್ಲಿ ಆಡಂಬರರಹಿತ ಜೀವನ ನಡೆಸುವಾಸೆ, ಇನ್ನೊಮ್ಮೆ ಎಲ್ಲಾ ವಿದ್ಯೆಯ ಪ್ರವೀಣನಾಗುವಾಸೆ, ಇನ್ನೊಮ್ಮೆ ಏನಾದರೂ ಸರಿ, ಸೌಮ್ಯಳ ಮನವೊಲಿಸಿ ಅವಳನ್ನು ಮದುವೆಯಾಗಿ ಸುಖೀಜೀವನ ನಡೆಸುವಾಸೆ. ಇನ್ನೊಮ್ಮೆ ಹಾಳಾದ ವ್ಯವಸ್ಥೆಯನ್ನು ಕ್ರಾಂತಿ ಮಾಡಿ ಸರಿಮಾಡುವಾಸೆ… ಇನ್ನೊಮ್ಮೆ ಮುಂದುವರೆದ ತಂತ್ರಜ್ಞಾನದ ಸಾಧ್ಯತೆಗಳ ಆವಿಷ್ಕರಿಸುವಾಸೆ… ಒಂದು ಎರಡಲ್ಲ.. ಮನಮೆಚ್ಚಿದ ಪ್ರತಿ ಹಾದಿಯೂ ತನ್ನ ಜೀವನಕ್ಕೆ ಗುರಿಯಾಗಬಲ್ಲದೆಂಬ ಆಸೆ…

ಎಲ್ಲಕ್ಕೂ ಮಿಗಿಲಾಗಿ ಕಾಡುವುದು ಸೌಮ್ಯಳ ಜೊತೆ ಜೀವನ ಮಾಡುವ ಮತ್ತು ಆಧ್ಯಾತ್ಮ ಸಾಧನೆಯ ಆಸೆ. ಎರಡೂ ಒಂದು ರೀತಿ ವಿರುದ್ಧ ಆಯ್ಕೆಗಳು. ಅವೆರಡರ ನಡುವೆ ಯಾವುದನ್ನು ಆಯ್ದುಕೊಳ್ಳಲಿ ಎಂಬ ದ್ವಂದ್ವ ಆತನನ್ನು ತುಂಬಾ ಕಾಡುತ್ತದೆ. ಸೌಮ್ಯಳು ಸಿಗುವುದು ಖಾತ್ರಿ ಇಲ್ಲ. ಆಧ್ಯಾತ್ಮದಿಂದ ಕೊನೆಗೆ ನೆಮ್ಮದಿ ಸಿಕ್ಕೀತು ಎಂಬ ಪೂರ್ತಿ ನಂಬಿಕೆ ಇಲ್ಲ. ಲೌಖಿಕ ಸುಖವನ್ನು ತಿರಸ್ಕರಿಸಿ ಬದುಕಿ ಕೊನೆಗೆ ಪಶ್ಚಾತ್ತಾಪ ಪಡುವಂತೆ ಆಗಬಾರದಲ್ಲ… ಹಾಗೆ ಸೌಮ್ಯಳ ಹಿಂದೆ ಬಿದ್ದು ಇನ್ನೊಂದು ವ್ಯಕ್ತಿ ಹಿಂದೆ ಬಿದ್ದು ತನ್ನ ವ್ಯಕ್ತಿತ್ವ ನಾಶ ಮಾಡಿಕೊಂಡಂತೆ ಆಗಬಾರದಲ್ಲ… ದಾರಿಯಲ್ಲಿ ಸಿಗುವ ಕಷ್ಟಕ್ಕಿಂತ ಎರಡರಲ್ಲೊಂದು ದಾರಿಯನ್ನು ಆಯ್ದುಕೊಳ್ಳಲಾಗದೆ ಒದ್ದಾಡುವ ಕಷ್ಟವೇ ದೊಡ್ಡದೇನೋ…

ಕಣ್ಣಮುಂದೆ ನೂರಾರು ಮೈಲಿವರೆಗೆ ಮಲೆಬೆಟ್ಟಗಳು… ಕೊಂಚದೂರದವರೆಗಿನವು ಹಸಿರಾಗಿ ಕಂಡರೆ ನಂತರದವು ನೀಲಿಯಾಗಿ ಕಾಣುತ್ತವೆ… ಕೊನೆಯಲ್ಲಿ ದಿಗಂತ ಕೂಡ ಅಸ್ಪಷ್ಟವಾದಂತೆ ಆಗಸದೊಡನೆ ಭುವಿ ಸೇರುತ್ತದೆ. ಹತ್ತಿರದ ಬೆಟ್ಟಗಳಲ್ಲಿ ರಾಜಾರೋಷವಾಗಿ ಬೆಳೆದಿರುವ ಒತ್ತೊತ್ತು ಮರಗಳು…

“ಎಷ್ಟು ಸುಂದರ ಈ ಪ್ರಕೃತಿ!! ಕ್ಷಣಿಕ, ದುಃಖಮಯ ಎಂದು ಯಾವ ಲೋಕವನ್ನು ಅಧ್ಯಾತ್ಮ ಜರಿಯುತ್ತದೆಯೋ ಆ ಲೋಕ ಎಷ್ಟು ಚಂದವಿದೆ! ಇಲ್ಲಿ ಎಂಥ ಸೌಂದರ್ಯವಿದೆ! ಇಂಥ ಸುಂದರ ಅನುಭವಗಳನ್ನು ತ್ಯಜಿಸಿ, ಪ್ರಕೃತಿದತ್ತವಾದ ಆಸೆಗಳನ್ನು ಹತ್ತಿಕ್ಕಿ ಕಾಣದ ಲೋಕದ ಸುಖಕ್ಕಾಗಿ ಜನ್ಮ ಪೂರ್ತಿ ಸಾಧನೆ ಮಾಡುವುದು ಸರಿಯೇ..?! ಮುಂದೆ ಇದೆ ಎಂದು ಹೇಳಲಾಗುವ ಕಾಣದ ಪರಲೋಕದಲ್ಲಿ ಸುಖವಾಗಿರಲು ಈಗ ಸಿಕ್ಕಿರುವ ಜೀವನವನ್ನು ವ್ಯರ್ಥವಾಗಿಸುವುದಕ್ಕಿಂತ ಈ ಜೀವನವನ್ನು ಅನುಭವಿಸಿ, ಕಷ್ಟವನ್ನು ಪರಲೋಕದಲ್ಲಿ ಅನುಭವಿಸಬಹುದಲ್ಲ… ಛೇ!! ಈ ಪರಲೋಕ ಪಾಪ ಪುಣ್ಯ ಇಂಥ ಕ್ಷುಲ್ಲಕ ವಿಚಾರಗಳು ತನ್ನನ್ನು ಎಷ್ಟು ಕಾಡುತ್ತವೆ! ತನ್ನ ಜೀವನದ ಕುರಿತಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಡ್ಡಿಯಾಗಿರುವವು ಕೂಡ ಇವೇ ಅಲ್ಲವೇ..?! ಈ ಜಗತ್ತು ಮಿಥ್ಯೆ ಎಂಬುದಾದರೆ ಜಗತ್ತು ಇದೆ ಏಕೆ? ಜಗತ್ತು ಇದೆ ಅಂದ ಮೇಲೆ ಮಿಥ್ಯೆಯಾಗಲು ಹೇಗೆ ಸಾಧ್ಯ?!”

ಕಣ್ಣ ಮುಂದಿನ ಜಗತ್ತು ಚಂದವಾಗಿ ಕಾಣಲು ಈ ಜಗತ್ತೆಲ್ಲ ಚಂದ ಎಂಬ ಭಾವ ಮಧುವನ್ನು ಆವರಿಸಿತು. ಹೌದು, ಪರಲೋಕದಲ್ಲಿ ಸೌಮ್ಯಳಂತಹ ಇನ್ನೊಬ್ಬಳು ಹೆಣ್ಣು ಇರಲು ಸಾಧ್ಯವೇ? ಇದ್ದರೂ, ಅವಳು ಇನ್ನೊಬ್ಬಳೇ ವಿನಃ ಸೌಮ್ಯಳೇ ಅಲ್ಲವಲ್ಲ!! ಅವಳೊಬ್ಬಳು ಸಿಗುವುದಾದರೆ ತನಗೆ ಜೀವನದಲ್ಲಿ ಇನ್ನಾವ ಬೇಡಿಕೆಯೂ ಬಾಕಿ ಉಳಿಯಲಾರದು! ಸೌಂದರ್ಯದ ಗಣಿ ಅಲ್ಲವೇ ಆಕೆ! ಆದರೂ ಆಕೆ ತನಗೆ ಇಷ್ಟವಾದದ್ದು ಅವಳ ಚಂದದಿಂದಾಗಿ ಅಲ್ಲ. ಅವಳಿಗಿಂತ ಚಂದದ ಹುಡುಗಿಯರು ಇದ್ದಾರಲ್ಲ! ಅವಳ ಗುಣ? ಚೆನ್ನಾಗಿದೆ. ಆದರೆ ಅವಳಿಗಿಂತ ಗುಣವಂತೆಯರೂ ಇದ್ದಾರೆ. ಆದರೂ ಜನ್ಮಜನ್ಮಾಂತರದ ಬಂಧವೊಂದು ತನ್ನ ಬದುಕನ್ನು ಅವಳ ಹೆಸರಿಗೆ ಬರೆದುಬಿಟ್ಟಿದೆ.. ಅವಳೊಬ್ಬಳನ್ನು ನೆನೆದಾಗ ಈಗಲೂ ಎದೆ ಕಂಪಿಸುತ್ತದೆ… ಕೈಗಳು ಕವಿತೆ ಬರೆಯುತ್ತವೆ…

ಕಣ್ಣಿನೊಳಗಿನ ಕಪ್ಪು ಚಂದ್ರಗೆ
ಎಂಥ ಕಾಂತಿಯು, ನಲ್ಲೆಯೇ!
ಬೆಳ್ಳಿ ಬೆಳಕನು ಅವನು ಬೀರಲು
ಮನಕೆ ತಂಪಿದೆ ಇಲ್ಲಿಯೇ! , ನಿನ್ನ
              ಕಣ್ಣ ಕಾಂತಿಗೆ ಎಲ್ಲೆಯೇ?!

ಅವಳು ತನ್ನ ಜೀವನದ ಮರುಭೂಮಿ ಪಯಣದಲ್ಲಿ ಕಾಡುವ ಮರೀಚಿಕೆ… ತನ್ನ ಮನಸ್ಸಿನಲ್ಲಿ, ಮಲೆನಾಡಿನ ಚಂದದ ಊರಿನ ಪರಿಸರದಲ್ಲಿ ರೂಪುಗೊಂಡ ತನ್ನ ಭಾವಕೋಶದಲ್ಲಿ, ಮಾಧುರ್ಯತೆಯ ಪ್ರತೀಕವಾಗಿ ತನ್ನನ್ನು ಆವರಿಸಿಕೊಂಡಿದ್ದಾಳೆ…

ನೀನು ನಡೆಯುವ ದಾರಿ ತುಂಬಾ
ರಾಶಿ ಮಧುಮಾಲತಿ ಸುಮ
ಹೂವ ಕಂಪಿಗೆ ಸೆಡ್ಡು ಒಡ್ಡುವ
ನಿನ್ನ ಮೈಗಂಪಿನ ಘಮ –
                 ದುಂಡುಮಲ್ಲಿಗೆಯಾ ಸಮ

ಹೌದು.. ಅವಳು ಕೇವಲ ತನ್ನ ಕಾಮನೆಯ, ಪ್ರೀತಿಯ ಪ್ರತೀಕವಲ್ಲ… ತಾನು ತನ್ನ ಭೂತಕಾಲದ ಎಲ್ಲಾ ನೆನಪುಗಳನ್ನು ಅವಳೊಡನೆ ಸಮೀಕರಿಸಿಕೊಂಡಿದ್ದೇನೆ! ಅವಳು ಸಿಕ್ಕರೆ ತನ್ನ ಜೀವನಕ್ಕೆ ಅರ್ಥ… ಇಲ್ಲವಾದರೆ…?! ತನ್ನ ನೆನಪುಗಳೇ ಭಾವಗಳನ್ನು ಜೀವಂತವಿರಿಸಬೇಕು.. ಯಾಕೆಂದರೆ ಮನಸ್ಸನ್ನಾವರಿಸಿದ ಈ ಲಕ್ಷ ಲಕ್ಷ ಭಾವಗಳು ಯಾವತ್ತೂ ಸಾಯುತ್ತವೋ ಆವತ್ತು ತನ್ನ ಬದುಕಿಗೆ ಅರ್ಥವಿಲ್ಲ… ತಾನು ಭಾವಜೀವಿ…! ಭಾವವೇ ತನ್ನ ಜೀವನ…!!

ಭಾವ ಬದುಕಿನ ಜೀವವಾಗಲು
ಸಾವಿಗೆಲ್ಲಿದೆ ಜನನವು
ದೇಹ ಸತ್ತರು ಭಾವ ಸಾಯದು
ಭಾವ ಆತ್ಮದ ಬಂಧುವು!

ತಾನು ಸತ್ತರೂ ತನ್ನ ಭಾವ ಜೀವಂತ… ಆ ಭಾವಗಳು ಸತ್ತರೆ ತನ್ನ ಆತ್ಮವೂ ಸತ್ತಂತೆ..!!!

ಆ ಭಾವಗಳಿಗೆ ಇಂದು ಊಟ ಹಾಕುತ್ತಿರುವವು ಈ ನೆನಪುಗಳು… ಹಿಂದಿನ ಕಹಿ ಘಟನೆಗಳ ನೆನಪುಗಳು ಈಗ ಕಿರುನಗೆ ಮೂಡಿಸುತ್ತವೆ… ಅಂದು ನಕ್ಕ ಕ್ಷಣಗಳ ನೆನಪು ವಿಷಾದದ ರೇಖೆ ಮೂಡಿಸುತ್ತದೆ…!!

ನೋವ ನೆನಪಿಗೆ ನಗೆಯ ಲೇಪವು
ನಗೆಯ ನೆನಪಲಿ ನೋವಿದೆ
ಬದುಕಯಾತ್ರೆಯ ಈ ಚರಿತ್ರೆಗೆ
ಭಾವಕೋಶದಿ ನೆಲೆಯಿದೆ..
              ಅಳೆಯಲಾಗದ ಬೆಲೆಯಿದೆ…

ಹಾಗಂತ…?!
ನೆನಪುಗಳಲ್ಲೇ ಜೀವನವನ್ನು ಸಾಗಿಸಲು ಸಾಧ್ಯವಿಲ್ಲ…ಆದರೆ ಮನಸ್ಸು ಬಯಸಿದ್ದು ಸಿಗುವುದೂ ಇಲ್ಲ… ಈಗ ಮನಸ್ಸು ಏನು ಮಾಡುತ್ತದೆ.? ಅದೇ… ಪರ್ಯಾಯ ಜಗತ್ತು… ಹೌದು.. ನನಗೆ ಗೊತ್ತು… ನನ್ನ ಮನಸ್ಸು ಒಂದು ಘೋರ ಖಾಯಿಲೆಗೆ ತುತ್ತಾಗಿದೆ… ಈ ಮನೋರೋಗದ ಕುರಿತು ತನಗೆ ಚೆನ್ನಾಗೇ ಅರಿವಿದೆ.. ಒಂದು ರೀತಿಯಲ್ಲಿ ಅದು ವಾಸಿಯಾಗದಿದ್ದರೇ ಚೆನ್ನ…. ವಾಸ್ತವದಲ್ಲಿ ತನ್ನ ತೀವ್ರ ಸ್ವರೂಪದ ಬಯಕೆಗಳು ಸಿಗದಿದ್ದರಿಂದ ತನ್ನ ಮನಸ್ಸು ಭ್ರಮೆಯ ಲೋಕವೊಂದನ್ನು ಹುಟ್ಟು ಹಾಕಿಕೊಂಡಿದೆ…!! ಅಲ್ಲಿ ಬಯಸಿದ್ದೆಲ್ಲ ಸಿಗುತ್ತದೆ.. ಯಾಕೆಂದರೆ ಅದು ಭ್ರಮೆ..!! ಹುಚ್ಚು!! ಅದು ನಿಜವಲ್ಲ ಅಂತ ತಿಳಿದೂ ಅದರಿಂದ ಹೊರಬರುವ ಪ್ರಯತ್ನ ನಾನು ಮಾಡುತ್ತಿಲ್ಲ… ಯಾಕೆಂದರೆ ಈ ಜಗತ್ತಿಗಿಂತ ಭ್ರಮೆಯ ಲೋಕವೇ ಹೆಚ್ಚು ಆಪ್ಯಾಯಮಾನವಾಗಿದೆ..!

ಕನಸಿಗೆಂದೇ ಕಣ್ಣ ಆಳದಿ
ಬಣ್ಣ ಬಣ್ಣದ ಜಗವಿದೆ
ನಿಜದ ಜಗದಲಿ ಸಿಗದ ಬಯಕೆಯ
ಅಲ್ಲಿ ಸುಖಿಸುವ ಹಾಗಿದೆ…
                ಮನಕು ಅದುವೇ ಬೇಕಿದೆ…

ಪ್ರಕೃತಿಯ ಅವಲೋಕನದಲ್ಲಿ ಪ್ರಾರಂಭವಾದ ಮಧುವಿನ ಯೋಚನೆ ತನ್ನ ಮನಸ್ಸಿನ ಅವಲೋಕನದಲ್ಲಿ ತೊಡಗಿತ್ತು… ತನ್ನ ಮನಸ್ಸಿನ ಖಾಯಿಲೆ ಅವನಿಗೆ ಗೊತ್ತಿತ್ತು. ಅದರಿಂದ ಹೊರಬರುವುದಕ್ಕಿಂತ ಇನ್ನಷ್ಟು ಅದರಾಳಕ್ಕೆ ಇಳಿಯುವುದು ಲೇಸು ಅನ್ನಿಸುತ್ತಿತ್ತು…ಅಷ್ಟಕ್ಕೂ ನಿಜವಾದರೇನು, ಭ್ರಮೆಯಾದರೇನು.. ಜೀವನದ ಪರಮಗುರಿ ನೆಮ್ಮದಿ, ಶಾಂತಿ. ಅಷ್ಟೇ….

 

ಮಲೆನಾಡ ಪರ್ವತಗಳು ನಿಶ್ಚಲವಾಗಿದ್ದವು… ಮಧ್ಯಾಹ್ನದ ಬಿಸಿಲಿನಲ್ಲಿ ಮಹಾರಣ್ಯದ ಹಿನ್ನೆಲೆಯಲ್ಲಿ ಹಕ್ಕಿಯೊಂದು ನೀಳವಾಗಿ ಕೂಗುತ್ತಿತ್ತು.. ಮಧುವಿನ ಮನಸ್ಸು ಇನ್ನಷ್ಟು ಮತ್ತಷ್ಟು ಕಲ್ಪನೆಯ ಲೋಕದೊಳಗೆ ಜಾರುತ್ತಿತ್ತು…..

ಬಾನ್ಸುರಿ…..

ವಾಸ್ಕೋದಿಂದ ಮನೆಗೆ ಸುಮಾರು ಇಪ್ಪತ್ತು ಕಿಲೋಮೀಟರ್. ಯಾವತ್ತೂ ಕಾಲೇಜ್ಗೆ ಕದಂಬ ಬಸ್ಸಿಗೆ ಹೋಗೋದು ನನ್ನ ರೂಢಿ. ಆ ಬಸ್ಸಿನಲ್ಲಿ ಎಡಗಡೆ ಕಿಟಕಿಯ ಬಳಿ ಹಿಂದಿನಿಂದ ಎರಡನೇ ಸೀಟು(ಆ ಸೀಟಿಗೆ ಸ್ವಲ್ಪ ದೊಡ್ಡ ಕಿಟಕಿ ಇರುತ್ತದೆ) ನನ್ನ ಖಾಯಂ ಜಾಗ. ಒಂದುವೇಳೆ ಯಾರಾದರೂ ಅಲ್ಲಿ ಕೂತಿದ್ದರೆ ನೆಕ್ಸ್ಟ್ ಬಸ್ ಬರೋವರೆಗೆ ಕಾಯ್ತಿದ್ದೆ.

ಆ ಬಸ್ಸು ಹೋಗೋ ರಸ್ತೆ ಸುಮಾರು ಹತ್ತು ಕಿಲೋಮೀಟರಿನಷ್ಟು ಝುವಾರಿ ನದಿಯ ಪಕ್ಕದಲ್ಲೆ ಸಾಗುತ್ತದೆ. ರಸ್ತೆಯ ಪಕ್ಕದಲ್ಲೇ ವಿಸ್ತಾರವಾದ ಝುವಾರಿ ನದಿ ನಮ್ಮೊಡನೆ ಸಾಗುತ್ತಿದೆ ಅನಿಸುತ್ತೆ. ಮೇಲಾಗಿ ನದಿಯ ಮೇಲಿಂದ ಬೀಸುವ ಕಿರುಮಾರುತಗಳು ಬಸ್ಸಿನ ಕಿಟಕಿಯ ಮೂಲಕ ಅಪ್ಪಳಿಸಿ ಮುದ ನೀಡುತ್ತವೆ. ಜೊತೆಗೆ ಅಲ್ಲಲ್ಲಿ ನದಿಯ ದಂಡೆಯಲ್ಲಿ ನಿಲ್ಲಿಸಿರೋ ಹಾಳಾದ ಬೋಟುಗಳು ಮತ್ತು ಹಡಗುಗಳು ಆ ನಡಿಗೊಂದು ವಿಶೇಷ ಸೌಂದರ್ಯ ಕೊಡುತ್ತವೆ.

ಕರಾವಳಿಯ ಮಳೆ ಗೋವಾವನ್ನು ಅಪ್ಪಳಿಸುವಾಗ ನದಿ ಮೇಲಿನ ಅಕಾಶವೆಲ್ಲ ಕರಿಮೋಡಗಳಿಂದ ತುಂಬಿ ಅಡ್ಡಾದಿಡ್ಡಿ ಗಾಳಿಗೆ ಹುಚ್ಚುಮಳೆ ಸುರಿವಾಗ ಕದಂಬ ಬಸ್ಸಿನ ಅರೆಬರೆ ಒದ್ದೆ ಸೀಟಿನ ಮೇಲೆ ಕುಳಿತು ಇಯರ್ಫೋನ್ ಹಾಕಿಕೊಂಡು ಹರಿಪ್ರಸಾದ್ ಚೌರಾಸಿಯಾ ಅವರ ಕೊಳಲು ಕೇಳ್ತಾ ಇದ್ದರೆ ಸ್ವರ್ಗಕ್ಕೆ ತನ್ನಿಂತಾನೇ ಕಿಚ್ಚು ಹಚ್ಚಿಕೊಳ್ಳುತ್ತೆ. ಅದು ಮೇಘರಾಗವೋ ಇಲ್ಲ ಮೇಘಮಲ್ಹಾರವೋ ಗೊತ್ತಿಲ್ಲ. ಅಥವಾ ಬೇರೆ ರಾಗವೂ ಆಗಿದ್ದೀತು. ಪುಣ್ಯವಶಾತ್ ಮೊಬೈಲಿಗೆ ಸೇರಿಕೊಂಡ ಆ ರಾಗಕ್ಕೆ ಬೇರೆ ಹೆಸರು ಬೇಕಿಲ್ಲ. ಅದು ಮಳೆಯ ರಾಗ. ಈಗಲೂ ಏಕಾಂತದಲ್ಲಿ ಅದನ್ನು ಹಚ್ಚಿಕೊಂಡು ಕುಳಿತರೆ ಮನಸ್ಸು ಮಲೆನಾಡಿಗೆ ಹೋಗಿ ಕಪ್ಪುಗಾಡುಗಳ ನಡುವೆ ವರ್ಷಧಾರೆ ಸುರುವ, ಮಳೆಯ ಒದ್ದೆಗಾಳಿಯು ಮೈಮನವ ಕೊರೆವ ಅನುಭವ ಆಗುತ್ತದೆ. ಬಹುಶಃ ಮಳೆಯ ಮತ್ತು ಆ ರಾಗದ ಲಯ ಒಂದೇ ಇರಬಹುದು. ಬಿರುಬೆಸಿಗೆಯಲ್ಲೂ ಅದನ್ನು ಕೇಳುತ್ತಾ ಕುಳಿತರೆ ಮಳೆಯಲ್ಲಿ ನೆನೆವ ಮನದ ಬಯಕೆ ತೀರುತ್ತದೆ.

ಈ ಕೊಳಲು ಎಂದರೇ ಹಾಗೆ. ತೀರಾ ಸೂಕ್ಷ್ಮ ಭಾವಗಳನ್ನು ಅಷ್ಟೇ ಸೂಕ್ಷ್ಮ ಆಲಾಪಗಳಲ್ಲಿ ಅರುಹುತ್ತದೆ. ಕರಡಿಗೆಮನೆಯಲ್ಲಿದ್ದಾಗ ಓದುವುದಕ್ಕೆ ಅಂತ ಹೇಳಿ ಎಷ್ಟೋ ಸಲ ತೋಟಕ್ಕೋ ಅಶೋಕವನಕ್ಕೋ ಹೋಗಿ ಪ್ರವೀಣ್ ಗೋಡ್ಖಿಂಡಿ ಅವರ ಕೊಳಲು ವಾದನ ಕೇಳಿ ಮೈಮರೆಯುತ್ತಾ ಇದ್ದೆ. ರಾಗಜ್ಞಾನವಿಲ್ಲದೆ ಇದ್ದರೂ ಯಾವ್ಯಾವುದೋ ಭಾವಗಳು ವೇದ್ಯವಾಗಿ ಬಹಳಷ್ಟು ಬಾರಿ ಕಣ್ಣು ಒದ್ದೆಯಾಗುತ್ತಿತ್ತು.

ಮಳೆ ಎಂದ ಕ್ಷಣ ನೆನಪಾಗುವುದು ಮಲೆನಾಡು. ಝುವಾರಿಯ ತೀರದ ಮಳೆಯ ಆರ್ಭಟವೂ ಕೊನೆಗೆ ನೆನಪಿಗೆ ತರುವುದೂ ಆ ಮಲೆನಾಡನ್ನೇ. ಹಾಗೇ ಕೊಳಲು ಎಂದಾಗೆಲ್ಲ ಅವಳೊಮ್ಮೆ ನೆನಪಾಗುತ್ತಾಳೆ. ಆಟೋಗ್ರಾಫ್ ಪಟ್ಟಿಯಲ್ಲಿ ಕೊಳಲಿನ ಬಗ್ಗೆ ಏನೋ ಬರೆದಿದ್ದಳಲ್ಲ ಅವಳು…

ಮಳೆ , ನದಿ , ಕಾಡು ಎಲ್ಲ ಇಲ್ಲೂ ಇವೆ. ಆದರೂ ಯಾಕೋ ಮಲೆನಾಡೇ ಬೇಕು ಅನಿಸುತ್ತೆ.

ಮಾಂಡೋವಿಯ ಮಾಡಿಲಲ್ಲೂ ಶಾಲ್ಮಲೆಯದೆ ಕನವರಿಕೆ
ಮಲೆನಾಡಿನ ಕಡುಸಂಪಿಗೆ ನನ್ನದೆಂಬ ಮನವರಿಕೆ…..

ಆ ಮಲೆನಾಡಿನ ಕುರಿತ ತುಡಿತವನ್ನು ಚೂರು ಚೂರು ತಣಿಸುತ್ತದೆ ಈ ಬಾನ್ಸುರಿ ಎಂಬ ಮಧುರವಾದ್ಯ… ಆ ರಾಗಗಳ ಶರಾಧಿಯಲ್ಲಿ ಮುಳುಗೇಳುತ್ತಾ……

ಕನಸು ಕೇದಿಗೆ, ಮನಸು ಮಂದಾರ.. ನಿನ್ನ ಸೊಗಸೇ ಸಂಪಿಗೆ…

ನನ್ನ ಮುದ್ಮುದ್ದು ಗೆಳತೀ…

ಕನಸು ಕೇದಿಗೆ, ಮನಸು ಮಂದಾರ.. ನಿನ್ನ ಸೊಗಸೇ ಸಂಪಿಗೆ…

ಇದು ಮಲೆನಾಡ ಪ್ರೀತಿ.. ಏರಿ ಏರಿ ಬರುವ ವೇಗತೀವ್ರತೆಯ ಕಪ್ಪು ಬೃಹನ್ಮೇಘಗಳ ಪ್ರಚ್ಛನ್ನತೆಯ ಒಲವು ನನಗೆ, ನಿನ್ನ ಕುರಿತು..

ನೀನು ಕೆಮ್ಮಣ್ಣು ಸಾರಿಸಿ ದೀಪ ಹೊತ್ತಿಸಿದ ತುಳಸಿ ಕಟ್ಟೆಯ ಸೊಗಸು ಸಂಜೆಯ ಕೆಂಬಾನಿನೊಡನೆ ಸೆಣಸಿದೆ.. ಕೊನೆಗೂ ಗೆದ್ದಿದ್ದು ನಾ ಮುತ್ತಿಟ್ಟ ನಿನ್ನ ಕೆನ್ನೆಯೇ…

ಬೆಳಗಾಗೆದ್ದರೆ ಗೋಪಿ ಹಕ್ಕಿಯ ಉಲ್ಲಾಸಭರಿತ ಪ್ರೇಮರಾಗ, ಮಧ್ಯಾಹ್ನ ಗುಬ್ಬಚ್ಚಿ ಕೂಗು, ಸಂಜೆ ಕೋಗಿಲೆಯ ರಾಗ, ಮುಸ್ಸಂಜೆ ಗಿಳಿವಿಂಡಿನ ಉಲಿ… ಎಲ್ಲಾ ಇಲ್ಲವೀಗ. ನೀ ಆಗಾಗ ಹಾಡಿಕೊಳ್ಳುತ್ತಿರಬಾರದೇ..?

ಆಗಾಗ ಜ್ವರ ಬಂದರೆ ಚೆನ್ನಾಗಿರುತ್ತೆ.. ಮಮತೆಯಿಂದ ತಲೆಸವರೋ ನಿನ್ನ ಕೈ ಹಿತವಾಗಿರುತ್ತೆ..

ನೀನು ಗೆಜ್ಜೆ ಹಾಕದಿದ್ದರೂ ಹೆಜ್ಜೆ ಇಡುವಾಗ ಘಲ್ ಘಲ್ ಇಂಚರ ಬರುವುದರ ಗುಟ್ಟೇನೇ?

ನೀನು ಹಾಗೆ ನೋಡಿದಾಕ್ಷಣ ಒಮ್ಮೆ ಕಣ್ಮಿಟುಕಿಸಿ ಕೈಮುತ್ತು ತೂರಿಬಿಡುವಾಸೆ.. ಇನ್ನೊಮ್ಮೆ ಬರುವಾಗ ಅತ್ತೆಯ ಜೊತೆ ಬರಬೇಡ…

ನೀನು ಹಾಗೆ ನಡೆವಾಗಲೆಲ್ಲ ನನ್ನಂತರಂಗದಲ್ಲೂ ಒಬ್ಬಳು ಹೃದಯದ ಮೇಲೆ ನಡೆದು ಬರುತ್ತಾಳೆ.. ನೀನು ಹತ್ತಿರವಿದ್ದಷ್ಟೂ ಕಮ್ಮಿ, ದೂರವಿದ್ದರೂ ಹತ್ತಿರ..

ಬಾಳೆಗೊನೆ ತರಲು ತೋಟಕ್ಕೆ ಹೋಗುವಾಗ ನಿನ್ನನ್ನೂ ಜೊತೆಗೊಯ್ದು ಕೆಲಸ ಕೆಟ್ಟಿದ್ದಕ್ಕೆ ನನಗೇನೂ ಚಿಂತೆಯಿಲ್ಲ ಬಿಡು.. ಥ್ಯಾಂಕ್ಸ್ ಕಣೇ… ಬಂದಿದ್ದಕ್ಕೆ..

ನವಿಲುಗರಿಯ ನಡು ಉಳುಕಿದ್ದು ನಿನ್ನ ಕಣ್ರೆಪ್ಪೆಗೂದಲ ಕಂಡು…

ನವಿಲುಗರಿಯ ಮರಿಹಾಕಲು ಇಡೋದು ಬೇಡ ಬಿಡು.. ನಾನೇ ಗೊಂಚಲು ಗೊಂಚಲು ಹೆಕ್ಕಿ ತರುವೆ.. ಆದರೆ ಒಂದು ಶರತ್ತು.. ಕೈಯಲ್ಲಿ ತೆಗೆದುಕೊಳ್ಳುವಂತಿಲ್ಲ, ನಾನೇ ಆ ದಪ್ಪ ಹೆರಳಿಗೆ ಮುಡಿಸುವೆ, ಮೊನ್ನೆಯಂತೆ..
……………

ಸಖ್ಯಮೇಧನ ದೆವ್ವ..!!

ಆಗೆಲ್ಲಾ ನಿವೇದ್ ನಂಗೆ ತುಂಬಾ ಕ್ಲೋಸ್ ಆಗಿದ್ದ. ಪ್ರತೀದಿನ ಹೈಸ್ಕೂಲಿಂದ ಐದು ಗಂಟೆಗೆ ನಾನು ಬಂದರೆ ನಿವೇದ್ ಅವನ ಶಾಲೆಯಿಂದ ಬರಲಿಕ್ಕೆ ಆರೂವರೆ ಆಗ್ತಿತ್ತು. ಯಾಕಂದ್ರೆ ಅವನು ಹೋಗ್ತಿದ್ದಿದ್ದು ಶಿರಸಿ ಚಂದನ ಶಾಲೆಗೆ. ಅಲ್ಲಿಂದ ಸ್ಕೂಲ್ ಬಸ್ ಬಂದು ನಮ್ಮೂರು ತಲುಪೋದು ಸ್ವಲ್ಪ ತಡಾನೇ. ಬಹಳಷ್ಟು ಬಾರಿ ಅವನನ್ನ ಪೇಟೆಯಿಂದ ಮನೆವರೆಗೆ ಕರೆದುಕೊಂಡು ಬರಲಿಕ್ಕೆ ನಾನೇ ಹೋಗ್ತಿದ್ದೆ.

ಕರಡಿಗೆಮನೆಯಲ್ಲಿ ನಂಗೆ ತುಂಬಾ ಫ್ರೀಡಮ್ ಸಿಗ್ತಿತ್ತು. ಜೊತೆಗೆ ಮಕ್ಕಳಿದ್ದರು. ಪ್ರತಿದಿನ ಬರೀ ಮಸ್ತಿ, ಮಜಾ ಜೋಕ್ಸ್, ಬೇರೆ ಬೇರೆ ಎಕ್ಸ್ಪೆರಿಮೆಂಟುಗಳು.. ನಾನು ದಿನದ ಪ್ರತೀ ನಿಮಿಷವನ್ನ ಆಸ್ವಾದಿಸಿದ್ದು ಆಗ ಮಾತ್ರ…

ಅದಾಗಲೇ ನಾನು ನನ್ನ “ಸಖ್ಯಮೇಧ” ಅನ್ನೋ ಹೆಸರಿನ ‘brand building’ ಚೆನ್ನಾಗಿ ಮಾಡಿದ್ದೆ( ಮಕ್ಕಳ ವಲಯದಲ್ಲಿ ????????) . ಬಹಳಷ್ಟು ಬಾರಿ ನಿವೇದ್, ಸೋನು ಮುಂತಾದವರು ಬೇಕಂತ ಸಖ್ಯಮೇಧ ಅಂತ ಕರೆದರೆ ಒಳಗೊಳಗೇ ಖುಷಿ ಆಗ್ತಿದ್ದದ್ದು ಹೌದು. ನಂಗೆ ಅದು ಒಂಥರಾ virtual identity ಆಗಬೇಕು ಅನ್ನೋ ಆಸೆ ಇತ್ತು..

ಅವತ್ತೊಂದಿನ ನಾನು, ನಿವೇದ್ ಮತ್ತು ರೋಹಿತ್ (ನಿವೇದ್ ನ ಕಸಿನ್) ಗದ್ದೆಗೆ ಹೊರಟಿದ್ವಿ. ಮನೆಯಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿ ಇರೋದು ಗದ್ದೆ. ಪಕ್ಕದಲ್ಲಿ ಬಯಲು ತೋಟ ಮಧ್ಯೆ ಗದ್ದೆ ಇತ್ತು. ಸಂಜೆ ಹೊತ್ತಿಗೆ ಸಾವಿರಾರು ಹಕ್ಕಿಗಳು ಗುಂಪು ಕಟ್ಟಿಕೊಂಡು ಅಲ್ಲಿ ಬರ್ತಿದ್ವು. ಜೊತೆಗೆ ಆ ಜಾಗ ಕೂಡಾ ತುಂಬಾ addictive. ಅದಕ್ಕೇ ನಾನು ಓದೋಕೆ ಅಂತ ಹೇಳಿ ಪುಸ್ತಕ ಹಿಡಿದುಕೊಂಡು ಬಹಳಷ್ಟು ಬಾರಿ ಅಲ್ಲಿ ಬಂದು ಮರದ ಮೇಲೆ ಕೂತು ಇದನ್ನೆಲ್ಲಾ ನೋಡ್ತಾ ಯೋಚನೆ ಮಾಡ್ತಾ ಕೂತಿರ್ತಿದ್ದೆ. ಜೊತೆಗೆ, ಡಾಂಬರು ರಸ್ತೆಯ ಒಂದು ಬದಿಗೆ ಗದ್ದೆ, ತೋಟ ಎಲ್ಲಾ ಇದ್ದರೆ ಇನ್ನೊಂದು ಬದಿಗೆ ಅಶೋಕವನ ಇದೆ. ಇದು ಯಲ್ಲಾಪುರ ತಾಲ್ಲೂಕಿನ ವಿಶೇಷಗಳಲ್ಲೊಂದು. ಶಿವರಾತ್ರಿಯ ಸಮಯಕ್ಕೆ ಆ ಕಪ್ಪುಗಾಡಿನಲ್ಲಿ ಇರೋ ಸಾವಿರಾರು ಅಶೋಕ ಮರಗಳು ಹೂಬಿಟ್ಟು ಸ್ವರ್ಗ ಸೃಷ್ಟಿಸಿರುತ್ತವೆ. ಅದೊಂಥರ ಭಯಂಕರ ಬೆಟ್ಟ. ಒಂದು ರೀತಿ ಭಯ ಹುಟ್ಟಿಸೋ ಕಾಡು, ಅಲ್ಲಿ ಹೋದ ತಕ್ಷಣ ಕವ್ವನೆ ಕವಿಯೋ ಒಂಟಿತನ.. ಲವಂಗ ಮತ್ತೆ ಅಶೋಕ ಮರಗಳ ಒಂಥರಾ ವಿಚಿತ್ರ ಸುಗಂಧ.. ಒಟ್ಟಿನಲ್ಲಿ ಆ ಕಾಡಿಗೆ ಒಬ್ಬರೇ ಹೋದರೆ ನೂರಾರು ಯೋಚನೆಗಳು ಆಕ್ರಮಣ ಮಾಡಿ ಮನಸ್ಸನ್ನ ಅಲ್ಲೋಲಕಲ್ಲೋಲ ಮಾಡಿಬಿಡುತ್ತವೆ. ಅದಕ್ಕೇ ನನಗೆ ಮತ್ತೆ ಮತ್ತೆ ಅಲ್ಲಿಗೆ ಹೋಗಬೇಕು ಅನಿಸುತ್ತಿತ್ತು.

ಅಲ್ಲಿ ಹೋಗುತ್ತೇವೆ ಅಂತ ಹೇಳಿದರೆ ಮನೆಯಲ್ಲಿ ಒಪ್ಪುತ್ತಿರಲಿಲ್ಲ. ಅದಕ್ಕೇ ನಾವು ಗದ್ದೆಗೆ ಹೋಗ್ತೀವಿ ಅಂತ ಹೇಳಿ ಹೊರಟದ್ದು, ಗಮ್ಯ ಅಶೋಕಾವನ…

ಹೋಗುವಾಗ ತಮಾಷೆ ಮಾಡುತ್ತಾ ದೊಡ್ಡದಾಗಿ ಮಾತಾಡುತ್ತಾ ಕರಡಿಗೆಮನೆ ಕೆರೆಯ ಏರಿ ಹತ್ತುತ್ತಾ ಇರುವಾಗ ನಾನು ಸುಮ್ಮನೇ ತಮಾಷೆಗೆ ಹುಲಿ ಬಂದರೆ ಏನು ಮಾಡ್ತೀರಿ, ದೆವ್ವ ಬಂದರೆ ಏನು ಮಾಡ್ತೀರಿ ಅಂತ ಕೇಳಿದೆ. ಆಗ ರೋಹಿತ್ , ಹುಲಿ ಬಂದರೆ ನಾನು ಕಚ್ಚಿ ಬಿಸಾಡ್ತೀನಿ, ಸಿಂಹಕ್ಕೆ ಒಂದು ಒದ್ದರೆ ಹಾಗಾಗುತ್ತೆ..etc etc ಬಿಲ್ಡಪ್ ಕೊಡ್ತಾ ಇದ್ರೆ ನಾನು ನಿವೇದ್ ನೋಡಿ ಮಜಾ ತೊಗೊಳ್ತಾ ಇದ್ವಿ. ಇಷ್ಟು ಪೂರ್ತಿ ಮುಗ್ಧವಾಗಿ behave ಮಾಡೋ ವಯಸ್ಸು ಮುಗಿದು ಹೋಗಿದ್ದಕ್ಕೆ ನಂಗೆ ಬೇಸರವಾಯ್ತು..

ಅಶೋಕವನ ಹೊಕ್ಕ ತಕ್ಷಣ ವಾತಾವರಣ ಬದಲಾಗಿಬಿಡುತ್ತೆ, ಆ ಅರಣ್ಯನಿಶ್ಶಬ್ಧತೆಗೆ ಮನಸ್ಸು ಹೊಂದಿಕೊಳ್ಳೋದು ಕಷ್ಟ. ಸಂಜೆಯಾದ್ದರಿಂದ ಸೂರ್ಯನ ವಾರೆ ಕೆಂಗಿರಣಗಳು ಅಲ್ಲಿದ್ದ ಎತ್ತರೆತ್ತರ ಮರಗಳ ಬೃಹತ್ ಕಾಂಡಗಳ ಮೇಲೆ ಬಿದ್ದು ಮರಗಳೆಲ್ಲಾ ಅರೆಗೆಂಪು ಅರೆಗಪ್ಪು ಆಗಿ ಕಾಣುತ್ತಿದ್ದವು. ಗೂಡಿಗೆ ಹೊರಟಿದ್ದ ನೂರಾರು ಹಕ್ಕಿಗಳ ಚಿಲಿಪಿಲಿ ಸ್ವಲ್ಪ ಭಯಂಕರವಾಗೇ ಕೇಳ್ತಿತ್ತು.

ಇಬ್ಬರನ್ನೂ ಹೇಗೋ ಹುರಿದುಂಬಿಸಿಕೊಂಡು ನಾನು ಕರೆದುಕೊಂಡು ಹೋಗ್ತಾ ಇದ್ದರೆ ರೋಹಿತ್ ನಿಧಾನಕ್ಕೆ ನಂಗೆ ಭಯವಾಗ್ತಾ ಇದೆ, ವಾಪಸ್ ಹೋಗೋಣ ಅನ್ನಲು ಶುರುಮಾಡಿದ. ನಿವೇದ್ ಒಬ್ಬನೇ ಇದ್ದರೆ ಅವನನ್ನು ಕರೆದುಕೊಂಡು ಹೋಗೋದು ಕಷ್ಟವಾಗ್ತಿರಲಿಲ್ಲ. ಯಾಕೆಂದರೆ ಅವನದ್ದು ಒಂಥರಾ ಸಾಹಸೀ ಪ್ರವೃತ್ತಿ.
ಕೆಲವು ಮರಗಳಲ್ಲಿ ದೆವ್ವ ಭೂತ ಇರುತ್ತವೆ ಅನ್ನೋದು ನಿಜವೋ ಸುಳ್ಳೋ, ಆದರೆ ಅವುಗಳಲ್ಲಿ ಏನೋ ವಿಶೇಷತೆ ಇರುವುದಂತೂ ಹೌದು. ಇಲ್ಲವಾದರೆ ಅಷ್ಟು ನಿಬಿಡವಾದ ಬೆಟ್ಟದಲ್ಲಿ ಅದೊಂದು ಮರವನ್ನ ನೋಡಿದರೆ ಮಾತ್ರ ಅಲ್ಲೇನೋ ಇದೆ ಅಂತ ಅನ್ನಿಸುವುದು ಏಕೆ?! (ನೀವೂ ಬನ್ನಿ, ನಿಮಗೂ ಹಾಗೇ ಅನ್ನಿಸುತ್ತೆ) . ಕೇವಲ ಒಬ್ಬಿಬ್ಬರಲ್ಲ, ನಾನು ಕೇಳಿದ ಎಲ್ಲರೂ ಅದೊಂದುಅಶೋಕ ಮರ ಸಹಜವಾಗಿಲ್ಲ ಅಂತ ಒಪ್ಪಿಕೊಂಡಿದ್ದಾರೆ. ನೋಡಲು ಎಲ್ಲಾ ಮರಗಳಂತೆ ಇದ್ದರೂ ಅದರ ಬಳಿ ಹೋದಾಗ ಏನೋ ಭೀತಿ ಶುರುವಾಗುತ್ತೆ.
ನಾನು ಮಾತಾಡ್ತಾ ಅವರಿಬ್ಬರಿಗೂ ಆ ಮರ ಗಮನಕ್ಕೆ ಬರೋ ಮೊದಲು ಮುಂದೆ ಸಾಗಿಬಿಡೋಣ ಅಂತಿದ್ದೆ, ಆದರೆ ರೋಹಿತ್ ಅಲ್ಲೇ ವಾಪಸ್ಸು ಹೋಗೋಣ ಅಂತ ಹಠ ಹಿಡಿದುಬಿಟ್ಟ. ಆ ಮರ ನೋಡಿದ ಮೇಲೆ ನನಗೂ ಇದ್ದ ಉತ್ಸಾಹ ಸ್ವಲ್ಪ ಕಮ್ಮಿಯಾಗಿತ್ತು. ಜೊತೆಗೆ ರೋಹಿತ್ ನ ಭಯ ಸಾಂಕ್ರಾಮಿಕವಾಗಿ ನಿವೇದನಿಗೂ ನನಗೂ ಹಬ್ಬಿ ವಾಪಸ್ಸು ಹೊರಟೆವು.

ಸುಮ್ಮನೇ ಇಲ್ಲಿವರೆಗೆ ಬಂದು ಚೂರೂ ಮಜಾ ಬರಲಿಲ್ಲ ಅಂತ ನಂಗೆ ಬೇಸರವಾಗಿತ್ತು. ಅದಿಕ್ಕೇ ಏನಾದರೂ ಕೀಟಲೆ ಮಾಡಬೇಕು ಅಂತ ಪ್ಲಾನ್ ಮಾಡಿದೆ. ಡಾಂಬರು ರಸ್ತೆ ಮುಗಿದು ಕೆರೆ ಏರಿಯ ಬೆಟ್ಟಕ್ಕೆ ಬರುತ್ತಿದ್ದಹಾಗೆ ನಿಧಾನಕ್ಕೆ ನಾನು acting ಶುರು ಮಾಡಿದೆ.

ನಾನು ವಿಶ್ವನಾಥ್ ಅಲ್ಲ, ಸಖ್ಯಮೇಧನ ದೆವ್ಯ, ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳೋಕೆ ಈ ದೇಹದಲ್ಲಿ ಸೇರ್ಕೊಂಡಿದೀನಿ, etc etc ಡೈಲಾಗ್ ಬಿಡಲು ಶುರುಮಾಡಿದೆ. ( ಇದನ್ನೋದಿ ನೀವು ಇದೇನು ಹುಚ್ಚು ಅಂತ ನಗ್ತಾ ಇರ್ತೀರಾ, ನಂಗೊತ್ತು, ಆದರೆ ಆಗ ನಂಜೊತೆ ಇದ್ದವರು ಮಕ್ಕಳು + ನಾನೂ ಪೆದ್ದುಪೆದ್ದಾಗಿ ತುಂಬಾ ಕೀಟಲೆ ಮಾಡ್ತಿದ್ದೆ, So it worked. ) ಮೊದಲು ಅವರು ತಮಾಷೆಯಾಗೇ ತೊಗೊಂಡರು. ಯಾಕೆಂದರೆ ನನ್ನ ಸಿನಿಮೀಯ ಅಭಿನಯದಲ್ಲಿ ಹಾಸ್ಯ ಇತ್ತೇ ವಿನಹ ಚೂರೂ ಗಾಂಭೀರ್ಯ ಇರಲಿಲ್ಲ. ಆದರೆ ಸ್ವಲ್ಪ ಜೋಶ್ ನಲ್ಲಿ ನಾನು ಅಲ್ಲೇ ಮುರಿದು ಬಿದ್ದಿದ್ದ ಒಣ ಕೋಲೊಂದನ್ನ ತೆಗೆದುಕೊಂಡು ಕಾಲಿಗೆ ರಪ್ ಅಂತ ಎರಡ್ಮೂರು ಸಲ ಬಾರಿಸಿಕೊಂಡ ಮೇಲೆ ಅವರು ಸ್ವಲ್ಪ ಸೀರಿಯಸ್ ಆದರು. ನಾನು ದೆವ್ವದ ತರಹ ಪೋಸ್ ಕೊಡುತ್ತಲೇ ಇದ್ದೆ. ನಿವೇದ ತಾನು ನೋಡ್ತೀನಿ ಅಂತ ಹೇಳಿ ಅಲ್ಲಿದ್ದ ಇನ್ನೂ ದಪ್ಪನಾದ ಒಂದು ದೊಣ್ಣೆ ತೆಗೆದುಕೊಂಡು ನನ್ನ ಕಾಲಿಗೆ ಒಮ್ಮೆ ಬಾರಿಸಿದ. ನಾನು ಏನೂ ಆಗಲಿಲ್ಲ ಎಂದೆ. ಅವನು ಇದ್ದಷ್ಟೂ ಶಕ್ತಿ ಹಾಕಿ ರಪ್ ಅಂತ ಇನ್ನೊಮ್ಮೆ ಬಾರಿಸಿದ. ಆ ಕೋಲು ಇದ್ದಷ್ಟು ದಪ್ಪಕ್ಕೆ ಚರ್ಮ ಕೆಂಪಾಯ್ತು. ನಿಮಿಷದೊಳಗೆ ಬಾತುಕೊಂಡು ಅಲ್ಲಷ್ಟೇ ಚರ್ಮ ಉಬ್ಬಿತು. ಆದರೆ ಚಿಕ್ಕಂದಿನಲ್ಲಿ ಇಂತ ನೂರಾರು ಹೊಡೆತ ತಿಂದಿದ್ದ ನನಗೆ ನೋವಾದರೂ ಅದನ್ನು ಮುಖದಲ್ಲಿ ತೋರಿಸದೇ ಇರಲು ಸಾಧ್ಯವಾಯ್ತು. ಜೊತೆಗೆ ನನ್ನ ಅಭಿನಯ ಕೆಲಸ ಮಾಡ್ತಾ ಇರೋ ಖುಷಿಯ ಮುಂದೆ ಅದು ಗೌಣವಾಯ್ತು.

ಆದರೆ ಅಷ್ಟು ಗಟ್ಟಿಯಾಗಿ ಹೊಡೆದರೂ ನಾನು ಹಾಗೇ ಇದ್ದದ್ದು ನೋಡಿ ನಿವೇದ್ ಮತ್ತು ರೋಹಿತ್ ಇಬ್ಬರೂ ಫುಲ್ ಸೀರಿಯಸ್ ಆದರು. ನಿಜಕ್ಕೂ ನಾನು ದೆವ್ವನೇ ಇರಬಹುದು ಅಂತ ಅವರಿಗೆ ಅನ್ನಿಸಲು ಶುರುವಾಯ್ತು! ಅವರು ನಿಧಾನಕ್ಕೆ ದೂರ ಹೋಗಲು ಶುರು ಮಾಡಿದರು. ನಾನು ಸದಾ ಮನೆಯಿಂದ ಹೊರಗೆ ಹೋಗುವಾಗ ಕೈಯಲ್ಲೊಂದು ಪುಸ್ತಕ ಹಿಡಿದುಕೊಳ್ತಿದ್ದೆ. ಬಹುತೇಕ ಸಮಯ ಅದು ನನ್ನ ಇಷ್ಟದ ಇಂಗ್ಲೀಷ್ ಪುಸ್ತಕ ಆಗಿರ್ತಿತ್ತು . ಅದು ಆಗ ನಿವೇದನ ಕೈಯಲ್ಲಿತ್ತು. ನಾನು ಮುಖದ ತುಂಬಾ ದೆವ್ವದ ನೋಟ ತುಂಬಿಕೊಳ್ಳಲು ಯತ್ನಿಸುತ್ತಾ ನಿವೇದನ ಕೈಯಿಂದ ಅದನ್ನ ಕಸಿದುಕೊಂಡೆ. ಆ ಮಧ್ಯೆ ಅದರ ಹಿಂದಿನ ಕವರ್ ಪುಟದ ಅರ್ಧ ಭಾಗ ಹರಿದು ಅವನ ಕೈಯಲ್ಲೇ ಉಳಿಯಿತು. ಪುಸ್ತಕ ನನ್ನ ಕೈಯಲ್ಲಿ..

ಪುಸ್ತಕ ಹರಿದಿದ್ದಕ್ಕೆ ಆದ ಬೇಸರ ತೋರಿಸಿಕೊಳ್ಳಬಾರದು ಅಂತ ನಾನು ತುಂಬಾ ಸಿಟ್ಟು ಬಂದವನ ರೀತಿ ಅಲ್ಲೆಲ್ಲಾ ಓಡಾಡಿ ಮರಕ್ಕೆ ಗುದ್ದಿ ಗದ್ದಲ ಎಬ್ಬಿಸಿದೆ. ಅವರಿಬ್ಬರೂ ಈ ದೆವ್ವದ ಸಹವಾಸವೇ ಸಾಕು ಅಂತ ಕೆರೆಯನ್ನು ಸುತ್ತಿ ಬರುವ ದಾರಿ ಬಳಸಿ ಮನೆಯ ಕಡೆ ಓಡಿದರು. ನಾನು ಅಲ್ಲೇ ಏರಿ ಇಳಿದು ಇನ್ನೊಂದು ಮಗ್ಗುಲಿನಿಂದ ಮನೆಯ ಕಡೆ ಓಡಿದೆ.

ಮನೆಯ ಅಂಗಳದಿಂದ ಸ್ವಲ್ಪ ಈಚೆ ಕೆರೆಗೆ ಹೋಗುವ ದಾರಿಯಲ್ಲಿ ಮಾವ ಇಬ್ಬರು ಆಳುಗಳ ಬಳಿ ಕೆಲಸ ಮಾಡಿಸುತ್ತಿದ್ದರು. ನಾನೂ ಅಲ್ಲೇ ಮಾತನಾಡುತ್ತಾ, ನಿವೇದ್ ಮತ್ತು ರೋಹಿತ್ ಬರುವುದನ್ನೇ ಕಾಯುತ್ತಾ ಕುಳಿತೆ.ಅವರು ಬರುತ್ತಿದ್ದಂತೆ ಪೂರಾ ಅಮಾಯಕನ ಹಾಗೆ “ನಿವೇದ್, ರೋಹಿತ್ , ಎಲ್ಲಿಗೆ ಹೋಗಿದ್ರಿ? ” ಅಂತ ಕೇಳಿದೆ! ಅವರಿಬ್ಬರಿಗೂ ಶಾಕ್! ಅವರು ಎಷ್ಟೇ ವಾದ ಮಾಡಿದರೂ, ನಾನು ಆಗಿಂದ ಇಲ್ಲೇ ಇದ್ದೇನೆ, ಎಲ್ಲೂ ಹೋಗಿಲ್ಲ ಅಂತ ಹೇಳಿದೆ. ಜೊತೆಗೆ ನನ್ನ ಕೀಟಲೆಯ ಪರಿಚಯ ಇದ್ದ ಮಧುಮಾವ ಕೂಡಾ ತಮಾಷೆಗೆ ನನಗೇ ಸಪೋರ್ಟ್ ಮಾಡಿದರು. ಇದು ಅವರಿಬ್ಬರನ್ನೂ ಇನ್ನೂ ಗೊಂದಲಕ್ಕೆ ಈಡು ಮಾಡಿತು.

ನಂತರ ಮನೆಗೆ ಬಂದ ಮೇಲೆ ಗ್ಯಾಲರಿಗೆ ಹೋಗಿ ಕುಳಿತು ನಾನು ಕಾಲಿಗೆ ಪೆಟ್ಟು ಬಿದ್ದಲ್ಲಿ ತಿಕ್ಕಿ ತಿಕ್ಕಿ ನೋವಾದರೂ ಕೂಡಾ ಉಬ್ಬಿದ್ದು ತಿಳಿಯದಂತೆ ಮಾಡಿದೆ. ಕೆಂಪು ಬಣ್ಣವೂ ಈಗ ಹೋಗಿತ್ತು. ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಪೆಟ್ಟಾಗಿದ್ದು ತಿಳಿಯುತ್ತಿತ್ತು..

ಅಲ್ಲಿಗೆ ಬಂದ ನಿವೇದ “ಅಣ್ಣಾ, ನೋವಾಯ್ತಾ?” ಅಂತ ಕೇಳಿದ. ಬಹುಶಃ ಆಗ ಅಷ್ಟು ಜೋರಾಗಿ ಹೊಡೆದದ್ದು ಅವನಿಗೆ ಬೇಸರವಾಗಿರಬೇಕು. ಆದರೆ ನಾನು ಏನೂ ಗೊತ್ತಿಲ್ಲದವನಂತೆ “ಯಾಕೆ ನೋವಾಗಬೇಕು?” ಅಂತ ಕೇಳಿದೆ. ಅದಕ್ಕೆ ಅವನು ಅಷ್ಟು ಜೋರಾಗಿ ಹೊಡೆತ ತಿಂದರೂ ನಟಕ ಮಾಡ್ತೀಯಾ ಅಂತ ಕೇಳಿದ. ನಾನು ಯಾರು ಹೊಡೆತ ತಿಂದರು ಅಂತ ಕೇಳಿದೆ. ಮಾತು ಹೀಗೇ ಮುಂದುವರೆದು ಅವನು ನನ್ನ ಕಾಲನ್ನು ನೋಡಿದರೆ ಗಾಯವೇ ಇಲ್ಲ! ನಾನು ಅವನ ಬಳಿ ಏನೇನು ನಡೆಯಿತು ಎಲ್ಲಾ ಹೇಳು ಅಂದೆ. ಅವನು ಗದ್ದೆಗೆ ಹೋಗುವಾಗಿಂದ ಬರುವವರೆಗೆ ನಡೆದ ಎಲ್ಲವನ್ನೂ ಹೇಳಿದ. ಮಧ್ಯೆ ಇಂಗ್ಲೀಷ್ ಪುಸ್ತಕ ಹರಿದದ್ದನ್ನೂ ಹೇಳಿದ. ನಾನು ಎಲ್ಲಾ ಕೇಳಿಸಿಕೊಂಡು ಕಷ್ಟಪಟ್ಟು ಅಮಾಯಕತೆ ನಟಿಸಿ ಹೇಳಿದೆ:” ನಿವೇದ, ಅಲ್ಲಿ ಬಂದಿದ್ದು ದೆವ್ವವೇ ಇರಬೇಕು. ಯಾಕೆಂದರೆ ನಾನು ಅಲ್ಲಿ ಬರಲೇ ಇಲ್ಲ. ಜೊತೆಗೆ ನೀನು ನನ್ನ ಇಂಗ್ಲಿಷ್ ಪುಸ್ತಕ ಹರಿದಿದೆ ಅನ್ತೀಯ. ಆದರೆ ಅದು ಸರಿಯಾಗೇ ಇದೆ ನೋಡು!” ಅಂತ ಹೇಳಿ ನನ್ನ ಪುಸ್ತಕ ತೋರಿಸಿದೆ. ಅದಕ್ಕೆ ಏನೂ ಆಗಿರಲಿಲ್ಲ. ಆಗ ಅವನ ಮನಸ್ಸಿನಲ್ಲಿ ತಮ್ಮ ಜೊತೆ ಬಂದದ್ದು ದೆವ್ವವೇ ಎಂಬುದಕ್ಕೆ ಯಾವ ಅನುಮಾನವೂ ಇರಲಿಲ್ಲ.

ನಂತರ ಅವನು ಅಟ್ಟಕ್ಕೆ ಹೋಗಿ ಅಳುತ್ತಾ ಕೂತಾಗ ಸಮಾಧಾನ ಮಾಡಲು ಬಹಳ ಸಮಯ ಬೇಕಾಯಿತು. ನಾನು ಮಾಡಿದ ನಾಟಕ ಎಲ್ಲಾ ಒಪ್ಪಿಕೊಂಡೆ. ಹರಿದ ಇಂಗ್ಲೀಷ್ ಪುಸ್ತಕದ ಜೊತೆ ನನ್ನ ಬಳಿ ಇದ್ದ ಇನ್ನೊಂದು ಇಂಗ್ಲೀಷ್ ಪುಸ್ತಕ (????????) ಕೂಡಾ ತೋರಿಸಿದೆ. ಆಮೇಲೆ ಅವನಿಗೂ ನಿರಾಳವಾಯ್ತು.

ಈಗ ಇದನ್ನೆಲ್ಲ ನೆನೆಸಿಕೊಂಡರೆ ಆಗ ಅಷ್ಟೊಂದು ಕೀಟಲೆ ಮಾಡಬಾರದಿತ್ತು ಅನಿಸುತ್ತೆ. ಜೊತೆಗೆ ಇಂಥವೆಲ್ಲ ಈಗ ನೆನಪು ಮಾತ್ರ ಅಂತ ಬೇಸರವಾಗುತ್ತೆ.

ತಾಯೇ…

ತಾಯಿ ಎಷ್ಟು ನೆನೆಯಲಿ ನಿನ್ನ!
ಮಮ ಜನನೀ
ನೆನೆದಷ್ಟೂ ನೆನೆಸುವೆ ನನ್ನ!

ಯಾವ ಘಳಿಗೆಯೊಳಗೆ ಹೆತ್ತೆ
ಎಂದು ನನ್ನ ಗೆದ್ದೆ ಮತ್ತೆ
ನಿರತ ನನ್ನ ಕಾಡೊ ನಿನ್ನ ಪ್ರೀತಿನೆನಪಿಗೆ
ಜಂಜಡಗಳ ಮರೆಸಿ ಶಾಂತಿ ನೀಡೊ ಕಸುವಿದೆ

ತಾಯಿ ಎಷ್ಟು ನೆನೆಯಲಿ ನಿನ್ನ!
ಮಮ ಜನನೀ
ನೆನೆದಷ್ಟೂ ನೆನೆಸುವೆ ನನ್ನ!

ಮಗನೆಂಬುವ ಮಮತೆ ಕಡಲು
ಪ್ರತಿ ಮಾತಲು ಹೊರಸೂಸಲು
ಕಾಕಣ್ಣನ ಕಥೆಯು ಕೂಡ ಎಷ್ಟು ರೋಚಕ!
ರಾಗವಿರದ ಜೋಗುಳವೂ ಎಷ್ಟು ಮೋಹಕ!

ತಾಯಿ ಎಷ್ಟು ನೆನೆಯಲಿ ನಿನ್ನ!
ಮಮ ಜನನೀ
ನೆನೆದಷ್ಟೂ ನೆನೆಸುವೆ ನನ್ನ!

ಹೊತ್ತ ಸೌದೆ, ಕರೆದ ಹಾಲು
ಕಷ್ಟಪಟ್ಟು ಕೊಂಡ ಅಕ್ಕಿ
ಜೊತೆಗೆ ಪ್ರೀತಿಯನ್ನು ಬೆರೆಸಿ ಮನೆಯ ನಡೆಸಿದೆ
ದುಡಿದರುಂಟು, ಕುಳಿತರಿಲ್ಲವೆಂದು ಕಲಿಸಿದೆ

ತಾಯಿ ಎಷ್ಟು ನೆನೆಯಲಿ ನಿನ್ನ!
ಮಮ ಜನನೀ
ನೆನೆದಷ್ಟೂ ನೆನೆಸುವೆ ನನ್ನ!

ಮನದಿ ದುಗುಡ ಮಡುಗಟ್ಟಿರೆ
ಅಳಲ ಕೇಳುವವರಿರದಿರೆ
ನೂರು ನೆಪಕೆ ಮತ್ತೆ ಮತ್ತೆ ನೆನಪಾಗುವೆ ನೀ!
ಗಂಟಲುಬ್ಬಿ, ಕಣ್ಣಲೊಮ್ಮೆ ತುಂಬಿಕೊಳುವೆ ನೀ!

ತಾಯಿ ಎಷ್ಟು ನೆನೆಯಲಿ ನಿನ್ನ!
ಮಮ ಜನನೀ
ನೆನೆದಷ್ಟೂ ನೆನೆಸುವೆ ನನ್ನ!

ಕವನತನಯ

ಕಥೆ…

ನಿರಂಕಲ್ ರಸ್ತೆಗೆ ಡಾಂಬರು ಹಾಕೋ ಕೆಲಸ ಮೊನ್ನೆಮೊನ್ನೆ ಅಷ್ಟೇ ಮುಗಿದಿದೆ. ಕಪ್ಪು ಬಣ್ಣದ ತಗಡಿನ ಡಾಂಬರು ಡಬ್ಬಿಗಳು ಅಲ್ಲಲ್ಲಿ ರಸ್ತೆ ಬದಿ ಬಿದ್ದಿವೆ. ಹೊಸ ರಸ್ತೆಯ ಅಚ್ಚಗಪ್ಪು ಬಣ್ಣ ತನ್ನ ಹೊಸತನದ ಘಮಲಿನೊಡನೆ ದಾರಿಹೋಕರ ಮನಸೆಳೆಯುತ್ತೆ. ದಟ್ಟಗಾಡಿನಲ್ಲಿ ತುಂಬಾ ತಿರುವುಮುರುವು ಏರಿಳಿತಗಳಿಂದ ಕೂಡಿದ ರಸ್ತೆಯಲ್ಲಿ ಐವತ್ತರ ಮೇಲೆ ಬೈಕ್ ಓಡಿಸಲು ಸಾಧ್ಯವೇ ಇಲ್ಲ. ಅದೂ ಕೂಡಾ ಜಬರ್ದಸ್ತಾದ ಕೆಲವು ತಿರುವುಗಳಲ್ಲಿ ಬಹುತೇಕ ಬೈಕ್ ನಿಲ್ಲುವ ಹಂತಕ್ಕೆ ತಲುಪಬೇಕು. ಇಲ್ಲದೇ ಹೋದರೆ ಬೈಕು ರಸ್ತೆ ಬಿಟ್ಟು ಗುಂಡಿ ಹಾರುವುದೋ ಏರಿಗೆ ಗುದ್ದುವುದೋ ಏನಾದರೊಂದು ಆಗುವುದು ಖಚಿತ. ಕೇರಿ ದೇವಸ್ಥಾನದ ಭಟ್ಟರ ಮಗ ವಾರದ ಹಿಂದೆ ಜೋರಾಗಿ ಬೈಕ್ ಓಡಿಸಿ ಬೀರಪ್ಪನ ಹಳ್ಳದ ಹತ್ತಿರದ ತಿರುವಿನಲ್ಲಿ ಗುಂಡಿಗೆ ಬಿದ್ದು ಕೈ ಮುರಿದಿದ್ದೂ ಎಲ್ಲರಿಗೂ ಗೊತ್ತಿದ್ದದ್ದೇ.
ನಿರಂಕಲ್ಲಿಗೆ ಹೋಗುವ ಈ ಹತ್ತು ಕಿಲೋಮೀಟರ್ ದಾರಿ ಹಗಲಲ್ಲೇ ಸ್ವಲ್ಪ ಭಯಾನಕವಾಗಿದ್ದು ಮೇಲಾಗಿ ಆ ಬೆಟ್ಟದ ಘೋರ ಕಥೆಗಳೊಂದಿಷ್ಟು ಜನಮಾನಸದಲ್ಲಿ ಹಬ್ಬಿ ಜನ ಇನ್ನಷ್ಟು ಹೆದರುತ್ತಿದ್ದರು. ಅಂತಾದ್ದರಲ್ಲಿ ರಾತ್ರಿ ಹೊತ್ತಲ್ಲಿ ಒಂಟಿಯಾಗಿ ಅಲ್ಲಿ ನಡೆದು ಹೋಗ್ತಿರೋ ಗೋಪಣ್ಣನ ಧೈರ್ಯ ಮೆಚ್ಚಲೇ ಬೇಕು.

ನಿರಂಕಲ್ ಊರು ತುಂಬಾ ವಿಶಾಲವಾದದ್ದೇ. ಆದರೆ ಜನನಿಬಿಡತೆ ಕಮ್ಮಿ. ದೂರದೂರದ ಮನೆಗಳು ಮತ್ತು ಎಲ್ಲೆಡೆ ಬೆಸೆದಿರುವ ಹೆಗ್ಗಾಡು ಆ ಊರಿಗೆ ಬರುವವರಿಗೆ ಪುರಾತನ ಕಾಲಕ್ಕೆ ಬಂದ ಅನುಭವ ನೀಡುತ್ತಿತ್ತು. ಹಗಲಲ್ಲೂ ಹೆದರಿಕೆ ಹುಟ್ಟುವಂತಿದ್ದ ಆ ಊರಿನ ಹೊರವಲಯದ ಒಂಟಿರಸ್ತೆಯಲ್ಲಿ ಗೋಪಣ್ಣ ನಡೆದು ಹೋಗುತ್ತಿದ್ದುದರ ಹಿಂದೆ ಇದ್ದ ಕಾರಣವೂ ಅಲಕ್ಷಿಸುವಂಥದ್ದೇನಾಗಿರಲಿಲ್ಲ…

ನಿರಂಕಲ್ ಎಂಬ ಕುಗ್ರಾಮದಲ್ಲಿ ಹುಟ್ಟಿಯೂ ಚುರುಕಾಗಿ ಕಲಿತು ಈಗ ಪೇಟೆಯಲ್ಲಿ ಜರ್ನಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾನೆ ಶರತ್. ನೀಳದೇಹ, ಉದ್ದಮುಖ, ಉದ್ದ ಕೂದಲು ಶರತ್ ಒಬ್ಬ ಇಚ್ಛಾನುಸಾರಿ ಎಂಬುದನ್ನು ಹೇಳುತ್ತಿದ್ದವು. ಅಂದುಕೊಂಡಿದ್ದನ್ನು ಮಾಡುವ ಬಯಕೆಯೇ ಅವನಲ್ಲಿ ಛಲವನ್ನೂ ತಂದಿತ್ತು.

ನಿರಂಕಲ್ಲಿನ ನಾಗಸರದ ಬಗ್ಗೆ ಮಾಹಿತಿ ಕಲೆಹಾಕಿದ್ದ ಶರತ ಅದರ ರಿಪೋರ್ಟ್ ಕೂಡಾ ತಾನೇ ತಯಾರಿಸಬೇಕೆಂದು ಅವತ್ತು ಏಳರವರೆಗೂ ಆಫೀಸಿನಲ್ಲೇ ಕುಳಿತು ಕೆಲಸ ಮುಗಿಸಿ ಹೊರಬರುವಾಗ ಶ್ರೀಕೃಷ್ಣ ಬೇಕರಿ ಹತ್ತಿರದ ಗೂಡಂಗಡಿಯಿಂದ ಗೋಳಿ ಭಜೆ ಘಮ್… ಎಂದು ಪರಿಮಳದಲ್ಲೇ ಕರೆದಾಗ ಶರತನ ಹೊಟ್ಟೆ ಕೂಡಾ ಚುರುಗುಟ್ಟಿತು. ಇನ್ನು ಗೂಡಂಗಡಿಯ ಅಜ್ಜಿಗೆ ಎರಡು ನೋಟು ಕೊಟ್ಟು ಹೊರಬೀಳುವಾಗ ಏಳೂಮುಕ್ಕಾಲು. ಬಸ್ಟ್ಯಾಂಡಿಗೆ ನಿಧಾನಕ್ಕೆ ನಡೆದು ಬಂದು ತಲುಪುವಾಗ ಹತ್ತಿರ ಹತ್ತಿರ ಎಂಟೂವರೆ. ನಿರಂಕಲ್ ಸ್ಟಾಪಿನಲ್ಲಿ ಬಸ್ಸಿಳಿದಾಗ ಒಂಭತ್ತಾಯಿತು. ಅಷ್ಟೊತ್ತಿಗೆ ಸಹೋದ್ಯೋಗಿ ನವೀನ್ ಫೋನ್ ಮಾಡಿ ಲೋಕಲ್ ರಾಜಕಾರಣಿ ಒಬ್ಬನ ಕುರಿತು ಮಾಹಿತಿ ಕಲೆಹಾಕೋ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯಿತು. ಅಂತೂ ಗೋಪಣ್ಣನ ದುರದೃಷ್ಟ ಎಂಬಂತೆ ಸರಿಯಾಗಿ ಹತ್ತು ಗಂಟೆ ಸಮಯಕ್ಕೆ ಶರತನೂ ಅದೇ ರಸ್ತೆಯಲ್ಲಿ ನಡೆದು ಬರುತ್ತಿದ್ದ. ರಸ್ತೆ ಕಾಣುವಷ್ಟು ಬೆಳದಿಂಗಳಿತ್ತಲ್ಲದೇ, ತಲೆತುಂಬಾ ಯೋಚನೆಗಳನ್ನೇ ತುಂಬಿಕೊಂಡಿದ್ದ ಶರತನಿಗೆ ಮೊಬೈಲ್ ಟಾರ್ಚ್ ಆನ್ ಮಾಡಬೇಕು ಅನ್ನಿಸಲಿಲ್ಲ.

ದಿಢೀರನೇ ಶರತನ ನಡಿಗೆ ಚುರುಕಾಗಿ ಅಲ್ಲೇ ಪಕ್ಕದ ಮತ್ತಿ ಮರವೊಂದರ ಹಿಂಬದಿ ತೂರಿಕೊಂಡನು. ಕತ್ತಲೆಗೆ ಹೊಂದಿಕೊಂಡ ಕಣ್ಣುಗಳಿಗೆ ತನ್ನ ಸುತ್ತಲಿನ ವಸ್ತುಗಳು ಬೆಳದಿಂಗಳಲ್ಲೇ ಸ್ಪಷ್ಟವಾಗಿ ಕಾಣುತ್ತಿದ್ದವು. ಯಾರೂ ಇರಲ್ಲ ಅನ್ನೋ ಧೈರ್ಯದ ಮೇಲೆ ಗೋಪಣ್ಣ ಹತ್ತಿಸಿದ್ದ ಎಲ್.ಇ.ಡಿ. ಟಾರ್ಚ್ ನ ಬೆಳಕು ದೂರದಿಂದ ಕಂಡ ಕ್ಷಣವೇ ಶರತನ ಚುರುಕುಮತಿ ಜಾಗೃತಗೊಂಡಿತ್ತು. ಈ ಹೊತ್ತಿನಲ್ಲಿ ಈ ರಸ್ತೆಯಲ್ಲಿ ಯಾರೋ ನಡೆದು ಹೋಗುವುದು ಅನುಮಾನಾಸ್ಪದವಾಗಿ ಕಂಡಿತು ಶರತನಿಗೆ.

ಸುಮಾರು ಐವತ್ತು ಮೀಟರ್ ಹತ್ತಿರಕ್ಕೆ ಗೋಪಣ್ಣ ಬರುವ ಹೊತ್ತಿಗೆ ಶರತನಿಗೆ ಇದು ಗೋಪಣ್ಣನೇ ಎಂಬುದು ಖಚಿತವಾಗಿತ್ತು. ಅವನ ನಡಿಗೆ ನೋಡಿಯೇ ಅವ ಗೋಪಣ್ಣ ಎಂದು ಗುರುತು ಹಿಡಿಯಬಹುದಿತ್ತು.

ಊರವರ ಪಾಲಿಗೆ ಗೋಪಣ್ಣ ತೀರಾ ಕ್ಷುದ್ರ ವ್ಯಕ್ತಿಯಂತಿದ್ದು ಪೂರ್ತಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ. ಆದರೆ ಅವನ ಇತಿಹಾಸವನ್ನೊಮ್ಮೆ ಗಮನಿಸಿದರೆ ಹಲವಾರು ಪ್ರಶ್ನೆಗಳು ಮೂಡದೇ ಇರುತ್ತಿರಲಿಲ್ಲ. ಕೆಲವೊಮ್ಮೆ ತೀರಾ ಹತಾಶೆಗೊಳ್ಳುವ ಗೋಪಣ್ಣ ಕೆಲವೊಮ್ಮೆ ಊರ ಮಕ್ಕಳಿಗೆಲ್ಲ ಸಿಹಿ ಹಂಚುತ್ತಿದ್ದ.( ತಂದೆ ತಾಯಿಯರ ಮೂಲಕ ಗೋಪಣ್ಣನ ಕುರಿತು ಅನೇಕಾನೇಕ ಸುದ್ದಿ ಕೇಳಿ ಹೆದರಿದ್ದ ಮಕ್ಕಳು ತಿಂಡಿ ಮೇಲಿನ ಆಸೆಯನ್ನೂ ಹತ್ತಿಕ್ಕಿ ಅದನ್ನು ತಿನ್ನದೇ ಎಸೆಯುತ್ತಿದ್ದುದು ಗೋಪಣ್ಣನಿಗೆ ಗೊತ್ತಿರಲಿಲ್ಲ.) ಊರಿನ ವಿದ್ಯಾವಂತ ಮಕ್ಕಳು ಹೆಸರೂ ಕೇಳಿರದ ಹೊಸದೊಂದು ದುಬಾರಿ ಮೊಬೈಲ್ ಕೊಂಡು ತಂದಿದ್ದ ಗೋಪಣ್ಣ ಒಂದೇ ತಿಂಗಳೊಳಗೆ ಅದನ್ನು ಮಾರಿದ್ದಲ್ಲದೇ ಒಂದು ಸಂಜೆ ಲಜ್ಜೆ ಬಿಟ್ಟು ಪಕ್ಕದ ಮನೆಗೆ ಒಂದು ಸೇರು ಅಕ್ಕಿಯನ್ನು ಕಡವಾಗಿ ಬೇಡಲು ಹೋಗಿದ್ದ. ಒಟ್ಟಿನಲ್ಲಿ ಅರ್ಥವಿರದ ಅವನ ನಡೆಯಿಂದ ಜನರ ಗಮನಪರಿಧಿಯಿಂದ ಆತ ದೂರ ಸರಿಯುತ್ತಿದ್ದ ಎಂಬುದು ಎಷ್ಟು ಸತ್ಯವೋ ಒಮ್ಮೆಲೆ ಹಣ ಮಾಡುವ ಆಸೆಗೆ ಆತ ಇದ್ದಬಿದ್ದ ಕಳ್ಳದಂಧೆಗೆಲ್ಲಾ ಕೈ ಹಾಕಿದ್ದೂ ಅಷ್ಟೇ ಸತ್ಯ.

ಗೋಪಣ್ಣ ಈ ರಾತ್ರಿಯಲ್ಲಿ ಒಂಟಿಯಾಗಿ ಹೋಗುತ್ತಿದ್ದರೆ ಏನೋ ಗಹನ ಕಾರಣ ಇರಬೇಕೆಂದು ನಿಶ್ಚಯಿಸಿದ ಶರತನ ಬುದ್ಧಿ ಅದನ್ನು ಕಂಡುಹಿಡಿಯಬೇಕೆಂದು ಹಂಬಲಿಸಿತು. ಆ ರಾತ್ರಿಯಲ್ಲಿ ರಸ್ತೆಯಲ್ಲಿ ಒಂದು ಕಿಲೋಮೀಟರ್ ವರೆಗೂ ಗೋಪಣ್ಣನನ್ನು ದೂರದಿಂದ ಹಿಂಬಾಲಿಸಿದ ಶರತ ಆತ ಒಂದೆಡೆ ಕಾಡು ಹೊಕ್ಕ ಕೂಡಲೇ ಇನ್ನಷ್ಟು ಹತ್ತಿರದಿಂದ ಹಿಂಬಾಲಿಸಿದ .

ಬೆಟ್ಟದೊಳಗೆ ರಸ್ತೆಯಷ್ಟು ಚೆನ್ನಾಗಿ ಬೆಳದಿಂಗಳು ಬೀರುತ್ತಿರಲಿಲ್ಲ. ಜೊತೆಗೆ ಕಲ್ಲು ಮುಳ್ಳು ಮರಗಳ ದೊಡ್ಡ ದೊಡ್ಡ ಬೇರುಗಳು ಮುಂತಾದ ಹತ್ತಾರು ಅಡಚಣೆಗಳು. ಟಾರ್ಚ್ ಬೆಳಕಿನಲ್ಲಿ ಸಾಕಷ್ಟು ವೇಗವಾಗಿ ಸಾಗುತ್ತಿದ್ದ ಗೋಪಣ್ಣನ ಹಿಂದೆ ತಕ್ಕಷ್ಟು ಪ್ರಯಾಸದಿಂದಲೇ ಶರತ ಸಾಗುತ್ತಿದ್ದ. ಗೋಪಣ್ಣನಿಗೆ ಕೇಳುವಷ್ಟು ದೊಡ್ಡದಾಗಿ ಶಬ್ಧ ಮಾಡದೇ ನಡೆಯುವ ಅನಿವಾರ್ಯತೆ ಕೂಡ ಅವನಿಗಿತ್ತು.

ತನ್ನ ಮೊಬೈಲಲ್ಲಿ ಗೂಗಲ್ ನಕ್ಷೆ ತೆಗೆದು ನೋಡಿದ ಶರತನಿಗೆ ಈಗ ಗೋಪಣ್ಣ ಮತ್ತು ತಾನು ನಾಗಸರಕ್ಕೆ ಸಮೀಪಿಸುತ್ತಿರುವುದು ಗೊತ್ತಾಯಿತು. ಆ ಕಾಡಿನಲ್ಲಿ ಹರಿಯುತ್ತಿರುವ ಹಳ್ಳವೊಂದರ ಪಕ್ಕ ಪುಟ್ಟದಾಗಿ ಶಿವನ ಗುಡಿ ಕಟ್ಟಿದ್ದರು. ಅಮಾವಾಸ್ಯೆಗೆ ಒಮ್ಮೆ ಪೂಜೆಗೆ ಬಿಟ್ಟರೆ ಅಲ್ಲಿ ಇನ್ಯಾರೂ ಬರುತ್ತಿರಲಿಲ್ಲ. ಹರಿಯುವ ಹಳ್ಳ ಅಲ್ಲಿ ಸೃಷ್ಟಿಸಿದ್ದ ಪುಟ್ಟ ಜಲಪಾತವೊಂದು ಸೃಜಿಸಿದ ಗುಂಡಿಯಲ್ಲಿ ಕೆಲವೊಮ್ಮೆ ಇದ್ದಕ್ಕಿದ್ದಂತೆ ನೂರಾರು ಹಾವುಗಳು ಕಾಣಿಸಿಕೊಳ್ಳುವ ಭೀಕರ ದೃಶ್ಯವನ್ನು ಬಹುತೇಕ ಜನರು ಕಂಡಿದ್ದರು. ಆ ಗುಂಡಿಯ ಆಳದಲ್ಲಿ ನಾಗಲೋಕ ಇದೆ ಅಂತಲೂ, ಅಲ್ಲಿರುವ ಸಾವಿರಾರು ವಜ್ರಗಳನ್ನು ಹಾವುಗಳು ಕಾಪಾಡುತ್ತವೆ ಅಂತಲೂ ಮೂಢಜನ ನಂಬಿದ್ದರು. ಈ ಕಾರಣಕ್ಕೇ ನಿರಂಕಲ್ ಊರಿನ ಕಾಡು ಇನ್ನಷ್ಟು ಖ್ಯಾತವಾದದ್ದು.

ಗುಂಡಿಯ ಸಮೀಪ ಬಂದ ಗೋಪಣ್ಣ ತಾನು ತಂದಿದ್ದ ಒಂದು ಡಬ್ಬಿಯಿಂದ ಕೆಟ್ಟ ವಾಸನೆ ಬರುತ್ತಿದ್ದ ಏನನ್ನೋ ತೆಗೆದು ಗುಂಡಿಯಲ್ಲಿ ಹಾಕಿದ. ಅದೆಲ್ಲಿದ್ದವೋ, ನೂರಾರು ಹಾವುಗಳು ನೀರಮೇಲೆ ಬಂದು ಆತ ಹಾಕಿದ್ದನ್ನು ಕೆಲವೇ ನಿಮಿಷಗಳಲ್ಲಿ ತಿಂದು ಮುಗಿಸಿದವು. ಇದೆಲ್ಲಾ ಶರತನ ಮೊಬೈಲ್ ನಲ್ಲಿ ರೆಕಾರ್ಡ್ ಆಗುತ್ತಿತ್ತು. ಅಷ್ಟಾದಮೇಲೆ ಬಂದ ದಾರಿಯಲ್ಲಿ ಗೋಪಣ್ಣ ಹಿಂದಿರುಗಿದ. ಅವನಿಂದ ಕೊಂಚ ದೂರದಲ್ಲಿ ನಡೆಯುತ್ತ ಶರತನೂ ಮನೆ ಸೇರಿಕೊಂಡ.

ಮರುದಿನ ಗೋಪಣ್ಣನ ಮನೆಯ ಬಳಿ ಅತ್ತ ಇತ್ತ ಓಡಾಡುತ್ತಿದ್ದ ಶರತ ಗೋಪಣ್ಣ ಮನೆಯಿಂದ ಹೊರಬೀಳುವನೇ ಎಂದು ನಿಗಾವಹಿಸಿದ್ದ. ಸಂಜೆ ಐದರ ಸುಮಾರಿಗೆ ಗೋಪಣ್ಣ ಜೋಳಿಗೆಯಂತಹ ಒಂದೆರಡು ಕೈಚೀಲ ಹಿಡಿದುಕೊಂಡು ಹೊರಬಿದ್ದಾಗ ಅವನನ್ನು ಮತ್ತೆ ಹಿಂಬಾಲಿಸಿದ .
ನಾಗಸರ ತಲುಪುವ ಹೊತ್ತಿಗೆ ಗುಂಡಿಯಲ್ಲಿದ್ದ ಹಾವುಗಳೆಲ್ಲಾ ಸತ್ತುಬಿದ್ದಿದ್ದವು. ಬಟ್ಟೆ ಬಿಚ್ಚಿಟ್ಟು ನಿಧಾನಕ್ಕೆ ನೀರಿಗಿಳಿದ ಗೋಪಣ್ಣ. ಆ ಆಳದ ಗುಂಡಿಯಲ್ಲೂ ಅಷ್ಟು ನಿರಾಯಾಸವಾಗಿ ಒಂದೆಡೆ ಈಜಿ ತಲುಪಿದ ಅವನಿಗೆ ಆ ಗುಂಡಿ ಬಹಳ ಪರಿಚಿತ ಅನ್ನೋದು ನೋಡಿದರೇ ತಿಳಿಯುತ್ತಿತ್ತು. ಕೈಲಿದ್ದ ಪುಟ್ಟ ಚೀಲವೊಂದರಿಂದ ಒಂದು ಕಲ್ಲಿನ ಮೂರ್ತಿ, ಹೊಳೆಯುತ್ತಿದ್ದ ವಜ್ರದಂತಿದ್ದ ವಸ್ತುಗಳನ್ನು ತೆಗೆದು ನೀರಿನೊಳಗೆ ಅಡಗಿಸಿಟ್ಟ ಗೋಪಣ್ಣ ವಾಪಸ್ಸು ಬಂದ ಮೇಲೆ ಉದ್ದ ಕೋಲೊಂದನ್ನು ಬಳಸಿ ಸತ್ತ ಹಾವುಗಳನ್ನೆಲೆಯ ಎಳೆದುಹಾಕಿ ನೀರಿನಲ್ಲಿ ಹರಿದು ಹೋಗುವಂತೆ ಮಾಡಿದ. ನಂತರ ಮೇಲೆ ಬಂದು, ಇರುವುದರಲ್ಲೇ ದೊಡ್ಡ ಚೀಲದ ಗಂಟು ಬಿಚ್ಚಿ ನೀರಿನಲ್ಲಿ ಸುರುವಿದ. ಅದರಲ್ಲಿದ್ದ ನೂರಾರು ಜೀವಂತ ಹಾವಿನ ಮರಿಗಳು ಮತ್ತೆ ಗುಂಡಿ ಸೇರಿಕೊಂಡವು.

ಇವೆಲ್ಲವನ್ನೂ ಶರತನ ಕೈಲಿದ್ದ ಕ್ಯಾಮೆರಾ ಹಿಡಿದಿಡುತ್ತಿತ್ತು.

ಮರುದಿನ ಬೆಳಿಗ್ಗೆ ಊರಿಗೆ ಬಂದ ಪೋಲೀಸರು ಗೋಪಣ್ಣನನ್ನು ಬಂಧಿಸಿದರು. ಊರಿನ ಒಂದಿಷ್ಟು ಜನರ ಸಹಾಯ ಪಡೆದು ನೀರಲ್ಲಿದ್ದ ವಸ್ತುಗಳನ್ನು ಹೊರತೆಗೆಸಿದರು. ಇತ್ತೀಚೆ ಕಳುವಾದ ಉಗ್ರಮುಖಿ ಹನುಮಂತ ದೇವಸ್ಥಾನದ ಪುರಾತನ ಕಲ್ಲಿನ ಮೂರ್ತಿ, ಅದೇ ದೇವರ ವಜ್ರಾಭರಣ ಅಲ್ಲಿತ್ತು. ಅದನ್ನು ಊರ ಜನರಿಗೆ ಕೊಟ್ಟು, ಗೋಪಣ್ಣನನ್ನು ಕರೆದೊಯ್ದು ಬಾಯಿ ಬಿಡಿಸಿದರು.

ಭೂಗತ ಪಾತಕಿಗಳೊಡನೆ ಸಂಪರ್ಕದಲ್ಲಿದ್ದ ಗೋಪಣ್ಣ ಕೆಲವೊಮ್ಮೆ ತಾನು ಇನ್ನು ಕೆಲವೊಮ್ಮೆ ಅದೇ ದಂಧೆಯಲ್ಲಿದ್ದ ಇತರರು ಕದ್ದ ಅಮೂಲ್ಯ ವಸ್ತುಗಳನ್ನು ನಾಗಸರದ ಗುಂಡಿಯಲ್ಲಿ ಅಡಗಿಸಿಡುತ್ತಿದ್ದ. ಅದನ್ನು ಜನರಿಂದ ದೂರವಿಡಲು ತಾನೇ ಹಲ್ಲು ತೆಗೆದ ಹಾವುಗಳನ್ನು ತಂದು ಅದರಲ್ಲಿ ಬಿಡುತ್ತಿದ್ದ. ಕಾಡಿಗೆ ಹೊಕ್ಕುವ ಜನರನ್ನು ಹೆದರಿಸುವ ಕೆಲಸ ಕೂಡಾ ನಡೆಯುತ್ತಿತ್ತು. ಕದ್ದ ಮಾಲಿಗೆ ಗಿರಾಕಿ ಸಿಕ್ಕು ಅದನ್ನು ರಫ್ತು ಮಾಡಬೇಕಾಗಿ ಬಂದಾಗ ಹಾವುಗಳನ್ನೆಲ್ಲ ಕೊಂದು ಅದನ್ನು ತೆಗೆಯುತ್ತಿದ್ದ.

ಈ ದಂಧೆಯಲ್ಲಿ ಯಾರ್ಯಾರ ಕೈವಾಡ ಇದೆಯೋ ತನಿಖೆ ಮಾಡುವುದಾಗಿ ಪೋಲೀಸರು ಭರವಸೆ ಕೊಟ್ಟರು. ತನ್ನ ಪ್ರಾಜೆಕ್ಟ್ ಗೆ ಹೊಸ ತಿರುವು ಬಂದಿದ್ದರಿಂದ ಹೊಸದಾಗಿ, ಇನ್ನೊಮ್ಮೆ ಎಲ್ಲ ರಿಪೋರ್ಟ್ ತಯಾರು ಮಾಡಬೇಕು ಎಂದುಕೊಂಡ ಶರತ್. ಮರುದಿನದ ಸ್ಥಳೀಯ ಪತ್ರಿಕೆಯಲ್ಲಿ ತನ್ನದೇ ಫೋಟೋ ಬಂದಿದ್ದು ಕಂಡು ಹೆಮ್ಮೆಯೆನಿಸಿತು.

ದುಗುಡವೇಕೆ

ಅತ್ತ ಇತ್ತ ಹೊರಳಿಸುತಿ ಯಾಕ ನೀ
ಮುನಿಸಿನಾಗ ಕಣ್ಣ?
ಮುತ್ತಿನಂತ ಕಣ್ಣಿತ್ತ ಸರಿಸಿ
ನೋಡೊಮ್ಮೆ ಎದೆಯ ಹುಣ್ಣ

ನಕ್ಕು, ತಿರುಗಿ ನಾ ಕಾಣದಂತೆ
ಒರೆಸುತ್ತಿ ಕಣ್ಣಿನಂಚ
ನಿನ್ನ ಸೆರಗ ತುದಿ ಒದ್ದೆಯಾಗೆ
ಮುಳುಗುತ್ತೆ ನನ ಪ್ರಪಂಚ

ಯಾವ ದುಗುಡ ಮನದಾಗ ಮಡಗಿ
ತೋರಿಸುತಿ ಇಷ್ಟು ಮೌನ?
ಕಣ್ಣು ಬಾಡಿ ಮುಖವೆಲ್ಲ ಸೊರಗಿ
ಬಾಡಿಹುದು, ಕೇಳು ಚಿನ್ನ

ನೀ ನಗದೆ, ಮುಗುದೆ ನನಗೀಗ ಹಗಲು
ಇರುಳೆಲ್ಲ ಬರಿಯ ನರಕ
ನಕ್ಕೊಮ್ಮೆ ನುಡಿದು ಸನಿಹಕ್ಕೆ ಬಾರೆ
ಈ ದುಃಖ ನಮಗೆ ಬೇಕ?

ಯಾಕ ಮುನಿಸು

ಕೆಂಡಸಂಪಿಗೆ

ಶಾಲ್ಮಲೆಯ ತಟದಲ್ಲಿ ಶ್ಯಾಮಲೆಯ ಸೀಮೆಯಲಿ
ಕೋಮಲತೆ ಮೈವೆತ್ತು ಹುಟ್ಟಿದವಳು
ನಿರ್ಮಲತೆ ನೋಟದಲಿ, ಸುಮಲತೆಯು ನಗುವಲ್ಲಿ
ಈ ಮಲೆಯ ನಾಡಿನಲಿ ರಾಣಿಯಿವಳು

ಸೌರಭದ ತಂಗಾಳಿ ಸಂಭ್ರಮದಿ ಬೀಸುವುದು
ನನ್ನವಳು ನಡೆವ ಕಿರುಹಾದಿಯಲ್ಲಿ
ಸೌಂದರ್ಯಸಿರಿಭರಿತ ಸಂಪಿಗೆಯೆ ಆವರಿತ
ಸೊಂಪಾದ ಮಲೆನಾಡ ಊರಿನಲ್ಲಿ

ಅಪ್ಸರೆಯು ಇಳಿಬಂದು ಈಪ್ಸಿತವು ದೊರೆತಂತೆ
ಸಂಪಿಗೆಯ ಹುಡುಗಿ ನನ್ನೆದುರು ಬರಲು
ಅವಳಂತ ಹೂ ಹುಡುಗಿ ಮತ್ತಿಲ್ಲ ಇನ್ನೆಲ್ಲು
ಬೇರಾರು ಅರಿತಿಲ್ಲ ಖುಷಿಯ ತರಲು

ಕೆಂಡಸಂಪಿಗೆ
ಕೆಂಡಸಂಪಿಗೆ

ಕವನತನಯ